ಮೋಸ?!

ಮೋಸ?!

ಸೂರಿ ತನ್ನ ಪ್ರಿಯತಮೆಯ ಕಾಗದದ ಬರವಿಗಾಗಿ ಕಾತುರದಿಂದ ಕಾಯುತ್ತಿದ್ದ. ವಾರಕ್ಕೆರಡಾದರೂ ಪತ್ರ ಬರೆಯುತ್ತಿದ್ದ ಲತಾ ಒಂದು ತಿಂಗಳಾದರೂ ಪತ್ರವೇಕೆ ಬರೆದಿಲ್ಲವೆಂದು ಚಿಂತಿತನಾಗಿದ್ದ. ಮನಸ್ಸಿಗೆ ಬಂದ ನಾನಾ ಕೆಟ್ಟ ಆಲೋಚನೆಗಳನ್ನು ಬಲವಂತವಾಗಿ ಬದಿಗೆ ಸರಿಸಿದ್ದ. ಅಷ್ಟರಲ್ಲಿ ಸೈಕಲ್ ಗಂಟೆ ಬಾರಿಸಿತು. 'ಪೋಸ್ಟ್' ಎಂದಿತು ಪೋಸ್ಟ್‌ಮನ್ ಧ್ವನಿ. ಸೂರಿ ಒಂದೇ ಉಸಿರಿಗೆ ಎದ್ದು ಹೊರಗೆ ಓಡಿದ. ಕಾಗದ ಅವನಿಗೇ. ಅದೂ ಲತ ಬರೆದದ್ದು. ಕೂಡಲೇ ಕಾಗದ ಒಡೆದ. ಅದೊಂದು ಡೈರಿಯ ಪುಟಗಳಿಂದ ಹರಿದ ಹಾಳೆ. ಪ್ರತೀ ಸಲವೂ ವಿಧವಿಧದ ಸುಂದರವಾದ 'ಲೆಟರ್ ಪ್ಯಾಡ್'ನ ಹಾಳೆಯಲ್ಲಿ ಬರೆವ ಲತಾ ಇಂದೇಕೆ ಹಾಗೆ ಬರೆದಳೆಂದು ಅವನಿಗೆ ಅರ್ಥವಾಗಲೇ ಇಲ್ಲ.

ಸೂರಿ...

ನಾ ನಿಮ್ಮನ್ನು ತುಂಬಾ ಪ್ರೀತಿಸುವೆ, ಆದರೆ ಈ ಪತ್ರದಲ್ಲಿ ನಾನೊಂದು ನಿಮಗೆ ಬೇಸರದ ಸಂಗತಿ ತಿಳಿಸಲಿರುವೆ. ನಾವು ಬಯಸಿದ್ದು ಯಾವುದೂ ಆಗುವುದಿಲ್ಲ ಸೂರಿ. ತಂದೆ ನನಗಾಗಿ ಗಂಡು ಹುಡುಕಿರುವರು. ನನ್ನ ತಂದೆ, ನಿನಗೆ ತಿಳಿದೇ ಇದೆ ಅವರು ತುಂಬಾ ಹಠಮಾರಿ. ಅವರ ಬಾಯಿಂದ ಒಂದು ಮಾತು ಹೊರಟರೆ ಮುಗಿಯಿತು. ಅದು ನೆರವೇರಿಯೇ ತೀರುವುದು. ನಾನು ಅವರಿಗೆ ತುಂಬಾ ಹೆದರುವೆ. ಹೆದರುವವಳು ಪ್ರೀತಿ ಏಕೆ ಮಾಡಿದಳು? ಎಂದು ನೀನು ಭಾವಿಸುವೆಯಲ್ಲಾ! ಏನು ಮಾಡಲಿ? 'ಪ್ಯಾರ್ ಕಿಯಾ ನಹೀ ಜಾತಾ, ಹೋ ಜಾತಾ ಹೈ' ಅಲ್ವಾ?

ಅಂದಹಾಗೆ ನಿನಗೆ ಕಾಗದ ಬರೆಯದೆ ಒಂದು ತಿಂಗಳಾಗಿರಬೇಕಲ್ವೆ? ಈಗೇಕೆ ನೆನಪು ಬಂತೆಂದು ಯೋಚಿಸುವೆಯಾ? ನನಗೆ ನನ್ನ ಇಷ್ಟಕ್ಕೆ ವಿರುದ್ಧವಾಗಿ ನಿಶ್ಚಿತಾರ್ಥವಾಗಿದೆ. ನಿನಗೆ ತಿಳಿಸಲೂ ಸಾಧ್ಯವಾಗಲಿಲ್ಲ. ಹುಡುಗ ಬೆಂಗಳೂರಿನವನು. ನಾನು ನನ್ನ ತಂದೆ ತಾಯಿಯ ಮಾತು ಕೇಳದಿದ್ದರೆ ಅವರಿಗೆ ಬೇಸರವಾಗುತ್ತಿತ್ತು. ನಮ್ಮ ಪ್ರೇಮದ ವಿಷಯ ಅವರಿಗೆ ನಾನು ಯಾವತ್ತೂ ತಿಳಿಸಲು ಧೈರ್ಯ ಮಾಡಲಿಲ್ಲ. ನನ್ನ ಹಣೆಬರಹ ನೋಡು ಸೂರಿ... ಯಾರೊಂದಿಗೋ ನನ್ನ ಮದುವೆ ನಡೆಯಲಿದೆ. ನೀವು ನನ್ನ ಮನಸಿನ ವೇದನೆ ಅರ್ಥ ಮಾಡಿಕೊಳ್ಳುವಿರೆಂದು ನಂಬಿರುವೆ.

ನಾನು ನಿಮ್ಮನ್ನು ತುಂಬಾ ಪ್ರೀತಿಸುವೆ. ನೀವು ನನ್ನನ್ನು ಎಂದೆಂದಿಗೂ ಕ್ಷಮಿಸಲಾರಿರಿ ಎಂದು ನನಗೆ ತಿಳಿದಿದೆ. ಆದರೇನು ಮಾಡಲಿ ನಾನು ಸೋತಿರುವೆ. ನನಗಿನ್ನು ಏನ್ನೂ ಮಾಡಲಾಗದು. ನನಗೆ ನಿಮ್ಮ ಬಳಿ ಏನು ಹೇಳಬೇಕೆಂದು ತೋಚುವುದಿಲ್ಲ. ಈ ಕಾಗದ ನೋಡಿ ನಿಮಗೆ ತುಂಬಾ ಬೇಸರವಾಗಬಹುದು. ನೀವು ನನ್ನ ಸ್ಥಳದಲ್ಲಿದ್ದರೆ ಏನು ಮಾಡುತ್ತಿದ್ದೀರಿ? ನೀವು ನನ್ನ ಮರೆತು ಬೇರೆ ಹುಡುಗಿಯ ಮದುವೆಯಾಗಿ ಸುಖವಾಗಿರಿ. ಮದುವೆಯ ಆಮಂತ್ರಣ ಕಳಿಸುವೆ.

ನಿಮ್ಮಿಂದ ದೂರವಾದ,

ಲತಾ.

ಪತ್ರ ಓದಿ ಮುಗಿಯುವಾಗ ಸೂರಿಯ ಕಣ್ಣಿಂದ ನೀರು ಧಾರಾಕಾರವಾಗಿ ಹರಿಯುತ್ತಿತ್ತು. ಛೇ, ಮೋಸಮಾಡಿಬಿಟ್ಟಳು. ಪ್ರೀತಿ ಮಾಡಿ ಎವರೆಸ್ಟ್ ಎತ್ತರಕ್ಕೆ ಏರಿಸಿ ಅಲ್ಲಿಂದ ಒಂದೇ ಬಾರಿಗೆ ದೂಡಿ ಬಿಟ್ಟಳು. ಹುಡುಗಿಯರೇ ಹಾಗೆ. ಒಂದು ದಿನ ನಾನು ಮತ್ತೊಂದು ದಿನ ಬೇರೆಯವನು. ಬಣ್ಣದ ಚಿಟ್ಟೆಯಂತೆ, ನನ್ನ ಜೀವನದೊಂದಿಗೆ ಆಡವಾಡಿದಳು. ನಾನೆಷ್ಟು ಸುಲಭವಾಗಿ ಮೋಸ ಹೋದೆ. ಪೇಚಾಡಿಕೊಂಡ ಸೂರಿ.

ಕಾಗದದ ಮೇಲೆ ಸಿಟ್ಟು ಬಂತು. ಹರಿಯಲು ಹೋದ. ಆದರೆ ಕಾಗದದ ಕೊನೆಯಲ್ಲಿ ಸಣ್ಣ ಸಣ್ಣ ಅಕ್ಷರಗಳು ಅವನ ಗಮನ ಸೆಳೆಯಿತು. ಅಲ್ಲಿ ಒಂದೇ ಒಂದು ವಾಕ್ಯ ಬರೆದಿತ್ತು. ‘ಡೈರಿಯ ದಿನಾಂಕವನ್ನು ದಯಮಾಡಿ ನೋಡಿ' ಸೂರಿ ಡೈರಿಯ ದಿನಾಂಕ ನೋಡಿದ. ಅಲ್ಲಿ ಸುಂದರವಾಗಿ ಡೈರಿಯ ದಿನಾಂಕ ಮುದ್ರಿತವಾಗಿತ್ತು. ಅದು 'ಏಪ್ರಿಲ್ 1'.