ಮೋಟಾರ್ ಸೈಕಲ್ ನಲ್ಲಿ ಮಕ್ಕಳಿಗೆ ಹೆಲ್ಮೆಟ್ : ಪರಾಮರ್ಶೆ ಅಗತ್ಯ

ಮೋಟಾರ್ ಸೈಕಲ್ ನಲ್ಲಿ ಮಕ್ಕಳಿಗೆ ಹೆಲ್ಮೆಟ್ : ಪರಾಮರ್ಶೆ ಅಗತ್ಯ

ಸರಕಾರ ರೂಪಿಸಲು ನಿಯಮಗಳು ಸರ್ವ ಮನ್ನಣೆ ಪಡೆಯುವಂತಿರಬೇಕು. ಇಲ್ಲವಾದಲ್ಲಿ ಒಂದಷ್ಟು ಪರಾಮರ್ಶೆ ನಡೆಸಿ ನಿಯಮ ಜಾರಿ ಮಾಡಬೇಕು. ಇದೀಗ ಕೇಂದ್ರ ಸರಕಾರ ಜಾರಿಗೆ ತಂದಿರುವ ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ ಎಂಬ ನಿಯಮ ವಿವಾದಕ್ಕೆ ಕಾರಣವಾಗಿದೆ. ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಹೆಲ್ಮೆಟ್ ಹಾಕುವುದು ಸಾಧ್ಯವೇ? ಎಂಬ ಪ್ರಶ್ನೆ ಸಾರ್ವಜನಿಕರ ವಲಯದಲ್ಲಿ ಮೂಡಿದೆ. ದೇಶದಲ್ಲಿ ನಡೆಯುವ ಅಪಘಾತಗಳ ಪೈಕಿ ಅತಿ ಹೆಚ್ಚಿನ ಸಾವಾಗುವುದು ಹೆಲ್ಮೆಟ್ ರಹಿತ ಪ್ರಯಾಣದಿಂದ ಎಂಬ ಅಂಕಿ-ಅಂಶಗಳಿವೆ. ಅಪಘಾತ ಸಂದರ್ಭದಲ್ಲಿ ದ್ವಿಚಕ್ರ ವಾಹನಗಳ ಮೇಲಿದ್ದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ, ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯ ಮಾಡಬೇಕು ಎಂಬುದು ಸರಕಾರದ ವಾದ. ಸರಕಾರದ ವಾದವೇನೂ ಸರಿ, ಆದರೆ, ಈ ವಯಸ್ಸಿನ ಮಕ್ಕಳು ಹೆಲ್ಮೆಟ್ ಧರಿಸಿ ಪ್ರಯಾಣ ಮಾಡಲು ಸಾಧ್ಯವೇ? ಮಕ್ಕಳು ತಲೆಯ ಮೇಲೆ ಹೆಲ್ಮೆಟ್ ನಂತಹ ಭಾರ ಹೊತ್ತು ಪ್ರಯಾಣದಲ್ಲಿ ಕೂರುವುದು ಸಾಧ್ಯವೇ? ಆ ಕಿರಿಕಿರಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ತಂದೆ ತಾಯಿಯ ವಾಹನ ಚಾಲನೆಗೆ ಅಡ್ಡಿಯನ್ನುಂಟು ಮಾಡುವುದಿಲ್ಲವೇ? ಇದರಿಂದಾಗಿ ಅಪಘಾತಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವುದಿಲ್ಲವೇ? ಎಂಬುದು ಸಾರ್ವಜನಿಕ ವಲಯದಲ್ಲಿ ಮೂಡಿಬರುತ್ತಿರುವ ಪ್ರಶ್ನೆಗಳು. ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಮೋಟಾರ್ ಸೈಕಲ್ ನಲ್ಲಿ ಮಕ್ಕಳು ಪ್ರಯಾಣಿಸುವಾಗ ಅಥವಾ ಕರೆದೊಯ್ಯುವಾಗ ಹೆಲ್ಮೆಟ್, ರಕ್ಷಾಕವಚ ಕಡ್ಡಾಯವಾಗಿದೆ ಎಂದು ತಿಳಿಸಿದೆ. ಈ ಸುರಕ್ಷತಾ ಕ್ರಮಗಳ ಜೊತೆಗೆ ಮಕ್ಕಳನ್ನು ಕರೆದೊಯ್ಯುವಾಗ ಮೋಟಾರ್ ಸೈಕಲ್ ವೇಗ ಗಂಟೆಗೆ ೪೦ ಕಿ.ಮೀ. ಗಿಂತ ಹೆಚ್ಚು ಇರುವಂತಿಲ್ಲ. ರಕ್ಷಾ ಕವಚವನ್ನು ಮಗುವಿಗೆ ಧರಿಸಿರಬೇಕು ಹಾಗೂ ಅದಕ್ಕೆ ಜತೆಯಾಗುವ ಪಟ್ಟಿಯನ್ನು ವಾಹನ ಚಾಲನೆ ಮಾಡುವ ವ್ಯಕ್ತಿಯ ಭುಜದ ಮೇಲಿನಿಂದ ಧರಿಸಬೇಕು. ಈ ಮೂಲಕ ಮಗುವಿನ ತಲೆಯ ಕೆಳಗಿನ ದೇಹದ ಭಾಗವು ಸುರಕ್ಷಿತವಾಗಿ ಚಾಲಕನೊಂದಿಗೆ ಜತೆಯಾಗಿರಬೇಕು. ಮಕ್ಕಳ ಸುರಕ್ಷತೆಗೆ ಬಳಸುವ ಹೆಲ್ಮೆಟ್, ಸುರಕ್ಷತಾ ಕವಚಗಳು ಹಗುರವಾಗಿರಬೇಕು. ಹೊಂದಿಸಿಕೊಳ್ಳುವಂತಿರಬೇಕು. ಜಲ ನಿರೋಧಕವಾಗಿರಬೇಕು ಹಾಗೂ ಬಾಳಿಕೆ ಬರುವಂತಿರಬೇಕು ಎಂದು ಸಚಿವಾಲಯವು ತಿಳಿಸಿದೆ.

ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ. ೧೮-೦೨-೨೦೨೨

ಚಿತ್ರ ಕೃಪೆ: ಇಂಟರ್ನೆಟ್ ತಾಣ