ಮೋಡಿ ಮಾಡಿದ ಲೋಕೇಶ್ ಮೊಸಳೆ ಕ್ಯಾಲೆಂಡರ್ !
"ಪ್ರಕೃತಿಗೆ ಹತ್ತಿರವಾಗಿ ಅದರ ಪ್ರತಿಯೊಂದು ಚಲನವಲನಗಳನ್ನು ಸುಂದರವಾಗಿ ಸೆರೆಹಿಡಿಯುವ, ಹೊಸದನ್ನು ಸೃಷ್ಟಿಸಲು ಸದಾ ಹಂಬಲಿಸುವ ಲೋಕೇಶ್ ಮೊಸಳೆ ಹಲವು ರೀತಿಯಲ್ಲಿ ಮಾದರಿ" ಎನ್ನುವ ಅಭಿಪ್ರಾಯ ನನ್ನದು. ವನ್ಯಜೀವಿ ಛಾಯಾಗ್ರಾಹಕ ಲೋಕೇಶ್ ಮೊಸಳೆ ಅವರ ೨೦೨೩ರ ಕ್ಯಾಲೆಂಡರ್ ಬಗ್ಗೆ ನನ್ನ ಅನಿಸಿಕೆ ನಿಮ್ಮ ಓದಿಗಾಗಿ....
ಒಂದು ಚಿತ್ರ ಸಾವಿರ ಪದಗಳಿಗೆ ಸಮಾನ ಎನ್ನುವ ಮಾತಿಗೆ ನಾಡಿನ ವನ್ಯಜೀವಿ ಛಾಯಾಗ್ರಾಹಕ ಲೋಕೇಶ್ ಮೊಸಳೆ ಸಾಕ್ಷಿ. ನೆರಳು- ಬೆಳಕಿನ ಆಟದ ಮಧ್ಯೆ ಸೆರೆಹಿಡಿದ ವನ್ಯಜೀವಿಗಳ ಬದುಕಿನ ಸೌಂದರ್ಯವನ್ನು ಛಾಯಾಚಿತ್ರಗಳ ಮೂಲಕ ವರ್ಣಿಸುವ ಹೊಸ ವರ್ಷದ ಕ್ಯಾಲೆಂಡರ್ ಪ್ರಕಟಿಸುವ ವಿಭಿನ್ನ ಪ್ರಯತ್ನ ಲೋಕೇಶ್ ಮೊಸಳೆ ಅವರದ್ದು.
ಸುಮಾರು ಎರಡು ದಶಕಗಳಿಂದ ನೂರಾರು ಬಗೆಯ ಕ್ಯಾಲೆಂಡರ್‌ಗಳನ್ನು ರೂಪಿಸುತ್ತಾ ಬರುತ್ತಿರುವ ಇವರು, ಈ ಬಾರಿ ʻಬನದ ಬದುಕು ́ ಮತ್ತು ʻಜೀವನ ಚಿತ್ರಗಳಾಚೆʼ ಹೆಸರಿನಲ್ಲಿ ಎರಡು ವಿಭಿನ್ನವಾದ ಕ್ಯಾಲೆಂಡರ್ ಮುದ್ರಿಸಿದ್ದಾರೆ. ಕ್ಯಾಲೆಂಡರ್‌ನ ಪ್ರತಿಯೊಂದು ಪುಟಗಳಲ್ಲೂ ಕಣ್ಣಿಗೆ ಹಬ್ಬವೆನ್ನುವಂಥ ಅನನ್ಯವಾದ ವನ್ಯಜೀವಿ ಬದುಕಿನ ಛಾಯಾಚಿತ್ರಗಳಿವೆ.
ದೊಡ್ಡ ಬಾಯಿ ತೆರೆದು ಆಕಳಿಸುತ್ತಿರುವ ಹುಲಿ, ಬಾಯಾರಿ ನೀರು ಕುಡಿಯುತ್ತಿರುವ ರಾಜಹಂಸಗಳ ಗುಂಪು, ಭೇಟೆಗಾಗಿ ಕಾಯುತ್ತಿರುವ ಹಸಿದ ಕಣ್ಣುಗಳು ಹೀಗೆ ಇವರ ಕ್ಯಾಮರಾ ಕಣ್ಣಿಗೆ ಬಿದ್ದ ಚಿತ್ರಗಳನ್ನು ನೋಡುವುದೇ ಒಂದು ರೀತಿಯ ಹಬ್ಬ. ವರ್ಣರಂಜಿತ ಚಿತ್ರಗಳೊಂದಿಗೆ ಸಾಹಿತ್ಯದ ವಾಸನೆಯನ್ನೂ ಈ ಕ್ಯಾಲೆಂಡರ್‌ಗಳು ಬೀರುತ್ತವೆ. ಕನ್ನಡ ನಾಡಿನ ಸಾಹಿತಿಗಳ ಕವನಗಳು, ವಚನಗಳು, ಭಾವಗೀತೆ, ಜಾನಪದ ನುಡಿಗಟ್ಟು, ಗಾದೆಮಾತುಗಳ ತುಣುಕುಗಳನ್ನು ವನ್ಯಜೀವಿ ಚಿತ್ರಗಳೊಂದಿಗೆ ಬಳಸಿಕೊಂಡ ಪರಿ ಗಮನಾರ್ಹ.
ಬನದ ಬದುಕಿಗೆ ನೀಲು ಅವರ ಕವನಗಳು: ʻಬನದ ಬದುಕುʼ ಹೆಸರಿನ ಟೇಬಲ್ ಕ್ಯಾಲೆಂಡರ್‌ನಲ್ಲಿ ಬ್ಲೂ ಟೈಲ್ಡ್ ಬೀ ಈಟರ್, ನೈಟ್ ಹೆರಾನನ್, ಗ್ರೀನ್ ಮ್ಯಾಗ್‌ಪೈ ಮುಂತಾದ ಅಪರೂಪದ ಹಕ್ಕಿಗಳ ಛಾಯಾಚಿತ್ರಗಳಿಗೆ ʻನೀಲುʼ ಅವರ ಕವನಗಳು ಇನ್ನಷ್ಟು ಬೆರಗು ನೀಡುತ್ತದೆ. ಅವುಗಳು ಹೆಚ್ಚು ಪರಿಸರದ ಕುರಿತು ಸಾರುವ ಸರಳ ಸಾಲುಗಳ ಕವನಗಳಾಗಿದ್ದು, ವನ್ಯಜೀವಿಗಳ ಭಾವೆನಗಳಿಗೆ ಸ್ಪಂದಿಸುವಂತಿವೆ.
ಈ ಬಗ್ಗೆ ಮೊಸಳೆ ಅವರು, ನೀಲು ಅವರ ಪದ್ಯಗಳನ್ನು ಬಳಸಿಕೊಳ್ಳಲು ಅನೇಕ ಕಾರಣಗಳಿವೆ. ಅವರ ಕವನಗಳು ಅನೇಕರ ಮನದಲ್ಲಿ ಉಳಿದಿವೆ. ಅವರ ಸಾಲುಗಳು ಜೀವನ ದರ್ಶನ ಮಾಡಿಸುತ್ತಿವೆಯೇ? ಭಾವನೆಗಳಿಗೆ ಸ್ಪಂದಿಸುತ್ತವೆಯಾ? ತಾತ್ತ್ವಿಕ ದರ್ಶನ ನಮ್ಮನ್ನಾವರಿಸುತ್ತಿವೆಯಾ? ಓದುಗರೇ ಹೇಳಬೇಕು ಎನ್ನುತ್ತಾರೆ.
ವನ್ಯಜೀವಿ ಚಿತ್ರಗಳಿಗೆ ಮಕ್ಕಳ ಸಾಹಿತ್ಯದ ಬೆರಗು: ʻಜೀವನ ಚಿತ್ರಗಳಾಚೆʼ ಶೀರ್ಷಿಕೆಯ ಗೋಡೆ ಕ್ಯಾಲೆಂಡರ್‌ನಲ್ಲಿ ಜಿ.ಪಿ. ರಾಜರತ್ನಂ, ವಾಸುದೇವ ಶರ್ಮಾ ಎನ್.ವಿ., ಪಂಜೆ ಮಂಗೇಶ ರಾವ್, ಅಬ್ದುಲ್ ರೆಹಮಾನ್, ಸಿ.ಫಾ. ಕಟ್ಟೀಮನಿ, ಹಾಗೂ ಕುವೆಂಪು ಅವರ ಮಕ್ಕಳ ಕವನಗಳನ್ನು ಬಳಸಲಾಗಿದೆ. ಅವುಗಳಲ್ಲಿ ಜಿ.ಪಿ. ರಾಜರತ್ನಂ ಅವರ ಕವನಗಳನ್ನು ಹೆಚ್ಚು ಬಳಸಿಕೊಂಡಿರುವುದು ವಿಶೇಷ. ಕವನಗಳಿಗೆ ತಕ್ಕಂತೆ ಭಾರತದ ಹಾಗೂ ಕೀನ್ಯಾದ ಜೀವಜಂತುಗಳ ವಿವಿಧ ಭಂಗಿಗಳ ಸುಂದರ ದೃಶ್ಯಗಳೂ ಇದರಲ್ಲಿವೆ.
“ಪಠ್ಯದಲ್ಲಿ ರಚಿತವಾಗಿರುವ ಕನ್ನಡದ ಉಸಿರಿನಂತಿದ್ದ ಅನೇಕ ಮಕ್ಕಳ ಗೀತೆಗಳನ್ನು ಮುದ್ರಿಸಿ ಹಿರಿಯರಿಗೆ ಬಾಲ್ಯದ ನೆನಪುಗಳನ್ನು ನೆನಪಾಗಿಸುವ ಪ್ರಯತ್ನ ಇದು” ಎನ್ನುತ್ತಾರೆ ಮೊಸಳೆ ಅವರು.
ಈ ವಿಭಿನ್ನ ಶೈಲಿಯ ಕ್ಯಾಲೆಂಡರ್ ಕುರಿತು ಹೆಸರಾಂತ ಸರೋದ್ ವಾದಕ ರಾಜೀವ್ ತಾರಾನಾಥ್ ಅವರು ಹೇಳಿದ ಮಾತುಗಳನ್ನು ಮಾಧ್ಯಮದೊಂದಿಗೆ ಹಂಚಿಕೊಂಡ ಮೊಸಳೆ ಅವರು, ನಾಡಿನ ಜಾನಪದ, ಸಾಹಿತ್ಯ, ಸಂಸ್ಕೃತಿ, ಚಿಂತನೆಗಳನ್ನು ಪರಿಚಯಿಸುವ ಹಾಗೂ ಕಟ್ಟುವ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ ಎಂದು ಹೇಳಿದ್ದು ತುಂಬಾ ಖುಷಿಯ ವಿಚಾರ ಎಂದರು.
ಮೂಲತಃ ಹಾಸನ ಬಳಿಯ ಮೊಸಳೆ ಎಂಬ ಪುಟ್ಟ ಗ್ರಾಮದವರಾದದ ಲೋಕೇಶ್ ಅವರಿಗೆ ವನ್ಯಜೀವಿ ಛಾಯಾಗ್ರಹಣದ ಕನಸು ಹುಟ್ಟಿದ್ದು ಬಾಲ್ಯದಿಂದಲೇ. ಮುಂದೆ ದೇಶ-ವಿದೇಶಗಳ ಕಾಡು-ನಾಡುಗಳನ್ನು ಸುತ್ತಿ ಕ್ಯಾಮರಾ ಕಣ್ಣುಗಳಲ್ಲಿ ತಮ್ಮ ಸೂಕ್ಷ್ಮತೆಯಿಂದ ಅಸಖ್ಯಾಂತ ಭಿನ್ನ-ವಿಭಿನ್ನ ಚಿತ್ರಗಳನ್ನು ತೆಗೆಯುತ್ತಾ ಇಂದು ನಾಡಿನ ಹೆಸರಾಂತ ಯಶಸ್ವಿ ವನ್ಯಜೀವಿ ಛಾಯಾಗ್ರಾಹಕರಾಗಿ ಗುರುತಿಸಿಕೊಂಡಿದ್ದಾರೆ.
ಈಗಾಗಲೇ ಮೈಸೂರು, ಬೆಂಗಳೂರು, ದೆಹಲಿ ಸೇರಿದಂತೆ ದೇಶದೆಲ್ಲೆಡೆ ಹಲವಾರು ಚಿತ್ರ ಪ್ರದರ್ಶನಗಳನ್ನೂ ನೀಡುತ್ತಾ ಬಂದಿದ್ದಾರೆ. ಜೊತೆಗೆ ಹಲವಾರು ಪ್ರಶಸ್ತಿಗಳೂ ಇವರಿಗೆ ಸಂದಿವೆ. ಈ ಮಧ್ಯೆ ಕೆಲ ಕಾಲ ಪತ್ರಕರ್ತರಾಗಿ, ಪತ್ರಿಕೋದ್ಯಮ ವಿಷಯದ ಶಿಕ್ಷಕರಾಗಿಯೂ ಕಾರ್ಯನಿರ್ವಹಿಸಿದ ಅನುಭವ ಇವರದು.
ಪ್ರಕೃತಿಯ ಸೊಬಗನ್ನು ಅನುಭವಿಸಲು ಬರೀ ಕಣ್ಣುಗಳಿದ್ದರೆ ಸಾಲದು, ಅದನ್ನು ಅರ್ಥೈಸಿಕೊಳ್ಳುವ ಮನಸ್ಸೂ ಇರಬೇಕು. ಹೀಗೆ ಪ್ರಕೃತಿಗೆ ಹತ್ತಿರವಾಗಿ ಅದರ ಪ್ರತಿಯೊಂದು ಚಲನವಲನಗಳನ್ನು ಸುಂದರವಾಗಿ ಸೆರೆಹಿಡಿಯುವ, ಹೊಸದನ್ನು ಸೃಷ್ಟಿಸಲು ಸದಾ ಹಂಬಲಿಸುವ ಲೋಕೇಶ್ ಮೊಸಳೆ ಹಲವು ರೀತಿಯಲ್ಲಿ ಮಾದರಿ.
-ಶೋಭಿತಾ ಮಿಂಚಿಪದವು
ಚಿತ್ರ ಕೃಪೆ: ಇಂಟರ್ನೆಟ್ ತಾಣ