ಮೊಬೈಲ್ ಫೋನುಗಳ 'ಸ್ಮಾರ್ಟ್' ಲೋಕ
(ಈ ಲೇಖನದ ಪರಿಷ್ಕೃತ ಆವೃತ್ತಿ ಫೆಬ್ರವರಿ ೧೭, ೨೦೧೦ರ 'ಪ್ರಜಾವಾಣಿ' ವಾಣಿಜ್ಯ ಪುರವಣಿಯಲ್ಲಿ ಪ್ರಕಟವಾಗಿದೆ)
ಮೊಬೈಲ್ ಫೋನು ಜನಜೀವನದ ಪ್ರಮುಖ ಅಂಗವಾಗಿ ವರ್ಷಗಳೇ ಕಳೆದಿವೆ. ಈಗ ಮೊಬೈಲ್ ಇಟ್ಟುಕೊಳ್ಳದವರು ಸಿಕ್ಕರೆ ಎಲ್ಲರೂ ವಿಸ್ಮಯದಿಂದ ಕಣ್ಣರಳಿಸುವ ಕಾಲ. ಎಲ್ಲರಲ್ಲೂ ಒಂದಲ್ಲ ಒಂದು ರೀತಿಯ ಹ್ಯಾಂಡ್ ಸೆಟ್ಟು ಇದ್ದೇ ಇರುತ್ತದೆ. ಸ್ವಲ್ಪ ಹೆಚ್ಚು ಬೆಲೆಯ ಮೊಬೈಲ್ ಕೊಂಡರೆ ಎಫ್ ಎಂ ರೇಡಿಯೋ, ಕ್ಯಾಮೆರಾ, ಮ್ಯೂಸಿಕ್ ಪ್ಲೇಯರ್ - ಇವೆಲ್ಲ ಸವಲತ್ತುಗಳೂ ಮೊಬೈಲ್ ಒಳಗೇ ಲಭ್ಯ. ಆದರೆ ತಂತ್ರಜ್ಞಾನ ನಿತ್ಯ ಬೆಳೆಯುತ್ತಲೇ ಬಂದಿದೆ. ಕರೆಗಳನ್ನು ಮಾಡಲು ಬಳಸಲಾಗುವ ಮೊಬೈಲು ಉಳಿದಂತೆ ಸಮಯ ನೋಡಲು ಅಥವ ಕ್ಯಾಲ್ಕುಲೇಟರ್ ಬಳಸಲು ಮಾತ್ರ ಉಪಯೋಗವಾಗುತ್ತಿತ್ತು. ಆದರೆ ಕ್ರಮೇಣ ಎಫ್ ಎಂ ರೇಡಿಯೋ, ಮ್ಯೂಸಿಕ್ ಪ್ಲೇಯರ್ ಮತ್ತು ಕ್ಯಾಮೆರ ಹೊತ್ತು ತಂದಿತು. ಈಗ ಪುಟ್ಟ ಕಂಪ್ಯೂಟರುಗಳಂತಿರುವ 'ಸ್ಮಾರ್ಟ್' ಫೋನುಗಳ ಕಾಲ.
ಅಂಗೈ ಮೇಲೆ ಪುಟ್ಟ ಕಂಪ್ಯೂಟರ್
ಒಂದು ಕಂಪ್ಯೂಟರ್ ಮಾಡಬಹುದಾದ ಎಲ್ಲ ಕೆಲಸವನ್ನೂ ಮಾಡಬಲ್ಲ ಮೊಬೈಲ್ ಉಪಕರಣಗಳು ಈಗ ಮಾರುಕಟ್ಟೆಯಲ್ಲಿವೆ. ಈ ಉಪಕರಣಗಳಿಗೆ ನಿಮ್ಮ ಮನೆಯ ಹಳೆಯ ಡೆಸ್ಕ್ಟಾಪ್ ಕಂಪ್ಯೂಟರಿನಷ್ಟೇ ಶಕ್ತಿಯುಳ್ಳ ಪ್ರಾಸೆಸರ್ (Processor) ಕೂಡ ಇದ್ದೀತು. ಜೊತೆಗೆ ಇತ್ತೀಚೆಗೆ ಹೆಚ್ಚು ಜನಪ್ರಿಯವಾಗುತ್ತಿರುವ ಜಿ ಪಿ ಎಸ್ (ಗ್ಲೋಬಲ್ ಪೊಸಿಶನಿಂಗ್ ಸಿಸ್ಟಮ್) ಉಪಕರಣ ಇದ್ದೇ ಇರುತ್ತದೆ. ಮೊಬೈಲ್ ನೆಟ್ವರ್ಕ್ ಮೂಲಕ ಇಂಟರ್ನೆಟ್, ಅದರೊಂದಿಗೆ ಇ-ಮೇಯ್ಲ್, ಮ್ಯಾಪ್ಸ್ ಹಾಗು ಇನ್ನೂ ಹಲವು ಸವಲತ್ತುಗಳು ಜೊತೆಜೊತೆಗೇ.
ಏನಿದು ಗ್ಲೋಬಲ್ ಪೊಸಿಶನಿಂಗ್ ಸಿಸ್ಟಮ್? ಅಮೇರಿಕೆಯ ಸರಕಾರ ಒಂದು ಕಾಲದಲ್ಲಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನ ಇದು. ಈಗಿನಂತೆ ಮುಕ್ತವಾಗಿ ಹಾಗು ಮುಫತ್ತಾಗಿ ಲಭ್ಯ.
ಜಿ ಪಿ ಎಸ್ ರಿಸೀವರ್ ಇರುವ ಉಪಕರಣದ ಮೂಲಕ ಭೂಮಿಯ ಮೇಲೆ ನಾವು ಎಲ್ಲಿದ್ದೇವೆ (lattitude, longitude) ಎಂಬ ಖಚಿತ ಮಾಹಿತಿ ತಿಳಿಯಬಹುದು. ಈ ತಂತ್ರಜ್ಞಾನದ ಉಪಯೋಗ
ಹಲವಾರು. ಮೊಬೈಲ್ ಫೋನಿನಲ್ಲಿ ಜಿ ಪಿ ಎಸ್ ರಿಸೀವರ್ ಇದ್ದು ಅದರಲ್ಲಿರುವ ಕ್ಯಾಮೆರ ಬಳಸಿ ಫೋಟೋ ತೆಗೆದರೆ ಫೋಟೋ ತೆಗೆದದ್ದು ಯಾವ ಜಾಗದಲ್ಲಿ ಎಂಬ ಖಚಿತ ಮಾಹಿತಿಯನ್ನು ಡಿಜಿಟಲ್ ಫೋಟೋ ನೆನಪಿಟ್ಟುಕೊಳ್ಳುತ್ತದೆ (ಇದನ್ನು ಜಿಯೋ ಟ್ಯಾಗಿಂಗ್ ಎನ್ನುತ್ತಾರೆ). ಇದೇ ಜಿ ಪಿ ಎಸ್ ರಿಸೀವರ್ ಬಳಸಿ ನಿಮ್ಮ ನಿವೇಶನದ ಒಟ್ಟು ಸುತ್ತಳತೆ ನೀವೇ ಕಂಡುಹಿಡಿಯಬಹುದು. ಅಥವ ನಿಮ್ಮ ಕೃಷಿ ಜಮೀನಿನ ಸರ್ವೇ ಯಾವುದೇ ಟೇಪು ದಾರಗಳಿಲ್ಲದೆ ಮಾಡಿಬಿಡಬಹುದು! ಜಿ ಪಿ ಎಸ್ ಆನ್ ಇರುವ ಸ್ಮಾರ್ಟ್ ಫೋನು ಹಿಡಿದು ಜಮೀನಿನ ಸುತ್ತ ಒಂದು ಸುತ್ತು ಹಾಕಿದರಾಯ್ತು!
ಎಸ್ ಎಮ್ ಎಸ್, ಇ-ಮೇಯ್ಲು ಎಂದು ಫೋನಿಗೆ ಅಂಟಿಕೊಳ್ಳುತ್ತಿದ್ದ ಮೊಬೈಲ್ ಬಳಕೆದಾರರು ಇನ್ನು ಪ್ರತಿಯೊಂದಕ್ಕೂ ಮೊಬೈಲ್ ಫೋನನ್ನೇ ಅವಲಂಬಿಸುವಂತೆ ಮಾಡುವಷ್ಟು ಸವಲತ್ತುಗಳಿವೆ ಹೊಸ ಪೀಳಿಗೆಯ ಸ್ಮಾರ್ಟ್ ಫೋನುಗಳಲ್ಲಿ. ಅತಿ ವೇಗದಲ್ಲಿ ಜಗತ್ತಿನಾದ್ಯಂತ ಬೆಳೆದು ನಿಂತ ಕಂಪೆನಿ ಗೂಗಲ್ ಇತ್ತೀಚೆಗೆ ತನ್ನದೇ ಆದ ಮೊಬೈಲ್ ಫೋನ್ ಒಂದನ್ನು ಹೊರತಂದಿತು. ಅದರ ಹೆಸರು 'ಗೂಗಲ್ ನೆಕ್ಸಸ್'. ತಂತ್ರಜ್ಞಾನದ ಬೆಳವಣಿಗೆಗಳೆಡೆಗೆ ಗಮನ ಇಟ್ಟಿರುವ ಸುದ್ದಿ ಜಗತ್ತಿನ ಹಲವರು ಇದು ಆಪಲ್ ಕಂಪೆನಿಯವರ ಜನಪ್ರಿಯ ಐಫೋನ್ ವಿರುದ್ಧ ಬಿಟ್ಟಿರುವ ಉಪಕರಣ ಎಂದರು. ಆದರೆ ಮೊಬೈಲ್ ಫೋನು ಜನಜೀವನದಲ್ಲಿ ಬಳಕೆಯಾಗುತ್ತಿರುವ ರೀತಿ ನೋಡಿದರೆ ಜಾಹೀರಾತು ಮಾರುಕಟ್ಟೆಗಾಗಿ ಮುಂದಿನ ಟೆಕ್ ಕಾಳಗ ಇಂಟರ್ನೆಟ್ಟಿನಲ್ಲಿ ಅಲ್ಲ, ಬದಲಿಗೆ ಮೊಬೈಲ್ ಫೋನುಗಳಲ್ಲಿ ಎಂಬುದು ಪ್ರಸ್ತುತ!
ಬ್ಲಾಕ್ ಬೆರಿ
ಸ್ಮಾರ್ಟ್ ಫೋನುಗಳಲ್ಲಿ ಜನಪ್ರಿಯ ಬ್ಲಾಕ್ ಬೆರಿ. ದೊಡ್ಡ ಹುದ್ದೆಗಳಲ್ಲಿರುವ ಅಧಿಕಾರಿಗಳಿಂದ ಹಿಡಿದು ದೊಡ್ಡ ವ್ಯಾಪಾರಿಗಳವರೆಗೆ ಇದರ ಬಳಕೆದಾರರು. ಹೆಚ್ಚಿನ ಆದಾಯವಿರುವವರ ನಡುವೆ ಇದೊಂದು ಜೀವನ ಶೈಲಿಯೇ ಆಗಿಹೋಗಿದೆ. ಜಗತ್ತಿನಾದ್ಯಂತ ಮಾರಾಟವಾಗುವ ಸ್ಮಾರ್ಟ್ ಫೋನುಗಳಲ್ಲಿ ಪ್ರತಿಶತ ೨೦ ಬ್ಲಾಕ್ ಬೆರಿ ಮೊಬೈಲ್ ಫೋನುಗಳಂತೆ! ಆದರೆ ಇತ್ತೀಚೆಗೆ ಭಾರತ ಸರಕಾರದಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳಿಗೆ ಹಾಗು
ಶಾಸಕರಿಗೆ ಭದ್ರತಾ ಸಂಸ್ಥೆಗಳು "ಕಚೇರಿಯ ಇ-ಮೇಯ್ಲ್ ಓದಲು ಬ್ಲಾಕ್ ಬೆರಿ ಬಳಸಬೇಡಿ" ಎಂದು ಎಚ್ಚರಿಕೆ ನೀಡಿವೆಯಂತೆ. ಚೈನಾ ದೇಶದ ಹ್ಯಾಕರುಗಳು ಬ್ಲಾಕ್ ಬೆರಿ ತಂತ್ರಾಂಶದಲ್ಲಿರುವ ನ್ಯೂನತೆಗಳನ್ನು ಬಳಸಿಕೊಂಡು ಸರಕಾರದ ಇ-ಮೇಯ್ಲುಗಳಿಗೆ ಕೈ ಹಾಕಿದ್ದರಂತೆ. ದೇಶದ ಆಂತರಿಕ ಮಾಹಿತಿ, ರಹಸ್ಯಗಳೆಲ್ಲ ಚೈನಾದ ಕಂಪ್ಯೂಟರ್ ತಜ್ಞರ ಪಾಲು!
ಐ ಫೋನ್
ಆಪಲ್ ಕಂಪೆನಿ ಹೊಸ ಪೀಳಿಗೆಗೆ ಹೊಸ ಗ್ಯಾಡ್ಜೆಟ್ಟುಗಳನ್ನು ತಂದು ಮಾರುಕಟ್ಟೆಯಲ್ಲಿ ಕ್ರಾಂತಿ ಮಾಡಿಬಿಟ್ಟಿತು. ಬಳಸಲು ಸುಲಭ ಹಾಗು ಅತ್ಯುತ್ತಮವನ್ನಾಗಿಸುವ ಚೆಂದದ ಡಿಸೈನು ಹೊಂದಿರುವ ಈ ಕಂಪೆನಿಯ ಸರಿಸುಮಾರು ಎಲ್ಲ ಉಪಕರಣಗಳು ಅದರದ್ದೇ ಆದ ಅಭಿಮಾನಿಗಳನ್ನು ಕಂಡುಕೊಂಡಿತು. ಮಾರುಕಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ಉಪಕರಣಗಳಲ್ಲಿ ಆಪಲ್ ಕಂಪೆನಿಯದ್ದು ಅಗ್ರಶ್ರೇಣಿ. ಐ ಫೋನ್ ಒಂದೇ ಸುಮಾರು ಇಪತ್ತೊಂದು ಮಿಲಿಯನ್ ಸೆಟ್ಟುಗಳಿಗಿಂತ ಹೆಚ್ಚು ಖರ್ಚಾಗಿವೆಯಂತೆ. ಐ ಫೋನಿನ ಎಲ್ ಸಿ ಡಿ ಪರದೆ ಟಚ್ ಸ್ಕ್ರೀನ್ - ಅಂದರೆ ಬೆರಳಿನಲ್ಲಿ ಮೃದುವಾಗಿ ಮುಟ್ಟಿದರೆ ಸಾಕು - ಬಟನ್ನುಗಳನ್ನು ಒತ್ತುವ ಪ್ರಮೇಯವೇ ಇಲ್ಲ. ಇದಲ್ಲದೆ ಮಲ್ಟಿ ಟಚ್ ಸವಲತ್ತು ಕೂಡ ಲಭ್ಯ.
ಆಂಡ್ರಾಯ್ಡ್
ಗೂಗಲ್ ಎಂದಿನಂತೆ ಎಲ್ಲ ಕಂಪೆನಿಗಳಿಗಿಂತ ಭಿನ್ನವಾದ ದಾರಿ ಹಿಡಿದು ಸ್ಮಾರ್ಟ್ ಫೋನುಗಳ ಜಗತ್ತಿಗೆ ತನ್ನಡೇ ರೀತಿಯಲ್ಲಿ ಪ್ರವೇಶಿಸಿತು. ಗೂಗಲ್ ಆಂಡ್ರಾಯ್ಡ್ ಎನ್ನುವುದು ಒಂದು ಆಪರೇಟಿಂಗ್ ಸಿಸ್ಟಮ್. ಇದು ನೇರ ಮಾರುಕಟ್ಟೆಯಲ್ಲಿ ಮಾರಾಟವಾಗುವ ಮೊಬೈಲ್ ಫೋನುಗಳಿಗೆ ಜೀವ ಒದಗಿಸುವ ತಂತ್ರಾಂಶ ಮಾತ್ರ. ಈ ತಂತ್ರಾಂಶ ಮುಕ್ತ ತಂತ್ರಾಂಶ ಕೂಡ ಹೌದು. ಗೂಗಲ್ ನ ಆಂಡ್ರಾಯ್ಡ್ ತಂತ್ರಾಂಶದ ಸೌರ್ಸ್ ಕೋಡ್ (ಆಕರ) ಮುಕ್ತವಾಗಿ ಲಭ್ಯ. ಜಗತ್ತಿನಾದ್ಯಂತ ಹಲವು ಕಂಪೆನಿಗಳು ಆಂಡ್ರಾಯ್ಡ್ ಆಧರಿಸಿದ ಮೊಬೈಲ್ ಫೋನುಗಳನ್ನು ಹೊರತಂದಿವೆ. ಎಲ್ ಜಿ, ಸ್ಯಾಮ್ಸಂಗ್, ಎಚ್ ಟಿ ಸಿ ಮುಂತಾದ ಕಂಪೆನಿಗಳು ಮಂಚೂಣಿಯಲ್ಲಿವೆ. ಗೂಗಲ್ ಸ್ವತಃ ಎಚ್ ಟಿ ಸಿ ಕಂಪೆನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡು ಐಫೋನ್ ಸವಲತ್ತುಗಳನ್ನು ಹೋಲುವಂತೆ ಹೊರತಂದಿರುವ ಮೊಬೈಲ್ ಫೋನ್ 'ಗೂಗಲ್ ನೆಕ್ಸಸ್'. ಈ ಉಪಕರಣ ಹೊರಬಂದ ಕೆಲವೇ ದಿನಗಳಲ್ಲಿ ಜಗತ್ತಿನಾದ್ಯಂತ ಸಾಕಷ್ಟು ಸುದ್ದಿ ಮಾಡಿದ್ದುಂಟು.
ಮೊಬೈಲ್ ಫೋನಿನಲ್ಲಿ ಇಡಿಯ ಜ್ಞಾನ ಜಗತ್ತು ಹಿಡಿದು ತಿರುಗಾಡಬಹುದಾದ ಸಾಧ್ಯತೆ ಗೂಗಲ್ ಆಂಡ್ರಾಯ್ಡ್ ಒದಗಿಸುತ್ತದೆ. ಕೂತಲ್ಲೆ ನಕ್ಷೆ, ದಾರಿ ಸೂಚಕಗಳು ಸಿಗುತ್ತವಷ್ಟೇ ಅಲ್ಲದೆ ಮೊಬೈಲಿನಲ್ಲಿಯೇ ಪುಸ್ತಕಗಳು, ವಿಕಿಪೀಡಿಯ ಮುಂತಾದವುಗಳನ್ನು ವೀಕ್ಷಿಸಬಹುದು. ಮಾತನಾಡಿದ್ದನ್ನು ರೆಕಾರ್ಡ್ ಮಾಡಬಹುದು, ರೆಕಾರ್ಡ್ ಮಾಡಿದ್ದನ್ನು ಬರೆದಿಟ್ಟುಕೊಳ್ಳುವ ತಂತ್ರಾಂಶ ಕೂಡ ಉಂಟು. ಫೋನಿನಲ್ಲಿ ಮಾತನಾಡಿ ಹೇಳಿದರೆ ಸಾಕು
ಹೇಳಿದ್ದನ್ನು ಬರೆದಿಟ್ಟುಕೊಂಡು ಗೂಗಲ್ ಸರ್ಚ್ ವ್ಯವಸ್ಥೆಯಲ್ಲಿ ಹುಡುಕಿಕೊಡಬಲ್ಲ ಸೌಲಭ್ಯ ಕೂಡ ಉಂಟು!
ಗೂಗಲ್ ಗಾಗಲ್ಸ್
ಗೂಗಲ್ ಇತ್ತೀಚೆಗೆ ಹೊರತಂದ ಮತ್ತೊಂದು ಕುತೂಹಲ ಕೆರಳಿಸುವ ತಂತ್ರಜ್ಞಾನ - ಗೂಗಲ್ ಗಾಗಲ್ಸ್. ಮೊಬೈಲ್ ಫೋನು ಹಿಡಿದು ಚಿತ್ರ ತೆಗೆದರೆ ಸಾಕು ಚಿತ್ರವನ್ನೇ ಓದಿಕೊಂಡು, ಗುರುತುಹಿಡಿದು ಸರ್ಚ್ ಮಾಡಲು ಪ್ರಯತ್ನಿಸುತ್ತದೆ. ಇನ್ನೂ ಅಭಿವೃದ್ಧಿಪಡಿಸಲಾಗುತ್ತಿರುವ ಈ ತಂತ್ರಜ್ಞಾನ ಸದ್ಯಕ್ಕೆ ಪುಸ್ತಕಗಳ ಮುಖಪುಟ, ಬ್ಯಾನರುಗಳು, ಕಂಪೆನಿಗಳ ಲೋಗೋ - ಇವುಗಳನ್ನು ಏನೂ ತಪ್ಪಿಲ್ಲದೆ ಗುರುತುಹಿಡಿದು
ಓದಿಕೊಂಡು ಮಾಹಿತಿ ಒದಗಿಸಬಲ್ಲುದು (ಸರ್ಚ್ ವ್ಯವಸ್ಥೆ ಮೂಲಕ). ಹಲವು ಜಗತ್ಪ್ರಸಿದ್ಧ ಸ್ಥಳಗಳನ್ನು, ಜಗತ್ಪ್ರಸಿದ್ಧ ಕಲಾಕೃತಿಗಳನ್ನು ಕೂಡ ಚಿತ್ರಗಳಿಂದಲೇ ಗುರುತುಹಿಡಿಯುತ್ತದೆ, ಮುಂಬರುವ ದಿನಗಳಲ್ಲಿ ಈ ತಂತ್ರಾಂಶ ಜನಪ್ರಿಯ ಮುಖಗಳನ್ನು ಗುರುತಿಸುವಷ್ಟು ಜಾಣತನ ತೋರಿಸಿದರೂ ಆಶ್ಚರ್ಯವಿಲ್ಲ. ಫೋಟೋ ಹೊಡೆದು ಇಡಿಯ ಬಯಾಗ್ರಫಿ ಹೊರತೆಗೆದುಬಿಡಬಹುದು!
ಈಗಿನಂತೆ ಇದು ಗೂಗಲ್ ಆಂಡ್ರಾಯ್ಡ್ ಮೊಬೈಲ್ ಫೋನಿನಲ್ಲಿ ಮಾತ್ರ ಲಭ್ಯ.
2G ಮತ್ತು 3G
ಈಗಿರುವ ಜಿ ಎಸ್ ಎಮ್ ಹಾಗು ಸಿ ಡಿ ಎಂ ಎ ನೆಟ್ವರ್ಕ್ ಎರಡನೇ ತಲೆಮಾರು ಅಥವ 2G. ಇದಕ್ಕಿಂತ ಹೊಸ ತಲೆಮಾರಿನ ನೆಟ್ವರ್ಕ್ ಅಥವ 3G (Third generation) ಭಾರತಕ್ಕೆ ಇತ್ತೀಚೆಗೆ ಕಾಲಿಟ್ಟಿದೆ. ಸರಕಾರ ಟೆಲಿಕಾಂ ಕಂಪೆನಿಗಳಿಗೆ ಮೀಸಲಿಟ್ಟಿರುವ ಸ್ಪೆಕ್ಟ್ರಂ ಭಾರತದಲ್ಲಿ ವ್ಯವಹರಿಸುತ್ತಿರುವ ಹಲವಾರು ಟೆಲಿಕಾಂ ಕಂಪೆನಿಗಳಿಗೆ ತೀರ ಕಡಿಮೆಯಂತೆ. ಇರುವಷ್ಟನ್ನು ಸರಕಾರ ಹರಾಜಿಗೆ ಹಾಕಲಿದೆ. ಹೆಚ್ಚು ಬೇಡಿಕೆ ಇರುವುದರಿಂದ
ಈ ಹರಾಜಿನಲ್ಲಿ ಘಟಾನುಘಟಿಗಳು ಹಣದ ಹೊಳೆ ಸುರಿಸಲಿದ್ದಾರೆ ಎಂಬುದು ಸುದ್ದಿ. ಅದೇನೆ ಇರಲಿ, 3G ವ್ಯವಸ್ಥೆ ಎಲ್ಲೆಡೆ ಲಭ್ಯವಾಗುತ್ತ ಹೋದಂತೆ ಸ್ಮಾರ್ಟ್ ಫೋನುಗಳಲ್ಲೂ ವೇಗದ ಇಂಟರ್ನೆಟ್ ಸವಲತ್ತು ಲಭ್ಯವಾಗಲಿದೆ. ಇಂಟರ್ನೆಟ್ ವ್ಯವಸ್ಥೆ ಕೂಡ ಸುಧಾರಣೆಗೊಳ್ಳಲಿದೆ.
ಸ್ಮಾರ್ಟ್ ಫೋನುಗಳಲ್ಲಿ ಕನ್ನಡ
ಮೊಬೈಲ್ ಫೋನುಗಳಲ್ಲಿ ಇಂಗ್ಲೀಷ್ ಬಳಸಿದಂತೆಯೇ ಕನ್ನಡವನ್ನೂ ಬಳಸುವ ಎಲ್ಲ ಸಾಧ್ಯತೆಗಳಿವೆ. ಆದರೆ ಪೂರ್ಣ ಪ್ರಮಾಣದಲ್ಲಿ ಇದು ಸಾಧ್ಯವಾಗಲು ಕನ್ನಡ ಭಾಷೆಯ ಬಳಕೆಗೆ ಅನುಗುಣವಾದ ಸವಲತ್ತುಗಳು ಮೊಬೈಲ್ ಫೋನಿನ ತಂತ್ರಾಂಶದಲ್ಲಿ ಇರಲೇಬೇಕು. ಮೊಬೈಲ್ ಫೋನಿನ ಫರ್ಮ್ವೇರ್ ಅಥವ ಆಪರೇಟಿಂಗ್ ಸಿಸ್ಟಮಿನಲ್ಲಿ ಕನ್ನಡ ಭಾಷೆಗೆ ಸೂಕ್ತ ಬೆಂಬಲ ಒದಗಿಸುವ ವಿಸ್ತರಣೆ ಇರಬೇಕು. ಸ್ಮಾರ್ಟ್ ಫೋನುಗಳಲ್ಲಿ ಇದು ಸಾಧ್ಯವಿದೆ. ಭಾರತೀಯ ಭಾಷೆಗಳನ್ನು ಸ್ಮಾರ್ಟ್ ಫೋನುಗಳಲ್ಲಿ ಅಳವಡಿಸಲು ಹಲವು ಪ್ರಯತ್ನಗಳು ನಡೆದಿವೆ. ಕನ್ನಡದಲ್ಲಿ ಮಾತನಾಡಿದ್ದನ್ನು ಫೋನು ಅರ್ಥ ಮಾಡಿಕೊಂಡು ನೇರ ಬರೆದಿಟ್ಟುಕೊಳ್ಳುವ ವ್ಯವಸ್ಥೆ ಬಂದರೆ
ಅದೆಷ್ಟು ಚೆಂದ! ಕರ್ನಾಟಕದಲ್ಲಿ ಓದಿ ಬೆಳೆದ ಇಂಜಿನೀಯರುಗಳು ತಮ್ಮ ಬಿಡುವಿನ ಸಮಯದಲ್ಲಿ ಇತ್ತ ಗಮನ ಹರಿಸಿದರೂ ಸಾಕು, ಸಂಪೂರ್ಣ ಕನ್ನಡದಲ್ಲಿ ಮೊಬೈಲ್ ಫೋನು ಲಭ್ಯವಾಗುವ ದಿನ ದೂರವಿಲ್ಲ.