ಮೊದಲ ಪ್ರಯತ್ನದ ತೊಡರುಗಳು

ಮೊದಲ ಪ್ರಯತ್ನದ ತೊಡರುಗಳು

ಬರಹ

Krushi Sampada 5th Editionಸಾವಯವ ಕೃಷಿ ಬಯಸುವ ಚಿಂತಕರ ಸಮುದಾಯಕ್ಕೂ ಸ್ವತಂತ್ರ ತಂತ್ರಾಂಶಕ್ಕೂ ಸ್ವಾಭಾವಿಕ ಸಂಬಂಧವಿದೆ. ಹೇಗೆ? ಎಲ್ಲವನ್ನೂ ತನ್ನ ಮುಷ್ಠಿಯಲ್ಲಿಟ್ಟುಕೊಳ್ಳಲು ಬಯಸುವ ಮಲ್ಟಿನ್ಯಾಶನಲ್ಲುಗಳ ಕಬಂಧಬಾಹುವಿನಿಂದ ಹೊರಬರುವ ಪ್ರಯತ್ನಗಳು ಇವೆರಡೂ. ಅಚ್ಚರಿಯೆಂದರೆ ಮಲ್ಟಿನ್ಯಾಶನಲ್ಲುಗಳು ಹಣದ ಹೊಳೆ ಸುರಿಸಿ ನಡೆಸಿದ ಸಂಶೋಧನೆಗಳಿಗಿಂತ ಹೆಚ್ಚಿನ ಸಹಾಯವಿಲ್ಲದೆ ಪ್ರಾರಂಭವಾದ ಸಮುದಾಯ ಪ್ರಯತ್ನಗಳು ಹಲವು ಸಂದರ್ಭಗಳಲ್ಲಿ ಈಗ ಉತ್ತಮ ಪ್ರಯತ್ನಗಳೆನಿಸಿಕೊಳ್ಳುತ್ತಿರುವುದು!

ತಂತ್ರಜ್ಞಾನ ಜಗತ್ತಿನಲ್ಲೂ ಅಷ್ಟೇ. ಸ್ವತಂತ್ರ ತಂತ್ರಾಂಶ ಯೋಜನೆಗಳು ಇಂದು (ತಂತ್ರಾಂಶ ತಜ್ಞರ) ಸಮುದಾಯ ಪ್ರಯತ್ನಗಳಿಂದಲೇ ಬೆಳೆಯುತ್ತ ಬಂದಿದೆ. ಅಷ್ಟೇ ಅಲ್ಲ, ಜಗತ್ತಿನ ದೊಡ್ಡ ದೊಡ್ಡ ಕಂಪೆನಿಗಳು ಹಣದ ಹೊಳೆ ಹರಿಸಿ ಮಾಡಲು ಸಾಧ್ಯವಾಗದ ಕೆಲಸಗಳು ಇಲ್ಲಿ ಹಲವು ಸಂದರ್ಭಗಳಲ್ಲಿ ಸಾಧ್ಯವಾಗುತ್ತಿದೆ. ಜಗತ್ತಿನಾದ್ಯಂತ ಪ್ರಮುಖ ಯೋಜನೆಗಳಲ್ಲಿ ಈ ತಂತ್ರಾಂಶಗಳು ಬಳಕೆಯಾಗುತ್ತಿವೆ.

ಸ್ವತಂತ್ರ ತಂತ್ರಾಂಶಗಳಾದ  ಗ್ನು/ಲಿನಕ್ಸ್, ಇಂಕ್ ಸ್ಕೇಪ್ ಬಳಸಿ ಉತ್ತಮ ಆಧುನಿಕ ವ್ಯವಸ್ಥೆ ಕನ್ನಡ - ಯೂನಿಕೋಡ್ ನಲ್ಲಿ ಮೊದಲ ಬಾರಿಗೆ ಕೃಷಿ ಸಂಪದವನ್ನು ತಂದಿದ್ದೇವೆ. ಪುಟ್ಟ ಮಗು ಮೊದಲ ಹೆಜ್ಜೆ ಇಡುತ್ತಿರುವಂತೆ ಈ ಯತ್ನ. ನಿಮ್ಮೆಲ್ಲರ ಪ್ರೋತ್ಸಾಹ ಈ ಪ್ರಯತ್ನಕ್ಕೆ ಬೇಕು. ಈ ಸಂಚಿಕೆಯ ಹಲವೆಡೆ ಯೂನಿಕೋಡ್ ಬಳಕೆಯಲ್ಲಾದ ತೊಡರುಗಳು ನಿಮಗೆ ಕಾಣಸಿಗುವುದು.


(ಉದಾಹರಣೆಗೆ: ಇನ್ಶೂರೆನ್ಸ್ಬದಲಿಗೆ ಇನ್ಶೂರೆನ್ಸ್ ಇತ್ಯಾದಿ)
ಹಾಗೂ ಅಲ್ಲಲ್ಲಿ ಬಿಡಿಯಾಗಿ ಕಾಣುವ ಅಕ್ಷರಗಳು.
ಈ ತೊಂದರೆಗಳು ಸದ್ಯಕ್ಕೆ ಕನ್ನಡಕ್ಕಾಗಿ ಸಂಪೂರ್ಣವಾದ ಹಾಗು ಸಮರ್ಪಕವಾದ ಯೂನಿಕೋಡ್ ಫಾಂಟುಗಳು ಇಲ್ಲದೇ ಇರುವುದರಿಂದ. ಹಾಗೆಂದು ಕನ್ನಡ ಯೂನಿಕೋಡ್ ಬಳಸದೇ ಉಳಿದರೆ ಹೊಸ ಫಾಂಟುಗಳ ಅಭಿವೃದ್ಧಿಯಾಗುವುದಿಲ್ಲ, ಈಗ ಲಭ್ಯವಿರುವ ಫಾಂಟುಗಲ್ಲಿರುವ ತೊಂದರೆಗಳು ಸರಿಯಾಗುವುದಿಲ್ಲ.
ಮುಂಬರುವ ದಿನಗಳಲ್ಲಿ ನಾವು ಯೂನಿಕೋಡ್ ಬಳಸುತ್ತ ಹೋದಂತೆ ಇವೆಲ್ಲ ತೊಂದರೆಗಳು ಸರಿಯಾಗುತ್ತ ಹೋಗಲಿವೆ. ಈ ನಿಟ್ಟಿನಲ್ಲಿ ಸ್ವತಂತ್ರ ತಂತ್ರಾಂಶಗಳ ಬಳಕೆ, ಯೂನಿಕೋಡ್ ಬಳಕೆ ಬಹಳ ಮುಖ್ಯ. ಎಷ್ಟು ಬಳಸುತ್ತೇವೋ ಅಷ್ಟು ಒಳ್ಳೆಯದು.

ಕನ್ನಡದಲ್ಲಿ ಸ್ವತಂತ್ರ ತಂತ್ರಾಂಶ ಹಾಗು ಯೂನಿಕೋಡ್ ಕನ್ನಡ ಬಳಸಿ ಇ-ಪತ್ರಿಕೆ ತರುವ ಮೊಟ್ಟ ಮೊದಲ ಪ್ರಯತ್ನ ಕೃಷಿ ಸಂಪದದ ಈ ಸಂಚಿಕೆ. ಕನ್ನಡ ತಂತ್ರಾಂಶ ಹಾಗು ಕೃಷಿ ಇವೆರಡು ಕೂಡುವ ರಸ್ತೆಗೆ ಇದು ಮೈಲಿಗಲ್ಲೂ‌ ಆಗಬಹುದು. ಬಹಳಷ್ಟು ಮೊದಲುಗಳಿಗೆ ನಾಂದಿ ಹಾಡಬಲ್ಲುದು. ಈ ಪ್ರಯತ್ನ "ಕೃಷಿ'ಯಷ್ಟು ಗಹನವಾದ ವಿಷಯದ ಸುತ್ತ ನಡೆಯುತ್ತಿದೆ ಎಂಬ ಖುಷಿ ನಮ್ಮದು.

ಈ ಸಂಚಿಕೆಯಲ್ಲಿರುವ ತೊಂಡರುಗಳನ್ನು ಮೀರಿ ಹೊಸತುಗಳನ್ನು ನೀಡುತ್ತ ಮತ್ತಷ್ಟು ಉತ್ತಮ ಸಂಚಿಕೆಗಳನ್ನು ತರುವ ಆಸಕ್ತಿ ಕೂಡ ಉಂಟು. ನೀವೂ ಜೊತೆಗೂಡಬಹುದು!
- ಹರಿ ಪ್ರಸಾದ್ ನಾಡಿಗ್

(ಕೃಷಿ ಸಂಪದದ ಐದನೇ ಸಂಚಿಕೆ ಈ ಪುಟದಿಂದ ಡೌನ್ಲೋಡ್ ಮಾಡಿಕೊಳ್ಳಬಹುದು)