ಮೋಡಗಳ ಸುಳಿಯಲ್ಲಿ ಹುಚ್ಚು ಕಲ್ಪನೆಗಳು...
ಮುದ್ದೆ, ಸೊಪ್ಪಿನ ಸಾರು, ಹುರಿದ ಕೋಳಿ ಮಾಂಸದ ತುಂಡುಗಳು, ಅನ್ನ, ಒಂದು ಲೋಟದಲ್ಲಿ ಜೀರಿಗೆ ಮೆಣಸಿನ ರಸಂ ಇಷ್ಟನ್ನು ಬಾಳೆ ಎಲೆಯಲ್ಲಿ ಬಡಿಸಿಕೊಂಡು ತೋಟದ ಮನೆಯ ಮಹಡಿಯಲ್ಲಿ ಹುಣ್ಣಿಮೆಯ ರಾತ್ರಿ ಊಟ ಮಾಡುತ್ತಿರುವಾಗ ಹಲವಾರು ಯೋಚನೆಗಳು ಮನದಲ್ಲಿ ಸುಳಿಯತೊಡಗಿದವು. ಬೇಸಿಗೆಯ ಸೆಖೆಯ ನೆಪದಲ್ಲಿ ಮುಸುಕಿನ ಜೋಳದ ಬೆಳೆಯ ಕಾವಲಿಗೆ ಖುದ್ದು ನಾನೇ ಕೆಲವು ದಿನಗಳಿಂದ ಈ ಕೆಲಸ ಮಾಡುತ್ತಿದ್ದೇನೆ.
ಪ್ರತಿ ತುತ್ತು ತಿನ್ನುವಾಗಲೂ ಆಕಾಶವನ್ನೇ ದಿಟ್ಟಿಸುತ್ತೇನೆ. ಚಂದ್ರನ ಬೆಳದಿಂಗಳ ನಡುವೆ ಆಗಾಗ ಮೋಡಗಳ ನೆರಳು ಬೆಳಕಿನಾಟ. ಚಿತ್ರ ವಿಚಿತ್ರ ರೀತಿಯ ದೃಶ್ಯಗಳು ಆಕಾಶದಲ್ಲಿ ಮೂಡುತ್ತಿದ್ದವು. ಧ್ಯಾನಸ್ಥ ಬುದ್ದನ ಆಕಾರದ ಮೋಡವೊಂದು ಉತ್ತರ ದಿಕ್ಕಿನಿಂದ ಚಲಿಸುತ್ತಿತ್ತು. ಹಿಂದೆಯೇ ಪುಟ್ಟ ಪುಟ್ಟ ಹಲವಾರು ಮೋಡಗಳು ಅದನ್ನು ಅಟ್ಟಿಸಿಕೊಂಡು ಬರುತ್ತಿದ್ದವು. ಬುದ್ದ ಮೋಡ ಓಡುತ್ತಲೇ ಇತ್ತು. ಇನ್ನೂ ಕೆಲವು ಮೋಡಗಳು ಹೆಚ್ಚು ಹೆಚ್ಚು ಶೇಖರಣೆ ಆಗುತ್ತಿದ್ದಂತೆ ಬುದ್ದ ಮೋಡ ಓಡುತ್ತಾ ಓಡುತ್ತಾ ಎತ್ತಲೋ ಮರೆಯಾಯಿತು.
ಊಟ ಮುಗಿಸಿ ಮಹಡಿಯ ಒಂದು ಮೂಲೆಗೆ ಬಂದು ನಿಂತು ದಕ್ಷಿಣದತ್ತ ದಿಟ್ಟಿಸಿದೆ. ಬಸವಣ್ಣನವರದೇ ಪ್ರತಿರೂಪದಂತ ಮೋಡವೊಂದು ವೇಗವಾಗಿ ಚಲಿಸುತ್ತಿತ್ತು. ಹಿಂದೆಯೇ ಕಪ್ಪಗಿನ ಸಣ್ಣ ಸಣ್ಣ ಮೋಡಗಳು ಅದನ್ನು ಹಿಡಿಯಲು ಧಾವಿಸುತ್ತಿದ್ದವು. ಗಾಳಿಯ ಒತ್ತಡಕ್ಕೋ ಏನೋ ಬಸವಣ್ಣನೆಂಬ ಮೋಡ ಗಾಬರಿಯಾಗಿ ಪಕ್ಕಕ್ಕೆ ಸರಿಯಿತು. ಈ ಸಣ್ಣ ಮೋಡಗಳು ಯುದ್ದ ಗೆದ್ದಂತೆ ಬಸವಣ್ಣನೆಂಬ ಮೋಡವನ್ನು ನಿರ್ಲಕ್ಷಿಸಿ ಮುಂದಕ್ಕೆ ಸಾಗಿದವು. ಯಾಕೋ ಬೇಸರವಾಗಿ ಅಲ್ಲಿಯೇ ಚಾಪೆಯ ಮೇಲೆ ಕುಳಿತು ಆಕಾಶದತ್ತ ಮುಖಮಾಡಿ ಪೂರ್ವ ದಿಕ್ಕಿನತ್ತ ನೋಡಿದೆ. ತಲೆಗೆ ರುಮಾಲು ಸುತ್ತಿದ ವಿವೇಕಾನಂದರಂತ ಮೋಡವೊಂದು ಬಿರಬಿರನೆ ಹೆಜ್ಜೆ ಹಾಕುತ್ತಿದ್ದಂತೆ ಭಾಸವಾಯಿತು. ಹಿಂದೆಯೇ ದೊಡ್ಡ ದೊಡ್ಡ ಬೆಳ್ಳನೆಯ ಮೋಡಗಳು ಅದನ್ನು ಸಮೀಪಿಸಿದವು. ನೋಡ ನೋಡುತ್ತಿದ್ದಂತೆ ವಿವೇಕಾನಂದರೆಂಬ ಮೋಡವನ್ನು ಸುತ್ತುವರೆದು ಅದು ಕಾಣದಂತೆ ಸಂಪೂರ್ಣ ತಮ್ಮಲ್ಲಿ ಐಕ್ಯಗೊಳಿಸಿಕೊಂಡವು.
ಸ್ವಲ್ಪ ನಿದ್ದೆಯ ಮಂಪರು ಬಂದಂತಾಗಿ ದಿಂಬಿಗೆ ತಲೆಕೊಟ್ಟು ನೇರವಾಗಿ ಆಕಾಶವನ್ನೇ ದಿಟ್ಟಿಸಿದೆ. ಬೋಡು ತಲೆಯ ಆಕಾರದ ತೆಳ್ಳಗಿನ ಗಾಂಧಿಯಂತೆ ಕಾಣುವ ಮೋಡವೊಂದು ಏನನ್ನೂ ಗುನುಗುತ್ತಾ ನಿಧಾನವಾಗಿ ಚಲಿಸುತ್ತಿತ್ತು. ಮೊದಲು ಅದರ ಸುತ್ತ ಮುತ್ತ ಯಾವ ಮೋಡಗಳು ಇರಲಿಲ್ಲ. ಆದರೆ ಗಾಳಿಯ ವೇಗ ಹೆಚ್ಚಾದಂತೆ ಎಲ್ಲಿಂದಲೋ ದಟ್ಟವಾದ ಮೋಡಗಳ ರಾಶಿಯೊಂದು ಜೋರಾಗಿ ಧಾವಿಸಿತು. ಅದರ ವೇಗಕ್ಕೆ ಈ ತೆಳ್ಳಗಿನ ಗಾಂಧಿ ಮೋಡ ಸರಿಯಾಟಿಯಾಗಲೇ ಇಲ್ಲ. ಮೋಡಗಳ ಆ ರಾಶಿಯ ವೇಗಕ್ಕೆ ಸಾಟಿಯಾಗದೆ ಅದರ ಹಿಂದೆ ಬಿದ್ದು ಬಹುತೇಕ ನನ್ನ ಕಣ್ಣಿನಿಂದಲೇ ಮರೆಯಾಯಿತು. ಮನಸ್ಸಿಗೆ ತುಂಬಾ ನೋವಾದಂತಾಯಿತು. ಕಣ್ಣಿನಲ್ಲಿ ನೀರಾಡಿತು. ಪಕ್ಕಕ್ಕೆ ತಿರುಗಿ ಪಶ್ಚಿಮದತ್ತ ನೋಡಿದೆ.
ಕಣ್ಣಿಗೆ ಕನ್ನಡದ ಧರಿಸಿದ ಕೈಯಲ್ಲಿ ಪುಸ್ತಕ ಹಿಡಿದ ಸೂಟುಬೂಟಿನ ಅಂಬೇಡ್ಕರ್ ಆಕೃತಿ ಹೋಲುವ ಮೋಡವೊಂದು ಘನ ಗಾಂಭೀರ್ಯದಿಂದ ಚಲಿಸುತ್ತಿತ್ತು. ಅದರ ಹಿಂದೆ ಗುಂಪು ಗುಂಪಾಗಿ ಹಲವು ಮೋಡಗಳು ವಿಚಿತ್ರ ರೀತಿಯಲ್ಲಿ ಹಿಂಬಾಲಿಸುತ್ತಿದ್ದವು. ಸ್ವಲ್ಪ ಹೊತ್ತಿನಲ್ಲೇ ಆಶ್ಚರ್ಯಕರವಾದ ದೃಶ್ಯ ಕಾಣಿಸಿತು. ಗಾಳಿಯ ಒತ್ತಡದ ಪರಿಣಾಮವೋ ಏನೋ ಇದ್ದಕ್ಕಿದ್ದಂತೆ ಅಂಬೇಡ್ಕರ್ ಆಕೃತಿಯ ಮೋಡದ ಚಲನೆ ನಿಂತಂತಾಯಿತು. ಇದನ್ನು ಗಮನಿಸಿದ ಅವರನ್ನು ಹಿಂಬಾಲಿಸುತ್ತಿದ್ದ ಮೋಡಗಳು ಸಹ ನಿಂತವು. ಕೆಲವು ಕ್ಷಣಗಳ ಬಳಿಕ ಆ ಒಂಟಿ ಮೋಡ ವಿರುದ್ಧ ದಿಕ್ಕಿನಲ್ಲಿ ಚಲಿಸತೊಡಗಿತು. ಇದನ್ನು ಗಮನಿಸಿದಂತೆ ಅವರನ್ನು ಹಿಂಬಾಲಿಸುತ್ತಿದ್ದ ಮೋಡಗಳು ಬೆದರಿ ಪರಾರಿಯಾದಂತೆ ಓಡ ತೊಡಗಿದವು, ಮತ್ತೆ ಗಾಳಿಯ ಒತ್ತಡ ಹೆಚ್ಚಾದಂತೆ ಅವು ತಿರುಗಿ ಬೀಳತೊಡಗಿದವು.
ಹುಚ್ಚು ಹುಚ್ಚು ಕನಸುಗಳು ಕಲ್ಪನೆಗಳು ಹುಚ್ಚುಚ್ಚಾಗಿ ಮನದಲ್ಲಿ ಸುಳಿದು ಅದು ಹುಚ್ಚು ಬರವಣಿಗೆಯಾಗಿ ಅಕ್ಷರದಲ್ಲಿ ಮೂಡಿ ಹುಚ್ಚನ ಸ್ವಾತಂತ್ರ್ಯದಂತೆ ನಾನೂ ಹುಚ್ಚನೇ ಆಗಿಬಿಟ್ಟಿದ್ದೇನೆ. ಹುಚ್ಚುತನದಲ್ಲೂ ಏನೋ ಸಂತೋಷ ಏನೋ ನೆಮ್ಮದಿ.
-ವಿವೇಕಾನಂದ. ಹೆಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ