ಮೋದಿ ಓಟಕ್ಕೆ ಭಂಗವಿಲ್ಲ, ಕಾಂಗ್ರೆಸ್ ಗತಿ ಸುಧಾರಿಸಿಲ್ಲ
ಪಂಚ ರಾಜ್ಯಗಳ ಚುನಾವಣೆಯ ಫಲಿತಾಂಶ ಹೆಚ್ಚು ಕಮ್ಮಿ ನಿರೀಕ್ಷಿತವಾಗಿಯೇ ಬಂದಿದೆ. ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಪ್ರಚಂಡ ಬಹುಮತ ಗಳಿಸುವ ಮೂಲಕ ಹಾಗೂ ಗೋವಾ ಮತ್ತು ಮಣಿಪುರದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಮೂಲಕ ಸರ್ಕಾರ ರಚಿಸುವ ಸನಿಹದಲ್ಲಿರುವ ಬಿಜೆಪಿ ಗೆಲುವಿನ ಅಲೆಯಲ್ಲಿ ತೇಲಿದೆ. ಪಂಜಾಬ್ ನಲ್ಲಿ ಹೊಂದಿದ್ದ ಅಧಿಕಾರವನ್ನು ತಪ್ಪು ಲೆಕ್ಕಾಚಾರಗಳಿಂದ ಕಳೆದುಕೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷ ರಾಷ್ಟ್ರ ಮಟ್ಟದಲ್ಲಿ ಇನ್ನಷ್ಟು ನೆಲಕಚ್ಚಿದೆ. ದೆಹಲಿಗೆ ಸೀಮಿತವಾಗಿದ್ದ ಪ್ರಾದೇಶಿಕ ಪಕ್ಷ ಆಪ್ ಪಂಜಾಬ್ ನಲ್ಲಿ ಭಾರೀ ಬಹುಮತ ಗಳಿಸಿ, ಗೋವಾದಲ್ಲೂ ಖಾತೆ ತೆರೆದು ರಾಷ್ಟ್ರೀಯ ಪಕ್ಷವಾಗುವತ್ತ ಹೆಜ್ಜೆ ಹಾಕಿದೆ. ಜಾತಿಯ ಮುಖ ನೋಡದೆ, ಆರ್ಥಿಕ ಬೆಂಬಲವಿಲ್ಲದೆ, ಅನುಭವಿ ರಾಜಕಾರಣಿಗಳ ದಂಡೂ ಇಲ್ಲದೆ ಭ್ರಷ್ಟಾಚಾರ ರಹಿತ ಉತ್ತಮ ಆಡಳಿತದ ಮಂತ್ರವನ್ನೇ ನೆಚ್ಚಿಕೊಂಡು ಪಂಜಾಬ್ ನಂತಹ ರಾಜ್ಯವನ್ನು ಆಪ್ ಗೆದ್ದಿರುವುದು ಅದ್ಭುತ ಸಾಧನೆಯಲ್ಲದೆ ಮತ್ತೇನೂ ಅಲ್ಲ. ೨೦೧೪ರ ಲೋಕಸಭೆ ಸೋಲಿನ ನಂತರ ಪ್ರತಿ ಚುನಾವಣೆಯಲ್ಲೂ ಇನ್ನಷ್ಟು ಆಳಕ್ಕೆ ಕುಸಿಯುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಬಹುಷಃ ಆಮ್ ಆದ್ಮಿ ಪಕ್ಷದ ಗೆಲುವಿನಲ್ಲೇ ಒಳ್ಳೆಯ ಪಾಠವಿದೆ.
ಕೃಷಿ ಕಾಯ್ದೆಗಳ ವಿರುದ್ಧದ ರೈತರ ಹೋರಾಟ, ಕೆಲ ರಾಜ್ಯಗಳಲ್ಲಿದ್ದ ಆಡಳಿತ ವಿರೋಧಿ ಅಲೆಗಳು, ಕೊರೋನಾದಿಂದ ಜನ ಸಾಮಾನ್ಯರಿಗೆ ಆದ ಕಷ್ಟ, ತೈಲ ಬೆಲೆ ಏರಿಕೆಯಿಂದ ಉಂಟಾಗುತ್ತಿರುವ ಒಟ್ಟಾರೆ ಬೆಲೆ ಏರಿಕೆ ಮತ್ತು ದೇಶದಲ್ಲಿ ಬಡವರು ಹಾಗೂ ಶ್ರೀಮಂತರ ನಡುವಿನ ಅಂತರ ಹೆಚ್ಚುತ್ತಲೇ ಇದೆ ಎಂಬ ವರದಿಗಳ ನಡುವೆಯೂ ಬಿಜೆಪಿ ಗೆದ್ದಿರುವುದು ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ಕುಂದಿಲ್ಲವೆಂಬುದನ್ನು ಸಾರಿ ಹೇಳುತ್ತಿದೆ. ಆಂತರಿಕ ಭದ್ರತೆ, ಅಭಿವೃದ್ಧಿ, ರಾಷ್ಟ್ರ ಮಟ್ಟದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವರ್ಚಸ್ಸು ವೃದ್ಧಿ ಮತ್ತು ಕಠಿಣ ನಾಯಕತ್ವಕ್ಕೆ ಮತದಾರ ಮುದ್ರೆ ಒತ್ತುತ್ತಿದ್ದಾನೆ.
ಈ ಚುನಾವಣೆಯು ದೇಶದಲ್ಲಿ ಬದಲಾಗುತ್ತಿರುವ ಪ್ರಾದೇಶಿಕ ರಾಜಕಾರಣದ ಸಮೀಕರಣ ಮತ್ತು ಹೊಸದಾಗಿ ಉದ್ಭವಿಸಬಹುದಾದ ರಾಷ್ಟ್ರೀಯ ನಾಯಕರ ಸಾಧ್ಯತೆಗಳನ್ನು ಮತದಾರನೆದುರು ತೆರೆದಿಟ್ಟಿದೆ. ಗಾಂಧಿ ಪರಿವಾರದ ಹೊರಗೆ ಯೋಚಿಸಲು ಸಾಧ್ಯವಿಲ್ಲದಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯವಿಲ್ಲ ಎಂಬುದನ್ನೂ ಸೂಚ್ಯವಾಗಿ ಹೇಳಿದೆ. ಬಿಜೆಪಿಯ ಸರಣಿ ಗೆಲುವುಗಳು ಆ ಪಕ್ಷವನ್ನು ಮೈಮರೆವಿಗೆ ದೂಡದಂತೆ ಎಚ್ಚರಿಸುತ್ತಿರುವುದಕ್ಕೆ ಪ್ರಬಲ ಪ್ರತಿಪಕ್ಷ ಇರಬೇಕು. ಕಾಂಗ್ರೆಸ್ ಅಲ್ಲದಿದ್ದರೆ ಇನ್ನೊಂದು ಪಕ್ಷ ಆ ಸ್ಥಾನವನ್ನು ತುಂಬಬಹುದು ಎಂಬ ಸಂದೇಶ ಪಂಚರಾಜ್ಯ ಫಲಿತಾಂಶದ ಒಡಲೊಳಗಿದೆ.
ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೧೧-೦೩-೨೦೨೨
ಚಿತ್ರ ಕೃಪೆ: ಅಂತರ್ಜಾಲ ತಾಣ