ಮೈಸೂರು ರಮಾನಂದರ ’ನಾನಿನ್ನೂ ಸತ್ತಿಲ್ಲ’ ದ್ವಿತೀನ ನಾಟಕ ಪುಸ್ತಕದ ಬಿಡುಗಡೆ

ಮೈಸೂರು ರಮಾನಂದರ ’ನಾನಿನ್ನೂ ಸತ್ತಿಲ್ಲ’ ದ್ವಿತೀನ ನಾಟಕ ಪುಸ್ತಕದ ಬಿಡುಗಡೆ

ಬರಹ

ಇತ್ತೀಚೆಗೆ ಅಂದರೆ ೦೪-೦೪-೨೦೦೮ರಂದು ಮೈಸೂರಿನಲ್ಲಿ ಮೈಸೂರು ರಮಾನಂದ್ ಮತ್ತು ಮೈಸೂರಿನ ವಿ. ಉದಯಕುಮಾರ್ ಅವರ ಜಂಟಿ ಲೇಖನದಲ್ಲಿ ತಯಾರಾಗಿರುವ ’ನಾನಿನ್ನೂ ಸತ್ತಿಲ್ಲ’ ಎಂಬ ಸಾಮಾಜಿಕ ಕಳಕಳಿಯ ನಾಟಕದ ಪುಸ್ತಕದ ಬಿಡುಗಡೆಯಾಯಿತು. ೧೯೮೪ರಲ್ಲಿ ಮೊದಲು ಪ್ರದರ್ಶನ ಕಂಡ ಈ ಸ್ವಯಂ ರಚನೆಯ ನಾಟಕವನ್ನು ಇದುವರೆಗೂ ಸಾವಿರದ ಮೇಲೆ ಪ್ರದರ್ಶನ ನೀಡಿರುವ ಈ ಇಬ್ಬರು ನಟರು ೨೫ವರ್ಷದ ನಂತರ ನಾಟಕವನ್ನು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ತತ್ಸಂಬಂಧವಾಗಿ ಮೈಸೂರಿನ ಕಲಾಮಂದಿರ, ಇಲ್ಲಿ ಏರ್ಪಡಿಸಿದ್ದ ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆಯನ್ನು ಡಾ. ಹಾಲತಿ ಸೋಮಶೇಖರ್, ಸಹಾಯಕ ನಿರ್ದೇಶಕರು, ಕ ಮತ್ತು ಸಂ ಇಲಾಖೆ ಇವರು ವಹಿಸಿದ್ದರು. ಡಾ|| ಎನ್.ಎನ್. ಪ್ರಹ್ಲಾದ್, ಹಿರಿಯ ಉಪನ್ಯಾಸಕರು, ರೀಜನಲ್ ಇನ್ಸ್ ಟಿಟ್ಯೂಟ್ ಆಫ಼್ ಎಜುಕೇಷನ್, ಮೈಸೂರು ಇವರು ನಡೆಸಿಕೊಟ್ಟರು. ಎ.ವಿ. ನಾಗರಾಜು, ವಿಶ್ರಾಂತ ಬ್ಯಾಂಕ್ ವರಿಷ್ಠಾಧಿಕಾರಿ, ಲೇಖಕರು, ಸಾಮಾಜಿಕ ಸಾಹಿತ್ಯಿಕ ಚಿಂತಕರು ಇವರು ಪುಸ್ತಕ ಪರಿಚಯವನ್ನು ವಿಶಿಷ್ಠರೀತಿಯಲ್ಲಿ ಮಾಡಿಕೊಟ್ಟರು. ಪ್ರೊ. ಹೆಚ್.ಎಸ್. ಉಮೇಶ್, ಪ್ರಾಂಶುಪಾಲರು, ಶಾರದಾವಿಲಾಸ ಕಾಲೇಜು ಮತ್ತು ರಂಗ ಕರ್ಮಿ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಪುಸ್ತಕ ಪರಿಚಯದ ವಿಶಿಷ್ಠತೆ ಎಂದರೆ, ಪರಿಚಯವನ್ನು ಪದ್ಯರೂಪದಲ್ಲಿ ಮಾಡಿಕೊಟ್ತುದು. ನೀವೇ ಓದಿ ನೋಡಿ:

"ನಾನಿನ್ನೂ ಸತ್ತಿಲ್ಲ"ವೆಂಬೀ ನಾಟಕ ಪುಸ್ತಕ
ಹೊತ್ತಿದೆ ಇಪ್ಪತ್ತೈದು ವರುಷಗಳ ಅನುಭವದ ಮಸ್ತಕ
ಎಂಬತ್ನಾಕರಲ್ಲಿ ಕಂಡ ಮೊದಲ ಪ್ರದರ್ಶನ
ಇಂದಿಗೂ ಪ್ರಸ್ತುತತೆ ಕಳೆದುಕೊಂಡಿಲ್ಲದಿರುವುದಕ್ಕಿದು ನಿದರ್ಶನ

ಈ ಪುಸ್ತಕದಿ ಹಲವು ವಿಶೇಷಗಳೂ ಉಂಟು
ಇದಕೆ ಒಬ್ಬರಲ್ಲ, ಇಬ್ಬರು ಲೇಖಕರ ನಂಟು
ಮೈಸೂರಿಗರೇ ಅದ ಉದಯಕುಮಾರ್ ಮತ್ತು ರಮಾನಂದ
ಸಾವಿರ ಮಿರಿದ ಪ್ರದರ್ಶನ ನೀಡಿರುವುದೇ ಪ್ರೇಕ್ಷಕರಿಗೆ ಮಹದಾನಂದ

ಈರಯ್ಯನೆಂಬ ಬಡ ರೈತನೇ ಈ ನಾಟಕದ ನಾಯಕ
ತುತ್ತಿನ ಚೀಲವ ತುಂಬಲು ಅಹನ್ಯಹನಿ ಗೈಮೆಯೇ ಆತನ ಕಾಯಕ
ಮಂಕನಹಳ್ಳಿ ಅವನೂರು, ಅವನಿಗಿದ್ದ ಆಸೆಯು ಕೇವಲ ಒಂಚೂರು
ಪಿತ್ರಾರ್ಜಿತ ಭೂಮಿಯ ಒಡೆತನವು ಬದಲಾಗಲಿ ತನ್ಹೆಸರಿಗೆ ಮಂಜೂರು

ಎಡತಾಕುವನು ಸರಕಾರಿ ಕಚೇರಿಯ ಬಾಗಿಲುಗಳನು
ಎಣಿಸದೆ ದಿನಗಳನು, ಶಪಿಸದೆ ಅಧಿಕಾರಿಗಳನು
ಲಂಚದ ಮುಷ್ಥಿಗೆ ಸಿಲುಕಿದ ಬಡ ರೈತ, ಖಡತದಲ್ಲಿ ಸತ್ತ
ಭೂಮಿಯ ಒಡೆತನ ತನ್ಹೆಸರಿಗೆ ಬದಲಾಗದೆ ಕೊನೆಗೂ ಸೋತ

ನಾಟಕ ತೋರುವುದು ಅಧಿಕಾರಶಾಹಿಯ ಕ್ರೂರತೆ
ಕಚೇರಿಗಳ ಮೂಲೆ ಮೂಲೆಗಳಲ್ಲೂ ಹೊಕ್ಕಿಹ ಬ್ರಷ್ಟತೆ
ಬದುಕಿಹ ಬಡರೈತ ಈರಯ್ಯನ ಸಾವಿನ ಪತ್ರಿಕೆ
ತೋರುವುದು ಜಗಕೆ ನಮ್ಮಾಡಳಿತ ವ್ಯವಸ್ತೆಯ ಬಡಿವಾರಿಕೆ

ಪುಸ್ತಕದ ಭಾಷೆ ಇಹುದು ಸರಳ, ಸುಂದರ ಮತ್ತು ನೇರ
ಅಪಶಬ್ಧ ಯಾ ದ್ವಂದ್ವಾರ್ಥಕೆ ಬಲು ದೂರ
ನಗೆಯ ಲೇಪದ ಝಲುಕಿದ್ದರೂ ಕೂಡ
ಮನಸನು ಚಿಂತನೆಗೆ ಹಚ್ಚುವುದು ನೋಡ

ನಾಟಕ ಪ್ರಿಯರೆ, ಪ್ರೇಕ್ಷಕ ಬಂಧುಗಳೆ
ಕೊಳ್ಳಿರಿ, ಓದಿರಿ "ನಾನಿನ್ನೂ ಸತ್ತಿಲ್ಲ" ಪುಸ್ತಕವ
ಪುಸ್ತಕ ಕೊಂಡರೆ, ಅದು ಪುನರ್ಮುದ್ರಣ ಕಂಡರೆ
ಹೆಚ್ಚಿಸುವುದು ನಟ, ನಾಟಕಕಾರ ಉದಯಕುಮಾರ್, ರಮಾನಂದರ ಉತ್ಸಾಹವ

ಪುಸ್ತಕ ಬಿಡುಗಡೆಯ ನಂತರ ಮೈಸೂರು ವಿ. ಉದಯಕುಮಾರ್ ರಚಿತ "ಯಮಪಾಶ" ಎಂಬ ಪರಿಸರ ಪ್ರಜ್ಝೆಯನ್ನು ಉದ್ದೀಪನಗೊಳಿಸುವ ಸಾಮಾಜಿಕ ಕಳಕಳಿಯ ನಾಟಕವನ್ನು ಪ್ರಸ್ತುತ ಪಡಿಸಲಾಯಿತು.