ಮೋದಿಯವರ ಉಕ್ರೇನ್ ಭೇಟಿ
ದೇಶದ ಪ್ರಧಾನಿ ನರೇಂದ್ರ ಮೋದಿಯವರು ಯುದ್ಧಗ್ರಸ್ಥ ಉಕ್ರೇನ್ ಗೆ ಭೇಟಿ ನೀಡಿರುವುದು ಸಹಜವಾಗಿಯೇ ಇಡೀ ವಿಶ್ವದ ಗಮನ ಸೆಳೆದಿದೆ. ಕಳೆದ ತಿಂಗಳಷ್ಟೇ ಮೋದಿಯವರು ರಷ್ಯಾಕ್ಕೆ ಭೇಟಿ ನೀಡಿ ಅಧ್ಯಕ್ಷ ಪುಟಿನ್ ರನ್ನು ಭೇಟಿಯಾಗಿದ್ದರು. ಆ ಸಂದರ್ಭದಲ್ಲಿ ಕೆಲವು ದೇಶಗಳು ಭಾರತದ ನಿಲುವನ್ನು ಆಕ್ಷೇಪಿಸಿದ್ದವು. ಉಕ್ರೇನ್ ಅಧ್ಯಕ್ಷ ಜೆಲೆನ್ ಸ್ಕಿ ಕೂಡಾ ಮೋದಿಯವರು ಪುಟಿನ್ ರನ್ನು ಭೇಟಿಯಾದದ್ದನ್ನು ಟೀಕಿಸಿದ್ದರು. ಆದರೆ ಭಾರತವು ಈ ಟೀಕೆಯನ್ನು ದೊಡ್ಡ ರಾಜಕೀಯ ವಿವಾದವಾಗಿ ಮಾರ್ಪಡಿಸಲು ಹೋಗಿರಲಿಲ್ಲ. ಇದೀಗ ಮೋದಿಯವರು ಉಕ್ರೇನ್ ಗೂ ಭೇಟಿ ನೀಡುವ ಮೂಲಕ ಭಾರತದ ರಾಜತಾಂತ್ರಿಕತೆಯು ಯಾವುದೇ ಬಣದ ಪರ ಅಥವಾ ವಿರೋಧವಲ್ಲ, ಬದಲಾಗಿ ಭಾರತದ್ದು ಸ್ವತಂತ್ರ ರಾಜತಾಂತ್ರಿಕತೆ ಎಂಬುದನ್ನು ಸಾಬೀತು ಪಡಿಸಿದ್ದಾರೆ.
ಜಗತ್ತು ಈ ಸಂದರ್ಭದಲ್ಲಿ ಭಾರತದತ್ತ, ಅದರಲ್ಲೂ ಮುಖ್ಯವಾಗಿ ಮೋದಿಯವರತ್ತ ಗಮನ ಹರಿಸಲೂ ಕಾರಣವಿದೆ. ಉಕ್ರೇನ್ ಮತ್ತು ರಷ್ಯಾ ನಡುವಿನ ಸಮರವನ್ನು ನಿಲ್ಲಿಸಲು ಮೋದಿಯವರು ಶಕ್ತರಾದಾರು ಎಂಬುದಾಗಿ ವಿಶ್ವವು ಭಾವಿಸಿದೆ. ಇಬ್ಬರು ಮುಖಂಡರೊಂದಿಗೂ ಮೋದಿಯವರಿಗೆ ಸೌಹಾರ್ದ ಸಂಬಂಧವಿದೆ. ಜಾಗತಿಕ ವ್ಯವಹಾರದಲ್ಲಿ ಈಗ ಭಾರತವು ಪ್ರಮುಖ ಪಾತ್ರವನ್ನೂ ವಹಿಸುತ್ತಿದೆ. ಈ ಮೊದಲು ಜಾಗತಿಕ ಮುಖಂಡರೆಂದು ಭಾವಿಸಿದ್ದ ಹಲವು ದೇಶಗಳು ಈಗ ವರ್ಚಸ್ಸು ಕಳೆದುಕೊಂಡು ಕುಸಿದಿದೆ. ಅದೂ ಸಾಲದೆಂಬಂತೆ ಜಗತ್ತು ರಷ್ಯಾ ಪರ ಮತ್ತು ಉಕ್ರೇನ್ ಪರವಾದ ಗುಂಪುಗಳಾಗಿ ಒಡೆದಿದೆ. ಭಾರತ ಮಾತ್ರ ಯಾವುದೇ ಬಣಕ್ಕೂ ಸೇರದೆ ಜಾಗತಿಕವಾಗಿ ಸರ್ವತ್ರ ಮನ್ನಣೆ ಪಡೆಯುತ್ತಿರುವುದರಿಂದ ಜಾಗತಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮುಂಚೂಣಿ ವಹಿಸಬಲ್ಲದೆಂಬ ಅನಿಸಿಕೆ ಮೂಡಿದೆ.
ಮೋದಿಯವರು ಈಗಾಗಲೇ ‘ಇದು ಯುದ್ಧದ ಯುಗವಲ್ಲ' ಎಂಬುದಾಗಿ ಪುಟಿನ್ ರಿಗೆ ಕಿವಿಮಾತು ಹೇಳಿದ್ದಾರೆ. ಅದನ್ನೇ ಉಕ್ರೇನ್ ಗೂ ಮನವರಿಕೆ ಮಾಡಲು ಈ ಹಿಂದೆಯೂ ಯತ್ನಿಸಿದ್ದಾರೆ. ಉಭಯ ದೇಶಗಳು ಸಂಧಾನದ ಮೇಜಿನ ಮೇಲೆ ತಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಭಾರತವು ಮಧ್ಯಸ್ಥಿಕೆಯನ್ನು ವಹಿಸಿಕೊಳ್ಳಲು ಸಿದ್ಧವೆಂಬ ಪರೋಕ್ಷ ಸಂದೇಶವನ್ನೂ ರವಾನಿಸಿದೆ. ಉಕ್ರೇನ್ ಅಧ್ಯಕ್ಷ ಜಿಲೆನ್ ಸ್ಕಿಗೂ ತಾನು ಬಹುಕಾಲ ಈ ಯುದ್ಧವನ್ನು ಮುಂದುವರೆಸಲಾಗದು ಎಂಬುದು ಈಗ ಅರಿವಾಗಿದೆ. ಅಮೇರಿಕ ಮತ್ತು ನ್ಯಾಟೋ ನೀಡುತ್ತಿರುವ ಶಸ್ತ್ರಾಸ್ತ್ರಗಳ ಬಲದಿಂದಲೇ ಅವರಿಗೆ ರಷ್ಯಾವನ್ನು ಈವರೆಗೆ ನಿಬ್ಭಾಯಿಸಲು ಸಾಧ್ಯವಾಗಿದೆ. ಆದರೆ ಅಮೇರಿಕದ ಅಧ್ಯಕ್ಷೀಯ ಚುನಾವಣೆ ನಡೆದ ಬಳಿಕ ಎಲ್ಲವೂ ಬದಲಾಗಲಿರುವುದು ಖಂಡಿತ. ಹಾಗಾಗಿ ಅವರು ಕೂಡಾ ಸಮರವನ್ನು ಕೊನೆಗಾಣಿಸಲು ಮನಸ್ಸು ಮಾಡಬಹುದು. ಪ್ರಧಾನಿ ಮೋದಿಯವರು ಪುಟಿನ್ ಮತ್ತು ಜಿಲೆನ್ ಸ್ಕಿ ಮಧ್ಯೆ ಸಂಧಾನ ರೂಪಿಸುವಲ್ಲಿ ಶಕ್ತರಾದಾರೆಂದು ಆಶಿಸಬೇಕಾಗಿದೆ.
ಕೃಪೆ: ಹೊಸ ದಿಗಂತ, ಸಂಪಾದಕೀಯ, ೨೪-೦೮-೨೦೨೪
ಚಿತ್ರ ಕೃಪೆ: ಅಂತರ್ಜಾಲ ತಾಣ