ಮೊದಲ ತೊದಲ ನುಡಿಯ ಪರಿ
( ತಲ ಷಟ್ಪದಿ)
ಅಧರ ದಲ್ಲಿ
ಮಧುರ ನುಡಿಯು
ಚದುರ ವಾಗಿ ಕೇಳುತ|
ಮೊದಲ ನುಡಿಗೆ
ತೊದಲ ತುಟಿಯ
ಕದಲ ದಂತೆ ಹೇಳಿದೆ||
ಪಟ್ಟ ಹಿಡಿದು
ಪುಟ್ಟನೊಬ್ಬ
ಕಟ್ಟೆ ಮೇಲೆ ಕುಳಿತನು|
ಅಟ್ಟ ವೇರಿ
ಸೊಟ್ಟ ಮೋರೆ
ನೆಟ್ಟ ನೋಟವಿತ್ತನು||
ನುಡಿಯನಾಡಿ
ಕಡೆಗೆ ತಾನು
ತಡೆಯೆ ಬರುವೆನೆಂದನು|
ಹಡೆದ ಮಾತೆ
ಯುಡುಗೆ ನೋಡಿ
ಹುಡುಗ ಚಣದಿ ನಿಂತನು||
ಅಮ್ಮನಿಂದು
ಸುಮ್ಮಳಾಗಿ
ತಮ್ಮ ಬಾರೋಯೆಂದಳು|
ಒಮ್ಮೆ ತಿನ್ನು
ಮಮ್ಮು ಸಾರು
ಗುಮ್ಮ ಬಂದು ಕದಿವಳು||
ತೋಷಪಟ್ಟು
ವೇಷ ಹಾಕಿ
ಹಾಸದಿಂದ ಜಿಗಿಯಿತು|
ಆಸುಪಾಸು
ಮೋಸವಿರದ
ವಾಸ ಗೃಹದಿ ನಲಿಯಿತು||
ಓರೆನೋಟ
ಬೀರಿತಾನು
ನೀರಿನಲ್ಲಿ ಧುಮುಕಿತು|
ಸಾರಿಸಾರಿ
ಹೋರಿಯಂತೆ
ಬಾರಿಬಾರಿ ಮುಳುಗಿತು||
ಋಷಿಯ ತೆರದಿ
ಖುಷಿಯ ಪಟ್ಟು
ಹೊಸದು ನೃತ್ಯ ನೋಳ್ಪಲಿ|
ದೆಸೆಯ ಕಂಡು
ಹುಸುನಗುತಲಿ
ಬೆಸೆದು ಕೊಂಡು ಮಗುವಲಿ||
ಜೊಲ್ಲು ಸುರಿವ
ಬೆಲ್ಲ ಜೇನು
ಕಲ್ಲು ಮನವ ಕರಗಿಸೆ|
ಗಲ್ಲ ತುಂಬಿ
ಸೊಲ್ಲು ಕೇಳು
ತಲ್ಲಿ ಮಗುವ ಕೂಡಿಸೆ||
ಆಟವಾಡಿ
ಪಾಠ ಕೇಳಿ
ಕಾಟ ಕೊಟ್ಟು ಹೋಯಿತು|
ತಾಟು ಹಿಡಿದು
ರೋಟಿಗಾಗಿ
ಲೋಟವನ್ನು ಕೆಡವಿತು||
ಅಳುವ ತುಟಿಯ
ಮಳೆಯ ಹನಿಯ
ಫಳನೆ ಹೊಳೆವ ಕಂಗಳು|
ತೆಳುವ ಟೊಂಕ
ಸೆಳೆವ ಮೊಗವು
ಬಿಳಿಯ ಹಲ್ಲು ತಿಂಗಳು||
-ಶಂಕರಾನಂದ ಹೆಬ್ಬಾಳ
