ಮೊಬೈಲ್:ಮಹಿಳಾಮಣಿಗಳ ಸಬಲೀಕರಣಕ್ಕೆ ಸಹಕಾರಿ
ಕ್ಯಾಮರಾ ಅಪ್ಲಿಕೇಶನ್ ಮೂಲಕ ಚಿತ್ರಹಂಚಿ
ಫೇಸ್ಬುಕ್ ಕಂಪೆನಿಯು ಇನ್ಸ್ಟಾಗ್ರಾಮ್ ಎನ್ನುವ ಕಂಪೆನಿಯನ್ನು ಒಂದು ಬಿಲಿಯನ್ ಡಾಲರು ಹಣವನ್ನು ತೆತ್ತು ತನ್ನದಾಗಿಸಿಕೊಂಡಿತ್ತು.ಜನರು ತಾವು ತೆಗೆದ ಚಿತ್ರಗಳನ್ನು ತಕ್ಷಣ ಹಂಚಿಕೊಳ್ಳಲು ಈ ಕಂಪೆನಿಯ ತಂತ್ರಾಂಶ ಸಹಾಯ ಮಾಡುತ್ತಿತ್ತು.ಅದರಲ್ಲೂ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹರಡಿರುವ ತಮ್ಮ ಗುರುತಿನವರ,ಪರಿಚಯದವರ,"ಮಿತ್ರರ" ನಡುವೆ ಚಿತ್ರಗಳನ್ನು ಹಂಚಲು ಈ ಕಂಪೆನಿಯ ಸೇವೆ ಗ್ರಾಹಕರಿಗೆ ಸಹಾಯ ಮಾಡುತ್ತಿತ್ತು.ಕಂಪೆನಿಯನ್ನೇನೋ ಫೇಸ್ಬುಕ್ ಕೊಂಡಿತು.ಆದರದರ ಬಳಕೆಗೆ ಕೆಲವು ಶಾಸನದ ವಿಧಿಗಳನ್ನು ಪೂರ್ಣಗೊಳಿಸಲು ವರ್ಷಕಾಲವಾದರೂ ಬೇಕು.ಹಾಗಾಗಿ,ಫೇಸ್ಬುಕ್ ಕಂಪೆನಿಯು,ಕ್ಯಾಮರಾ ಎನ್ನುವ ಅಪ್ಲಿಕೇಶನ್ ಅನ್ನು ಈಗ ಒದಗಿಸಹತ್ತಿದೆ.ಇದನ್ನು ಬಳಸಿ,ಫೇಸ್ಬುಕ್ ಚಂದಾದಾರರು,ತಮ್ಮ ಚಿತ್ರಗಳನ್ನು ವಿವಿಧ ಸಾಧನಗಳಲ್ಲಿ ಹಂಚಿಕೊಳ್ಳಲು ಬರುತ್ತದೆ.ಹಾಗಾಗಿ,ಕ್ಯಾಮರಾ ಸಾಧನಕ್ಕೂ ಇನ್ಸ್ಟಾಗ್ರಾಮಿಗೂ ತುಸು ವಿಭಿನ್ನ ಉಪಯೋಗವನ್ನು ಫೇಸ್ಬುಕ್ ನೀಡಿದೆ.
------------------------------------
ಟೆಡ್:ವಿವಾದದ ಸುಳಿಯಲ್ಲಿ
ವಿವಿಧ ವಿಷಯಗಳ ಬಗ್ಗೆ ಪ್ರಸಿದ್ಧ ಜನರು ತಮ್ಮ ಅನಿಸಿಕೆ,ವಿನೂತನ ಕಲ್ಪನೆಗಳನ್ನು ಇತರರ ಜತೆ ಹಂಚಿಕೊಳ್ಳಲು ಇರುವ ಮಾಧ್ಯಮ ಟೆಡ್ ಸಮಾವೇಶಗಳು.ರಿಚಾರ್ಡ್ ಸೌಲ್ ವುರ್ಮನ್ ಎನ್ನುವಾತ ಟೆಡ್-ಟೆಕ್ನಾಲಜಿ,ಎಂಟರ್ಟೈನ್ಮೆಂಟ್ ಮತ್ತು ಡಿಸೈನ್, ಎನ್ನುವ ಸಮಾವೇಶದ ಪರಿಕಲ್ಪನೆಯ ಮೂಲಕ ವಿವಿಧ ಗಣ್ಯರ ಕಿರುಭಾಷಣಗಳನ್ನು ನೆರೆದವರು ಕೇಳಲು ಅವಕಾಶ ಕೊಡುವ ಅವಕಾಶ ನೀಡಿದ.ನಂತರದಲ್ಲಿ ಈ ಬ್ರಾಂಡನ್ನು ಅವನು ಕ್ರಿಸ್ ಆಂಡರ್ಸನ್ ಎನ್ನುವಾತನಿಗೆ ವರ್ಗಾಯಿಸಿದ.ಬಳಿಕ ಟೆಡ್ ಎನ್ನುವುದು,ಸಮಾವೇಶವಾಗಿ ಮಾತ್ರವಲ್ಲದೆ, ಇಂಟರ್ನೆಟ್ ಮೂಲಕ ಒಡನೆಯೇ ಆಸಕ್ತರಿಗೆ ಸಮಾವೇಶದ ನಡಾವಳಿಗಳಲ್ಲಿ ಭಾಗವಹಿಸಲು ಅವಕಾಶ ನೀಡಿತು.ಈ ಸಲ ಟೆಡ್ ಸಮಾವೇಶವೊಂದರಲ್ಲಿ ಭಾಷಣಕಾರನೋರ್ವನ ಮಾತು,ಆನ್ಲೈನ್ ಬಳಕೆದಾರರಿಗೆ ಪೂರ್ತಿ ಲಭ್ಯವಾಗದೆ ಕತ್ತರಿಪ್ರಯೋಗಕ್ಕೊಳಗಾದ ಭಾಗ ಮಾತ್ರಾ ಲಭ್ಯವಾದುದು ಟೆಡ್ ಅನ್ನು ವಿವಾದದ ಸುಳಿಯಲ್ಲಿ ಸಿಲುಕಿಸಿತು.ಹೂಡಿಕೆದಾರರು ಹಣಹೂಡಿದ್ದರಿಂದ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತದೆನ್ನುವುದು ಖಚಿತವಿಲ್ಲ ಎನ್ನುವ ಆತನ ವಾದಸರಣಿಯೇ ಕತ್ತರಿಪ್ರಯೋಗಕ್ಕೀಡಾದ ಭಾಗವಾಗಿತ್ತು.ಅದಲ್ಲದೆ ಈ ಸಮಾವೇಶಗಳು ಸಮಸ್ಯೆಯ ಕೆಲವೇ ಮುಖಗಳತ್ತ ಬೊಟ್ಟು ಮಾಡಿ ಪರಿಹಾರ ಸೂತ್ರವನ್ನು ಒದಗಿಸುತ್ತವೆ,ಸಮಸ್ಯೆಗಳನ್ನು ಸರಳೀಕರಿಸಲಾಗುತ್ತದೆ,ಹೆಚ್ಚಿನ ಪರಿಹಾರಗಳು ಕಾರ್ಯಸಾಧ್ಯವಲ್ಲ ಎನ್ನುವ ಆರೋಪಗಳು ಕೇಳಿಬರುತ್ತಿವೆ.ಟೆಡ್ ಸಮಾವೇಶದಲ್ಲಿ ಭಾಗವಹಿಸುವುದು ಒಂದು ಪ್ರತಿಷ್ಠೆಯ ವಿಷಯ ಎನ್ನುವ ಕಾರಣದಿಂದ,ಸಮಾವೇಶಕ್ಕೆ ಏಳೂವರೆ ಸಾವಿರ ಡಾಲರುಗಳಷ್ಟು ಪ್ರವೇಶಶುಲ್ಕ ನೀಡಬೇಕಾಗುತ್ತದೆ.ಇದನ್ನು ಆಯೋಜಿಸಿದವರಿಗೆ ಹಣದ ಹೊಳೆಯೇ ಹರಿದು ಬರುತ್ತದೆ,ಜಾಹೀರಾತು ಅದಾಯವೂ ಸಾಕಷ್ಟಿರುತ್ತದೆ-ಒಟ್ಟಿನಲ್ಲಿ ಟೆಡ್ ಅನ್ನು ಲಾಭರಹಿತ ಸಂಸ್ಥೆ ಎನ್ನಲು ಬಾರದು ಎನ್ನುವವರೂ ಇದ್ದಾರೆ.
----------------------------------------------------
ಮೊಬೈಲ್ ಮೂಲಕ ಚುನಾವಣಾ ಪ್ರಚಾರ:ಭರವಸೆಗಳು ಮತದಾರನ ಸ್ಥಳಾನುಸಾರ ಬದಲು
ಮೊಬೈಲ್ ಮೂಲಕ ಸಂದೇಶ ಕಳುಹಿಸಿ ಮತಯಾಚನೆ ಮಾಡುವುದು ಇತ್ತೀಚಿನ ಚುನಾವಣೆಗಳಲ್ಲಿ ಮಾಮೂಲಿಯಾಗಿದೆ.ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಿಂದ ಹಿಡಿದು,ನಮ್ಮ ಪಂಚಾಯತ್ ಚುನಾವಣೆಯ ಪ್ರಚಾರದ ವೇಳೆಯೂ ಈ ವೈಖರಿಯನ್ನು ಕಾಣಬಹುದಾಗಿದೆ.ಜತೆಗೆ,ಮತದಾರನ ಸ್ಮಾರ್ಟ್ಪೋನಿನಲ್ಲಿರುವ ಸ್ಥಾನ ಗುರುತಿಸುವ ವ್ಯವಸ್ಥೆಯ ಮೂಲಕ ಮತದಾರನಿರುವ ಜಾಗದ ಅನುಸಾರ,ಆತನಿಗೆ ಕಳುಹಿಸುವ ಸಂದೇಶ ಬದಲು ಮಾಡಲೂ ಈಗ ಸಾಧ್ಯವಾಗಿರುವುದು,ಮತಯಾಚನೆಯು ಪರಿಣಾಮಕಾರಿಯಾಗಲು ಅವಕಾಶ ನೀಡುತ್ತದೆ.
--------------------------------------------
ಫೇಸ್ಬುಕ್ ಯಶಸ್ವಿ ಐಪಿಓ:ಈಗ ಅಪಸ್ವರ
ಫೇಸ್ಬುಕ್ ಕಂಪೆನಿಯು ತನ್ನ ಶೇರುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುವ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ.ಆದರೆ ಅದರ ಶೇರುಮಾರುಕಟ್ಟೆ ಲಿಸ್ಟಿಂಗ್ ನಂತರ,ವ್ಯವಹಾರದ ವೇಳೆ ತಾಂತ್ರಿಕ ವೈಫಲ್ಯ ಉಂಟಾಗಿತ್ತು.ಇದರಿಂದ ಹಲವು ಗ್ರಾಹಕರಿಗೆ ನಷ್ಟ ಸಂಭವಿಸಿ,ಅವರೀಗ ತಮ್ಮ ನಷ್ಟ ಪರಿಹಾರಿಸಬೇಕೆಂಬ ಬೇಡಿಕೆ ಮುಂದಿಟ್ಟಿದ್ದಾರೆ.ಬ್ರೋಕರುಗಳು ಈ ನಷ್ಟಕ್ಕೆ ತಾವು ಕಾರಣರಲ್ಲ,ಬದಲಾಗಿ ಸ್ಟಾಕ್ ಎಕ್ಷ್ಚೇಂಜುಗಳು ಎಂದು ಗ್ರಾಹಕರ ಆಕ್ಷೇಪಗಳನ್ನು ತಳ್ಳಿಹಾಕುತ್ತಿದ್ದಾರೆ.ಮೋರ್ಗನ್ ಸ್ಟೇನ್ಲಿ ಮಾತ್ರಾ ವಿವಾದಕ್ಕೆ ಮಂಗಳ ಹಾಡಲು ನಷ್ಟವನ್ನು ತಾನೇ ಭರಿಸಿ,ಗ್ರಾಹಕರಿಗದರ ಬಿಸಿ ಮುಟ್ಟುವುದನ್ನು ತಡೆಯಲು ನಿರ್ಧರಿಸಿದೆ.ಮೊದಲ ದಿನದಂದು ಶೇರು ಮಾರುಕಟ್ಟೆಯಲ್ಲಿ ಪೇಸ್ಬುಕ್ ಶೇರುಗಳು ಹನ್ನೊಂದೂವರೆಯ ಹೊತ್ತಿಗಷ್ಟೇ ಲಿಸ್ಟ್ ಆಗಿ,ಮೊದಲ ಮೂವತ್ತು ಸೆಕೆಂಡುಗಳಲ್ಲಿ ಎಂಭತ್ತು ದಶಲಕ್ಷ ಶೇರುಗಳ ಮಾರಾಟವಾಯಿತು. ಈ ವೇಳೆ ಹಲವು ರದ್ದು ಮಾಡಲಾಗಿದ್ದ ಆರ್ಡರುಗಳೂ ಕಾರ್ಯಗತವಾದುವುದು.ಇನ್ನು ಕೆಲವು ನಿಗದಿತ ಬೆಲೆಗಿಂತ ಹೆಚ್ಚು ಅಥವಾ ಕಡಿಮೆ ಬೆಲೆಗೆ ನಡೆದುಹೋದುವು.ಬಿಡಿ ಶೇರು ವ್ಯವಹಾರ ಮಾಡುವ ಗ್ರಾಹಕರಿಗೆ ಇದರಿಂದ ನಷ್ಟವಾದುದೇ ಹೆಚ್ಚು.ಫೇಸ್ಬುಕ್ ಶೇರುಗಳು ಗ್ರಾಹಕರಿಗೆ ಮೂವತ್ತೆಂಟು ಡಾಲರು ಬೆಲೆಗೆ ಸಿಕ್ಕಿ,ಅದು ಮಾರುಕಟ್ಟೆಯಲ್ಲಿ ಸ್ವಲ್ಪವೇ ಹೊತ್ತು ಹೆಚ್ಚು ಬೆಲೆಗೆ ಮಾರಾಟವಾಗಿ,ನಂತರ ಅದರ ಬೆಲೆ ನಾಲ್ಕು ಡಾಲರು ಇಳಿದು ಹೋಗಿತ್ತು.
-------------------------------------
ಗೂಗಲ್ ಈಗ ಯಂತ್ರಾಂಶ ಕಂಪೆನಿಯೂ ಹೌದು
ತಂತ್ರಾಂಶಗಳು,ಮಿಂಚಂಚೆ,ಶೋಧ,ನಕಾಶೆ ಹೀಗೆ ವಿವಿಧ ಸೇವೆಗಳನ್ನು ಒದಗಿಸುವ ಮೂಲಕ ಮನೆ ಮಾತಾದ ಗೂಗಲ್ ಕಂಪೆನಿಯು,ತನ್ನ ಮಾರುಕಟ್ಟೆ ಮೌಲ್ಯವನ್ನು ಹೆಚ್ಚು ಮಾಡಿಕೊಳ್ಳಲು ಯಂತ್ರಾಂಶ ಕ್ಷೇತ್ರಕ್ಕೂ ಕಾಲಿಡುವುದು ಅನಿವಾರ್ಯವಾಗಿತ್ತು.ಇದಕ್ಕಾಗಿ ಗೂಗಲ್ ಸುಲಭ ಹಾದಿಯನ್ನು ಹಿಡಿಯಿತು.ಎಂಭತ್ತನಾಲ್ಕು ವರ್ಷ ಹಳೆಯ ಕಂಪೆನಿಯಾದ ಮೊಟೊರೊಲಾವನ್ನು ತನ್ನದಾಗಿಸಿಕೊಂಡದ್ದೇ ಆ ಹಾದಿ.ಮೊಟೊರೊಲಾ ಕಂಪೆನಿಯು ಸೆಲ್ಫೋನನ್ನು ಮೊದಲಾಗಿ ಬಳಕೆಗೆ ತಂದಂತಹ ಕಂಪೆನಿ.ಅದರ ಸ್ಟಾರ್ಟ್ರಾಕ್ ಮೊಬೈಲ್ ಸಾಧನ ಜನಪ್ರಿಯವಾಗಿತ್ತು.ಇದೀಗ ಗೂಗಲ್ ತನ್ನ ಉದ್ಯೋಗಿ ಡೆನಿಸ್ ವುಡ್ಸೈಡ್ ಅವರನ್ನು ಮೊಟೊರೋಲಾ ಕಂಪೆನಿಯ ನೇತೃತ್ವ ವಹಿಸಲು ಕೇಳಿಕೊಂಡಿದೆ.ಈ ಮೂಲಕ ಆಂಡ್ರಾಯಿಡ್ ಆಪರೇಟಿಂಗ್ ವ್ಯವಸ್ಥೆಯನ್ನು ಅಳವಡಿಸಿದ ಮೊಟೊರೊಲಾದ ಸೆಲ್ಪೋನುಗಳು ಗೂಗಲ್ನ ಯಂತ್ರಾಂಶ ಸಾಧನಗಳಾಗಿ ಮಾರುಕಟ್ಟೆಗೆ ಲಗ್ಗೆ ಇಡಲಿವೆ.ಮೊಟೊರೊಲಾ ಕಂಪೆನಿಯು ಎಂಭತ್ತು ವರ್ಷಗಳ ಅವಧಿಯಲ್ಲಿ ಗಳಿಸಿಕೊಂಡ ಹಕ್ಕುಸ್ವಾಮ್ಯಗಳು ಗೂಗಲ್ ಆಂಡ್ರಾಯಿಡ್ ವ್ಯವಸ್ಥೆಯ ಬಗ್ಗೆ ಇರುವ ಕೇಸುಗಳಲ್ಲಿ ಶ್ರೀರಕ್ಷೆಯಾಗಿ,ಒರೇಕಲ್ ಹಾಗೂ ಆಪಲ್ ಅಂತಹ ಕಂಪೆನಿಗಳು ಎತ್ತಿರುವ ಹಕ್ಕುಸ್ವಾಮ್ಯ ವಿವಾದಗಳಲ್ಲಿ ಗೂಗಲ್ಗೆ ನೆರವಾಗಬಹುದು.ಅಲ್ಲದೆ ಐಫೋನ್,ಐಪ್ಯಾಡ್ ಅಂತಹ ಜನಮನ ಗೆದ್ದ ಸಾಧನಗಳ ತಯಾರಿಕೆಯಲ್ಲಿ ಗೂಗಲ್ಗೆ ಬಹು ಸಹಕಾರಿಯಾಗಬಹುದು.
-----------------------------------------
ಯಾಹೂ ಆಕ್ಸಿಸ್
ಗೂಗಲ್,ಮೈಕ್ರೋಸಾಫ್ಟ್ ಕಂಪೆನಿಗಳ ಪೈಪೋಟಿಯಿಂದ ಕಂಗೆಟ್ಟು ಹೋಗಿರುವ ಯಾಹೂ ಕಂಪೆನಿ,ತನ್ನ ಕಷ್ತಕಾಲದಲ್ಲೂ ಹೊಸ ಬ್ರೌಸರ್ ತಂತ್ರಾಂಶವನ್ನು ಹೊರತಂದಿದೆ.ಐಪ್ಯಾಡ್,ಐಫೋನ್,ಐಪಾಡ್ ಮುಂತಾದ ಸಾಧನಗಳಲ್ಲಿ ಅಳವಡಿಸಬಹುದಾದ ಆಕ್ಸಿಸ್ ಬ್ರೌಸರ್ ಅಪ್ಲಿಕೇಶನ್ ಈಗ ಲಭ್ಯ.ಇದನ್ನು ಅಳವಡಿಸಿಕೊಳ್ಳಲು ಡೆಸ್ಕ್ಟಾಪ್ ಬ್ರೌಸರ್ ಅನ್ನು ಬದಲಿಸುವುದು ಬೇಕಿಲ್ಲ.ಸದ್ಯ ಬಳಕೆ ಮಾಡುತ್ತಿರುವ ಬ್ರೌಸರ್ಗೆ ಪ್ಲಗಿನ್ ಆಗಿ ಆಕ್ಸಿಸ್ನ ಸವಲತ್ತುಗಳನ್ನು ಬಳಸಬಹುದು.ಯಾಹೂ ಮಿಂಚಂಚೆಗೆ ಲಾಗಿನ್ ಆದರೆ,ಆಕ್ಸಿಸ್ ಮೂಲಕ ಡೆಸ್ಕ್ಟಾಪ್,ವಿವಿಧ ಸಾಧನಗಳಲ್ಲಿ ಬಳಕೆದಾರನಿಗೆ ತನ್ನ ಮಾಹಿತಿಗಳನ್ನು ಕ್ರೋಡೀಕರಿಸಲು ಸಾಧ್ಯವಾಗುತ್ತದೆ.
--------------------------------------------
ಅಂಗಡಿಯ ಪಕ್ಷಿನೋಟ ಒದಗಿಸುವ ಸೇವೆ
ಗೂಗಲ್ ತನ್ನ ವಿನೂತನ ಸೇವೆಯಾದ ಬ್ಯುಸಿನೆಸ್ ಫೋಟೊ ಸವಲತ್ತನ್ನು ಪ್ರಾಯೋಗಿಕವಾಗಿ ಹೈದರಾಬಾದಿನಲ್ಲೂ ಆರಂಭಿಸಿದೆ.ಅಂಗಡಿ,ಹೋಟೆಲ್,ಜಿಮ್,ಕ್ಷೌರದಂಗಡಿಯ ಒಳನೋಟವನ್ನು ಗೂಗಲ್ ಕಂಪೆನಿಯಿಂದ ನೇಮಿತ ಛಾಯಾಚಿತ್ರಕಾರರು ಸೆರೆಹಿಡಿದು,ಅದನ್ನು ಗೂಗಲ್ ಶೋಧದ ಜತೆ ಒದಗಿಸಲಿದೆ.ಸದ್ಯಕ್ಕಿದು ಉಚಿತ ಸೇವೆಯಾಗಿದೆ.ವ್ಯವಹಾರ ಸ್ಥಳದಲ್ಲಿ ಲಭ್ಯವಿರುವ ಉತ್ಪನ್ನದ ವಿವರಗಳು,ಸೌಲಭ್ಯಗಳ ವಿವರಗಳೂ ಇದರಲ್ಲಿ ಕಾಣಿಸಿಕೊಳ್ಳುವುದರಿಂದ ವ್ಯವಹಾರ ಹೆಚ್ಚಿಸಿಕೊಳ್ಳಲು ಇದು ಸಹಕಾರಿಯಾಗಲಿದೆ.
------------------------------------------------------
ಮೊಬೈಲ್:ಮಹಿಳಾಮಣಿಗಳ ಸಬಲೀಕರಣಕ್ಕೆ ಸಹಕಾರಿ
ನೂರಿಪ್ಪತ್ತು ಕೋಟಿ ಜನಸಂಖ್ಯೆಯ ಗಡಿದಾಟಿರುವ ಭಾರತೀಯರಲ್ಲಿ ಮುಕ್ಕಾಲು ಪಾಲು ಜನ ಮೊಬೈಲ್ ಸಾಧನಗಳನ್ನು ಬಳಸುತ್ತಿದ್ದಾರೆ.ಮಹಿಳೆಯರ ಪೈಕಿ ಶೇಕಡಾ ಇಪ್ಪತ್ತೆಂಟು ಭಾಗ ಜನ ಮೊಬೈಲ್ ಬಳಸುತ್ತಿದ್ದರೆ,ಗಂಡಸರಲ್ಲಿ ಈ ಶೇಕಡಾವಾರು ಭಾಗ ನಲುವತ್ತರ ಗಡಿದಾಟಿದೆ.ಗಂಡಸರ ಹೆಸರಲ್ಲಿ ಇರುವ ಮೊಬೈಲ್ ಸಂಪರ್ಕದ ಮೂಲಕ ಮಹಿಳೆಯರು ಮೊಬೈಲ್ ಸಾಧನವನ್ನು ಪಡೆಯುತ್ತಿರುವುದನ್ನೂ ಗಣನೆಗೆ ತೆಗೆದುಕೊಂಡರೆ,ಮೊಬೈಲ್ ಹೊಂದಿರುವ ಮಹಿಳೆಯರ ಸಂಖ್ಯೆ ಇನ್ನೂ ಹೆಚ್ಚಿರಬಹುದು.ತನ್ಮೂಲಕ ಮಹಿಳೆಯರೀಗ ಹೆಚ್ಚು ಸವಲತ್ತುಗಳನ್ನು ಪಡೆಯುತ್ತಿದ್ದಾರೆ ಎನ್ನುವುದು ನಿರ್ವಿವಾದ.ಮೀನು ಮಾರಾಟ ಮಾಡುವವರಿರಬಹುದು,ವಧುಶೃಂಗಾರ ಸೇವೆಯಂತಹ ಸೇವೆ ಒದಗಿಸುವವರಿರಬಹುದು,ಚಾಲಕರಿರಬಹುದು, ಮಹಿಳೆಯರಿಗೆ ಇದು ವರದಾನವಾಗಿದೆ.ಇನ್ನು ಮಹಿಳೆಯರ ಮೇಲಿನ ಹಲ್ಲೆ,ಶೋಷಣೆಗಳನ್ನು ತಡೆಯುವುದರಲ್ಲೂ ಮೊಬೈಲ್ ಪರಿಣಾಮಕಾರಿ ಪಾತ್ರ ವಹಿಸಿರುವುದನ್ನು ಸಂಶೋಧನೆಗಳು ಹಾಗೂ ಸಮೀಕ್ಷೆಗಳು ತೋರಿಸಿಕೊಟ್ಟಿವೆ.ಆದರೆ ಕಾಲೇಜು ಹುಡುಗಿಯರು,ಯುವತಿಯರನ್ನು ಕೀಟಲೆ ಮಾಡುವ,ಪ್ರೀತಿ-ಪ್ರೇಮ ಪ್ರಕರಣಗಳು ಹೆಚ್ಚಲೂ ಮೊಬೈಲ್ ಹಾದಿ ಮಾಡಿಕೊಟ್ಟಿರುವುದು,ತಂತ್ರಜ್ಞಾನವೆನ್ನುವುದು ಎರಡಲಗಿನ ಕತ್ತಿ,ಅದರ ಬಳಕೆಯಲ್ಲಿ ಎಚ್ಚರ ಅಗತ್ಯ ಎನ್ನುವುದನ್ನು ಎತ್ತಿತೋರಿಸುತ್ತವೆ.
UDAYAVANI
*ಅಶೋಕ್ಕುಮಾರ್ ಎ