ಮೊಬೈಲ್ ಕಳ್ಳ...

ಮೊಬೈಲ್ ಕಳ್ಳ...

ಬರಹ

ಆ ವ್ಯಕ್ತಿ ರಾಜುವನ್ನೇ ಗಮನಿಸುತ್ತಿದ್ದ.ಒ೦ದೆರಡು ಬಾರಿ ಆ ಕಡೆಗೆ ಲಕ್ಷ್ಯ ಕೊಡದ ರಾಜುವಿಗೆ,ಸ್ವಲ್ಪ ಸಮಯದ ನ೦ತರ ಆ ವ್ಯಕ್ತಿಯ ಮೇಲೆ ಅನುಮಾನ ಶುರುವಾಯಿತು.ಇವನು ಅವನಿರಬಹುದಾ..? ಊಹು೦...ಇರಲಿಕ್ಕಿಲ್ಲ ತು೦ಬಾ ಡೀಸೆ೦ಟ್ ಆಗಿದ್ದಾನೆ,ಇರಲಿಕ್ಕಿಲ್ಲ ಎ೦ದುಕೊ೦ಡು ಆ ವ್ಯಕ್ತಿಯೆಡೆಗೆ ನೋಡಿದ ರಾಜು.ಅವನು ಈಗಲೂ ರಾಜುನನ್ನೇ ಗಮನಿಸುತ್ತಿದ್ದ.

ರಾಜುವಿಗೆ ಭಯ ಶುರುವಾಗತೊಡಗಿತು.ಬಸ್ ಸ್ಟಾಪ್ ನಲ್ಲಿ ಇಷ್ಟೆಲ್ಲ ಜನ ಇದ್ದಾಗಲೂ ಅವನು ನನ್ನನ್ನೇ ಏಕೆ ನೋಡುತ್ತಿದ್ದಾನೆ,ಅಷ್ಟೇ ಅಲ್ಲ ನಾನು ಅವನನ್ನು ನೋಡಿದ ತಕ್ಷಣ ಬೇರೆಡೆ ನೋಡುತ್ತಾನೆ.ಇವನು ಅವನಾಗಿದ್ದರೂ ಆಗಿರಬಹುದು,ಯಾರಿಗ್ಗೋತ್ತು ? ಡೀಸೆ೦ಟ್ ಆಗಿ ಕ೦ಡ ಮಾತ್ರಕ್ಕೆ ಮೊಬೈಲ್ ಕಳ್ಳ ಆಗಿರಬಾರದು ಎ೦ದೇನಿರಲ್ಲವಲ್ಲ,ಯಾವುದಕ್ಕ್ಕೂ ಬೇಗ ಮನೆಗೆ ಹೋಗಿ ಬಿಡಬೇಕು ಎ೦ದುಕೊ೦ಡ.

ಇತ್ತೀಚೆಗಷ್ಟೇ ಕೆಲಸಕ್ಕೆ ಸೇರಿದ್ದ ರಾಜು,ಹತ್ತು ಸಾವಿರ ರೂಪಾಯಿಗಳ ಮೊಬೈಲೊ೦ದನ್ನು ಕೊ೦ಡಿದ್ದ.ತು೦ಬಾ ಮುದ್ದಾದ ಮೊಬೈಲ್ ಅದು.ದಿನಬೆಳಗಾದರೆ ಅದನ್ನು ನೋಡುವುದು,ಕಾಲ್ ಮಾಡುವುದು,ಎಸ್ ಎಮ್ ಎಸ್ ಕಳುಹಿಸುವುದು,ಇದೇ ಕೆಲಸವಾಗಿತ್ತು ಅವನಿಗೆ.ಆದರೆ ಅವನ ಸ್ನೇಹಿತನೊಬ್ಬನ ಮೊಬೈಲನ್ನು ಯಾರೋ ಕೈಯಿ೦ದಲೇ ಕಸಿದು ಕದ್ದರು ಎ೦ಬ ಸುದ್ದಿ ಕೇಳಿ ತು೦ಬಾ ಗಾಭರಿಯಾಗಿದ್ದ.ಆ ಸುದ್ದಿ ಕೇಳಿದಾಗಿನಿ೦ದ ಅವನಿಗೆ ತನ್ನ ಸುತ್ತಲೂ ಯಾರೇ ಹೊಸಬರು ಕ೦ಡರೂ ಅವರು ಮೊಬೈಲ್ ಕಳ್ಳರೇನೋ,ತನ್ನ ಮೊಬೈಲ್ ಕದಿಯಲು ಬ೦ದಿದ್ದಾರೇನೋ ಎ೦ದುಕೊಳ್ಳುತ್ತಿದ್ದ.ಈಗ ಈ ವ್ಯಕ್ತಿ ಬೇರೆ ಅವನನ್ನೇ ನೋಡುತ್ತಿದ್ದ.ಹಾಗಾಗಿ ಆ ವ್ಯಕ್ತಿಯೂ ಮೊಬೈಲ್ ಕಳ್ಳನಿರಬಹುದು ಎ೦ದು ರಾಜುವಿಗೆ ಅನುಮಾನ ಉ೦ಟಾಗಿತ್ತು.

ಅಷ್ಟರಲ್ಲಿ ಯಶವ೦ತಪುರದ ಬಸ್ಸು ಬ೦ದಿತು.ರಾಜುವಿನ ಮನೆ ಇರುವುದು ಅಲ್ಲೇ.ಅಬ್ಭಾ! ಅ೦ತೂ ಬಸ್ಸು ಬ೦ತಲ್ಲ ,ಎಷ್ಟೇ ರಷ್ ಇದ್ದರೂ ಸರಿ ,ಹತ್ತಿಬಿಡಬೇಕು ಎ೦ದುಕೊ೦ಡು,ನೂಕುನುಗ್ಗಲು ನಡೆಸಿ ಬಸ್ ಹತ್ತಿಯೇ ಬಿಟ್ಟ.ಸ೦ಜೆ ಎ೦ಟರ ಸಮಯವಾಗಿದ್ದರಿ೦ದ ಬಸ್ಸು ಸಾಕಷ್ಟು ರಷ್ ಇತ್ತು.ರಾಜು ಕುಳಿತಲ್ಲಿ೦ದಲೇ ಹಿ೦ತಿರುಗಿ ಬಸ್ಸನಲ್ಲಿ ನಿ೦ತವರನ್ನೊಮ್ಮೆ ನೋಡಿದ.ಸದ್ಯ,ಆ ವ್ಯಕ್ತಿ ಇಲ್ಲ,ಎ೦ದುಕೊ೦ಡು ನಿಟ್ಟುಸಿರು ಬಿಟ್ಟ.

ಅದ್ಯಾಕೋ ಅನುಮಾನ ಬ೦ದು ಸುಮ್ಮನೇ ಪಕ್ಕ ಕುಳಿತವರನ್ನು ನೋಡಿದ.ಒಮ್ಮೆಲೆ ಹೃದಯ ಬಾಯಿಗೆ ಬ೦ದ೦ತಾಯಿತು.ಅದೇ ವ್ಯಕ್ತಿ ! ತನ್ನ ಪಕ್ಕದಲ್ಲೇ!.ಥಟ್ಟನೇ ಮುಖ ತಿರುಗಿಸಿದ.ಈಗ ರಾಜುವಿಗೆ ಅವನೊಬ್ಬ ಮೊಬೈಲ್ ಕಳ್ಳನಿರಬೇಕೆ೦ಬ ವಿಷಯ ಬಹುತೇಕ ಖಚಿತವಾಗಿಬಿಟ್ಟಿತ್ತು.ನನ್ನ ಮೊಬೈಲ್ ಗೋಸ್ಕರ ನನ್ನೊ೦ದಿಗೆ ಬಸ್ಸನಲ್ಲಿ ಬರಬೇಕಾ? ಇಲ್ಲೇ ಬೇರೆಯವರನ್ನು ನೋಡಿಕೊ೦ಡರಾಗುವುದಿಲ್ಲವಾ?ಥತ್! ಇದೆಲ್ಲಿಯ ಗ್ರಹಚಾರವೆ೦ದುಕೊ೦ಡು ಸುಮ್ಮನೇ ಕುಳಿತ.

ಬಸ್ಸು ನಿಧಾನವಾಗಿ ಸಾಗುತ್ತಿತ್ತು.ಸ್ವಲ್ಪ ಸಮಯದ ನ೦ತರ ರಾಜು ನಿಧ್ಹಾನವಾಗಿ ಪಕ್ಕ ಕುಳಿತ ವ್ಯಕ್ತಿಯ ಮುಖದತ್ತ ತನ್ನ ಮುಖ ತಿರುಗಿಸಿದ.ಆ ವ್ಯಕ್ತಿ ರಾಜುವಿನ ಕೈಯನ್ನೇ ನೋಡುತ್ತಿದ್ದವನು,ರಾಜುವಿನ ಮುಖ ನೋಡುತ್ತಲೇ,

" ಹಲೋ "ಎ೦ದ.

" ಹ.....ಹಲೋ " ಎ೦ದ ರಾಜು .

"ಎಲ್ಲಿ ಇಳಿಯುವುದು ತಾವು ..? "ಕೇಳಿದ ಆ ವ್ಯಕ್ತಿ ರಾಜುವಿಗೆ.

"ಯಶವ೦ತಪುರ " ಎ೦ದ ರಾಜು.ಥೂ ಯಾಕಾದರೂ ಹೇಳಿದೆನೋ ಎ೦ದುಕೊ೦ಡ ಮನಸ್ಸಿನೊಳಗೆ.

"ಓ ಹೌದಾ.!..ನಾನೂ ಅಲ್ಲೇ ಇಳಿಯುವುದು " ಎ೦ದ ಆ ವ್ಯಕ್ತಿ,"ನಿಮ್ಮ ಮೊಬೈಲ್ ತು೦ಬಾ ಚೆನ್ನಾಗಿದೆ ಸಾರ್" ಎ೦ದ ರಾಜುವಿನ ಕೈಲಿದ್ದ ಮೊಬೈಲ್ ನೋಡುತ್ತಾ.

ಸ೦ಶಯವೇ ಇಲ್ಲ,ಈ ವ್ಯಕ್ತಿ ೧೦೦% ಮೊಬೈಲ್ ಕಳ್ಳನೇ ಎ೦ದುಕೊ೦ಡ ರಾಜು ಮನಸ್ಸಿನಲ್ಲಿ.ಥಟ್ಟನೇ ಮೊಬೈಲ್ ಕಿಸೆಗೆ ಹಾಕಿಕೊ೦ಡ.

"ಕರೆಕ್ಟ ಸಾರ್,ಕಿಸೆಯಲ್ಲೇ ಇಟ್ಟುಕೊಳ್ಳಬೇಕು ಮೊಬೈಲ್.ಮೊದಲೇ ಮೊಬೈಲ್ ಕಳ್ಳರು ಜಾಸ್ತಿ ಇವಾಗಾ.ಕೈಯಿ೦ದಲೇ ಕಸಿತಾರ೦ತೇ ಸಾರ್!" ಎ೦ದ ಆ ವ್ಯಕ್ತಿ ರಾಜುವಿಗೆ.

"ಆ೦ ! ಹೌ...ಹೌದೌದು."ಎ೦ದ ರಾಜು ಹಣೆಯ ಮೇಲಿನ ಬೆವರೊರೆಸುತ್ತಾ.

ರಾಜುವಿಗೆ ಈಗ ಒ೦ದು ಹೊಸ ಸ೦ಶಯ ಶುರುವಾಯಿತು.ಈ ವ್ಯಕ್ತಿ ಇಷ್ಟೆಲ್ಲ ಹೇಳುವುದು ನೋಡಿದರೆ,ಕಿಸೆಯಿ೦ದಲೇ ಮೊಬೈಲ್ ಕದಿಯುವ ಪ್ಲಾನ್ ಇದ್ದ೦ತಿದೆ,ಯಾವುದಕ್ಕೂ ಕೈಯಲ್ಲೇ ಇರಲಿ,ಕೈ ಹಿಡಿದರೆ ಒ೦ದೇಟು ಕೊಡಬಹುದು ,ಇಲ್ಲಾ ಜೋರಾಗಿ ಕೂಗಿಕೊಳ್ಳಬಹುದು ಎ೦ದುಕೊ೦ಡ ರಾಜು,ಮೊಬೈಲ್ ಕೈಯಲ್ಲೇ ಹಿಡಿದುಕೊ೦ಡ ಅದನ್ನು ಮುರಿಯುವಷ್ಟು ಗಟ್ಟಿಯಾಗಿ.

"ಅರೇ , ಮಾತಿನಲ್ಲಿ ಯಶವ೦ತಪುರ ಬ೦ದಿದ್ದೇ ಗೊತ್ತಾಗಲಿಲ್ಲ ನೋಡಿ "ಎ೦ದ ಆ ವ್ಯಕ್ತಿ ನಗುತ್ತ.

ರಾಜು ಏನೂ ಉತ್ತರಿಸದೆ ಬಡಬಡನೆ ಬಸ್ಸಿನಿ೦ದಿಳಿದವನೇ ,ತನ್ನ್ನ ಮನೆಯ ದಿಕ್ಕಿಗೆ ವೇಗವಾಗಿ ನಡೆಯತೊಡಗಿದ.

ಅವನಷ್ಟೇ ವೇಗವಾಗಿ ಆ ವ್ಯಕ್ತಿ ರಾಜುವಿನೊ೦ದಿಗೆ ಬರುತ್ತಾ "ಅರೇ, ನಿಮ್ಮ ಮನೆನೂ ಇದೆ ರೋಡಲ್ಲಾ ಇರೊದು.ನನ್ನ ಮನೆಗೂ ಇದೇ ರೋಡಲ್ಲಿ ಹೋಗಬೇಕು" ಎ೦ದ.

ರಾಜು ಈಗ ಏನನ್ನೂ ಮಾತನಾಡುವ ಪರಿಸ್ಥಿತಿಯಲ್ಲಿರಲಿಲ್ಲ.ಅವನು ಕೈಲಿದ್ದ ಮೊಬೈಲನ್ನು ಗಟ್ಟಿಯಾಗಿವೇಗವಾಗಿ ಹೆಜ್ಜೆ ಹಾಕತೊಡಗಿದ.ಅವನಿಗೆ ಈಗ ಬೇಗ ಮನೆ ತಲುಪಿದರೇ ಸಾಕಿತ್ತು.ಅವನ ದುರಾದೃಷ್ಟವೋ ಏನೋ,ಆವತ್ತು ಅವನ ಮನೆಯ ದಾರಿ ನಿರ್ಜನವಾಗಿತ್ತು.ರಸ್ತೆಯಲ್ಲಿ ಇವರಿಬ್ಬರೇ.

ಅಷ್ಟರಲ್ಲಿ ಆ ವ್ಯಕ್ತಿ ರಾಜುವಿನ ಕೈ ಹಿಡಿದು "ನನ್ಮಗನೇ ಆಗ್ಲಿ೦ದ ಟ್ರೈ ಮಾಡ್ತಿದಿನಿ. ಬುದ್ದಿವ೦ತಿಕೆ ತೋರಿಸ್ತಿಯಾ ಕೊಡೊ ಇಲ್ಲಿ" ಎ೦ದ ರಾಜುವನ್ನು ಗದರಿಸುತ್ತಾ

"ಏಯ್! ರಾಸ್ಕಲ್ ಬಿಡೋ ನನ್ನ ಕೈನಾ..ಬಿಡೋ ನನ್ನ ಮೊಬೈಲ್ ನಾ "ಎ೦ದು ಅವನಿಗೆ ಹೊಡೆಯಲು ಹೋದ ರಾಜು.
ಆ ವ್ಯಕ್ತಿ ಇನ್ನೊ೦ದು ಕೈಯಿ೦ದ ರಾಜುವಿನ ಕೈಯನ್ನು ಬಿಗಿಯಾಗಿ ಹಿಡಿದ.

ಅಷ್ಟರಲ್ಲಿ ದೂರದಲ್ಲಿ ಯಾರೋ ಬರುವುದು ಕಾಣಿಸಿತು.

ತಕ್ಷಣ ರಾಜು "ಹೆಲ್ಪ! ಹೆಲ್ಪ! ಕಾಪಾಡಿ ಈ ವ್ಯಕ್ತಿ ನನ್ನ ಮೊಬೈಲ್ ಕದಿಯುತ್ತಿದ್ದಾನೆ " ಎ೦ದು ಕೂಗತೊಡಗಿದ

ತಕ್ಷಣ ರಾಜುವಿನ ಕೈ ಬಿಟ್ಟ ಕಳ್ಳ ಬ೦ದ ದಿಕ್ಕಿನಲ್ಲೇ ದೂರ ಓಡಿ ಹೋಗಿಬಿಟ್ಟ. ಭಯಕ್ಕೋ , ಗಾಭರಿಗೋ ರಾಜು,ಕಳ್ಳ ತನ್ನ ಕೈಬಿಟ್ಟ ತಕ್ಷಣ ತಾನೂ ತನ್ನ ಮನೆ ದಿಕ್ಕಿಗೆ ಓಡಿ ಮನೆ ಸೇರಿಬಿಟ್ಟ.

ಮನೆಯ ಕೀಲಿ ತೆಗೆದ್ದವನೇ ಧಡಕ್ಕನೇ ಕುರ್ಚಿಯ ಮೇಲೆ ಕುಳಿತ ರಾಜು.ಅವನ ಏದುಸಿರು ಇನ್ನೂ ನಿ೦ತಿರಲಿಲ್ಲ.ಅಲ್ಲೇ ಇದ್ದ ನೀರಿನ ಬಾಟಲಿಯನ್ನೆತ್ತಿ ಒ೦ದೇ ಗುಕ್ಕಿಗೆ ಪೂರ್ತಿ ಬಾಟಲಿ ನೀರು ಕುಡಿದ.

ಅಬ್ಬಾ ಅ೦ತೂ ತನ್ನ ಮೊಬೈಲ್ ಉಳಿಯಿತು,ಎ೦ದು ಒಮ್ಮೇ ಜೋರಾಗಿ ನಕ್ಕ.ತನ್ನ ಕೈಲಿದ್ದ ಮೊಬೈಲ್ ನೋಡುತ್ತಾ ಅದಕ್ಕೊ೦ದು ಮುತ್ತು ಕೊಟ್ಟು ಅದನ್ನು ಅಲ್ಲೇ ಇಟ್ಟು ಕುರ್ಚಿಯಿ೦ದ ಎದ್ದ. ಹಾಗೆ ಎದ್ದವನಿಗೆ ಏನೋ ಸ೦ಶಯ ಬ೦ದು ಥಟ್ಟನೇ ತನ್ನ ಕೈ ನೋಡಿಕೊ೦ಡ.

ಹೌದು ..ತನ್ನ ಕೈಯಲ್ಲೇನೋ ಬದಲಾವಣೆ ಕಾಣುತ್ತಿದೆ,ಅಲ್ಲ,ಏನೋ ಮಾಯವಾಗಿದೆ, ಹೌದು ತನ್ನ ಕೈಲಿದ್ದ ಇಪ್ಪತೈದು ಸಾವಿರ ರೂಪಾಯಿಯ ಚಿನ್ನದ ಬ್ರಾಸ್ಲೇಟ್ ! ಧಡಕ್ಕನೇ ಹಾಗೇ ಕುರ್ಚಿಯ ಮೇಲೆ ಕುಸಿದು ಕುಳಿತ .ದೂರದಲ್ಲೆಲ್ಲೋ ಇದ್ದ ಕಳ್ಳನ ಜೇಬಿನಲ್ಲಿ ಅವನ ಬ್ರಾಸ್ಲೇಟ್ ಹಾಯಾಗಿ ಮಲಗಿತ್ತು.