ಮೊದಲು ಎಲ್ಲಿಂದ ......!
ಅರಿವಿನ ಆಳವನ್ನು ಅಳೆದಿದೆ ಸಮಯ
ಮನಸ್ಸಿನ ಪುಟಗಳ ತೆರೆಯುವ ಅವಧಿ
ಘಟಿಸಿದ ಸಂಗತಿಗಳ ನೆನಪಿನಲ್ಲಿಡಬೇಕು
ಮೊದಲು ಎಲ್ಲಿಂದ; ಬರೆಯಲಿ ಏನನ್ನು ?
ಮರೆಯಾದ ಗಣನೀಯ ಕ್ಷಣಗಳು
ಹೊಮ್ಮುತಿರಲು ಕಣ್ಣೆದುರಲ್ಲಿ ಹಾಗೆಯೆ
ಪದಗಳಲ್ಲಿರಿಸುವ ಬಯಕೆಯ ಹಿಮ್ಮೆಟ್ಟುತ
ಮಂದಸ್ಮಿತನಾಗಿ ವಿಹರಿಸಿದೆ ವರ್ತಮಾನ
ಮುನಿಸಿಗೆ ಹತ್ತಿರವಾದ ಮಾತುಗಳು
ಸೂಕ್ಷ್ಮವಾಗಿ ಚರ್ಚಿಸಿದ ವಿಷಯಗಳು
ತಿಳಿಹಾಸ್ಯದ ನೆರಳಿನಡಿಯ ಭಾವಗಳು
ಇವಲ್ಲವೆ ಅನುಭವದ ಅಭಿನ್ನ ಅಂಶಗಳು
ಎಲ್ಲವನ್ನು ಹೇಳಲಾರೆ ಕಾವ್ಯರೂಪದಲ್ಲಿ
ವ್ಯಕ್ತವಾದರು ಅರ್ಥವಾಗದು ಕಾಲಾಂತರದಲ್ಲಿ
ಸಾರ್ವಕಾಲಿಕ ಸತ್ಯಗಳಿಗಿಲ್ಲಿ ಬೆಲೆಯಿಲ್ಲ
ಬದಲಾವಣೆಯೊಂದೆ ಬದುಕಿನಲ್ಲಿ ನಿತ್ಯ
ವಾಸ್ತವತೆಯ ಜಂಜಾಟಗಳ ಅಡಿಯಲ್ಲಿ
ನೆಮ್ಮದಿಯ ಹುಡುಕುವ ವ್ಯವಧಾನವಿರಲಿಲ್ಲ
ಭವಿಷ್ಯದ ಕನಸುಗಳು ಆದಾಗ ಮುಖ್ಯ
ಸರಿ-ತಪ್ಪುಗಳ ಸಮರ್ಥನೆಯೆಲ್ಲ ಮಿಥ್ಯ
ತಪ್ಪುಗಳ ನಿಗ್ರಹಿಸುವ ಶಕ್ತಿಯಿದ್ದರು
ಮರುಕಳಿಸುವ ಆಸೆಯೆ ಜೀವತುಂಬಲು
ಮೇರೆಯಿರದ ಭಾವನೆಗಳ ಕಪಟತನಕ್ಕೆ
ಶರಣಾಗದೆ ಉಳಿಯಲು ಸಾಧ್ಯವಾಗಲಿಲ್ಲ
ಕಾಲಘಟ್ಟದ ಮುಸ್ಸಂಜೆಯಲಿ ನಿಂತು
ನನ್ನೊಳಗಿನ ಭಾಷೆಗೆ ಬಣ್ಣ ಹಚ್ಚುತ
ತುಸು ಭಾವುಕನಾಗಿಯೆ ದಾಖಲಿಸಿರುವೆ
ಕಾರಣವಿಲ್ಲದೆ ಮೊದಲಾದ ಕವನ !!
- ಪ್ರಮೋದ್ ಗೌಡ
Comments
ಉ: ಮೊದಲು ಎಲ್ಲಿಂದ ......!