ಮೊಬೈಲ್ ಗೀಳಿನ ಅಪಾಯಗಳನ್ನು ಅರಿತ ದಿಗ್ಗಜರು!


ಸಾಮಾನ್ಯವಾಗಿ, ನಾವು ನಮ್ಮ ಮಕ್ಕಳಿಗೆ ಆಡಲು ಮೊಬೈಲ್ ಫೋನ್ ಅನ್ನು ನೀಡುತ್ತೇವೆ; ನಂತರ, ಬಹಳ ತೊಂದರೆಗಳನ್ನು ಅನುಭವಿಸುತ್ತೇವೆ. ಆದರೆ, ಕೆಲವು ಕೋಟ್ಯಾಧಿಪತಿಯರು ತಮ್ಮ ಮಕ್ಕಳಿಗೆ ಮೊಬೈಲ್ ಫೋನನ್ನು ಆಡಲು ನಿರಾಕರಿಸಿದ್ದಾರೆ. ಹಲವು ಪ್ರಸಿದ್ಧ ಶ್ರೀಮಂತರು ಮಕ್ಕಳನ್ನು ಬೆಳೆಸುವಾಗ ಅವರನ್ನು ಮೊಬೈಲಿನಿಂದ ಸಂಪೂರ್ಣವಾಗಿ ದೂರವಾಗಿಸಿಟ್ಟರು; ವಿಶೇಷವಾಗಿ, ಸ್ಮಾರ್ಟ್ ಫೋನ್, ಐಪ್ಯಾಡ್ ಇತ್ಯಾದಿಗಳಿಂದ.
Business Insider ವರದಿಯ ಪ್ರಕಾರ Microsoftನ ಸಹ ಸಂಸ್ಥಾಪಕರಾದ ಬಿಲ್ ಗೇಟ್ಸ್ ಅವರು ತಮ್ಮ ಮಕ್ಕಳಿಗೆ 14 ವರ್ಷದವರೆಗೆ ಮೊಬೈಲ್ ಫೋನಿನಿಂದ ದೂರವಿಟ್ಟಿದರು. ಕೋವಿಡ್ ಸಂಕ್ರಮಣ ಕಾಲದಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಅವರಿಗೆ ನಾವು ಸ್ಮಾರ್ಟ್ ಫೋನ್, ಲ್ಯಾಪ್ಟಾಪ್ ಇತ್ಯಾದಿಗಳನ್ನು ನೀಡಿದ್ದೇವೆ. ಆದರೆ, ಕೋಟ್ಯಧಿಪತಿಯರು ತಮ್ಮ ಮಕ್ಕಳ ಮೇಲೆ ನಿಗಾ ಇಟ್ಟಿದ್ದರು.
Business Insider ಅವರ ಇನ್ನೊಂದು ವರದಿಯ ಪ್ರಕಾರ ಆ್ಯಪಲ್ ಕಂಪನಿಯ ಮುಖ್ಯಸ್ಥ ಸ್ಟೀವ್ ಜಾಬ್ಸ್ ಅವರೂ ಸಹ ತಮ್ಮ ಮಕ್ಕಳನ್ನು ಬಾಲ್ಯದಿಂದಲೇ ಮೊಬೈಲ್ ಫೋನಿನಿಂದ ದೂರವಿಟ್ಟಿದ್ದರು. ಫೇಸ್ಬುಕ್ ನ ಮಾರ್ಕ್ ಝುಕರ್ಬರ್ಗ್ ಅವರೂ ತಮ್ಮ ಎರಡೂ ಮಕ್ಕಳ ಲಾಲನೆ-ಪಾಲನೆ ಮೊಬೈಲ್ ಇಲ್ಲದೆ ನಡೆಸುತ್ತಿದ್ದಾರೆ; ಜೊತೆಗೆ, ಅವರ ಮನೆಯಲ್ಲಿ ತಂತ್ರಜ್ಞಾನದ ಮೇಲೆ ಕಡಿವಾಣವಿದೆ.
ಹಾಲಿವುಡ್ ನ ಸುಪ್ರಸಿದ್ಧ ನಟಿ ಜೆನ್ನಿಫರ್ ಲೋಪೆಝ್ ಅವರು ತಮ್ಮ ಮಕ್ಕಳಿಗೆ ವಾರಕ್ಕೊಮ್ಮೆ ಮೊಬೈಲ್ ಫೋನ್ ನೀಡುತ್ತಾರೆ. ಹಾಲಿವುಡ್ ನ ಇನ್ನೊಂದು ನಟಿ ಏಂಜಲಿನಾ ಜೋಲಿ ಅವರು ಮೊಬೈಲ್ ಫೊನಿನ ಗೀಳಿನ ವಿರೋಧಿಯಾಗಿದ್ದಾರೆ; ಅವರು ತಮ್ಮ ಮಕ್ಕಳನ್ನು ಫೊನಿನಿಂದ ದೂರವಿಟ್ಟಿದ್ದಾರೆ. ಅಮೇರಿಕನ್ ಉದ್ಯಮಿ ಮಾರ್ಕ್ ಕ್ಯೂಬನ್ ಅವರು ತಮ್ಮ ಮಕ್ಕಳ ಸ್ಕ್ರೀನ್ ಟೈಮ್ ಮೇಲೆ ನಿಗಾ ಇಟ್ಟಿದ್ದಾರೆ; ತಮ್ಮ ಮಕ್ಕಳು ಫೋನಿನಲ್ಲಿ ಏನೆಲ್ಲಾ ವೀಕ್ಷಿಸಿಸುತ್ತಾರೆ ಎಂಬಿತ್ಯಾದಿ ವಿಷಯಗಳನ್ನು ಅವರು ಗಂಭೀರವಾಗಿ ಪರಿಗಣಿಸಿದ್ದಾರೆ.
ಕಾರಣ : ಒಂದು—ಮಕ್ಕಳು ಫೊನಿನ ಗೀಳಿಗೆ ಬಲಿಯಾಗುತ್ತಿದ್ದಾರೆ. ಇನ್ನೊಂದು—ಫೋನುಗಳಲ್ಲಿ ಅಶ್ಲೀಲತೆ pop-up ಆಗುತ್ತಿರುತ್ತವೆ; ಇದು ಅಪ್ರಾಪ್ತ ಮಕ್ಕಳಿಗೆ ಬಹಳ ಅಪಾಯಕಾರಿಯಾಗಿದೆ. ಒಂದು ವೇಳೆ, ಅನಿವಾರ್ಯವಿದ್ದು ಮಕ್ಕಳಿಗೆ ಮೊಬೈಲನ್ನು ನೀಡಿದ್ದರೂ, ಅವರ ಮೇಲೆ ನಿಗಾ ಇಡುವುದು ಬಹಳ ಅಗತ್ಯವಾಗಿದೆ.
ಟೆನ್ನಿಸ್ ತಾರೆ ಸೆರೆನಾ ವಿಲಿಯಮ್ಸ್ ಅವರೂ ಸಹ ತಮ್ಮ ಮಕ್ಕಳ ಸ್ಕ್ರೀನ್ ಟೈಮ್ ಮೇಲೆ ಗಂಭೀರವಾಗಿ ನಿಗಾ ಇಟ್ಟಿದ್ದಾರೆ. ಫುಟ್ಬಾಲ್ ಕ್ರೀಡಾಪಟು ಡೇವಿಡ್ ಬೆಕ್ಹ್ಯಾಮ್ ಅವರು ಒಂದು ಸಂದರ್ಶನದಲ್ಲಿ ತಾನು ತನ್ನ ಮಕ್ಕಳ ಸ್ಕ್ರೀನ್ ಟೈಮ್ ಮೇಲೆ ಕಡಿವಾಣ ಹಾಕಿದ್ದೇನೆ ಎಂದು ಹೇಳಿದ್ದಾರೆ. ಒಂದು ಹಳೆಯ ಸಂದರ್ಶನದಲ್ಲಿ ಮತ್ತು ಪತ್ರಿಕೆಯ ಲೇಖನದಲ್ಲಿ ಅಮೇರಿಕಾದ ಮಾಜಿ ಅಧ್ಯಕ್ಷರು ಬರಾಕ್ ಒಬಾಮಾ ಅವರೂ ತಮ್ಮ ಎರಡೂ ಹೆಣ್ಮಕ್ಕಳ ಸ್ಕ್ರೀನ್ ಟೈಮ್ ಗೆ ಮಿತಿ ಹೇರಿದ್ದಾರೆ. ಇದು ಹಳೆಯ ಮಾತಾಗಿದೆ. ಇದು ಪ್ರಸಿದ್ಧ ಮತ್ತು ಶ್ರೀಮಂತ ವ್ಯಕ್ತಿಗಳ ಉದಾಹರಣೆಯ ಮೂಲಕ ಹೇಳ ಬಯಸುವ ವಿಷಯವೆಂದರೆ ನೀವು ಮಕ್ಕಳಿಗೆ ಮೊಬೈಲ್ ನೀಡಿದರೂ, ಅವರ ಮೇಲೆ ನಿಗಾ ಇಡಬೇಕೆಂದು ಹೇಳಲಾಗುತ್ತಿದೆ.
ಪ್ರಾರಂಭದಲ್ಲಿ ಮಕ್ಕಳಿಗೆ ಅಭ್ಯಾಸಗಳು ನಮ್ಮನ್ನು ನೋಡಿ ಆಗುತ್ತೆ. ನಾವು ನಮ್ಮ ಅಮೂಲ್ಯ ಸಮಯವನ್ನು ಮೊಬೈಲ್ ಫೊನಿನಲ್ಲಿ ವ್ಯರ್ಥ ಮಾಡಿದರೆ ಮಕ್ಕಳೂ ನಮ್ಮನ್ನು ನೋಡಿ ಅನುಸರಿಸುತ್ತಾರೆ. ಹಿಂದಿನ ಕಾಲದಲ್ಲಿ ಟಿವಿಯ ಕುರಿತು ಮಾತು ನಡೆಯುತ್ತಿತ್ತು. ಈಗ ಟಿವಿಯ ಸ್ಥಾನ ಮೊಬೈಲ್ ಫೋನ್ ಪಡೆದಿದೆ. ಮೊಬೈಲ್ ಫೊನಿನ ಬಹಳ ಉಪಯೋಗಗಳಿವೆ. ಆದರೆ, ಅಷ್ಟೇ ದುಷ್ಪರಿಣಾಮಗಳಿವೆ. ಮಕ್ಕಳು ಅತ್ತಾಗ, ಊಟ ಮಾಡದೆ ಇದ್ದಾಗ ಮೊಬೈಲ್ ಫೋನನ್ನು ಕೈಗೆ ನೀಡಿದರೆ, ಅನಿರೀಕ್ಷಿಸಿದ ಅಪಾಯಗಳು ಎದುರಾಗಬಹುದು.
ಮಕ್ಕಳಿಗೆ ಮೊಬೈಲನ್ನು ನೀಡುವುದು ಕೆಲವೊಮ್ಮೆ ಅನಿವಾರ್ಯವಾದರೆ, ಕೆಲವೊಮ್ಮೆ ವಿನಾ ಕಾರಣ ನಾವು ನೀಡುತ್ತೇವೆ. ಶಾಲೆಗಳು ಆನ್ಲೈನ್ ತರಗತಿಗಳನ್ನು ಪ್ರಾರಂಭಿಸಿದಾಗ ಮಕ್ಕಳಿಗೆ ಮೊಬೈಲ್ ನೀಡುವುದು ಅನಿವಾರ್ಯವಾಗಿತ್ತು. ಆ ಅನಿವಾರ್ಯತೆ ನಂತರ ಅಭ್ಯಾಸವಾಯಿತು. ಆ ಅಭ್ಯಾಸ ನಂತರ ಸಮಸ್ಯೆಗಳಿಗೆ ಬುನಾದಿ ಹಾಕಲು ಪ್ರಾರಂಭಿಸಿತು. ಅನೇಕ ಅಧ್ಯಯನಗಳು ಈ ಸಮಸ್ಯೆಗಳ ಕುರಿತು ಬೆಚ್ಚಿ ಬೀಳಿಸುವ ವರದಿಗಳನ್ನು ಪ್ರಕಟಿಸಿವೆ.
ಆರಂಭದಲ್ಲಿ, ನಾವು ಮೊಬೈಲ್ ಗಳು ಕೇವಲ ಕಣ್ಣುಗಳ ಮೇಲೆ ಪ್ರಭಾವ ಬೀರುತ್ತವೆ ಎಂದು ಭಾವಿಸಿದ್ದೆವು. ಅದು ತಪ್ಪಾಗಿತ್ತು. ಮೊಬೈಲ್ ಫೋನಿನ ಕಿರಣಗಳು ನಮ್ಮ ಮೆದುಳಿನ ಮೇಲೆ ಬಹಳ ಅಪಾಯಕಾರಿ ಪರಿಣಾಮ ಬೀರುತ್ತದೆ; ಅದರೊಂದಿಗೆ, ನರಸಂಬಂಧಿ ಸಮಸ್ಯೆಗಳೂ ಬರಲಾರಂಭಿಸಿವೆಯಂತೆ. ಮಕ್ಕಳು ಮೊಬೈಲ್ ಗೀಳಿಗೆ ಬಲಿಯಾಗಿ ಸಾಮಾಜಿಕ ವಲಯಗಳಿಂದ ದೂರವಾಗಿದ್ದರು; ಕ್ರೀಡೆಗಳಿಂದ ದೂರವಾದರು.
ಒಮ್ಮೆ ಮಕ್ಕಳು ಮೊಬೈಲ್ ಗೀಳಿಗೆ ಬಲಿಯಾದರೆ, ನಂತರ ನಾವು ಬಯಸಿದರೂ ಆ ಗೀಳಿನಿಂದ ಮಕ್ಕಳನ್ನು ದೂರವಾಗಿಸಲು ವಿಫಲಗೊಳ್ಳುತ್ತೇವೆ. ನಾವು ಹಿಂಬಾಲಿಸುವ ಸುಪ್ರಸಿದ್ಧ ವ್ಯಕ್ತಿತ್ವಗಳೇ ತಮ್ಮ ಮಕ್ಕಳನ್ನು ಮೊಬೈಲ್ ಗೀಳಿನಿಂದ ದೂರವಿಟ್ಟಿದ್ದಾರೆ. ಅವರು ಒಂದು ಮಕ್ಕಳನ್ನು ಮೊಬೈಲಿನಿಂದ ದೂರವಿಟ್ಟಿದ್ದಾರೆ ಅಥವಾ ಮಕ್ಕಳ ಮೇಲೆ ನಿಗಾ ಇಟ್ಟಿದ್ದಾರೆ.
ಬಿಲ್ ಗೇಟ್ಸ್, ಸ್ಟೀವ್ ಜಾಬ್ಸ್, ಮಾರ್ಕ್ ಝುಕರ್ಬರ್ಗ್, ಜೆನ್ನೀಫರ್ ಲೋಪೆಝ್, ಏಂಜಲಿನಾ ಜೋಲಿ, ಮಾರ್ಕ್ ಕ್ಯೂಬನ್, ಸೆರೇನಾ ವಿಲಿಯಮ್ಸ್, ಬರಾಕ್ ಒಬಾಮಾ, ಡೇವಿಡ್ ಬ್ಯಾಕ್ಹ್ಯಾಮ್—ಈ ಎಲ್ಲಾ ಸುಪ್ರಸಿದ್ಧ ವ್ಯಕ್ತಿತ್ವಗಳಲ್ಲಿ ಹಣದ ಕೊರತೆಯಿಲ್ಲದಿದ್ದರೂ, ಅವರು ತಮ್ಮ ಮಕ್ಕಳನ್ನು ಮೊಬೈಲ್ ಗೀಳಿನಿಂದ ವಂಚಿತವಿಟ್ಟಿದರು. ಕಾರಣ: ಅವರು ಮೊಬೈಲ್ ಗೀಳಿನ ದುಷ್ಪರಿಣಾಮಗಳನ್ನು ಸಮಗ್ರವಾಗಿ ಅರ್ಥೈಸಿಕೊಂಡು; ಅದರಿಂದ ತಾವು ದೂರ ಉಳಿದುಕೊಂಡರು, ತಮ್ಮ ಮಕ್ಕಳನ್ನು ದೂರವಿಟ್ಟರು. ಒಂದು ವೇಳೆ, ಮಕ್ಕಳಿಗೆ ಮೊಬೈಲ್ ನೀಡುವುದು ಅನಿವಾರ್ಯವಾದರೂ, ಅವರ ಮೇಲೆ ನಿಗಾ ಇಡುವುದು ಸಹ ಬಹಳ ಮುಖ್ಯವಾಗಿದೆ.
ಮಾಹಿತಿ ಮೂಲ :
1. Business Insider
2. ವಿವಿಧ You tube ವಿಡಿಯೊಗಳು.
- ಶಿಕ್ರಾನ್ ಶರ್ಫುದ್ದೀನ್ ಎಂ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ