ಮೈಸೂರು ರಮಾನಂದರ ಹೊಸ ನಾಟಕ ಕೃತಿ - ಕಾಣೆಯಾಗಿದ್ದಾನೆ

ಮೈಸೂರು ರಮಾನಂದರ ಹೊಸ ನಾಟಕ ಕೃತಿ - ಕಾಣೆಯಾಗಿದ್ದಾನೆ

ಬರಹ

ಮೈಸೂರು ರಮಾನಂದರು ಕಳೆದ ೨೫ ವರ್ಷಗಳಿಂದ ನಾಟಕ ರಂಗದಲ್ಲಿ ಚಟುವಟಿಕೆಯಿಂದಿದ್ದಾರೆ. ಅವರ "ಗೆಜ್ಜೆಹೆಜ್ಜೆ ರಂಗತಂಡ" ರಮಾನಂದರ ಕೃತಿಗಳು ಹಾಗು ಇನ್ನಿತರ ಲೇಖಕರ ನಾಟಕಗಳನ್ನು ರಂಗದಮೇಲೆ ತಂದು ಮೈಸೂರು ಮತ್ತು ಬೆಂಗಳೂರು ನಗರಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಇತ್ತೀಚೆಗೆ ಅವರು ಗದಗ-ಬೆಟಗೇರಿ ಅವಳಿ ನಗರಗಳಿಗೂ ಲಗ್ಗೆ ಹಾಕಿ, ಹತ್ತು ದಿನಗಳ ಕಾಲ ಸತತವಾಗಿ ನಾಟಕಗಳನ್ನು ಪ್ರದರ್ಶಿಸಿ ರಂಗಪ್ರಿಯರ ಪ್ರಿಯರಾಗಿದ್ದಾರೆ.

ಮೈಸೂರು ರಮಾನಂದರು ತಮ್ಮದೇ ಕೃತಿಯಾಗಿರಲಿ, ಇತರರದೇ ಆಗಿರಲಿ, ನಾಟಕದ ಉದ್ದೇಶ ಸಮಾಜ ಸೇವೆ. ಸಾಮಾಜಿಕ ಕಳಕಳಿ ಅವರ ಪ್ರತಿಯೊಂದು ಪ್ರದರ್ಶನದಲ್ಲಿಯೂ ತಪ್ಪದೆ ಕಾಣಸಿಗುತ್ತದೆ. ಅವರ ಇತ್ತೀಚಿನ ಕೃತಿ "ಕಾಣೆಯಾಗಿದ್ದಾನೆ"ಯೂ ಇದಕ್ಕೆ ಹೊರತಾಗಿಲ್ಲ.

ನಾವು ದಿನಪತ್ರಿಕೆಗಳನ್ನು ನೋಡುತ್ತಿದ್ದರೆ ಕಡೇ ಪಕ್ಷ ವಾರಕ್ಕೆರಡು ಬಾರಿಯಾದರೂ ಯಾರಾದರೊಬ್ಬ ವ್ಯಕ್ತಿ ಕಾಣೆಯಾಗಿ ಹೋಗಿರುವ ಸುದ್ದಿಯನ್ನು ಓದಿಯೇ ತೀರುತ್ತೇವೆ. ಅದು ಗಂಡಸಾಗಿರಬಹುದು, ಹೆಣ್ಣಾಗಿರಬಹುದು, ಮಕ್ಕಳಾಗಿರಬಹುದು, ವಯಸ್ಕರಾಗಿರಬಹುದು ಅಥವಾ ವಯೋವೃದ್ಧರಾಗಿರಬಹುದು. ಹೀಗೆ ಕಾಣೆಯಾದವರು ಹೇಗೆ ಕಾಣೆಯಾದರು, ಕಾಣೆಯಾಗಿ ಎಲ್ಲಿ ಹೋದರು ಎಂಬುದು ಸಂಶೋಧನಾತ್ಮಕವಾದ ವಿಚಾರವೂ, ವಿಚಾರ ಪ್ರಚೋದಕವೂ ಹೌದು.

ವ್ಯಕ್ತಿಯೊಬ್ಬರು ಕಾಣೆಯಾಗಿ ಹೋಗಲು ಹಲವಾರು ಕಾರಣಗಳಿರುತ್ತವೆ.

ಮನೆಯಲ್ಲಿ ಶಾಂತಿ ಸಿಗದೆ, ಯರಿಗೂ ಬೇಡವೆನ್ನಿಸಿಕೊಂಡ ವ್ಯಕ್ತಿ ರೋಸಿಹೋಗಿ ಸಂಸಾರದ ಜಂಜಾಟವೇ ಬೇಡವೆಂದು ಯಾರಿಗೂ ಹೇಳದ ದೂರದ ಸ್ಥಳಕ್ಕೆ ಹೊರಟು ಹೋಗಬಹುದು.

ಕೆಟ್ಟ ಸ್ನೇಹವನ್ನು ಬೆಳೆಸಿ, ಕಲಿಯಬಾರದ್ದನ್ನು ಕಲಿತು, ಮನೆಯವರಿಗೆ ತಲೆನೋವಾಗಿ ಪರಿಣಮಿಸಿ, ಕೊನೆಗೆ ಏನನ್ನೋ ಸಾಧಿಸಲು ಹೊರಟವನಂತೆ ಕಾಣೆಯಾಗಿ ಹೋಗಬಹುದು.

ಮನೆಯಲ್ಲಿ ದೊರಕುವ ಪ್ರೀತಿ ವಿಶ್ವಾಸಗಳು ಸರಿ ಹೊಂದಲಿಲ್ಲವೆಂದು ಹೊರಗಿನವರ ಪ್ರೀತಿಗೆ ಆಸೆ ಪಟ್ಟು, ಅವರೊಂದಿಗೆ ಯಾರಿಗೂ ತಿಳಿಯದ ಸ್ಥಳಕ್ಕೆ ಹೋಗಿ ತಮ್ಮ ಹೊಸ ಜೀವನ ನಡೆಸುವ ಆಸೆಯಿಂದ ಕಾಣೆಯಾಗಿ ಹೋಗಬಹುದು.

ಹೆಚ್ಚು ತಿಳುವಳಿಕೆ ಇಲ್ಲದ ಅಪ್ರಾಪ್ತರು, ಪುಟ್ಟ ಮಕ್ಕಳು ತಂದೆ ತಾಯಿಯರ ಅಥವಾ ಪೋಷಕರ ಅಜಾಗರೂಕತೆಯಿಂದಾಗಿ ಎಲ್ಲೋ ಕಳೆದು ಹೋಗಿ, ತಮ್ಮ ವಿಳಾಸವರಿಯದ್ದರಿಂದ ಕಾಣೆಯಾಗಿ ಹೋಗಬಹುದು.

ವೈಭವಯುತ ಜೀವನವನ್ನು ನಡೆಸುವ ವ್ಯಕ್ತಿಯನ್ನು ಗಮನಿಸಿದ ಸಮಾಜ ಕಂಟಕರು ಅವರಿಮ್ದ ಹಣ ಸೆಳೆಯುವ ಪ್ರಯತ್ನವೆಂದು ಅಂತಹ ವ್ಯಕ್ತಿಯನ್ನು ಅಪಹರಿಸಿ ಕಾಣೆಯಾಗಿಸಬಹುದು. ಹಣ ದೊರೆತರೂ ಸಹ ತಮ್ಮ ಕುರುಹು ತಿಳಿಯುತ್ತದೆಂದು ಅಥವಾ ಹಣ ದೊರಕದ ರೋಷದಿಂದ ಸೆರೆಹಿಡಿದು ತಂದ ವ್ಯಕ್ತಿಯನ್ನು ಕೊಲೆ ಮಾಡಿ ಕಾಣೆಯಾಗಿಸಬಹುದು.

ಮಿದುಳಿನ ಮೇಲಾಗುವ ಪರಿಣಾಮಗಳಿಂದ ವ್ಯಕ್ತಿಯ ಜ್ಞಾಪಕ ಶಕ್ತಿ ಕುಂದಿಹೋಗಿ ಎಲ್ಲಿಗೋ ಹೊರಟವರು ಹಿಂದಿರುಗಿ ಮನೆಗೆ ಬರಲಾಗದೆ ಕಾಣೆಯಾಗಿ ಹೋಗಬಹುದು.

ಈ ಎಲ್ಲಾ ಕಾಣೆಯಾಗಿ ಹೋಗಬಹುದಾದ ಪ್ರಸಂಗಗಳನ್ನು ಮೈಸೂರು ರಮಾನಂದರು ತಮ್ಮ ಇತ್ತೀಚಿನ ನಾಟಕ "ಕಾಣೆಯಾಗಿದ್ದಾನೆ"ಯಲ್ಲಿ ಅತ್ಯಂತ ಮನೋಜ್ಞವಾಗಿ ವಿಶ್ಲೇಷಿಸಿದ್ದಾರೆ. ಮೈಸೂರು ರಮಾನಂದರೆಂದರೆ ಕಾಮೆಡಿ, ಕಾಮೆಡಿಯೆಂದರೆ ಮೈಸೂರು ರಮಾನಂದ ಆಗಿರುವುದರಿಂದ, ಈ ನಾಟಕದುದ್ದಕ್ಕೂ ಹಾಸ್ಯದ ಝಳುಕು ಇದ್ದದ್ದೇ. ಆದರೆ ಅದು ಎಲ್ಲೂ ಅತಿರೇಕಕ್ಕೆ ಹೋಗದೆ, ವಿಷಯಕ್ಕೆ ನವಿರಾದ ನಗೆಲೇಪವನ್ನು ಹಚ್ಚಿರುವುದು ಈ ನಾಟಕದ ವಿಶೇಷತೆ.

ಮೈಸೂರು ರಮಾನಂದರ ಸಾಮಾಜಿಕ ಕಳಕಳಿ ಅವರ ಎಲ್ಲಾ ನಾಟಕಗಳಲ್ಲಿಯೂ ಹಾಸುಹೊಕ್ಕಾಗಿ ಮೂಡಿ ಬಂದಿದ್ದು, ಈ ನಾಟಕವೂ ಅದಕ್ಕೆ ಹೊರತಾಗಿಲ್ಲ. ಹಾಗಾಗಿ, ಅವರು ಕೇವಲ ವ್ಯಕ್ತಿಗಳು ಕಾಣೆಯಾಗಿರುವುದನ್ನು ಮಾತ್ರ ತಮ್ಮ ನಾಟಕದಲ್ಲಿ ಉದ್ದೇಶಿಸಿಲ್ಲದೆ, ಸಾಮಾಜಿಕವಾಗಿ ಮಾನವರಲ್ಲಿರಬೇಕಾದ ಹಲವಾರು ಗುಣಗಳು ಮಾಯವಾಗುತ್ತಿರುವುದನ್ನೂ ಸೂಕ್ಷ್ಮವಾಗಿ ತಿಳಿಸಿಕೊಟ್ಟು, ನೋಡುಗರನ್ನು ಚಿಂತನೆಗೆ ಹಚ್ಚಿದ್ದಾರೆ.

ಉದಾಹರಣೆಗೆ, ಇಂದಿನ ಸಮಾಜದಲ್ಲಿ ಹಿರಿಯರಿಗೆ ನೀಡಬೇಕಾದ ಗೌರವಾದರಗಳು ಕಿರಿಯರಲ್ಲಿ ಕಾಣೆಯಾಗಿರುವುದು, ಕಿರಿಯರನ್ನು ಕಂಡರೆ ಪ್ರೀತಿ ವಿಶ್ವಾಸಗಳು ಹಿರಿಯರಲ್ಲಿ ಕಾಣೆಯಾಗಿರುವುದು, ಪರೋಪಕಾರ ಮನೋಭಾವ ಕಾಣೆಯಾಗಿರುವುದು, ಕೆಲಸ ಕಾರ್ಯಗಳಲ್ಲಿ ಶ್ರದ್ಧೆ, ನಿಷ್ಠೆ ಕಾಣೆಯಾಗಿರುವುದು, ಅನ್ನದಾತನಲ್ಲಿರಬೇಕಾದ ನಿಷ್ಠೆ, ಗೌರವ, ಆಭಾರಿತನಗಳು ಕಾಣೆಯಾಗಿರುವುದು, ಗಂಡ ಹೆಂಡತಿಯಮೇಲೆ, ಹೆಂಡತಿ ಗಂಡನೆಮೇಲೆ ಇಡಬೇಕಾದ ನಂಬಿಕೆ ಕಾಣೆಯಾಗಿರುವುದು . . . ಹೀಗೆ ಕಾಣೆಯಾಗಿರುವುದರ ಪಟ್ಟಿ ನಾಟಕದುದ್ದಕ್ಕೂ ನೋಡುಗರ ಬೆನ್ನು ಬಿಡದೆ ಹಿಂಬಾಲಿಸುತ್ತದೆ.

ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸುಭಾಶ್ ಚಂದ್ರಬೋಸರು ಕಾಣೆಯಾಗಿರುವುದು, ಕಲ್ಕತ್ತಾದ ಮ್ಯೂಸಿಯಂನಿಂದ ಗುರುದೇವ ರವೀಂದ್ರನಾಠ ಠಾಗೂರರಿಗೆ ದೊರಕಿದ ನೊಬೆಲ್ ಪ್ರಶಸ್ತಿಯೇ ಕಾಣೆಯಾಗಿರುವುದು, ಮುನಿಸಿಪಾಲಿಟಿಯವರು ಹಣ ಖರ್ಚುಮಾಡಿ ಹಾಕಿಸಿದ ರಸ್ತೆಯೇ ಕಾಣೆಯಾಗಿರುವುದು . . . ಹೀಗೆ ಇಂದಿನ ರಾಜಕಾರಣದ ವ್ಯಥೆಯ ಕಥೆಯನ್ನೂ ವ್ಯಂಗ್ಯವಾಗಿ ತಿಳಿಸಿಕೊಟ್ಟಿರುವುದು, ನಮ್ಮದೇಶದ ಆಡಳಿತ ವ್ಯವಸ್ಥೆಯಲ್ಲಿರುವ ಲೋಪದೋಶಗಳನ್ನು ಎತ್ತಿ ತೋರಿಸಿ, ಎಚ್ಚರಿಕೆ ನೀಡುತ್ತಿರುವುದೂ ಈ ನಾಟಕದ ವಿಶೇಷತೆಯೇ ಸರಿ.

೧೫-೦೪-೨೦೦೮ನೇ ಮಂಗಳವಾರ ಸಂಜೆ ೬.೦೦ ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಕೃತಿಯ ಬಿಡುಗಡೆಯಾಯಿತು. ಸಿನೆಮಾ, ರಂಗಭೂಮಿ, ಕಿರಿತೆರೆಗಳ ಖ್ಯಾತ ನಗೆ ನಟ ಡಿಂಗ್ರಿ ನಾಗರಾಜು ಅಧ್ಯಕ್ಷತೆ ವಹಿಸಿದ್ದರು. ತಮ್ಮ ಚಿಕ್ಕ ಚೊಕ್ಕ ಭಾಷಣದಲ್ಲಿ ಅವರು ರಂಗಭೂಮಿಯ ಕಲಾವಿದರ ಹಿತಕ್ಕಾಗಿ ಸರಕಾರ ಹಾಗು ಇನ್ನಿತರ ಸಂಘ ಸಂಸ್ಥೆಗಳು ತೆಗೆದುಕೊಳ್ಳಬೇಕಾದ ಕಾರ್ಯಕ್ರಮಗಳಬಗ್ಗೆ ತಿಳಿಸಿಕೊಟ್ಟರು. ವಿಶೇಷ ಅತಿಥಿಯಾಗಿ ಆಗಮಿಸಿದ್ದ ಅಂತರರಾಷ್ಟ್ರೀಯ ರಂಗ ಬೆಳಕು ತಜ್ಞ ವಿ. ರಾಮಮೂರ್ತಿಯವರು ನಾಟಕದ ಬಗ್ಗೆ ಮೈಸೂರು ರಮಾನಂದರು ತಮ್ಮೊಡನೆ ಚರ್ಚಿಸಿದ್ದು, ತಾವು ಥೀಮಿನ ಬಗ್ಗೆ ಆಕರ್ಶಿತವಾಗಿದ್ದನ್ನು ನೆನಪಿಸಿಕೊಂಡರು.

ನಂತರ ನಾಟಕದ ರಂಗಪ್ರಯೋಗವೂ ಯಶಸ್ವಿಯಾಗಿ ನಡೆಯಿತು. ಪ್ರೇಕ್ಷರೆಲ್ಲರ ಮೆಚ್ಚುಗೆಯಾದ ನಾಟಕ ಮುಗಿಯುವ ಹೊತ್ತಿಗೆ ರಾತ್ರಿ ೯.೦೦ ಗಂಟೆಯಾದದ್ದು ಯಾರಗಮನಕ್ಕೂ ಬರಲೇ ಇಲ್ಲ. ಹಲವಾರು ರಂಗಗಣ್ಯರು ಪ್ರೇಕ್ಷಕರ ಗುಂಪಿನಲ್ಲಿದ್ದು, ನಾಟಕದಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತ ಪಡಿಸಿದರು.

ವರದಿ - ಎ.ವಿ. ನಾಗರಾಜು