ಮೈಲಾರಲಿಂಗ

ಮೈಲಾರಲಿಂಗ

ಬರಹ

ಇಂಡಿಯಾದ ಸಂಸ್ಕೃತಿಯಲ್ಲಿ ಶಿವನಿಗೆ ಇರುವ ಸ್ಥಾನೆ ಅನನ್ಯ. ಅಪ್ಪಟ ದೇಶೀಯ ದೈವವಾದ ಶಿವನಿ ಬೇಡಿದವರಿಗೆ ಎಲ್ಲವನ್ನೂ ಕೊಡುವವನೇ ಹೊರತು ಯಾರೊಂದಿಗೂ ಅನಗತ್ಯವಾಗಿ ಜಗಳಕ್ಕೆ ನಿಂತವನಲ್ಲ. ಸತಿಯು ಸತ್ತಾಗ ಕೆಂಡಾಮಂಡಲವಾದನೇ ಹೊರತು ಕೆಡುಕು ಮಾಡಲಿಲ್ಲ. ಸಮರವೆಂಬುದು ಅಮಂಗಳ ಎಂಬ ಭಾವನೆ ಆತನದು. ಮಹಾಕವಿ ಕುವೆಂಪು ಅವರು ಶಿವ ಎಂಬ ಪದವನ್ನು ಸುಂದರವಾದದ್ದು, ಮಂಗಳಕರವಾದದ್ದು ಎಂಬುದಕ್ಕೆ ಸಂವಾದಿಯಾಗಿ ಬಳಸಿದ್ದಾರೆ. ಸತ್ಯ ಶಿವ ಸೌಂದರ್ಯಕ್ಕೆ ನಮಿಸುವ ನಾವು ನಮ್ಮ ದೇಶದಲ್ಲಿ ಶಿವನಿಗೆ ಮೇರುಸ್ಥಾನವನ್ನೇ ನೀಡಿದ್ದೇವೆ. ಪ್ರಕೃತಿಯ ಆರಾಧಕನಾದ ಮಾನವ ಪ್ರಕೃತಿಯಲ್ಲಿ ಸೌಂದರ್ಯವನ್ನು ಅಂದರೆ ಶಿವನನ್ನು ಕಂಡಿದ್ದಾನೆ. ಕಲ್ಲಬಂಡೆಗಳ ಲಿಂಗರೂಪವೆಲ್ಲ ಶಿವನೇ. ಲಿಂಗರೂಪದ ಬೆಟ್ಟಗಳೆಲ್ಲ ಶಿವನ ತಾಣಗಳು. ಆತ ಮಲೆಯವಾಸಿ. ಕನ್ನಡದ ಮಲೆ+ಅಯ್ಯ> ಮಲೆಯಯ್ಯ> ಮಲ್ಲಯ್ಯನಾಗಿ ವಿಜೃಂಭಿಸಿದ್ದಾನೆ. ಜನಪದರು ಅವನನ್ನು ಮಲೆಮಾದಯ್ಯ, ಪರ್ವತಪ್ಪ, ಗುಡ್ಡಯ್ಯ, ಗಿರಿಯಪ್ಪ, ಗಿರಿಗೌಡ ಇತ್ಯಾದಿಯಾಗಿ ಕರೆದಿದ್ದಾರೆ. ಆದರೆ ಎಲ್ಲೂ ಶಿವನನ್ನು ಮಲ್ಲಾರಿ, ಮೈಲಾರಿ ಎಂದು ಕರೆದ ಉದಾಹರಣೆಯಿಲ್ಲ.
ಈ ನಿಟ್ಟಿನಲ್ಲಿ ನಾವು ಸ್ವಲ್ಪ ವೀರಗಲ್ಲು ಹಾಗೂ ಮಾಸ್ತಿಕಲ್ಲುಗಳ ಹಿನ್ನೆಲೆ ಮುನ್ನೆಲೆಗಳನ್ನು ಮನನ ಮಾಡಬೇಕಾಗುತ್ತದೆ.
ಊರ ಹಿತಕ್ಕಾಗಿಯೋ ಮಾನಿನಿಯರ ರಕ್ಷಣೆಗಾಗಿಯೋ ತನ್ನ ಪಶುಗಳ ಕ್ಷೇಮಕ್ಕಾಗಿಯೋ ಹುತಾತ್ಮನಾದವನ ನೆನೆಪಿಗೆ ಸ್ಮಾರಕ ನೆಟ್ಟು ಪೂಜಿಸುವ ಕಲ್ಲೇ ವೀರಗಲ್ಲು. ಕನ್ನಡ ಸಂಸ್ಕೃತಿ ಎಲ್ಲೆಲ್ಲಿ ಪಸರಿಸಿತ್ತೋ ಅಲ್ಲೆಲ್ಲಾ ಈ ವೀರಗಲ್ಲುಗಳು ಸಾಮಾನ್ಯವಾಗಿ ಕಾಣಸಿಗುತ್ತವೆ. ವೀರಗಲ್ಲುಗಳಲ್ಲಿ ಸಾಮಾನ್ಯವಾಗಿ ೩ ಹಂತಗಳಿದ್ದು ಅತಿ ಕೆಳಗಿನದರಲ್ಲಿ ವೀರನು ಸೆಣಸುತ್ತಿರುವ ದೃಶ್ಯ, ಅದರ ಮೇಲೆ ಅವನು ಸಾಯುವಾಗ ಅಪ್ಸರೆಯರು ಬಂದು ಉಪಚರಿಸುತ್ತಿರುವ ದೃಶ್ಯ, ಎಲ್ಲಕ್ಕಿಂತ ಮೇಲಿನ ಹಂತದಲ್ಲಿ ವೀರನು ಶಿವನ ಸಾನ್ನಿಧ್ಯದಲ್ಲಿ ವಿರಾಜಮಾನನಾದ ದೃಶ್ಯ ಕಂಡುಬರುತ್ತದೆ. ಈ ಸಂಗತಿ ಹೇಗಾಯಿತು ಎಂಬುದನ್ನು ಅರುಹುವ ಪಠ್ಯವನ್ನೂ ಕೆಲ ವೀರಗಲ್ಲುಗಳಲ್ಲಿ ಕೆತ್ತಲಾಗಿರುತ್ತದೆ. ಮತ್ತೂ ಕೆಲವದರಲ್ಲಿ ಯಾವ ಕೆತ್ತನೆಯೂ ಇರದೆ ಬರಿದೇ ಕಲ್ಲೊಂದನ್ನು ಸ್ಮಾರಕವಾಗಿ ನೆಟ್ಟು ಅದರ ಮೇಲೊಂದು ಶಿವಲಿಂಗವಿಟ್ಟು ಹೋದ ಪ್ರಸಂಗಗಳು ಇವೆ. ವೀರನ ಸ್ಮರಣೆಯಲ್ಲಿ ಲಿಂಗಕ್ಕೆ ನಿತ್ಯುಪೂಜೆ ಮಾಡಿ ವರುಷಕ್ಕೊಮ್ಮೆ ಸಂತರ್ಪಣೆ ಮಾಡಿ ಕಾಲಕ್ರಮೇಣ ಕಲ್ಲು ಮರೆತುಹೋಗಿ ಲಿಂಗವೊಂದೇ ಉಳಿದು ಅದೇ ಪ್ರಧಾನವಾಗಿ ಅದಕ್ಕೊಂದು ಮಂದಿರವಾಗಿ ಮುನ್ನಡೆದ ಪ್ರಸಂಗಗಳೂ ಇವೆ.
ಗಂಡನೊಂದಿಗೆ ಚಿತೆಯೇರಿದ ಹೆಣ್ಣಿನ ಸ್ಮರಣೆಗೆ ನಿಲ್ಲಿಸಿದ ಮಾಸ್ತಿ (ಮಹಾಸತಿ) ಕಲ್ಲುಗಳ ಕಥೆಯೂ ಹೀಗೇ ಆಗಿ ಇಂದು ಅವು ಶಕ್ತಿದೇವತೆಗಳ ಗುಡಿಗಳಾಗಿರುವುದು ವೇದ್ಯವಾದ ಸಂಗತಿಯೇ.
ಬಹುಶಃ ಮೈಲಾರಲಿಂಗವೂ ಇಂಥ ಒಂದು ವೀರಸ್ಮರಣೆಯ ಪ್ರತೀಕವಾಗಿದ್ದು ಅನಂತರ ದೈವೀರೂಪ ತಳೆದಿರಬೇಕು. ಈ ಮೈಲಾರಲಿಂಗನ ಭಕ್ತರು ಬ್ರಾಹ್ಮಣರಲ್ಲೂ ಇದ್ದಾರೆಂಬುದೇ ಮತ್ತೊಂದು ವಿಶೇಷ. ಮರಾಟಿಗರು ಪೂಜಿಸುವ ಖಂಡೋಬ (ಖಡ್ಗ ಹಿಡಿದ ವೀರ), ತೆಲುಗರು ಪೂಜಿಸುವ ಮಲ್ಲಿಕಾರ್ಜುನ ಹಾಗೂ ಕನ್ನಡಿಗರ ಮೈಲಾರ ಇವೆಲ್ಲ ವೀರಪುರುಷನೊರ್ವನ ವಿವಿಧ ರೂಪಗಳು. ಏಕೆಂದರೆ ನಮ್ಮ ದೇಶೀ ದೈವವಾದ ಶಿವನು ಎಂದು ಖಡ್ಗ ಹಿಡಿದವನಲ್ಲ.