ಮೋಹದ ಮೋಡಗಳು

ಮೋಹದ ಮೋಡಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಷಕೀಬ್ ಎಸ್. ಕಣದ್ಮನೆ ನವಿಲೇಹಾಳ್
ಪ್ರಕಾಶಕರು
ಆತ್ಮೀಯ ಪ್ರಕಾಶನ, ಚೆನ್ನಗಿರಿ, ದಾವಣಗೆರೆ
ಪುಸ್ತಕದ ಬೆಲೆ
ರೂ. 100, ಮುದ್ರಣ: 2020

“ಪ್ರೇಮ ಋತುಮಾನಗಳಾಗಿ, ಶತಮಾನದ ಭಾವಗಳಾಗಿ, ಯುಗ ಯುಗಗಳ ಬಂಧನಗಳಾಗಿ ಬೆಳೆದರೂ ಹಳತಾಗುವುದಿಲ್ಲ. ಅಳತೆಯ ಸೆಳೆತದಲ್ಲಿ ಸಿಲುಕಿ ನಲುಗುವ ಹಲವಾರು ಪಡ್ಡೆ ಹುಡುಗರನ್ನು ಇಬ್ಬನಿಯ ರೂಪಕದಲ್ಲಿ ವಿವರಿಸುವ ಪ್ರಯತ್ನ‌ ಕೂಡ ಪ್ರಯಾಸದಿಂದ ಕೂಡಿದ್ದರೂ ಕೆಚ್ಚೆದೆಯಲ್ಲಿ ದೇಶಬಾಂದವರನ್ನು ಹಚ್ಚೆ ಹಾಕಿಸಿಕೊಳ್ಳಿ ಎನ್ನುವ 'ಮೌನರಾಗ' ಹೊಸತಲೆಮಾರಿನ ಹೋರಾಟಗಾರರಿಗೆ ಪರಿಚಯ ಮಾಡಿಸುತ್ತದೆ" ಷಕೀಬ್ ಎಸ್. ಕಣದ್ಮನೆ ನವಿಲೇಹಾಳ್ ಅವರ ʻಮೋಹದ ಮೋಡಗಳುʼ ಕವನ ಸಂಕಲನ. 72 ಪುಟಗಳ ಈ ಕವನ ಸಂಕಲನವು ಪುಟ್ಟದಾಗಿದ್ದರೂ ಹೊರಹೊಮ್ಮಿಸುತ್ತಿರುವ ಭಾವಗಳು ಹಲವಾರು.

“ಕಡಿಮೆ ಸಮಯದಲ್ಲಿ ಮಮತೆಯಿಂದ ಮನಗೆದ್ದ ಸಹೋದರ ಷಕೀಬ್ ಕಣದ್ಮನೆಯವರ ಸರಳತೆ ಎಂತಹ ವ್ಯಕ್ತಿಗೂ ಮಾದರಿ. ತಲೆ ಹೋಗುವ ಸಮಸ್ಯೆಯಿದ್ದರೂ ಹೂ ನಗೆ ಚೆಲ್ಲುವ ಶ್ರಮಜೀವಿ. ವಿದ್ಯಾರ್ಥಿ ಜೀವನದ ಜೊತೆಜೊತೆಗೆ ರೈತನ ಪಟ್ಟ ಹೊತ್ತಿರುವ, ಯಾವಾಗಲೂ ತೋಟ-ಜಮೀನು ಕೆಲಸಗಳಲ್ಲಿ ತೊಡಗಿ ಭೂಮಿಯ ಸ್ವರ್ಗವ ಕಾಣುವ ವ್ಯಕ್ತಿತ್ವ ಒಂದೆಡೆಯಾದರೆ, ಕನ್ನಡ ನುಡಿಯುವ ಮನ ಮುಡಿಯದ ಭಾವಗಳು ಕಾಣಲಾಗದು. ಅಂತಹಾ ಕನ್ನಡ ಪರಿಸರದಿಂದಲೇ ಬೆಳೆದು ಬಂದಿರುವ ಷಕೀಬ್ ಅವರು ‘ಮೋಹದ ಮೋಡ’ದ ಮೂಲಕ ಕನ್ನಡ ಪುಸ್ತಕ ಪ್ರಪಂಚಕ್ಕೆ ಪರಿಚಿತರಾಗಿದ್ದಾರೆ. ಅವರ ಭಾಷೆ, ಭಾವ ನುಡಿಗಳ ಮೃದುತ್ವ, ಆಂತರ್ಯದ ಧೋರಣೆ ಅದಮ್ಯ ಹಂಬಲ ನಾಡು ನುಡಿಗಾಗಿ ನುಡಿಯುವ ಒಳಗ ಕರಳು ಎಲ್ಲವೂ ಒಂದಿಲ್ಲೊಂದು ರೀತಿಯಲ್ಲಿ ಸಮಾಜದ ಸ್ವಾಸ್ಥ್ಯ ಕಾಪಾಡಲು ನಿರತವಾಗಿದೆ ಅದಕ್ಕಾಗಿಯೇ ದೇಶದ ಬೆನ್ನೆಲುಬಿಗೆ ಹೊತ್ತಿಗೆ ಅರ್ಪಿಸಿದ್ದಾರೆ.

ಬಂಡಾಯದ ಹಿನ್ನೆಲೆ ಹೊಂದಿರುವ ಡಾ. ಸಿದ್ದ್ರಾಮ ಕಾರಣೀಕ ಅವರ ಮುನ್ನುಡಿ, ಹಂಪಿ ವಿವಿಯ ಕನ್ನಡ ಸಂಶೋಧಕ ಶರೀಪ ಹಸಮಕಲ್ಲ ಅವರ ಬೆನ್ನುಡಿಯನ್ನೊಳಗೊಂಡು ಕನ್ನಡ ಪುಸ್ತಕ ಪ್ರಾಧಿಕಾರದ ಧನಸಹಾಯ ಪಡೆದು ಮುದ್ರಿತವಾಗಿದ್ದು,

ʻಕರುಳಲ್ಲಿ ಹುಟ್ಟ್ತೈತೆ ಕನ್ನಡ

ಕಂಠದಲ್ಲಿ ಹರಿದಾಡತೈ ಗಡಗಡ'

ಎನ್ನುವ ಪದ್ಯದ ಸಾಲುಗಳು ಕನ್ನಡ ಭಾಷೆಯ ಹಿರಿಮೆಯನ್ನು ಎತ್ತಿತೋರಿಸುವ ಮೂಲಕ ನಾಡುನುಡಿಯ ಪ್ರಖರತೆಯನ್ನು ತಲೆದೋರುವಲ್ಲಿ ಸಹಕಾರಿಯಾಗಿದೆ. ನಾಡುನುಡಿ, ದೇಶ ಪ್ರೇಮ, ಅನ್ನದಾತರಿಗೆ ಸಲಾಮು, ಹಜರತ್ ಸುಲ್ತಾನರ ಪರಾಕ್ರಮ, ಚಂದಿರನ ಲೋಲುಪತೆ, ಪ್ರಣಯದ ಹಾಡು, ಹಕ್ಕಿಹಾಡುವ ಶೋಕಗೀತೆ, ನನ್ನದಲ್ಲದ ಲೇಖನಿ ಎನ್ನುವ ಹಲವು ಪದ್ಯಗಳು ಮತ್ತೆ ಮತ್ತೆ ಓದಿಸಿಕೊಂಡರೆ, ಹೃದಯವನ್ನು ಗುಡಿಗೆ ಹೋಲಿಸಿ, ಸ್ನೇಹದಲ್ಲಿ ದೇವರನ್ನು ಕಾಣುವ ರೂಪಕ ಅತ್ಯಾಪ್ತವಾಗಿಸುತ್ತದೆ.

"ನೆಮ್ಮದಿ ಇರದ ಜೀವನ

ಯಮನಿಗೆ ಅಹ್ವಾನ"

ಎನ್ನುವ ಕವಿವಾಣಿ, ಜೀವನದಲ್ಲಿ ತೃಪ್ತಿ ಎನ್ನುವುದು ಅತೀವ ಕಾಳಜಿಯ ವಾಕ್ಯವಾಗಿ ಗುರುತಿಸಿಕೊಂಡು ಜೀವನ ಪ್ರೀತಿಯನ್ನು ಸಾರುವುದರಲ್ಲಿ ಸಹಕಾರಿಯಾಗಿದೆ.

ʻಕವಿಯ ಕಲ್ಪನೆಗೆ ಎಟುಕದ ಸೌಂದರ್ಯ ನಿನ್ನದು ನಿನಗೆಂದೆ ಕಾಯುವ ಭಾಗ್ಯ‌ ನನ್ನದು' ಈ ರಸಭರಿತ ಕಾವ್ಯ ಕಲ್ಪನೆಗೂ ನಿಲುಕದ ನಿಲುವು ಪ್ರಾಸಭರಿತವಾದ ಹೊಸ ಛಾಯೆಯಗಳ ಮಾಯೆಯನ್ನು ಬರಮಾಡಿಕೊಳ್ಳುವ ʻಅವಳು ನಕ್ಕರೆ ಮಲ್ಲಿಗೆಯ ಛಾಯೆ' ಎನ್ನುವಲ್ಲಿ ಪ್ರೇಮಿಯನ್ನು ಪ್ರೇಮಿಸುವ ಪರಿಯಲ್ಲಿ‌ ಹೊಸ ಪ್ರಮೇಯ ತೆರೆಯಲೆತ್ನಿಸಿದ್ದಾರೆ‌. ಆಚಾರ ಪತ್ನಿಯೊಂದಿಗೆ ವ್ಯವಹರಿಸುವ ವಿಚಾರ ಸತಿಯ ಸೇರಿಸಿ ಅದಕೆ ಸವಿಯ ಸುರಿಸಿ ಹರಸುವ ಪರಿ ಪರೋಕ್ಷವಾಗಿ ಪ್ರಪಂಚವೆಲ್ಲಾ ʻಪ್ರೇಮದಲ್ಲಿದೆ ಪ್ರೀತಿ ಇಲ್ಲದ ಹೊರತು ಏನನ್ನು ಮಾಡಲಾರೆ ದ್ವೇಷವನ್ನು ಕೂಡಾ' ಎನ್ನುವ ಚಂಪಾ ಅವರ ಕವಿತೆಯ ಸಾಲುಗಳು ನೆನಪಿಸುತ್ತಾರೆ.

ಪ್ರೇಮ ಋತುಮಾನಗಳಾಗಿ, ಶತಮಾನದ ಭಾವಗಳಾಗಿ, ಯುಗ ಯುಗಗಳ ಬಂಧನಗಳಾಗಿ ಬೆಳೆದರೂ ಹಳತಾಗುವುದಿಲ್ಲ. ಅಳತೆಯ ಸೆಳೆತದಲ್ಲಿ ಸಿಲುಕಿ ನಲುಗುವ ಹಲವಾರು ಪಡ್ಡೆ ಹುಡುಗರನ್ನು ಇಬ್ಬನಿಯ ರೂಪಕದಲ್ಲಿ ವಿವರಿಸುವ ಪ್ರಯತ್ನ‌ ಕೂಡ ಪ್ರಯಾಸದಿಂದ ಕೂಡಿದ್ದರೂ ಕೆಚ್ಚೆದೆಯಲ್ಲಿ ದೇಶಬಾಂದವರನ್ನು ಹಚ್ಚೆ ಹಾಕಿಸಿಕೊಳ್ಳಿ ಎನ್ನುವ 'ಮೌನರಾಗ' ಹೊಸತಲೆಮಾರಿನ ಹೋರಾಟಗಾರರಿಗೆ ಪರಿಚಯ ಮಾಡಿಸುತ್ತದೆ.

ತಂಗಿಗಾಗಿ, ಮೌನಯಾನದಂತಹ ಕೆಲವು ಪದ್ಯಗಳು ಒಡಲ ಪ್ರೇಮ, ಪ್ರಾದೇಶಿಕತೆ ದಾರ್ಶನಿಕತೆಯನ್ನು ತಿಳಿಸುವುದರೊಂದಿಗೆ ತಿಳಿಸಿ ಪ್ರಾಂತ್ಯದ ಪ್ರೀತಿಯಿಂದ ರಾಷ್ಟ್ರ ಪ್ರೇಮದತ್ತ ತಿರುಗುವುದು ಇಂದಿನ ಅಗತ್ಯಗಳಲ್ಲಿ ಒಂದಾಗಿದೆ ಎನ್ನುವ ಕವಿಭಾವ ರಸದೌತ್ತತೆ ಸಾರುವಲ್ಲಿ ನಿರತವಾಗಿದೆ. ತಮ್ಮ ತವರೂರಾದ ನವಿಲುರೂನಿಂದ ಹಿಡಿದು, ಭಾರತ ದೇಶದ ಬಗ್ಗೆಯೂ ಕವಿತೆಗಳನ್ನು ರಚಿಸಿ ದೇಶಪ್ರೇಮ ಮೆರೆದಿದ್ದಾರೆ. ತನ್ನ ಪ್ರೇಯಸಿಯನ್ನು ಕವಿತೆಗಳ ಮೂಲಕ ಕಾಡಿ, ಬೇಡಿ, ಆರಾಧಿಸಿ, ಪ್ರೇಮ ಲಹರಿ ಒಂದೆಡೆ ಅದ್ಭುತವಾಗಿ ಮೂಡಿ ಬಂದಿದೆ. ಜೊತೆಗೆ ಪ್ರಕೃತಿಯ ಮಡಿಲಿನಲ್ಲಿ ಜೀವನ ನಡೆಸುವ ಇವರು ತಮ್ಮ ಕವನ ಸಂಕಲನದಲ್ಲಿ ಪ್ರಕೃತಿಯ ವಿವಿಧ ರೀತಿಯ ಮಜಲುಗಳನ್ನು ತುಂಬಾ ಮೋಹಕವಾಗಿ ವರ್ಣಿಸಿದ್ದಾರೆ.

ಒಂದೆರಡು ಕವಿತೆಗಳಾದ ʻಹೀಗೇಕೆ?ʼ, ʻಕಣ್ಣೀರ ಮಳೆʼ ನಾನು ತುಂಬಾ ಭಾವುಕನಾದ ಕವಿತೆಗಳು. ತಮ್ಮ ತಂಗಿಯರಿಗೆ ಕವಿತೆ ಬರೆದು ಅಣ್ಣನ ವಾತ್ಸಲ್ಯ ಮೆರೆದಿರುವುದು ಬಾಂಧವ್ಯಗಳಿಗೆ, ಸಂಬಂಧಗಳಿಗೆ ಇವರು ನೀಡುವ ಪ್ರಾಮುಖ್ಯತೆಯನ್ನು ಕಲಿಸಿಕೊಡುತ್ತವೆ. ಭಾರತದ ಬೆನ್ನೆಲುಬು ರೈತ, ಮತ್ತು ಯೋಧರಿಗೆ ನೈಜ್ಯತೆಯ ವಂದನಾರ್ಪಣೆ ಸಲ್ಲಿಸಿದ್ದಾರೆ. "ಈ ಪುಸ್ತಕದ ಪ್ರತಿ ಪುಟಗಳ ತೆನೆ ಹಿಡಿದ ಕೈಗಳು ಚಿಹ್ನೆಯೂ" ಕವಿಯ ರೈತನ ಮೇಲಿನ ಅಭಿಮಾನ ತಿಳಿಸಿಕೊಡುತ್ತದೆ. ಮೊಟ್ಟಮೊದಲ ಪ್ರಯತ್ನವೇ ರಂಗುರಂಗಾಗಿದ್ದರು, ಅಲ್ಲಲ್ಲಿ ಕೆಲಮಟ್ಟಿನ ದ್ವಂದ್ವಗಳು ಕಂಡುಬಂದರೂ ಮೊದಲ ಪ್ರಯತ್ನದ ಕವನ ಕೃಷಿಯಲ್ಲಿ ತಕ್ಕಮಟ್ಟಿನ ಕಥನ ಪ್ರಿಯತೆಯೂ ಸೃಜಿಸಿದ್ದಾರೆ. ಮೋಹದ ಮೋಡಗಳು ತಿಳಿಯಾಗಿರುವಂತೆ ಬಾಸವಾಗುವುದರಲ್ಲಿ ಅನುಮಾನವೇ ಇಲ್ಲ.”

ಇಂತಹ ಬಸವಾದಿ ಶರಣರ ನಾಡಿನಲ್ಲಿ ಸಮಾನತೆಗಾಗಿ ಹಾತೊರೆಯುತ್ತಿರುವ ಪ್ರಗತಿಪರ ಚರಿಸ್ಮಾ ಕಾಣುವುದು ‌ವಿರಳಾತೀವಿರಳ ಅಂತ ವಿರಳ ಸಂಗತಿಗಳನ್ನು ತನ್ನ ಸರಳ ಸಾಹಿತ್ಯದಲ್ಲಿ ಅಳವಡಿಸಿ ಕೊಂಡಿದ್ದಲ್ಲದೆ ಬರೆದಂತೆ ಬದುಕಿರುವ ಚೇತನಕ್ಕೆ ಅಭಯ ಹಸ್ತದಿಂದ ಬರಮಾಡಿಕೊಳ್ಳೋಣ.

-ಮೈಬೂಬಸಾಹೇಬ. ವಾಯ್‌.ಜೆ