ಮೈ ಟಿಪ್ಪು ಸುಲ್ತಾನ್ ಬೋಲ್ ರಹಾ ಹೂಂ....

ಅರೆ ಇಸ್ಕಿ, ರೀ ಸಾಮಿ, ಇದು 2022, ನಮ್ದುಕೆ ಸತ್ತಿದ್ದು 1799. ಈಗ ನೀವು ನಂದು ಹೆಸರು ಹಿಡ್ಕೊಂಡು ಜಗಳ ಆಡ್ತಿದೀರೀ. ನಿಮ್ದುಕೆ ನಾಚ್ಕೆ ಆಗೋದಿಲ್ವ. ಆವತ್ತು ನಾನು ನಮ್ಮಪ್ಪ ಹೆಂಗೋ ನಮ್ಗೆ ಬೇಕಾದಂಗೆ ನಮ್ಗೆ ತಿಳ್ದಂಗೆ ಬದುಕುದ್ವೀ. ನಿಮ್ಮನ್ನ ಕೇಳಿ ಬದ್ಕೋಕೆ ಆಗುತ್ತೇ…?
ನಾನು ಮುಸಲ್ಮಾನ್, ಎಲ್ಲದೂ ಅಲ್ಲಾದು ಕೃಪೆ. ನಿಮ್ಗೆ ಇದ್ದಂಗೆ ನಂಗೂನು ಆಸೆ ಇರೋದಿಲ್ಲೇ. ನಂಗೂ ರಾಜ ಆಗ್ಬೇಕು ಅಂತ ಆಸೆ ಇತ್ತು. ಅದ್ಕೆ ನಾನು ನಮ್ಮಪ್ಪ ಪೈಟ್ ಮಾಡಿದ್ವಿ. ಅರೆ ಆವಾಗ ತಾಖತ್ ಇದ್ದವ್ರು ಎಲ್ರೂ ಹಂಗೆ ಮಾಡ್ತಿದ್ರು. ನಾವು ಮಾಡುದ್ವಿ.
ಅರೆ ಇಸ್ಕಿ, ಕ್ಯಾರೇ ಹೋ, ಪ್ರಜಾಭುತ್ವಕೀ, ಡೆಮಾಕ್ರಸೀಕೀ, ಸಂಧಾನಾಕಿ ಸಂವಿಧಾನಾಕೀ ಅದೂ ಇರೋವಾಗ್ಲೇ ನಿಮ್ದು ಎಂಎಲ್ಏಗಳು ನಮಕ್ ಹರಾಮ್ ಕೆಲ್ಸ ಮಾಡ್ತಿಲ್ವೇ, ದುಡ್ಡು ಕೊಟ್ಟು ಹೆಂಡಾಕೆ ಕೊಟ್ಟು, ಸೀರೆ ಪಂಚೆ ಕೊಟ್ಟು ಓಟ್ ತಗಂಡ್ತಿಲ್ಲೇ, ಆ ಕಡೆ ಈ ಕಡೆ ಕೋತಿ ತರಾ ಜಂಪ್ ಮಾಡ್ತಿಲ್ಲೇ, ಜನಕ್ಕೆ ಮೋಸ ಮಾಡಿ ದುಡ್ಡು ನುಂಗ್ತಿಲ್ಲೇ, ಆಗ್ದೇ ಇರೋರ್ಗೆ ಹೊಡಿಸ್ತಿಲ್ಲೇ, ದುಡ್ಗೆ ತಗಂಡು ಸರ್ಕಾರ ಬೀಳಿಸ್ತಿಲ್ಲೇ...
ನಂಗೆ ಮಾತ್ರ ನಮಕ್ ಹರಾಮ್ ಅಂತಿರೀ. ಅಲ್ರೀ, ನಿಮ್ದುಕೆ ದೇವೇಗೌಡ, ಯಡಿಯೂರಪ್ಪ, ಸಿದ್ದರಾಮಯ್ಯ ಅವರ ಮಕ್ಕಳ್ಗೆ ರಾಜಕೀಯದಲ್ಲಿ ಮುಂದೆ ತಂದಿಲ್ಲೇ. ಕರ್ನಾಟಕದಲ್ಲಿ ಬೇರೆ ಯಾರೂ ಇಲ್ವಾ, ಎಲ್ಲಾ ಸತ್ತು ಹೋಗಿದಾರಾ… ಅಪ್ಪ, ಮಕ್ಕಳು, ಅಳಿಯ, ಸೊಸೆ ಮಾತ್ರ ರಾಜಕೀಯಕ್ಕೆ ಬರ್ಬೇಕು. ಇದೇನು ನಮ್ದು ಕಾಲ್ದಂಗೆ ತಾಖತ್ ಇರೋ ರಾಜರ್ದು ಆಡಳಿತಾ. ಮಾತ್ಗೆ ಹೇಳ್ದೆ ನೀವೇ ಯೋಚ್ನೆ ಮಾಡಿ.
ಅಲ್ರೀ ನಾನು ನಿಮ್ಮ ದೇವಸ್ಥಾನಕ್ಕೆ ಹೊಡ್ದೆ ನಿಜ, ಹಂಗೆ ಹೆಲ್ಪೂನು ಮಾಡಿದ್ದೀನಿ. ನೋಡ್ರಿ ನಮ್ದು ಇಸ್ಲಾಂ ಧರ್ಮ. ಅದಕ್ಕೆ ನಾನು ಸಪೋರ್ಟ್ ಮಾಡ್ದೆ. ಯಾಕೆ ಆ ಬಿಳಿ ಚರ್ಮದವರು ನಿಮ್ದು ಕಿತ್ತೂರು ಚೆನ್ನಮ್ಮ, ಲಕ್ಷೀಬಾಯಿ, ಆಜಾದ್, ಭಗತ್ ಸಿಂಗ್ ಎಲ್ರೂಗೂ ಸಾಯಿಸಿಲ್ವೇ, ಎಲ್ಲಿಂದಲೋ ಬಂದ ಆ ಕಳ್ನನ್ಮಮಕ್ಳು ನನ್ನೂ ಸಾಯಿಸಿದ್ರು, ನನ್ನ ಮಕ್ಕಳ್ಗೂ ಜೈಲಿಗೆ ಹಾಕಿದ್ರು.
ನೀವೂನು ನಮ್ದು ಮಸೀದಿಗೆ ಒಡ್ದಾಕಿದ್ರಿ ಜ್ಞಾಪಕಕ್ಕೆ ಐತೆ, ಅಯೋದ್ಯಾದಾಗ. ಅಲ್ವಾ. ಹಂಗೆ ನಾನು ನನ್ಗೆ ಆಪೋಸ್ ಮಾಡ್ದೋರ್ಗೆ ಸಾಯುಸ್ದೆ. ಅದು ತಪ್ಪಾ...ಇಂದ್ರಾಗಾಂಧಿ ಸತ್ತಾಗ ಸಿಖ್ಖರನ್ನ ಸಾಯಿಸಿಲ್ವ, ಗುಜರಾತಲ್ಲಿ ಸಾಬರನ್ನ ಸಾಯಿಸಿಲ್ವ, ಇಂಗ್ಲೀಷೋರು ಜಲಿಯನ್ ವಾಲಾಬಾಗ್ ನಲ್ಲಿ ಎಷ್ಟೊಂದು ಜನ್ರನ್ನ ಸಾಯಿಸಿಲ್ವಾ, ಹಂಗೇ ನೋಡ್ರಿ ಅವರವರ ಕಾಲದಲ್ಲಿ ಏನೇನೂ ಆಗಿರುತ್ತೆ. ಒಳ್ಳೇದು ಕೆಟ್ಟದ್ದು. ಅದೇ ಇತ್ಯಾಸ. ಅದನ್ನ ಹೆಂಗಿದೆಯೋ ಹಂಗೇ ಓದ್ಸಿ...
ನಾನು ತುಂಬಾ ಒಳ್ಳೆಯವನು ಅಂತಾ ಹೇಳ್ತಾ ಇಲ್ಲ. ನೀವೆಲ್ಲಾ ನಂಗೆ ನೆನಪ್ಸಕಳ್ಳಿ ಅಂತಾನೂ ಕೇಳ್ತಾ ಇಲ್ಲ. ಇವಾಗ ನನ್ದು ಹುಟ್ದಾಬ್ವಾನೋ ಸತ್ತಾಬ್ಬಾನೋ ಮಾಡಿದ್ರೆ ಏನ್ ಪ್ರಯೋಜನ. ಸಾಮಿ ನಾನು ನನ್ ಮಕ್ಳು ಮೊಮ್ಮಕ್ಳು ಎಲ್ಲಾ ಸತ್ತೋಗಿದೀವಿ. ಈವಾಗ ನೀವು ಬದ್ಕಿರೋರು. ಏನೋ ಈವಾಗ ಇರೋರು ಭಾಳ ಬುದ್ದಿವಂತ್ರಂತೆ. ಚೆನ್ನಾಗಿ ಬದ್ಕಿ.
ನೋಡಿ, ನೀವೇ ನಮ್ದುಕೆ ಹೆಸ್ರು ಹೇಳಿ ಕಿತ್ತಾಡ್ ಬ್ಯಾಡ್ರಿ. ಇಷ್ಟ ಇರೋರು ನೆನಪಿಸ್ಕಳ್ರಿ, ಇಲ್ದೇ ಇರೋರು ಬಿಟ್ಟಾಕಿ. ಇತ್ಯಾಸ್ದಾಗ ಒಳ್ಳೇದು ಕೆಟ್ಟದ್ದು ಇನ್ನೂ ಏನೇನೋ ನೆಡ್ದೈತೆ. ಒಳ್ಳೇದು ಮಾತ್ರ ತಗಳ್ಳಿ. ನಿಮ್ಗೆ ಗೊತ್ತಿಲ್ದೆ ಮಣ್ಣಾಗಿ ಹೋಗಿರೋ ಎಷ್ಟೋ ಇಷ್ಯಾ ಐತೆ. ಆ ಇಷ್ಯಾ ಯಾವೊತ್ತೂ ಆಚೆ ಬರೊಲ್ಲಾ...
ಅಂದಂಗೆ, ನಮ್ ರಾಜರ್ರು ಅದೇ ಒಡೆಯರ್ ಅವರಿಗೆ ಕೇಳ್ದೆ ಅಂತೇಳಿ. ಏನೋ ಆವಾಗ ನೆಡಿದಿದ್ದು ನಡೆದೋಯ್ತು. ಕ್ಷಮ್ಸಿಬಿಡಿ. ಹಳೇ ಕಾಲಕ್ಕಿಂತ ಹೊಸ ಕಾಲ ಚೆನ್ನಾಗಿರ್ಬೇಕು. ನಮ್ ಕಾಲ್ದಾಗ ಲೈಪ್ ಎಂಜಾಯ್ ಮಾಡಾಕೆ ಆಗ್ತಾ ಇರ್ಲಿಲ್ಲ. ಬರೀ ಯುದ್ಧ ಯುದ್ಧ ಯುದ್ಧ. ಆದ್ರೆ ಈಗ ನಿಮ್ಗೆ ಎಲ್ಲಾ ಸೌಕರ್ಯ ಐತೆ. ಖುಷಿ ಖುಷಿಯಾಗಿರ್ರಿ.
ನಂಗೇ ಸತ್ ಮ್ಯಾಲೆ ಗೊತ್ತಾಯ್ತು. ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಎಲ್ಲಾ ಸುಳ್ಳು. ಬದ್ಕಿರೋವಾಗ ನಾವೇ ಗಾಂಚಾಲಿ ಮಾಡ್ಕೊಂದು ಇದೆಲ್ಲಾ ಸ್ಪಷ್ಟಿ ಮಾಡ್ಕೊಂಡ್ವಿ. ಸತ್ ಮ್ಯಾಲೆ ಎಲ್ಲಾ ಒಂದೇ. ಮಣ್ಣಾಗೋದು. ಇರ್ಲಿ, ನಿಮ್ಗೆ ಕೈ ಮುಗ್ದು ಕೇಳ್ಕೋತೀನಿ. ನನ್ ಹೆಸ್ರು ಹೇಳ್ಕೊಂಡು ರಾಜಕೀಯ ಮಾಡಬ್ಯಾಡ್ರಿ. ಸತ್ ಇರೋ ನನ್ನನ್ನ ಹಿಡ್ಕೊಂಡು ಯಾಕ್ ನೇತಾಡ್ತೀರೀ.. ಎಲ್ರಿಗೂ ಒಳ್ಳೇದಾಗ್ಲಿ, ನಾನು ಹೋಗ್ ಬತ್ತೀನಿ.......
-ವಿವೇಕಾನಂದ ಎಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ