ಮೋಡದಿಂದ ಜಾರಿಬಿದ್ದ ಹನಿ...

ಮೋಡದಿಂದ ಜಾರಿಬಿದ್ದ ಹನಿ...

ಕಾರ್ಮೋಡ ತುಂಬಿದ ಆಗಸ. ಅತ್ತಿಂದಿತ್ತ ಸುಳಿದಾಡುತ್ತಿದ್ದ ಮೋಡದ ರಾಶಿಯಿಂದ ಯಾವುದೋ ಕ್ರಿಯೆಗೆ ಪ್ರತಿಕ್ರಿಯೆ ರೂಪದಲ್ಲಿ ಮಳೆಯು ಹನಿ ರೂಪದಲ್ಲಿ ಭೂಮಿಯೆಡೆ ಧಾವಿಸುತ್ತಿದ್ದವು. ಕೆಲವು ಹನಿಗಳು ಕಲ್ಲು ಬಂಡೆಗಳ ಮೇಲೆ ಬಿದ್ದವು. ಪ್ರಯೋಜನ ರಹಿತವಾಗಿ ನಿಷ್ಟ್ರಯೋಜನಗೊಂಡವು. ಕೆಲವು ಹನಿಗಳು ಬಿಸಿ ಬರಡು ಭೂಮಿಯೊಳಗೆ ಹನಿದವು. ಕ್ಷಣಮಾತ್ರದಲ್ಲೇ ಆವಿಯಾದವು. ಕೆಲವು ಹನಿಗಳು ಮರಳರಾಶಿಯ ಮೇಲೆ ಬಿದ್ದವು. ಮರಳಿನೊಳಗೆ ಮರೆಯಾಯಿತು. ಕೆಲವು ಹನಿಗಳು ಮರದ ಎಲೆಗಳ ಮೇಲೆ ಬಿದ್ದವು . ಎಲೆಗಳ ಧೂಳು ಸ್ವಚ್ಛಗೊಂಡವು. ಕೆಲವು ಹನಿಗಳು ಬಾವಿಯೊಳಗೆ ಬಿದ್ದವು. ಇರುವ ನೀರಿನೊಡನೆ ಸೇರಿ ಅಲ್ಲೇ ನೆಲೆಯಾದವು. ಕೆಲವು ಹನಿಗಳು ಹರಿಯುವ ತೊರೆಯ ಮೇಲೆ ಬಿದ್ದವು. ತೊರೆಯ ನೀರಿನೊಡನೆ ಚಲನಶೀಲವಾಗಿ ಹಳ್ಳ-ಕೊಳ್ಳ ದಾಟಿ ನದಿಯನ್ನು ಸೇರಿ ವಿಶಾಲವಾಯಿತು. ಅಲ್ಲಿಯೂ ನಿಲ್ಲದೆ ಮುಂದೆ ಚಲಿಸುತ್ತಾ ಸಮುದ್ರ ಸೇರಿ ಮತ್ತೂ ವಿಶಾಲವಾಯಿತು. ಒಂದೇ ಮೂಲದಿಂದ ನೀರ ಹನಿ ಬಿದ್ದರೂ ಅದು ಬಿದ್ದ ಜಾಗದ ಮೇಲಿನ ಪ್ರಭಾವದಿಂದ ಉನ್ನತಿ - ಅವನತಿಯನ್ನು ಕಂಡಿತು. ಶೂನ್ಯದಿಂದ ವಿಶಾಲತೆಗೆ ತೆರೆಯಿತು. ಇದು ನೀರಹನಿಯ ಕಥೆ.

ಬದುಕಿನ ಆಲೋಚನೆಗಳ ಮೂಲ ಒಂದೇ ಆಗಿದೆ. ನಮ್ಮ ಮನದೊಳಗೆ ಮೂಡುವ ನೂರಾರು ಆಲೋಚನೆಗಳು ಕೂಡಾ ಹನಿಯ ರೂಪದಲ್ಲಿ ಮೂಡುತ್ತದೆ. ಆ ಯೋಚನೆಗಳು ಎಲ್ಲಿ ಬೀಳುತ್ತದೋ ಅದರ ಮೇಲೆ ಅವುಗಳ ಬೆಳವಣಿಗೆ ನಿರ್ಧಾರವಾಗುತ್ತದೆ. ಶುದ್ಧ ಚಿನ್ನವನ್ನು ಎಷ್ಟು ತೊಳೆದರೂ ಚಿನ್ನದ ಹೊಳಪೇ ನೀಡುತ್ತದೆ. ಆದರೆ ಲೇಪಿತ ಚಿನ್ನ (ರೊಲ್ಡ್ ಗೋಲ್ಡ್ ) ಚಿನ್ನದ ಲೇಪನ ಕಳೆದುಕೊಂಡ ಕ್ಷಣವೇ ತನ್ನ ಅಸ್ತಿತ್ವ ಕಳೆದುಕೊಂಡು ಕಳಾಹೀನವಾಗುತ್ತದೆ. ನಮ್ಮ ಆಲೋಚನೆಗಳು ಶುದ್ದವಾಗಿದ್ದರೆ ಎಂದಿಗೂ ಮೌಲ್ಯ ಕಳೆದುಕೊಳ್ಳುವುದಿಲ್ಲ. ನಕಲಿಯಾದರೆ ಎಂದಿಗೂ ನಕಲಿಯೇ. ಹಾಗಾಗಿ ನಮ್ಮ ಆಲೋಚನೆಗಳು ಬಂಡೆಯ ಮೇಲೋ... ಬರಡು ಭೂಮಿಯ ಮೇಲೋ... ಮರದ ಎಲೆಯ ಮೇಲೋ.. ಬಾವಿಯೊಳಗೋ... ಹರಿಯುವ ನೀರಿನ ಮೇಲೋ... ನಿರ್ಧರಿಸಬೇಕಾದವರು ಬೇರೆ ಯಾರೂ ಅಲ್ಲ... ನಾವೇ.... ಬರೀ ನಾವೇ....

ಆ ಧೃಡನಿರ್ಧಾರವು ವಿಶಾಲ ಸಾಗರದಲ್ಲಿ ಹನಿಯಾಗುವತ್ತ ಇದ್ದರೆ ಬದುಕು ಬಂಗಾರ. ಈ ಧನಾತ್ಮಕ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್...! ಏನಂತೀರಿ...?. 

-ಗೋಪಾಲಕೃಷ್ಣ ನೇರಳಕಟ್ಟೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ