ಮೈನಾ ಸುಂದರ ಪ್ರೇಮ ಕಾವ್ಯ...!

ಮೈನಾ ಸುಂದರ ಪ್ರೇಮ ಕಾವ್ಯ...!

ಮೈನಾ..ಮೈನಾ ನೀನೇ ನನ್ನ ಮೈನಾ.. ಸುಂದರ ಪ್ರೇಮದ ಸಿಹಿ ಬರಹ. ಕನ್ನಡ ಪ್ರೇಮಿಗಳು ಮಿಸ್ ಮಾಡಿಕೊಳ್ಳದೆ ನೋಡಬಹುದಾದ ಚಿತ್ರ. ಇದು ಕಲ್ಪನೆಯ ಚಿತ್ರವಾದರೂ ಪ್ರೇಮಿಗಳಿಬ್ಬರ ಸತ್ಯಕತೆನೇ ಆಧಾರ...ಸಿನಿಮಾ ಆರಂಭವಾಗೋದು ಒಂದು ಕೊಲೆಯ ಸುತ್ತ. ಆ ಕೊಲೆಗಾರನ ಹುಡುಕಾಟದಲ್ಲಿ ಪೊಲೀಸರು ನಿರತರಾಗುತ್ತಾರೆ....ಅಲ್ಲಿಗೆ ಚಿತ್ರ ಪವರ್ ಫುಲ್ ಪೊಲೀಸ್ ಚಿತ್ರ ಅನಿಸುತ್ತದೆ. ಯಾವಾಗ ಕೊಲೆಗಾರನ ಮುಖಾ-ಮುಖಿ ಆಗುತ್ತದೆಯೋ ಆಗ ಅಲ್ಲಿ ಸುಂದರ ಪ್ರೇಮ ಕಾವ್ಯವೊಂದು ತೆರೆದುಕೊಳ್ಳುತ್ತದೆ.

ಆತ ಸತ್ಯ ಮೂರ್ತಿ. ಶಾರ್ಟ್ ಆಗಿ ಸತ್ಯ ಅಂತ ಕರೆಸಿಕೊಳ್ಳುತ್ತಾನೆ. `ಪ್ಯಾಟೆ ಮಂದಿ ಕಾಡ್ ನಲ್ಲಿ ಬಂಧಿ' ಕಾರ್ಯಕ್ರಮದ ಸ್ಪರ್ಧಿ. ಇಲ್ಲಿ ಬರೋ ಒಂದು ಟಾಸ್ಕ್ ವೇರಿ ಟಫ್. ರೈಲ್ ನಲ್ಲಿ ಭಿಕ್ಷೆ ಬೇಡೋ ಸ್ಪರ್ಧೆ. ಅದರಲ್ಲಿ ಸತ್ಯ ವಿನ್ ಆಗಬೇಕು. ಜೀವನದಲ್ಲಿ ಏನಾದ್ರೂ ಸಾಧಿಸಲೇಬೇಕು ಅಂತ ಬಂದವನ ಸಾಹಸದ  ಎರಡನೇ ಹೆಜ್ಜೆಯಿದು. ಸರಿ, ಸತ್ಯ ರೈಲು ಹತ್ತುತ್ತಾನೆ. ಥೇಟ್ ಭಿಕ್ಷುಕರ ಹಾಗೆ ಕಾಲು ಕಟ್ಟಿಕೊಂಡು `ಲೈಫ್ ಆನ್ ವೀಲ್' ಅಂತ ಹೇಳುತ್ತಾ  ಭಿಕ್ಷೆ ಬೇಡುತ್ತಾನೆ. ಭಿಕ್ಷೆ ಬೇಡ್ತಾ..ಬೇಡ್ತಾ ಬೊಂಬೆ ಹಾಗಿರೋ ಸುಂದರಿಯನ್ನ ಕಾಣುತ್ತಾನೆ...ಅಲ್ಲಿಗೆ ಸತ್ಯನ ಮನಸ್ಸು ಸತ್ಯವಾಗ್ಲೂ ಕಳೆದು ಹೋಗುತ್ತದೆ..

ಹಾಗೆ ಸಿಗೋ ಹುಡುಗಿನೇ ಮೈನಾ. ಮೈನಾಳಿಗೆ ದೂದ್ ಸಾಗರ್ ಫಾಲ್ಸ್ ಅಂದ್ರೆ ತುಂಬಾ ಇಷ್ಟ. ಅಲ್ಲಿಯ ಹಸಿರು ಸೌಂದರ್ಯ ಕಂಡ್ರೆ ಪ್ರೀತಿ ಮಾಡೋವಷ್ಟು ಖುಷಿ. ಅದಕ್ಕೇನೆ ಅದನ್ನ ಕಂಡಾಗ ಹೇಳೋದು `ಕಲರ್ ಫುಲ್' ಕಲರ್ ಫುಲ್ ಅಂದ್ರೆ, ಇಲ್ಲಿ `ಐ ಲವ್ ಯು' ಅನ್ನೋದು ಮೈನಾ ಕಂಡು ಕೊಂಡ ಪ್ರೀತಿಯ ತಂತ್ರ...

ಇದೇ ಪ್ರೀತಿನೇ ಮುಂದೊಂದಿನ, ಕಾಲು ಇಲ್ಲದ ರೀತಿ ನಟಿಸೋ ಸತ್ಯನ ಮೇಲೆ ಪ್ರೀತಿ ಹುಟ್ಟಿಸುತ್ತದೆ. ಸತ್ಯನೂ ಕಾಲಿಲ್ಲದ ಕುವರನಂತೆ  ನಟಿಸುತ್ತಾನೆ. ಒಮ್ಮೆ ಕಾಲಿರೋ ಸತ್ಯವೂ ಬಯಲಾಗುತ್ತದೆ. ಅಲ್ಲಿಗೆ ಇಲ್ಲೊಂದು ಸತ್ಯವೂ ಪ್ರೇಕ್ಷಕರನ್ನ ಚಕಿತಗೊಳಿಸುತ್ತದೆ. ಮೈನಾ ಎಂಬ ಸುಂದಿಗೆ ಸಂಬಂಧಿಸಿದ್ದು ಅದು. ಅದನ್ನ ಥಿಯೇಟರ್ ನಲ್ಲಿ ಹೋಗಿ ನೋಡಿ...ಆದ್ರೆ, ಇಲ್ಲಿವರೆಗೂ ಹೇಳಿರೋ ಕತೆಗೆ ಪೂರಕ ಅನಿಸೋದು ಕ್ಯಾಮೆರಾಮನ್ ಸತ್ಯ ಹೆಗಡೆ ಕ್ಯಾಮೆರಾ ವರ್ಕ್. ನಿದೇರ್ಶಕ ನಾಗಶೇಖರ್ ನೈಜ ಘಟನೆಯನ್ನೂ ತುಂಬಾ ಚೆನ್ನಾಗಿ ನಿರೂಪಿಸಿರೋ ದಕ್ಕೆ ನಾಗಶೇಖರ್ ಗಿರೋ ಸಿನಿಮಾ ಪ್ರೀತಿಯನ್ನ ಎತ್ತಿ ಹಿಡಿಯುತ್ತದೆ.

ಕತೆಗೆ ಇಲ್ಲಿ ಇನ್ನೊಂದು ತುಂಬಾ ಸೂಕ್ತ ಅನಿಸೋದು ಆಯ್ದುಕೊಂಡ ಸ್ಥಳ. ಕರ್ನಾಟಕ ಹಾಗೂ ಗೋವಾ ಗಡಿಯಲ್ಲಿ ಬರೋ ಕ್ಯಾಸಲ್ ರಾಕ್. ಇಲ್ಲಿ ಬರೋ ದೂದ್ ಸಾಗರ್ ನ ಸುಂದರ ತಾಣದಲ್ಲಿ ಚಿತ್ರದ ಬಹುತೇಕ ಭಾಗ ಚಿತ್ರೀಕರಣವಾಗಿದೆ. ಸದಾ ತಂಪನೆ ವಾತಾವರಣದ ಈ ಸ್ಥಳ ಒಂದು ರೀತಿ ವಿದೇಶದ ಅನುಭವ ನೀಡುತ್ತದೆ. ಜೆಸ್ಸಿ ಗಿಫ್ಟ್ ಸಂಗೀವ ಹಾಗೂ ಸಾಧು ಕೋಕಿಲ  ಹಿನ್ನೆಲೆ ಸಂಗೀತ ಎರಡೂ `ಮೈನಾ' ಕವಿತೆಯನ್ನ ಹೇಳೋವಲ್ಲಿ ಮಹತ್ವದ ಪಾತ್ರ ನಿರ್ವಹಿಸಿವೆ..

ಕತೆಯಲ್ಲಿ ಸಣ್ಣ.ಸಣ್ಣ ಪಾತ್ರದಲ್ಲಿ ದೊಡ್ಡ..ದೊಡ್ಡ ನಟರೇ ಅಭಿನಯಿಸಿದ್ದಾರೆ. ಅನಂತ್ ನಾಗ್, ಸುಹಾಸಿನಿ, ಪ್ರಮುಖ ಅಂಶವನ್ನ ತಮ್ಮ ಪಾತ್ರದ ಮೂಲಕ ಹೇಳಿ ಹೋಗುತ್ತಾರೆ. ಶರತ್ ಕುಮಾರ್ ಅವರಂತೂ ಮೈನಾ ಕತೆಯ ಮುಖ್ಯೆ ಭೂಮಿಕೆಯಾಗಿದ್ದಾರೆ. ಸುಮನ್ ರಂಗನಾಥ್ ಪೊಲೀಸ್ ಅಧಿಕಾರಿಯಾಗಿ ಕಂಗೊಳಿಸಿದ್ದಾರೆ. ಕವಿರಾಜ್ ಕವಿತೆಯ ಮಾತು ಹೇಳೋದೇ ಬೇಡ. ಪ್ರತಿ ಹಾಡಲ್ಲೂ ಕಾವ್ಯಧಾರೆ ಹರಿಸಿದ್ದಾರೆ. ಮೊದಲ ಮಳೆಯಂತೆ, ಎದೆಗೆ ಇಳಿದೆ ಮೆಲ್ಲಗೆ. ಮೊದಲ ಕನಸಂತೆ ಒಲವೆ ಒಲಿದೆ ಒಮ್ಮೆಗೆ. ಚಾಚಿತಾ ಕೈಗೆ ಆಕಾಶವೇ ತಾಗಿದೆ. ಗೀಚಿದಾ ಹಾಗೆ ಮಳೆ ಬಿಲ್ಲೆ ಮೈಗಂಟಿದೆ. ಹೊಸ ಸಂವತ್ಸರ..ಹೊಸ ಮನ್ವಂತರ ಶುರುವಾಗಿದೆ..ಶುರುವಾಗಿದೆ. ಈ ಕಾವ್ಯದಂತೇನೆ ಇಡೀ ಚಿತ್ರವನ್ನ  ನೋಡಿದಾಗ, ಪ್ರೇಕ್ಷಕರ ಮನದಲ್ಲಿ ಕಂಡಿತ  ಹೊಸ ಮನ್ವಂತರ ಶುರುವಾಗುತ್ತದೆ. ಒಮ್ಮೆ ಹೋಗಿ ನೋಡಿ ಬನ್ನಿ, ಇದು ನೋಡೇಬಲ್ ಸಿನಿಮಾ...

-ರೇವನ್ ಪಿ.ಜೇವೂರ್

 

Comments

Submitted by venkatb83 Fri, 02/22/2013 - 17:42

ರೇವನ್ ಅವರೇ ನೀವು ವಿಸ್ಮಯನಗರಿಯಲ್ಲಿಯೂ ಇರುವಿರಿ ಅಲ್ಲವೇ? ನಿನ್ನೆಯಸ್ತೆ ಬಿಡುಗಡೆ ಆದ (ವಾಡಿಕೆಯಂತೆ ಶುಕ್ರವಾರ ಬಿಡುಗಡೆ ಆಗದ ಚಿತ್ರಗಳಲ್ಲಿ ಇದೂ ಒಂದು..!!)ಕನ್ನಡದ ತಾಜಾ ಚಿತ್ರ 'ಮೈನಾ' ಬಗ್ಗೆ ಸಂಕ್ಷಿಪ್ತವಾಗಿ ಒಳ್ಳೆಯ ಚಿತ್ರ ವಿಮರ್ಷೆ ಬರೆದಿರುವಿರಿ....ಈ ಚಿತ್ರ ನೋಡುತ್ತಲೇ ಟಾಕೀಸ್ನಿಂದಲೇ ಟ್ವೀಟ್ ಮಾಡಿದ ಮೆಸೆಜ್ಗಳನ್ನು ಓದಿದ್ದೆ..! ಬಹುಪಾಲು ಎಲ್ಲರೂ ಈ ಚಿತ್ರದ ಬಗ್ಗೆ ಸಖತ್ತಾಗಿ ಬರೆದಿದ್ದರು.. ನಾನೂ ಮೊದಲಿಂದಲೂ ಚಲನ ಚಿತ್ರಗಳ ಬಗ್ಗೆ ವಿಶೇಷ ಆಸಕ್ತಿ ಉಳ್ಳವನು-ಈಗಲೂ ದಿನದಲ್ಲಿ ೨-೩ ಸಿನೆಮ ನೋಡುವೆ-ಕೆಲ ಒಳ್ಳೆಯ ಸಿನೆಮಾಗಳ ಬಗ್ಗೆ ಇಲ್ಲಿಯೇ (ವಿಸ್ಮಯನಗರಿಯಲ್ಲಿಯೂ)ಬರೆದಿರುವೆ... ನನ್ನ ಮೊದಲ ಆದ್ಯತೆ ಕನ್ನಡ-ಆಮೇಲೆ ತೆಲುಗು-ಹಿಂದಿ-ಆಂಗ್ಲ ಚಿತ್ರಗಳು.. ನಾ ಕೊನೆಯದಾಗಿ ನೋಡಿದ ಕನ್ನಡ ಸಿನೆಮ 'ಪರಮಾತ್ಮ '....! ಆಮೇಲೆ ಯಾಕೋ ಯಾವ ಚಿತ್ರಗಳನ್ನೂ ನೋಡುವ ಮನಸಾಗಲಿಲ್ಲ... ಆದರೆ ನಾಗ ಶೇಖರ್ ಅವರ ಈ ಹಿಂದಿನ ಚಿತ್ರ (ಸಂಜು ಮತ್ತು ಗೀತ )ವನ್ನು ಡೀವಿಡಿಯಲ್ಲಿ ನೋಡಿ ಖುಷಿ ಆದೆ(ಆ ಚಿತ್ರದ ಕಥೆ ಅಂತ್ಯ ಘೋರವಾಗಿದೆ).. ಸಂಗಮ ಎನ್ನುವ ಚಿತ್ರದ ಮೂಲಕ ನಿರ್ದೇಶಕರಾದ ನಾಗ ಶೇಖರ್ ಅವರು ತಮ್ ಮೊದಲ ಚಿತ್ರದಲ್ಲೇ ಗಮನ ಸೆಳೆದಿದ್ದರು-ಚಿತ್ರ ಜನರನ್ನು ಸೆಳೆಯಲು ವಿಫಲವಾದರೂ ಹಣ ಗಳಿಸಿತ್ತು...! ಸಂಜು ಮತ್ತು ಗೀತ ನೋಡಿದ ಮೇಲೆ ನಾಗ ಶೇಖರ್ ಅವರ ನಿರ್ದೇಶನದ ಪರಿ ಬೆರಗು ಹುಟ್ಟಿಸಿತ್ತು.. ಹಾಸ್ಯ ನಟ-ಚಿಕ್ಕ ಪುಟ್ಟ ಪಾತ್ರದಲಿ ನಟಿಸುತ್ತ ನಿರ್ದೇಶಕರಾದ ಅವರ ನಿರ್ದೇಶನದ ಬಗೆ ಬಗ್ಗೆ ಸಂಶಯವಿತ್ತು-ಆದರೆ ಸಂಜು ಮತ್ತು ಗೀತವನ್ನು ಅವರು ತೆಗೆದ ರೀತಿ ನೋಡಿ ಭಲೇ ಖುಷಿ ಆಯ್ತು.. ಈ ತರಹದ ನಿರ್ದೇಶಕರ ಅವಶ್ಯಕತೆ ಕನ್ನಡ ಚಿತ್ರ ರಂಗಕ್ಕಿದೆ.. ಈ ಚಿತ್ರವನ್ನು ನಮ್ಮವರೊಂದಿಗೆ ನಾಳೆ ಅಥವಾ ನಾಡಿದ್ದು ಮಂತ್ರಿ ಮಾಲಿನಲ್ಲಿ ನೋಡುವೆ.... ಶುಭವಾಗಲಿ.. \।