ಮೋಹಕ ಮುಕ್ತಕಗಳು
ಕವನ
ಸವಿಯಿರದ ನೆಲದೊಳಗೆ ದಿನದಿನವು ಕಹಿಯಿರಲು
ಕವಿಯೆನಿಸಿ ಬಾಳುವುದು ಗೆಲುವದುವು ನೋಡು|
ಕವನಗಳ ಬರೆಯುತಲೆ ವೇದನೆಯ ಮರೆಯುತಲಿ
ಭವದೊಳಗೆ ಬದುಕುವೆಯೊ -- ಛಲವಾದಿಯೆ||
***
ಮರೆತಿರುವ ಒಲುಮೆಯನು ಮರಳಿ ಪಡೆಯಲು ಬಹುದೆ
ಮರಳಿನಲಿ ಚಿತ್ರವನು ಬಿಡಿಸಿರುವ ರೀತಿ|
ಮರುಳನಾಗುತ ತಿರುಗೆ ವಿದ್ಯೆಯದು ಸಿದ್ಧಿಪುದೆ
ಕರಮುಗಿಯು ದೇವನಿಗೆ -- ಛಲವಾದಿಯೆ||
***
ಹಿರಿಯರನು ಗೌರವಿಸು ಜೀವನದಿ ಬೆಳಗುವೆ
ಕಿರಿಯರಿಗೆ ನೀತಿಯನು ಬೋಧಿಸುತ ಬದುಕು|
ಹರಿಹರನ ಭಜಿಸುತಲಿ ಬಾಳಿನಲಿ ಸಾಗಿದರೆ
ಪರಿಪೂರ್ಣ ನೀನಪ್ಪೆ -- ಛಲವಾದಿಯೆ||
***
ಸಾಲವದು ಶೂಲವೇ ತೀರಿಸುವ ಕೈಗಳಿರೆ
ಮೂಲವದು ದೊರಕುತಲೆ ಕೊಡುವನೈ ಮನುಜ|
ಬಾಲವಿರದಿಹ ಜನರು ದೂಷಣೆಯ ಮಾಡಿದರೆ
ಕಾಲಕಸವದುಯೆನ್ನು -- ಛಲವಾದಿಯೆ||
***
ಒಂಟಿತನ ಕಾಡುವುದು ಒಬ್ಬಂಟಿಯಾದರೇ
ಗಂಟು ಕಟ್ಟಿದರದರ ಕದಿಯುವರು ನೋಡು|
ನಂಟರಿಷ್ಟರುಯಿಲ್ಲ ದಿನದಿನವು ಅಲೆದಾಟ
ಕಂಟಕವು ಭವದೊಳಗೆ -- ಛಲವಾದಿಯೆ||
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
