ಮೊದಲ ತೊದಲು ನುಡಿ

ಮೊದಲ ತೊದಲು ನುಡಿ

ಕವನ

ಮೊದಲ ಕಂದನ ತೊದಲ ನುಡಿಯದು

ನವ್ಯಕಾವ್ಯದ ಆಲಾಪದ ತೇರು

ಮೊದಲ ಹೆಜ್ಜೆಯ ಸವಿಯ ಪಾದವು

ಗದ್ಯಪದ್ಯ ಪ್ರಲಾಪದ ಬೇರು...

 

ಮಗುವು ನಗುತಿಹೆ ಮನೆಯ ತುಂಬವು

ಅರಳಿ ನಿಂತಿಹ ಖುಷಿಯು

ಧಗೆಯ ರಭಸವ ದಹಿಸಿ ಮೆರೆಯಲು

ಕಂದ ಬರುವಿಕೆ ಕೇಕೆಯು...

 

ಮೊದಲ ನಡಿಗೆಯ ಸಂತಸ ಪಾರಕೆ

ನವಿಲು ನರ್ತನ ಚಂದನವು

ಕುಡಿಯ ತೊದಲದು ಬೊಚ್ಚ ಬಾಯದು

ಚಿಗುರಿ ನಿಂತಿಹೆ ಹೂಬನವು...

 

ಕಣ್ಗಳ ನೋಟಕೆ ಮನವು ಸೋತಿದೆ

ಮನೆಯ ಅಂಗಳ ಸಲಿಲದಂತೆ

ಕದುಪು ಮೃದುವು ನಯದಿ ಸೊಗಸದು

ಬೆಳಕ ನೀಡುವ ಹಣತೆಯಂತೆ....

 

ನೊಂದ ಮನಕದು ಜೀವ ಹನಿಯನು

ಕೊಡುತ ದಾಹವ ನೀಗಿಸಿದೆ

ಬೆಂದ ಮನದಲು ಪಲ್ಲವಿಸಿ ಹಸಿರದು

ನವತಾರುಣ್ಯತೆಯ ಪಡೆಯುತಿದೆ...

 

ಹಾಲ್ಗೆನ್ನೆಯ ಮಾಟ ಆಕರ್ಷಿಸಿ ನಿಂತಿದೆ

ನವಕಾವ್ಯ ರಚನೆಗೆ ಮುನ್ನುಡಿಯಾಗಿ

ಚಂದಿರನ ಹೊಳಪಲಿ ಚೈತನ್ಯ ತರುತಲಿ

ನವ್ಯತೆಯ ಸೊಗಸಿಗೆ ಚಿನ್ನುಡಿಯಾಗಿ....

 

ಭಾವ ಬೆಸೆಗೆಯ ಚುರುಕು ಬಾಂದಳದಿ

ಹೊಳೆವ ತಾರೆಗಳಂತೆ ನರ್ತಸಿ

ದೇವ ನೊಲಿಯುತ ಕಂದ ಪೊರೆಯುತ

ನಿತ್ಯ ಬದುಕಲಿ ಮಿಂಚಿ ಮೇಳೈಸಿ...

 

ಪ್ರತಿಪುಟದ ಸಾಲು ತುಂಬೈತಿ ನವಗಾನ

ಮುದ್ದು ಕಂದನ ಹಾಲ್ನುಡಿಯ ಸಾರ

ಕಣಕಣದಿ ಮೊಳಗಿ ಮಗುವನು ಕಾಣುತ

ಅಣುಅಣುವಲು ಮುದ್ದು ಚಿತ್ತಾರ...

 

ಕವನದ ಸುರಿಮಳೆ ಮೊದಲ ತೊದಲು

ನಡೆನುಡಿಯ ಪುಷ್ಪಾಂಜಲಿ

ನವ್ಯ ಸವ್ಯ ಹಾದಿಲು ಬರಹಗಳ ಸಾಲು

ತೊದಲ್ನುಡಿಯ ಕಾವ್ಯಾಂಜಲಿ...

 

ಪುಟ್ಟನ ಕೇಕೆ ತುಂಬೈತೆ ಮನೆತುಂಬ

ಬೀಸಣಿಕೆ ಗಾಳಿಯ ಸುಳಿದಾಟ

ಕಂದನ ಕೀರುತಿ ಸಾರೈತಿ ಮನದೊಡಲು

ತಂಪಾದ ಸಂಕಿರ್ಣ ಈ ಆಟ....

 

ಮೊದಲ ನುಡಿಯದು ಕರೆಯ ಕೇಳುತ

ಅಮ್ಮನಲ್ಲವೆ ಆ ದೈವಲೀಲೆ

ಅಮ್ಮನೊಲುಮೆಯ ಜಗದ ಪ್ರೀತಿಯು

ಜೀಕುತಿದೆ ಹಿಡಿತವಿಲ್ಲದ ಉಯ್ಯಾಲೆ||

 

-ಅಭಿಜ್ಞಾ ಪಿ ಎಮ್ ಗೌಡ

ಚಿತ್ರ: ಅಂತರ್ಜಾಲ ತಾಣ
 

ಚಿತ್ರ್