ಮೈಸೂರು ಸಂಸ್ಥಾನದ ಕೊನೆಯ ಮಹಾರಾಜ- ಶ್ರೀ ಜಯಚಾಮರಾಜೇಂದ್ರ ಒಡೆಯರ್
ಜುಲೈ ೧೮, ೨೦೨೦ ಕ್ಕೆ ಮೈಸೂರು ಸಂಸ್ಥಾನದ ಕೊನೆಯ ಮಹಾರಾಜ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರಿಗೆ ನೂರು ವರ್ಷ ತುಂಬಿತು. ಮೈಸೂರು ಸಂಸ್ಥಾನದ ಕೊನೆಯ ಹಾಗೂ ೨೫ನೇ ಮಹಾರಾಜರು ಇವರಾಗಿದ್ದರು. ೧೯೧೯ರ ಜುಲೈ ೧೮ರಂದು ಜನಿಸಿದ ಇವರಿಗೆ ಈ ವರ್ಷ ೧೦೧ರ ಸಂಭ್ರಮ. ಹತ್ತು ವರ್ಷಗಳ ಕಾಲ ಇವರು ಮೈಸೂರು ರಾಜ್ಯವನ್ನು ಆಳಿದ್ದರು. ೧೯೪೦ರಿಂದ ೧೯೫೦ರ ವರೆಗೆ ಮೈಸೂರು ಸಂಸ್ಥಾನವನ್ನು ಆಳಿದ ಹಿರಿಮೆ ಇವರದ್ದು. ೧೯೫೦ರಲ್ಲಿ ಭಾರತವು ಗಣರಾಜ್ಯವಾದಾಗ ಇವರ ಅರಸೊತ್ತಿಗೆ ಕಳೆದು ಹೋದರೂ ೧೯೫೬ರವರೆಗೆ ಮೈಸೂರು ರಾಜ್ಯದ ಪ್ರಮುಖರಾಗಿ ಕಾರ್ಯ ನಿರ್ವಹಿಸಿದ್ದರು. ೧೯೫೬ರಲ್ಲಿ ಕರ್ನಾಟಕ ರಾಜ್ಯ ಸ್ಥಾಪನೆಯಾದಾಗ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದರು.
ಜಯಚಾಮರಾಜ ಒಡೆಯರ್ ಅವರು ಕಂಠೀರವ ನರಸಿಂಹರಾಜ ಒಡೆಯರ್ ಹಾಗೂ ಕೆಂಪು ಚೆಲುವಾಜ ಅಮ್ಮಣ್ಣಿ ದಂಪತಿಗಳ ಸುಪುತ್ರರಾಗಿ ಜನಿಸಿದರು. ಇವರ ದೊಡ್ಡಪ್ಪನವರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರು ಸಂಸ್ಥಾನದ ರಾಜರಾಗಿದ್ದರು. ಆದರೆ ಅವರಿಗೆ ಸಂತಾನ ಭಾಗ್ಯವಿರಲಿಲ್ಲ, ಆ ಕಾರಣದಿಂದ ಅವರು ತಮ್ಮ ಸಹೋದರ ಕಂಠೀರವ ನರಸಿಂಹ ರಾಜರ ಪುತ್ರ ಚಾಮರಾಜ ಒಡೆಯರ್ ಅವರನ್ನು ದತ್ತಕ್ಕೆ ತೆಗೆದುಕೊಳ್ಳುವ ನಿರ್ಧಾರ ಮಾಡಿದರು, ಆ ಕಾರಣದಿಂದ ಚಾಮರಾಜ ಒಡೆಯರ್ ಅವರಿಗೆ ೧೫ನೇ ವಯಸ್ಸಿನಲ್ಲೇ ಮೈಸೂರು ಅರಮನೆಯ ವತಿಯಿಂದ ಲೋಕರಂಜನ್ ಮಹಲ್ ನಲ್ಲಿ ವಿಶೇಷ ಶಾಲೆ ತೆರೆದು ಶಿಕ್ಷಣ ಕೊಡಿಸಲಾಯಿತು. ತಮ್ಮ ೧೯ನೇ ವಯಸ್ಸಿನಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದು ಮೈಸೂರು ವಿಶ್ವವಿದ್ಯಾನಿಲಯದಿಂದ ತಮ್ಮ ಬಿ.ಎ.ಪದವಿಯನ್ನು ಪೂರೈಸಿದರು. ಚುರುಕಾದ ವಿದ್ಯಾರ್ಥಿಯಾಗಿದ್ದ ಇವರು ಕನ್ನಡ, ಆಂಗ್ಲ ಭಾಷೆಯ ಜೊತೆಗೆ ರಾಜನೀತಿ ಹಾಗೂ ಅರ್ಥಶಾಸ್ತ್ರ ಅಧ್ಯಯನವನ್ನೂ ಮಾಡಿ ಬಹುಮಾನವನ್ನೂ ಪಡೆದರು.
೧೯೪೦ರ ಸೆಪ್ಟೆಂಬರ್ ೮ರಂದು ಮೈಸೂರು ಸಂಸ್ಥಾನದ ರಾಜರಾಗಿ ಪಟ್ಟಾಭಿಷೇಕರಾದ ಜಯಚಾಮರಾಜ ಒಡೆಯರ್ ಅವರು ಮೊದಲಿನಿಂದಲೂ ಅಖಂಡ ಕರ್ನಾಟಕದ ಪ್ರತಿಪಾದಕರಾಗಿದ್ದರು. ಅಖಂಡ ಕರ್ನಾಟಕ ಇವರ ಕನಸಾಗಿತ್ತು. ಅದನ್ನು ನನಸಾಗಿಸಲು ಅವರ ರಾಜ ಪದವಿಯನ್ನು ತ್ಯಜಿಸಲೂ ಅವರು ಸಿದ್ಧರಾಗಿದ್ದರು. ಇವರು ಸಂಗೀತದ ಆರಾಧಕರಾಗಿದ್ದರು. ಇವರ ಕಾಲದಲ್ಲಿ ಲಲಿತ ಕಲೆಗಳಿಗೆ ವಿಶೇಷ ಪ್ರೋತ್ಸಾಹ ದೊರೆಯುತ್ತಿತ್ತು. ಜಯಚಾಮರಾಜ ಗ್ರಂಥಮಾಲಾ ಎಂಬ ಯೋಜನೆಯನ್ನು ಇವರು ಕಾರ್ಯರೂಪಕ್ಕೆ ತಂದು ಅದರ ಪ್ರಕಾರ ಬೇರೆ ಭಾಷೆಗಳಲ್ಲಿದ್ದ ವೇದಶಾಸ್ತ್ರ, ಪುರಾಣಗಳ ಬಗ್ಗೆ ಪ್ರಕಟವಾದ ಗ್ರಂಥಗಳನ್ನು ಕನ್ನಡಕ್ಕೆ ಅನುವಾದಗೊಳಿಸಿದರು. ಇದಕ್ಕಾಗಿ ಇವರು ಹಲವಾರು ಪ್ರಸಿದ್ಧ ಕನ್ನಡ ಪಂಡಿತರನ್ನು ಅನುವಾದಕರಾಗಿ ನಿಯೋಜಿಸಿದ್ದರು. ಭಾರತ ಗಣರಾಜ್ಯವಾದಾಗ ಇವರು ಪ್ರಥಮವಾಗಿ ಅದರೊಳಗೆ ಸೇರ್ಪಡೆಗೊಳ್ಳುವ ಮನಸ್ಸು ಮಾಡಿದರು. ಗಣರಾಜ್ಯವಾದಾಗ ಅವರ ಅರಸೊತ್ತಿಗೆ ಹೋದರೂ ರಾಜ ಪ್ರಮುಖ ಎಂಬ ಹುದ್ದೆಯಲ್ಲಿ ಇವರನ್ನು ಮುಂದುವರೆಸಲಾಯಿತು. ನಂತರದ ದಿನಗಳಲ್ಲಿ ರಾಜ್ಯಪಾಲರೂ ಆಗಿದ್ದರು. ರಾಜ್ಯಪಾಲರಾಗಿದ್ದ ಸಮಯದಲ್ಲಿ ಇವರು ಸಂಬಳವನ್ನು ಸ್ವೀಕರಿಸಲಿಲ್ಲ ಎಂಬುವುದು ಇವರ ಹೆಗ್ಗಳಿಕೆ. ಸ್ವಲ್ಪ ಸಮಯ ಮದ್ರಾಸ್ ರಾಜ್ಯದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದರು.
ಇವರಿಗೆ ಚರಿತ್ರೆ, ರಾಜ್ಯಶಾಸ್ತ್ರ ಹಾಗೂ ಅರ್ಥಶಾಸ್ತ ವಿಷಯಗಳಲ್ಲಿ ವಿಶೇಷ ಆಸಕ್ತಿ ಇತ್ತು. ಉತ್ತಮವಾಗಿ ಕುದುರೆ ಸವಾರಿ ಮಾಡುತ್ತಿದ್ದರು. ಟೆನಿಸ್ ಆಟವನ್ನು ಆಡುತ್ತಿದ್ದರು. ಅರಮನೆಯಲ್ಲಿ ಉತ್ತಮ ಗ್ರಂಥ ಭಂಡಾರವನ್ನು ನಿರ್ಮಾಣ ಮಾಡಿದ್ದರು. ಉತ್ತಮ ಪುಸ್ತಕಗಳನ್ನು ಓದುವುದು ಇವರ ಹವ್ಯಾಸವಾಗಿತ್ತು. ವಿಚಾರ ಪೂರ್ಣ ಭಾಷಣವನ್ನು ಮಾಡುತ್ತಿದ್ದರು. ಇವರು ವನ್ಯ ಜೀವಿಗಳ ಬಗ್ಗೆ ಅಪಾರ ಮಾಹಿತಿಯನ್ನು ಸಂಗ್ರಹಿಸಿದ್ದರು ಹಾಗೂ ಪ್ರಾಣಿ ಪಕ್ಷಿಗಳ ಮೇಲೆ ಪ್ರೀತಿ ಹೊಂದಿದ್ದರು. ಮೈಸೂರಿನಲ್ಲಿರುವ ಚಾಮರಾಜೇಂದ್ರ ಮೃಗಾಲಯಕ್ಕೆ ಇವರ ಕೊಡುಗೆ ಅಪಾರ.
ಕೇಂದ್ರೀಯ ಆಹಾರ ಸಂಶೋಧನಾಲಯ, ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರಗಳಿಗೆ ಇವರು ತಮ್ಮ ಅಧೀನದ ಕಟ್ಟಡಗಳನ್ನು ದಾನವಾಗಿ ನೀಡಿದರು. ತಲತಲಾಂತರದಿಂದ ಆಚರಿಸಿಕೊಂಡು ಬರುತ್ತಿದ್ದ ಮೈಸೂರಿನ ಜಂಬೂ ಸವಾರಿ, ಆಯುಧ ಪೂಜೆ, ವಿಜಯ ದಶಮಿ ಮಹೋತ್ಸವಗಳನ್ನು ಇನ್ನಷ್ಟು ಆಕರ್ಷಕವಾಗಿ ನಡೆಸಿ, ದೇಶ ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸಿದರು. ಇವರ ಕಾಲದಲ್ಲಿ ದೇವಾಲಯಗಳಲ್ಲಿ ಹಿಂದುಳಿದ ಜಾತಿಯವರಿಗೆ ಪ್ರವೇಶ ನೀಡಲಾಯಿತು. ಗೋಹತ್ಯೆಯನ್ನು ನಿಷೇದಿಸಲಾಯಿತು. ಕೈದಿಗಳ ಮನಪರಿವರ್ತನೆಗೆ ಕಾರ್ಯಕ್ರಮಗಳನ್ನು ರೂಪಿಸಲಾಯಿತು.ಯಿತು. ಹಿಂದುಳಿದ ಲಂಬಾಣಿ ಸಮುದಾಯಕ್ಕೆ ರಾಜ ಸಂಸ್ಥಾನದಲ್ಲಿ ಗೌರವ ನೀಡಿದರು. ಇವರು ಮಾಡಿದ ಸಮಾಜ ಸುಧಾರಣಾ ಕಾರ್ಯಗಳು ಈಗಲೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದೆ.
ಜಯಚಾಮರಾಜ ಒಡೆಯರ್ ಅವರಿಗೆ ಸತ್ಯಪ್ರೇಮ ಕುಮಾರಿ ಹಾಗೂ ತ್ರಿಪುರ ಸುಂದರ ಅಮ್ಮಣ್ಣಿ ಎಂಬ ಇಬ್ಬರು ಪತ್ನಿಯರು. ಇವರಿಂದ ೫ ಮಂದಿ ಹೆಣ್ಣು ಮಕ್ಕಳು ಹಾಗೂ ಓರ್ವ ಪುತ್ರ ಜನಿಸುತ್ತಾರೆ. ಇವರ ಪುತ್ರ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮುಂದೆ ಇವರ ಉತ್ತರಾಧಿಕಾರಿಯಾಗಿ ನೇಮಕವಾಗುತ್ತಾರೆ. ಸೆಪ್ಟೆಂಬರ್ ೨೩, ೧೯೭೪ರಲ್ಲಿ ಇವರು ನಿಧನ ಹೊಂದುತ್ತಾರೆ. ಆದರೆ ಇವರು ಮೈಸೂರು ಸಂಸ್ಥಾನಕ್ಕೆ ಹಾಗೂ ನಂತರದ ದಿನಗಳಲ್ಲಿ ಅಖಂಡ ಕರ್ನಾಟಕ ರಾಜ್ಯಕ್ಕೆ ಸಲ್ಲಿಸಿದ ಸೇವೆ ಸದಾ ಕಾಲ ನೆನಪಿನಲ್ಲಿ ಉಳಿಯುವಂತದ್ದು.
ಚಿತ್ರಕೃಪೆ: ಅಂತರ್ಜಾಲ ತಾಣ