ಮೈಸೂರಿನಲ್ಲಿ ಡ್ರಗ್ಸ್ ಘಟಕ: ಅಪಾಯದ ಕರೆಘಂಟೆ

ರಾಜ್ಯದ ಸಾಂಸ್ಕೃತಿಕ ರಾಜಧಾನಿ ಎಂದು ಕರೆಯಲ್ಪಡುವ ಮೈಸೂರಿನಲ್ಲಿ ಮಾದಕ ವಸ್ತು ಉತ್ಪಾದನೆಯ ಜಾಲ ಪತ್ತೆಯಾಗಿರುವುದು ಕಳವಳಕಾರಿ ಮತ್ತು ಆತಂಕದ ವಿಷಯ. ಇದುವರೆಗೆ ರಾಜ್ಯದಲ್ಲಿ ಮಾದಕ ವಸ್ತು ವಿತರಣೆ ಅಂದರೆ ಡ್ರಗ್ಸ್ ಪೆಡ್ಡಿಂಗ್ ಜಾಲ ಸಕ್ರಿಯವಾಗಿರುವುದರ ಬಗ್ಗೆ ಮಾಹಿತಿ ಇತ್ತು. ಈಗ ರಾಜ್ಯವನ್ನು ಮಾದಕ ವಸ್ತು ಉತ್ಪಾದನೆಯ ಘಟಕವನ್ನಾಗಿಯೂ ಮಾಡಿ ಕೊಂಡಿದ್ದಾರೆ ಎನ್ನುವುದು ಬಹಳ ಗಂಭೀರ ವಿಷಯ.
ಮೈಸೂರಿನ ಹೊರವಲಯದಲ್ಲಿ ಗ್ಯಾರೇಜ್ ಒಂದರಲ್ಲಿ ಕಾರ್ಯಾಚರಿಸುತ್ತಿದ್ದ ಎಂಡಿಎಂಎ ಉತ್ಪಾದನೆ ಘಟಕವನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ಮಹಾ ರಾಷ್ಟ್ರದ ಪೊಲೀಸರಿಗೆ ಡ್ರಗ್ಸ್ ಪೆಡ್ಲರ್ ಒಬ್ಬನಿಂದ ಈ ಬಗ್ಗೆ ಮಾಹಿತಿ ಲಭಿಸಿತ್ತು. ಲಭ್ಯ ಮಾಹಿತಿಯ ಅನುಸಾರ ಸ್ಥಳೀಯ ಪೊಲೀಸರ ಸಹಕಾರದಿಂದ ಮಹಾ ರಾಷ್ಟ್ರದ ಪೊಲೀಸರು ಈ ಉತ್ಪಾದನೆ ಘಟಕದ ಮೇಲೆ ದಾಳಿ ನಡೆಸಿ ಇದರಲ್ಲಿ ಭಾಗಿಯಾಗಿದ್ದ ಆರು ಮಂದಿಯನ್ನು ಬಂಧಿಸಿದ್ದಾರೆ. ಸ್ಥಳದಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಸಿದ್ದಗೊಂಡ ಎಂಡಿಎಂಎ ಮಾದಕ ವಸ್ತು ಮತ್ತು ಉತ್ಪಾದನಗೆ ಸಿದ್ಧವಾಗಿದ್ದ ದ್ರವರೂಪಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸ್ಥಳದಲ್ಲಿ ೧೦ ಕೆ.ಜಿ. ಸಿದ್ದ ಡ್ರಗ್ಸ್ ಪೊಲೀಸರ ವಶವಾಗಿದ್ದರೆ ದ್ರವರೂಪಿ ಕಚ್ಚಾವಸ್ತು ೫೦ ಕೆ.ಜಿ.ಯಷ್ಟಿತ್ತು. ಭೂಗತ ಜಾಲದ ಮೂಲಕ ಕೆಲವು ಗ್ರಾಂಗಳ ಲೆಕ್ಕದಲ್ಲಿ ಬಿಕರಿಯಾಗುವ ಈ ಎಂಡಿಎಂಎ ಅಲ್ಲಿ ೧೦ ಕೆ.ಜಿ. ಪತ್ತೆಯಾಗಿದೆ ಎಂಬುದು ಪರಿಸ್ಥಿತಿಯ ಗಂಭೀರತೆಯನ್ನು ಸೂಚಿಸುತ್ತದೆ.
ಮಾದಕ ದ್ರವ್ಯ ವ್ಯಸನ ಪುರಾತನ ಕಾಲದಿಂದಲೂ ಮನುಕುಲವನ್ನು ಕಾಡುತ್ತಿರುವ ಮಾರಿ, ಹಿಂದೆ ಎಲ್ಲೋ ಅಪರೂಪಕ್ಕೆ ಎಂಬಂತಿದ್ದ ಇದು ಈಗ ಸರ್ವತ್ರ ಎಂಬಂತಾಗಿರುವುದು ಕಳವಳಕಾರಿ. ಇದರ ಜತೆಗೆ ಹಿಂದೆ ನಿಸರ್ಗಜನ್ಯ ಅಫೀಮು, ಗಾಂಜಾ ಇತ್ಯಾದಿ ಮಾದಕದ್ರವ್ಯಗಳಿದ್ದರೆ ಈಗ ಎಂಡಿಎಂಎನಂತಹ ಕೃತಕ, ರಾಸಾಯನಿಕ ಮಾದಕದ್ರವ್ಯಗಳಿವೆ. ಆರೋಗ್ಯದ ದೃಷ್ಟಿಯಿಂದ ಎರಡೂ ವಿಷಸಮಾನವೇ ಆಗಿದ್ದರೂ ಕೃತಕ, ಸಿಂಥೆಟಿಕ್ ಮಾದಕ ದ್ರವ್ಯಗಳು-ಕಾರ್ಕೋಟಕ ವಿಷ ಇದ್ದಂತೆ ಎನ್ನಲಾಗುತ್ತದೆ. ಇದರಿಂದ ಉಂಟಾಗುವ ನಶೆಯೂ ತೀವ್ರ ತೆರನಾದದ್ದು ದುಷ್ಪರಿಣಾಮ ಕೂಡ ಅಷ್ಟೇ ಮಾರಕವಾದವುಗಳು, ಸಿಂಥೆಟಿಕ್ ಮಾದಕ ದ್ರವ್ಯಗಳ ಯಾದಿಯಲ್ಲಿ ಎಂಡಿಎಂಎ ಒಂದೇ ಅಲ್ಲ; ಇನ್ನೂ ಹಲವಾರಿವೆ.
ಕೆಲವು ವರ್ಷಗಳ ಹಿಂದೆ 'ಉಡ್ತಾ ಪಂಜಾಬ್' ಬಹಳ ದೊಡ್ಡ ಸುದ್ದಿಯಾಗಿತ್ತು. ಆಗ ಪಂಜಾಬ್‌ನಲ್ಲಿ ಮಾದಕ ದ್ರವ್ಯ ಜಾಲ ಬಹಳ ಜೋರಾಗಿ ಕಾರ್ಯಾಚರಿಸುತ್ತಿದೆ ಎನ್ನಲಾಗಿತ್ತು. ಆದರೆ ಈಗ ಮಾದಕ ದ್ರವ್ಯ ಜಾಲ ದೇಶದ ಯಾವುದೇ ಭಾಗವನ್ನು ಬಿಟ್ಟಿಲ್ಲ. ಕರ್ನಾಟಕದಲ್ಲಿಯೂ ಇದು ಆಳವಾಗಿ ಬೇರೂರಿದೆ. ಕೆಲವೇ ವಾರಗಳ ಹಿಂದೆಯಷ್ಟೇ ಹಲವು ವಿದೇಶಗಳಲ್ಲಿ ಕಾರ್ಯಾಚರಿಸುತ್ತಿದ್ದ ಮಾದಕ ದ್ರವ್ಯ ಜಾಲವನ್ನು ಎನ್‌ಐಎ ಬಯಲಿಗೆಳೆದು ಹಲವರನ್ನು ಬಂಧಿಸಿತ್ತು. ಅವರಲ್ಲೊಬ್ಬ ಉಡುಪಿಯಲ್ಲಿ ನೆಲೆಯಾಗಿ ಕೆಲಸ ಮಾಡುತ್ತಿದ್ದ ದೇಶವಿರೋಧಿ, ಸಮಾಜ ಘಾತಕ ಶಕ್ತಿಗಳು ಉಗ್ರವಾದ, ಕಪ್ಪುಹಣ, ಹವಾಲಾ ಜಾಲದ ಹಾಗೆಯೇ ಮಾದಕ ದ್ರವ್ಯ ಜಾಲವನ್ನು ಕೂಡ ಉಪಯೋ ಗಿಸಿಕೊಳ್ಳುತ್ತಿವೆ. ಖೇದದ ವಿಷಯ ಎಂದರೆ ಯುವಜನರು ಮಾತ್ರವಲ್ಲದೆ ಸಣ್ಣಮಕ್ಕಳು ಕೂಡ ಈ ಜಾಲಕ್ಕೆ ಬಲಿಯಾಗುತ್ತಿರುವುದು; ಶಾಲೆ ಕಾಲೇಜು ಗಳಲ್ಲಿಯೂ ಈ ಜಾಲ ಹರಡಿರುವುದು.
ಮೈಸೂರಿನಲ್ಲಿ ಮಾದಕ ದ್ರವ್ಯ ಉತ್ಪಾದನೆ ಘಟಕ ಪತ್ತೆಯಾಗಿರುವುದು ಅಪಾಯದ ಬಲವಾದ ಕರೆಘಂಟೆ, ಈ ಎಚ್ಚರಿಕೆಯನ್ನು ಈಗಲಾದರೂ ಗ್ರಹಿಸಿಕೊಂಡು ಕಾರ್ಯೋನ್ಮುಖರಾಗದೆ ಇದ್ದರೆ ನಾವು ಅಪಾರ ನಷ್ಟವನ್ನು ಅನುಭವಿಸಲಿದ್ದೇವೆ ಎನ್ನುವುದು ಖಚಿತ ಸರಕಾರ, ಪೊಲೀಸ್ ಇಲಾಖೆ, ಗುಪ್ತಚರ ವಿಭಾಗ ಹಾಗೂ ನಾಗರಿಕರು ಜತೆಗೂಡಿ ಇದರ ದಮನಕ್ಕೆ ಶ್ರಮಿಸಲೇ ಬೇಕಾಗಿದೆ.
ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೨೯-೦೭-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ