ಮೋದಿ… ಮೋದಿ... ಮೋದಿ…!

ಮೋದಿ… ಮೋದಿ... ಮೋದಿ…!

ಕರ್ನಾಟಕದ ಎರಡು ದಿನಗಳ ಪ್ರವಾಸದಲ್ಲಿ ಅಥವಾ ದೇಶ ಮತ್ತು ವಿಶ್ವದ ಯಾವುದೇ ಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಸಾಕಷ್ಟು ಜನ ಜೈಕಾರ ಹಾಕುವುದನ್ನು ಮಾಧ್ಯಮಗಳಲ್ಲಿ ಗಮನಿಸಬಹುದು. ಅದರಲ್ಲಿ ಕೆಲವು ಬಾಡಿಗೆ ಬಂಟರು, ಹಲವಾರು ಸ್ವಯಂ ಇಚ್ಛೆಯಿಂದ ಘೋಷಣೆ ಕೂಗುವವರು ಇರಬಹುದು. ಏನೇ ಆಗಲಿ ಈ ಕ್ಷಣದಲ್ಲಿ ಭಾರತದ ಅತ್ಯಂತ ಜನಪ್ರಿಯ ರಾಜಕೀಯ ನಾಯಕ ನರೇಂದ್ರ ದಾಮೋದರ ಮೋದಿ. ಬಹಳಷ್ಟು ಜನರ ಪ್ರೀತಿಗೆ ಅಭಿಮಾನಕ್ಕೆ ಗೌರವಕ್ಕೆ ಭರವಸೆಗೆ ಕಾರಣವಾದ ಅದೃಷ್ಟವಂತ ವ್ಯಕ್ತಿ. ಕೆಲವೇ ಅಪರೂಪದ ಮನುಷ್ಯ ಜೀವಿಗೆ ಸಿಗಬಹುದಾದ ಸ್ಥಾನ ಅದು.

ದೇಶದ ಜನರ ಇಷ್ಟೊಂದು ಭರವಸೆ ಪ್ರೀತಿಗೆ ಕಾರಣವಾದ ನರೇಂದ್ರ ಮೋದಿಯವರು ನಿಜವಾಗಲೂ ಅದಕ್ಕೆ ಪ್ರತಿಯಾಗಿ ಜನರಿಗೆ ಅಷ್ಟೇ ಪ್ರಮಾಣದ ಪ್ರೀತಿ ಗೌರವ ನೀಡುತ್ತಿದ್ದಾರೆಯೇ ಮತ್ತು ಭರವಸೆ ಈಡೇರಿಸುತ್ತಿದ್ದಾರೆಯೇ ? ಜನಪ್ರಿಯತೆಯ ತುತ್ತ ತುದಿಯಲ್ಲಿ ಅತ್ಯಂತ ಬಲಿಷ್ಠ ಅಧಿಕಾರ ಸ್ಥಾನದಲ್ಲಿ ಇರುವ ವ್ಯಕ್ತಿಯನ್ನು ವಿಮರ್ಶಿಸುವುದು ಕಷ್ಟ. ದೊಡ್ಡ ದೊಡ್ಡ ಸ್ವಾಮೀಜಿಗಳು, ಉದ್ಯಮಿಗಳು,  ಚಿತ್ರನಟರು, ಕ್ರೀಡಾಪಟುಗಳು, ವಿಜ್ಞಾನಿಗಳು ರಾಜಕಾರಣಿಗಳು ಅವರನ್ನು ಹಾಡಿ ಹೊಗಳುತ್ತಿರುವಾಗ ವಾಸ್ತವ ಅಂಶಗಳ ಮೇಲೆ ಮಾತನಾಡುವುದು ಸುಲಭವಲ್ಲ. ಹಾಗೆಂದು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಉದ್ದೇಶ ಪೂರ್ವಕವಾಗಿ ಟೀಕಿಸುವುದು‌ ಸಹ ಉತ್ತಮ ನಡೆಯಲ್ಲ. ಟೀ ಮಾರುತ್ತಿದ್ದ ವ್ಯಕ್ತಿಯೊಬ್ಬ ಸುಮಾರು ‌50 ಕೋಟಿ ಜನರ ಮನ -  ಮತ ಗೆದ್ದು 8 ವರ್ಷಗಳ ನಂತರವೂ ತನ್ನ ಜನಪ್ರಿಯತೆ ಉಳಿಸಿಕೊಂಡಿರುವುದು ಸಹ ಕಡಿಮೆ ಸಾಧನೆಯಲ್ಲ. 

ಆದರೂ ಈ ಬೃಹತ್ ದೇಶ, ಇಲ್ಲಿನ ವೈವಿಧ್ಯಮಯ ಜನ, ಇವರ ಹಿಂದಿನ ಈಗಿನ ಮುಂದಿನ ‌ಜೀವನ ವಿಧಾನ ಎಲ್ಲವನ್ನೂ ಪರಿಶೀಲಿಸಿ ನಮ್ಮ ತಿಳಿವಳಿಕೆಯ ಮಿತಿಯಲ್ಲಿ ಒಂದು ಅಭಿಪ್ರಾಯದ ಅವಶ್ಯಕತೆ ಇದೆ. ಏಕೆಂದರೆ ಸಮಕಾಲೀನ ವಿಷಯಗಳಲ್ಲಿ ಸ್ಪಂದನೆ ಒಂದು ಜವಾಬ್ದಾರಿಯುತ ನಾಗರಿಕನ ಕರ್ತವ್ಯ ಎಂದು ಭಾವಿಸುತ್ತಾ...

ಮೌಲ್ಯಯುತ ಭಾರತದ ನಿರ್ಮಾಣಕ್ಕಿಂತ ಸಂಘರ್ಷಮಯ ಭಾರತದ ನಿರ್ಮಾಣಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದಾರೆ. ಈ ಕ್ಷಣದಲ್ಲಿ ಅವರ ಅಭಿಮಾನಿಗಳಿಗೆ ಇದು ತುಂಬಾ ಒಳ್ಳೆಯ ನಡೆ ಎನಿಸಬಹುದು. ಆದರೆ ಭವಿಷ್ಯದಲ್ಲಿ ಭಾರತದ ಸಾಮಾಜಿಕ ವ್ಯವಸ್ಥೆ ಸರಿಪಡಿಸಲಾಗದಷ್ಟು ಹದಗೆಡಬಹುದು. ಧಾರ್ಮಿಕ ಅಲ್ಪಸಂಖ್ಯಾತರ ಬಗ್ಗೆ ವಿರೋಧ ಪಕ್ಷಗಳ ಬಗ್ಗೆ ಇನ್ನಷ್ಟು ಸಂಯಮ ಮತ್ತು ಸಮನ್ವಯ ಸಾಧಿಸಬೇಕಿದೆ. ದ್ವೇಷ ಅಸೂಯೆ ಪಡದೆ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆ ರೂಪಿಸಿದರೆ ಬಲಿಷ್ಠ ಭಾರತ ನಿರ್ಮಾಣ ಸಾಧ್ಯ. ಇಲ್ಲದಿದ್ದರೆ ಸಂಘರ್ಷಗಳ ಪರಿಣಾಮ ಖಂಡಿತ ದೇಶದ ಅಭಿವೃದ್ಧಿಯ ಹಿನ್ನಡೆಗೆ ಕಾರಣವಾಗುತ್ತದೆ.

ಮಹಾರಾಷ್ಟ್ರದಲ್ಲಿ ಬಿಜೆಪಿ ಪಕ್ಷದ ಸರ್ಕಾರ ಸ್ಥಾಪಿಸಲು ನಡೆಯುವ ಪ್ರತಿ ಕಸರತ್ತುಗಳು ಈ ಸಂಧರ್ಭದಲ್ಲಿ ನರೇಂದ್ರ ಮೋದಿ ಎಂಬ ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಕಪ್ಪು ಚುಕ್ಕೆಗಳನ್ನು ಇಡುತ್ತಾ ಸಾಗುತ್ತದೆ. ಭ್ರಷ್ಟಗೊಂಡಿದ್ದ ವ್ಯವಸ್ಥೆಯಿಂದ ಆಕ್ರೋಶಗೊಂಡಿದ್ದ ಭಾರತೀಯರ ಮನಸ್ಸಿನಲ್ಲಿ ಶುದ್ಧ ಸ್ವಚ್ಚ ಆಡಳಿತದ ಭರವಸೆಯೊಂದಿಗೆ ಬಹುತೇಕ ಭಾರತೀಯರ ಅದರಲ್ಲೂ ಯುವಕರ ಮನಸ್ಸು ಗೆದ್ದಿದ್ದರು ನರೇಂದ್ರ ದಾಮೋದರ ಮೋದಿ. 

ಕಪ್ಪು ಹಣ - ಭ್ರಷ್ಟ ಹಣ ನಿಯಂತ್ರಿಸಿ ಆರ್ಥಿಕ ಶಿಸ್ತು ತರುವ ಉದ್ದೇಶದಿಂದ ಅಷ್ಟೊಂದು ಒಳ್ಳೆಯ ಕ್ರಮವಲ್ಲದಿದ್ದರೂ , ಅನೇಕ ಅಮಾಯಕ ಮುಗ್ಧ ನಿರಪರಾಧಿ ಭಾರತೀಯರ ಬದುಕನ್ನು ಅತ್ಯಂತ ಕಷ್ಟಕ್ಕೆ ದೂಡಿದ 500-1000 ಮುಖ ಬೆಲೆಯ ನೋಟುಗಳನ್ನು ನಿಷೇಧಿಸಿದರು. ಅಪರಾಧಿಗಳಿಗಿಂತ ಸಾಮಾನ್ಯರಿಗೆ ಹೆಚ್ಚು ತೊಂದರೆಯಾಯಿತು. ಆದರೂ ಜನ ಅವರ ಮೇಲಿನ ಭರವಸೆ ಕಳೆದುಕೊಳ್ಳಲಿಲ್ಲ. ಅವರ ಪ್ರಾಮಾಣಿಕತೆ ಬಗ್ಗೆ ನಂಬಿಕೆ ಇಟ್ಟಿದ್ದರು.

ಆದರೆ, ಕಾರಣ ಏನೇ ಇರಲಿ, ಸಂದರ್ಭ ಏನೇ ಇರಲಿ, ಈ ಕ್ಷಣದಲ್ಲಿ ಮಹಾರಾಷ್ಟ್ರದಲ್ಲಿ ಅವರ ಪಕ್ಷಕ್ಕೆ ಬಹುಮತ ಖಂಡಿತ ಇಲ್ಲ. ಅದನ್ನು ಪಡೆಯಬೇಕಾದರೆ ಅವರು ಭ್ರಷ್ಟ ಮಾರ್ಗ ಹಿಡಿಯದೆ ಬೇರೆ ಮಾರ್ಗವೇ ಇಲ್ಲ. ಇದು ಕಣ್ಣಿಗೆ ಕಾಣುವ ಸತ್ಯ. ಕೇವಲ ಒಂದು ರಾಜ್ಯದ ಅಧಿಕಾರಕ್ಕಾಗಿ ಇಡೀ ಭಾರತದ ಜನತೆ ಬಹುದೊಡ್ಡ ಆಶಾಕಿರಣದಂತೆ ನೋಡುತ್ತಿರುವ , ಪ್ರಧಾನ ಮಂತ್ರಿ ಸ್ಥಾನದಲ್ಲಿರುವ ವ್ಯಕ್ತಿ ಇದನ್ನು ಬೆಂಬಲಿಸುವುದು ಸರಿಯೇ ? ಒಂದು ವೇಳೆ ಮಹಾರಾಷ್ಟ್ರದಲ್ಲಿ ಈಗ ಬಿಜೆಪಿ ಅಧಿಕಾರ ಹಿಡಿಯದಿದ್ದರೆ ಪ್ರಪಂಚವೇನು ಮುಳುಗಿ ಹೋಗುವುದಿಲ್ಲ. ಆ ಅಪವಿತ್ರ ಮೈತ್ರಿ ಬಹಳ ಕಾಲ ಉಳಿಯುವುದೂ ಇಲ್ಲ.  ಆದರೂ ಈ ಹಪಾಹಪಿ ಏಕೆ‌ ?

ಹಿಂದೆ  ನಡೆದ ಇದಕ್ಕಿಂತ ದೊಡ್ಡ ಭ್ರಷ್ಟ ಹಗರಣಗಳನ್ನು, ಬೇರೆಯವರ ಅಧಿಕಾರ ದುರುಪಯೋಗವನ್ನು ನೆನಪಿಸುತ್ತಾ ಈಗಿನ ಭ್ರಷ್ಟ ವಾಮ ಮಾರ್ಗವನ್ನು ಸಮರ್ಥಿಸುವುದು ಸರಿಯೇ ? ನರೇಂದ್ರ ಮೋದಿಯವರ ಅಥವಾ ಭಾರತೀಯ ಜನತಾ ಪಕ್ಷದ ಅಭಿಮಾನಿಗಳು ವಿವಿಧ ಕಾರಣಗಳನ್ನು ನೀಡಿ ಅತ್ಯಂತ ಉತ್ತಮ ರೀತಿಯಲ್ಲಿ ಈಗಿನ ರಾಜಕೀಯದಲ್ಲಿ ಇದು ಸಹಜ ಮತ್ತು ಒಳ್ಳೆಯ ಚಾಣಾಕ್ಷ ನಡೆ ಎಂದು ಸಮರ್ಥಿಸಿಕೊಳ್ಳಬಹುದು. ಕಾನೂನಿನ ತೀರ್ಪುಗಳನ್ನು ಉಲ್ಲೇಖಿಸಬಹುದು. ಪೂರಕ ಘಟನೆಗಳನ್ನು ನೆನಪಿಸಬಹುದು. ಬೇರೆ ಪಕ್ಷದವರ ಕೆಟ್ಟ ನಡೆಗಳನ್ನು ಉದಾಹರಿಸಬಹುದು.

ಆದರೆ, ಈ ಕ್ಷಣದ   ನಡೆಗಳು ಭವಿಷ್ಯದಲ್ಲಿ ಅವರನ್ನು ಬಹಳವಾಗಿ ಕಾಡುತ್ತದೆ. ಇತರ ಪಕ್ಷಗಳು ಭ್ರಷ್ಟಾಚಾರದ ವಿಷಯದಲ್ಲಿ ಈಗಾಗಲೇ ನಂಬಿಕೆ ಕಳೆದುಕೊಂಡಿವೆ. ಈಗ ನರೇಂದ್ರ ಮೋದಿ ಸಹ  ಒಬ್ಬ ಸಾಮಾನ್ಯ ರಾಜಕಾರಣಿ ಮಾತ್ರ. ಭಾರತದ ರಾಜಕೀಯ ದುರಂತಕ್ಕೆ ಇದು ಮತ್ತೊಂದು ಸಾಕ್ಷಿ. ಭರವಸೆಗಳು ಕನಸುಗಳು ಕರಗುವ ಸಮಯ... ಮೂಡಣದ ಸೂರ್ಯ ಉದಯಿಸುವ ಸಮಯ ಕೂಡ...

-ವಿವೇಕಾನಂದ ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ