ಮೋಡದೊಡನೆ ಮಾತುಕತೆ

ಮೋಡದೊಡನೆ ಮಾತುಕತೆ

ಪುಸ್ತಕದ ಲೇಖಕ/ಕವಿಯ ಹೆಸರು
ಅಕ್ಷರ ಕೆ.ವಿ
ಪ್ರಕಾಶಕರು
ಅಕ್ಷರ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ.೨೨೦.೦೦

‘ಮೋಡದೊಡನೆ ಮಾತುಕತೆ' ಈ ಪುಸ್ತಕವು ಹೊಸಗಾಲದ ಆಖ್ಯಾನ-ವ್ಯಾಖ್ಯಾನ ಸಮೇತ ಕಾಳಿದಾಸನ ‘ಮೇಘದೂತ'ದ ಕನ್ನಡ ಭಾವಾನುವಾದವಾಗಿದೆ. ಖ್ಯಾತ ಬರಹಗಾರರಾದ ಅಕ್ಷರ ಕೆ.ವಿ. ಇವರು ಬರೆದ ಪುಸ್ತಕಕ್ಕೆ ಡಾ. ಶ್ರೀರಾಮ ಭಟ್ ಇವರು ಹಿನ್ನುಡಿ ಬರೆದಿದ್ದಾರೆ. ಅಕ್ಷರ ಕೆ.ವಿ. ಅವರು ತಮ್ಮ ಮಾತಿನಲ್ಲಿ ಹೇಳುವುದು ಹೀಗೆ “ ಮೇಘದೂತ ಕಾವ್ಯವು ತನ್ನ ಹಿನ್ನಲೆಯಲ್ಲಿ ಇರಬಹುದಾದ ಸಾಮಾಜಿಕ-ಸಾಂಸ್ಕೃತಿಕ ನಿಲುವುಗಳನ್ನು ಅಡಗಿಸಿ ಇಟ್ಟುಕೊಂಡಿದೆ. ಮಾತ್ರವಲ್ಲ, ತನ್ನ ಕಾವ್ಯಸ್ವರೂಪದಿಂದಾಗಿ ಅಂಥ ಹಿನ್ನಲೆಗಳನ್ನು ಹುಡುಕಿ ತೆಗೆಯುವ ಆಧುನಿಕ ವಿಮರ್ಶಾಕ್ರಮಗಳಿಗೂ ಪ್ರತಿರೋಧಕವಾಗಿದೆ. ಆದರೆ, ಮೇಲ್ಕಂಡ ಉಲ್ಲೇಖವು ಇಂಥ ಪ್ರತಿರೋಧವನ್ನು ಉಲ್ಲಂಘಿಸಿ, ಮೇಘದೂತದಂಥ ‘ನಿರುದ್ಧಿಶ್ಯ ರಸಸೃಷ್ಟಿ'ಯ ಕಾವ್ಯದ ಒಳಗೂ ತನ್ನ ಕಾಲಕ್ಕೆ ಸಲ್ಲುವ ಒಂದು ಸಾಂಸ್ಕೃತಿಕ ಉಪಯುಕ್ತತೆಯನ್ನು ಹುಡುಕಿ ತೆಗೆಯುತ್ತದೆ. ಮೇಲಿನ ಮಾತು ಸೂಚಿಸುವಂತೆ, ಒಂದೂವರೆ ಸಹಸ್ರಮಾನದ ಬಳಿಕ ಬಂದ ಭಾರತದ ಇನ್ನೊಬ್ಬ ಮೇರುಕವಿಗೆ ಅದು ಸ್ವತಃ ತನ್ನ ಕಾಲದ ‘ಸಾಂಸ್ಕೃತಿಕ ವಿರಹ'ವೊಂದರ ಪರಿಹಾರಕ್ಕಾಗಿ ನಡೆಸಬಹುದಾದ ಯಾತ್ರೆಗೆ ಒಂದು ರೂಪಕವಾಗಿಬಿಟ್ಟಿದೆ !

ಈ ಉತ್ತರ ನಮಗೆ ಹೊಸ ದಾರಿ ತೋರಿಸಬೇಕು. ಹಳೆಗಾಲದ ಪಠ್ಯಗಳನ್ನು ನಮ್ಮ ಕಾಲದ ಒಂದೊಂದೂ ತಲೆಮಾರೂ ಹೀಗೇ ತನ್ನದೇ ಹುಡುಕಾಟದ ಅಂಗವಾಗಿ ಮರು ಆವಿಷ್ಕಾರ ಮಾಡಿಕೊಳ್ಳುವುದು ತುಂಬಾ ತುರ್ತಾಗಿ ನಡೆಯಬೇಕಾದ ಒಂದು ಸಾಂಸ್ಕೃತಿಕ ಅಗತ್ಯ ಎಂಬ ನಂಬುಗೆಯನ್ನು ಇದು ಉದ್ದೀಪಿಸಬೇಕು. ಹೀಗೆ ಮಾಡಿದರೆ ಸರಿಯೋ, ಹೀಗೆ ಮಾಡಿದರೆ ತಪ್ಪೋ ಎಂದೆಲ್ಲ ಚಿಂತಿಸುತ್ತ ಕೂರುವ ಬದಲು, ನಮ್ಮ ಅಂತರ್ಗತ ಪ್ರೇರಣೆಗಳಿಂದ ತಕ್ಷಣಕ್ಕೆ ನಮಗೆ ಸರಿಕಂಡಂತೆ ಇಂಥ ಪಠ್ಯಗಳನ್ನು ಜೀವಂತಗೊಳಿಸಿಕೊಳ್ಳುವ ಪ್ರಯೋಗಕ್ಕೆ ಈಗ ನಮ್ಮನ್ನು ನಾವು ಒಡ್ಡಿಕೊಳ್ಳುವ ಅಗತ್ಯವಿದೆ. ಇಲ್ಲವಾದರೆ, ಪುತಿನ ಅವರು ಪ್ರಾಪ್ತಿಭೋಗಾಪೇಕ್ಷೆ ಎಂದು ಕರೆಯುವ ಗತಕಾಲದ ಯಾಂತ್ರಿಕ ಅನುಕರಣೆಯ ಉರುಳಿಗೆ ನಾವು ಸಿಲುಕುತ್ತೇವೆ. ನಾವೇ ತೋಡಿಕೊಂಡ ಸಂಸ್ಕೃತಿಯೆಂಬ ಹೆಸರಿನ ಬಾವಿಯಲ್ಲಿ ಬೀಳುತ್ತೇವೆ. ಅಥವಾ ಇದಕ್ಕೆ ವಿರುದ್ಧವಾದ ದಿಕ್ಕಿನಲ್ಲಿ ಸಾಗುತ್ತ, ನಮ್ಮದೇ ನಾಡಿನ ನುಡಿಗಟ್ಟುಗಳ ಶಕ್ತಿಯನ್ನೂ ಕಾವ್ಯಕಟ್ಟುವ ಕ್ರಮಗಳನ್ನೂ ಸಂಪೂರ್ಣ ಮರೆತು, ಎರವಲು ನುಡಿಗಳಲ್ಲಿ ಅಂತರ್-ಪಿಶಾಚಿಗಳಂತೆ ಚರ್ವಿತ ಚರ್ವಣ ಮಾಡುತ್ತ ಕಾಲಯಾಪನೆ ಮಾಡುತ್ತೇವೆ. “

ಡಾ. ಶ್ರೀರಾಮ ಭಟ್ ಅವರು ತಮ್ಮ ಹಿನ್ನುಡಿಯಲ್ಲಿ “ಮೋಡಕ್ಕೆ ಮಾತು ಬರುತ್ತಾ, ಮೋಡದ ಭಾಷೆ ಇದೆಯಾ, ಎಂಬ ಸಂದೇಹ ನಮ್ಮ ವಾಸ್ತವ ಪ್ರಜ್ಞೆಯ ವಾಚ್ಯಬುದ್ಧಿಗೆ ಇದ್ದೇ ಇದೆ. ಬೃಹದಾರಣ್ಯಕ ಉಪನಿಷತ್ತಿನ ಆಖ್ಯಾಯಿಕೆಗೆ ಈ ಸಂದೇಹ ಇಲ್ಲ. ಒಮ್ಮೆ ದೇವತೆ ಮಾನವ ಅಸುರ ಮೂವರೂ ಪ್ರಜಾಪತಿಯಿದ್ದಲ್ಲಿಗೆ ಹೋಗಿ, ನಮಗೆ ಹಿತನುಡಿಯನ್ನು ಹೇಳಿ ಎಂದು ಕೇಳಿಕೊಂಡರಂತೆ. ಆತ ‘ದ' ಎಂದು ನುಡಿದು ಅರ್ಥವಾಯಿತೇ ಎಂದು ಕೇಳಿದ. ಅವರವರಿಗೆ ಬೇಕಾದ ಅರ್ಥ ಅವರವರಿಗಾಯಿತು. ದ ಎಂದರೆ ದಮ-ಇಂದ್ರಿಯ ನಿಗ್ರಹ ಎಂದು ದೇವತೆಗಳೂ, ದಾನ-ಹಂಚಿಕೊಳ್ಳುವುದು ಎಂದು ಮನುಜರೂ, ದಯೆ-ಹಿಂಸಾವಿರತಿ ಎಂದು ಅಸುರರೂ ಅರ್ಥಮಾಡಿಕೊಂಡರು.” ಎಂದು ಬರೆದಿದ್ದಾರೆ.