ಮೈ ಮನಿ ಮ್ಯಾಪ್

ಮೈ ಮನಿ ಮ್ಯಾಪ್

ಪುಸ್ತಕದ ಲೇಖಕ/ಕವಿಯ ಹೆಸರು
ಕಾಂಚನಾ ಹೆಗಡೆ
ಪ್ರಕಾಶಕರು
ಸಾವಣ್ಣ ಪ್ರಕಾಶನ, ಜಯನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ. ೨೦೦.೦೦, ಮುದ್ರಣ: ೨೦೨೫

ಹಣ ಗಳಿಸುವುದಕ್ಕಿಂತ ಗಳಿಸಿದ ಹಣವನ್ನು ಉಳಿಸಿಕೊಳ್ಳುವುದು. ಸುಮ್ಮನೇ ಹಣ ಮನೆಯಲ್ಲಿ ಭದ್ರವಾಗಿರಿಸಿಕೊಂಡರೆ ಅದು ಉಪಯೋಗಕ್ಕೆ ಬರುವುದಿಲ್ಲ. ಅದನ್ನು ಸರಿಯಾದ ಕಡೆ ಬಳಸಿಕೊಳ್ಳುವುದು, ವಿನಿಯೋಗಿಸುವುದು ಬಹು ಮುಖ್ಯ. ಹಣವನ್ನು ಬಳಸಲು ಕಲಿತವ ಕೋಟ್ಯಾಧೀಶನಾಗುತ್ತಾನೆ. ಪ್ರತಿಯೊಬ್ಬರಿಗೂ ಅಗತ್ಯವಾದ ಹಣಕಾಸಿನ ದಾರಿಯನ್ನು ಹುಡುಕಲು ಸಹಾಯ ಮಾಡಿದ್ದಾರೆ ಲೇಖಕಿ ಕಾಂಚನಾ ಹೆಗಡೆ. ಇವರು ‘ಮೈ ಮನಿ ಮ್ಯಾಪ್’ ಎನ್ನುವ ೧೪೦ ಪುಟಗಳ ಸೊಗಸಾದ ಕೃತಿಯನ್ನು ಬರೆದು ಪ್ರಕಟಿಸಿದ್ದಾರೆ.

‘ಮೈ ಮನಿ ಮ್ಯಾಪ್’ ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಬರಹಗಾರ, ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿ. ಇವರು ತಮ್ಮ ಬೆನ್ನುಡಿಯಲ್ಲಿ “ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆ"ಗಾಗಿ' ಎನ್ನುವ ದಾಸರ ನುಡಿ ಇವತ್ತಿಗೆ ಒಂದಷ್ಟು ಬದಲಾವಣೆಯಾಗಿದೆ. ಹೊಟ್ಟೆ ಮತ್ತು ಬಟ್ಟೆಯನ್ನು ಮೀರಿದ ಅವಶ್ಯಕತೆಗಳು ಇಂದು ಉತ್ಪನ್ನವಾಗಿವೆ. ಸಮಾಜ ಬೆಳೆಯುತ್ತ ಹೋದಂತೆ ಇದು ಸಹಜ. ಅಂದಿನ ಕಾಲಘಟ್ಟದಲ್ಲಿ ಹೊಟ್ಟೆಗೆ ಮತ್ತು ಬಟ್ಟೆಗೆ ಆದರೆ ಸಾಕು ಬೇರೇನೂ ಬೇಕಿಲ್ಲ ಎನ್ನುವಂತಹ ಸನ್ನಿವೇಶವಿತ್ತು.

ಬದಲಾದ ಸನ್ನಿವೇಶದಲ್ಲಿ ನಾವು ಅವುಗಳನ್ನು ಮೀರಿದ್ದೇವೆ. ಇವತ್ತಿಗೆ ಕಾರು, ಫೋನು ಇತ್ಯಾದಿಗಳು ಅವಶ್ಯಕವಾಗಿವೆ. ಅವು ಐಷಾರಾಮ ಎನ್ನಿಸಿಕೊಳ್ಳುವುದಿಲ್ಲ. ಕಳೆದ ಎರಡು ದಶಕಗಳಿಂದ ಭಾರತ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಾ ಬಂದಿದೆ. ಹಿಂದೆ ಜನರ ಕೈಯಲ್ಲಿ ಹಣವಿರುತ್ತಿರಲಿಲ್ಲ. ಇಂದು ಅವಶ್ಯಕತೆಯನ್ನು ಮೀರಿ ಒಂದಷ್ಟು ಹಣ ಕೂಡ ಉಳಿಯುತ್ತಿದೆ.

ಆದರೆ ಹಣದುಬ್ಬರ ಎನ್ನುವುದು ಅದರ ಮೌಲ್ಯವನ್ನು ಕಸಿದು ಬಿಡುತ್ತದೆ. ಈ ನಿಟ್ಟಿನಲ್ಲಿ ನೋಡಿದಾಗ ಪ್ರತಿಯೊಬ್ಬರೂ ಫೈನಾನ್ಶಿಯಲ್‌ ಪ್ಲಾನಿಂಗ್‌ ಮಾಡಬೇಕಾಗಿದೆ. ಈ ಪುಸ್ತಕ ಆ ದಾರಿಯಲ್ಲಿ ನಡೆಯ ಬಯಸುವವರಿಗೆ ಒಂದು ನಕ್ಷೆಯಂತೆ ದಾರಿ ತೋರುತ್ತದೆ. `ಆರಂಭ', `ಸರಿಯಾದ ದಾರಿ' ನಮ್ಮನ್ನು `ಗಮ್ಯ'ಕ್ಕೆ ಕರೆದುಕೊಂಡು ಹೋಗುತ್ತದೆ ಎನ್ನುವ ಮೂರು ಅಂಶಗಳನ್ನು ಆಧಾರವಾಗಿಟ್ಟುಕೊಂಡು ಪುಸ್ತಕ ತೆರೆದುಕೊಳ್ಳುತ್ತಾ ಹೋಗುತ್ತದೆ.” ಎಂದು ಬರೆದು ಶುಭ ಹಾರೈಸಿದ್ದಾರೆ.