ಮೋಕ್ಷಗಾಣದ ಅಕ್ರಮ ಗಣಿಗಾರಿಕೆ

ಮೋಕ್ಷಗಾಣದ ಅಕ್ರಮ ಗಣಿಗಾರಿಕೆ

ರಾಜ್ಯ ಸರ್ಕಾರ ಇನ್ನೂ ಬಳ್ಳಾರಿ ಅಕ್ರಮ ಗಣಿಕಾರಿಕೆಯ ಪೆಡಂಭೂತದಿಂದ ಪಾರಾಗಿಲ್ಲ. ಅದಿರು ರಫ್ತು ಮುಂದುವರೆಸಲು ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುಮತಿ ನೀಡಿ ಬಹಳ ದಿನಗಳೇ ಆಯಿತು. ಆದರೂ ರಾಜ್ಯ ಸರ್ಕಾರಕ್ಕೆ ಪ್ರಸ್ತುತ ರಫ್ತಿನ ಮೇಲಿರುವ ನಿರ್ಭಂಧ ತೆರವುಗೊಳಿಸಲು ಸಾಧ್ಯವಾಗಿಲ್ಲ. ಈ ನಿರಾಸಕ್ತಿಗೆ ಕಾರಣಗಳೇನು ಎಂಬುದೂ ಗಂಭೀರ ಸಂಗತಿ.

ಕಳೆದ ಒಂದೂವರೆ ದಶಕಗಳ ಅವಧಿಯಲ್ಲಿ ರಾಜ್ಯ ರಾಜಕಾರಣಕ್ಕೆ ಅಂಟಿದ ಗಣಿ ಧೂಳು ಕಡಿಮೆಯೇನಲ್ಲ. ಆಡಳಿತಾರೂಢ ಪಕ್ಷಗಳ ನಾಯಕರನ್ನು ನಿದ್ದೆಯಲ್ಲಿಯೂ ಕಾಡಿ ಕೊನೆಗೆ ಸರ್ಕಾರಗಳನ್ನೇ ಈ ಧೂಳು ನುಂಗಿ ಹಾಕಿದ್ದು ಕರಾಳ ಇತಿಹಾಸ. ಬಳ್ಳಾರಿ ಗಣಿಗಾರಿಕೆ ಚಟುವಟಿಕೆಗಳ ಮೇಲೆ ರಾಜ್ಯದ  ಪ್ರಭಾವಶಾಲಿ ರಾಜಕಾರಣಿಗಳ ಕಾಕದೃಷ್ಟಿ ಬಿದ್ದು ಭರ್ಜರಿ ವ್ಯಾಪಾರ-ವ್ಯವಹಾರ ಶುರುವಾಯಿತೋ ಅಂದಿನಿಂದಲೇ ರಾಜ್ಯದ ಸಕ್ರಮ ಗಣಿಗಾರಿಕೆಗೆ ರಾಹು ಗ್ರಹಣ ಹಿಡಿಯಿತು. ಅರ್ಥಾತ್ ಎರಡು ದಶಕಗಳಾದರೂ ಗಣಿಗಾರಿಕೆಯ ಅಂದು ಹಿಡಿದ ಈ ಗ್ರಹಣ ಇಂದಿಗೂ ಬಿಟ್ಟಿಲ್ಲ. ! ಅಕ್ರಮ ಗಣಿಗಾರಿಕೆ ಮೇಲೆ ರಾಜ್ಯದಲ್ಲಿ ಇದುವರೆಗೆ ಎರಡು ಪ್ರಮುಖ ತನಿಖೆಗಳಾಗಿವೆ. ಹಿಂದಿನ ಲೋಕಾಯುಕ್ತ ಸಂತೋಷ್ ಹೆಗ್ಡೆ ಸಮಗ್ರ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ನೀಡಿದ್ದರೂ ಅದು ಈವರೆಗೆ ಸಂಪೂರ್ಣವಾಗಿ ಅನುಷ್ಠಾನಗೊಂಡಿಲ್ಲ. ಎರಡನೆಯದಾಗಿ ಸುಪ್ರೀಂಕೋರ್ಟ್ ಮುಂದೆ ದಾಖಲಾದ ಸಾರ್ವಜನಿಕ ಹಿತಾಸಕ್ತಿ ರಿಟ್ ವಿಚಾರಣೆ ಮೇರೆಗೆ ಸಿಇಸಿ ನಡೆಸಿದ ಸಮಗ್ರ ತನಿಖೆ ಮತ್ತು ವರದಿ ನ್ಯಾಯಪೀಠದ ಮುಂದಿದ್ದರೂ ಅದರ ಪ್ರಕಾರ ಸುಧಾರಣೆ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರದ ಕೈಯಲ್ಲಿ ಇದುವರೆಗೆ ಆಗಿಲ್ಲ.

ಇದು ಹೇಗಾಗಿದೆ ಎಂದರೆ ನೆಗಡಿ ಬಂದಿದ್ದರಿಂದ ತಾನು ಮೂಗನ್ನೇ ಕತ್ತರಿಸಿಕೊಂಡಂತಾಗಿದೆ! ರಾಜ್ಯದಲ್ಲಿ ಶತಮಾನಗಳಿಂದಲೂ ಗಣಿಗಾರಿಕೆ ನಡೆದಿದೆ. ಮಿಗಿಲಾಗಿ ಇಲ್ಲಿನ ಕಬ್ಬಿಣದ ಅದಿರಿಗೆ ವಿದೇಶಗಳಲ್ಲಿ ಭಾರೀ ಪ್ರಮಾಣದ ಬೇಡಿಕೆಯೂ ಇದೆ. ಆದರೆ ಚೀನಾದಲ್ಲಿ ಯಾವಾಗ ಭಾರತದ ಅದಿರಿಗೆ ವಿಪರೀತವಾದ ಬೇಡಿಕೆ ಉಂಟಾಯಿತೋ, ಆಗ ರಾಜ್ಯದಲ್ಲಿ ಇದ್ದಕ್ಕಿದ್ದಂತೆ ಬಳ್ಳಾರಿ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ದಿಢೀರ್ ಆಗಿ ಅಕ್ರಮ ಗಣಿಗಳು ಮತ್ತದರ ಅಕ್ರಮ ಚಟುವಟಿಕೆಗಳೂ ವ್ಯಾಪಕವಾಗಿ ತಲೆಯಿತ್ತಿದವು. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಸಿಇಸಿ ಇಂತಹ ನೂರಾರು ಗಣಿಗಳ ಸಮಗ್ರ ತನಿಖೆ ನಡೆಸಿದಾಗ, ಇಡೀ ದೇಶವೇ ಬೆಚ್ಚಿ ಬೀಳುವಂತಹ ಅಕ್ರಮಗಳ ಸರಣಿಯೇ ಸ್ಫೋಟಗೊಂಡಿತು. ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಯಿಂದ ಬೊಕ್ಕಸಕ್ಕೆ ಹಾನಿಯಾಗಿರುವುದಂತೂ ವಾಸ್ತವ. ಆದರೆ ಸಕ್ರಮ ಮಾರ್ಗದಲ್ಲಿ ಗಣಿಗಾರಿಕೆ ಚಟುವಟಿಕೆಗಳನ್ನು ಮುಂದುವರೆಸಲು ಯಾವ ಕಾನೂನಿನ ಅಡ್ಡಿಯೂ ಇಲ್ಲ. ಆದರೆ ರಾಜ್ಯದ ಗಣಿ ಪ್ರದೇಶಗಳಲ್ಲಿ ಮರುವಸತಿ ಮತ್ತು ಹಸಿರು ಪುನಶ್ಚೇತನ ಯೋಜನೆಗಳನ್ನು ಸರಿಯಾಗಿ ಕೈಗೆತ್ತಿಕೊಳ್ಳದಿರೋದು ರಾಜ್ಯ ಸರ್ಕಾರದ ಲೋಪವೇ ಸರಿ. ಪರಿಸರ ನಿಯಮಗಳನ್ನು ಕಾಪಾಡಿಕೊಂಡು ಬರುವ ಬೆನ್ನಹಿಂದೆಯೇ ಸುರಕ್ಷಿತ ಗಣಿಗಾರಿಕೆಯ ಸೂತ್ರಗಳನ್ನು ಬಲವಾಗಿ ಪಾಲಿಸಿ ಒಡಿಶಾ ರಾಜ್ಯವು ಖನಿಜ ಬಳಕೆಯಲ್ಲಿ ಇಡೀ ದೇಶಕ್ಕೆ ಮಾದರಿಯಾಗಿದೆ. ಇಂತಹ ಮಾದರಿ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಇಲ್ಲದಿರುವುದು ದುರದೃಷ್ಟಕರ.

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೨೦-೦೪-೨೦೨೨ 

ಚಿತ್ರ ಕೃಪೆ: ಅಂತರ್ಜಾಲ ತಾಣ