ಮೋಹಿನಿ-ಭಸ್ಮಾಸುರರ ಕಥೆ

ಮೋಹಿನಿ-ಭಸ್ಮಾಸುರರ ಕಥೆ

ಬರಹ

ಪೃಥಿವೀ ರತ್ನಸಂಪೂರ್ಣಾ ಹಿರಣ್ಯಂ ಪಶವ ಸ್ತ್ರಿಯಃ
ನಾಲಮೇಕಸ್ಯ ತತ್‌ಸರ್ವಮಿತಿ ಮತ್ವಾ ಶಮಂ ವ್ರಜೇತ್
(ಮಹಾಭಾರತ, ಆದಿಪರ್ವ, ೭೫-೫೧)

(ರತ್ನಪೂರ್ಣವಾದ ಈ ಭೂಮಿ, ಬಂಗಾರ, ಪಶುಸಂಪತ್ತು, ಸ್ತ್ರೀಯರು ಇವೆಲ್ಲ ದೊರಕಿದರೂ ಮನುಷ್ಯನಿಗೆ ’ಸಾಕು’ ಎನ್ನಿಸುವುದಿಲ್ಲ. ಇದನ್ನರಿತು ಮನುಷ್ಯನು (ಇರುವುದರಲ್ಲಿಯೇ) ನೆಮ್ಮದಿಯನ್ನು ಮತ್ತು ಮನೋನಿಗ್ರಹವನ್ನು ಹೊಂದಬೇಕು.)

ಇರುವ ಈ ಭೂಮಿಯಲಿ ತೃಪ್ತಿ ನಮಗಿಲ್ಲ
ಏನೆಲ್ಲ ಶೋಧಿಸುತ ಬೀಗುತಿಹೆವಲ್ಲ!
ಶೋಧಗಳ ಕೂಸಾಗಿ ಪಿಡುಗುಗಳ ಸಾಲು
ಹೆಡೆಯೆತ್ತಿ ನಿಂತರೂ ನಮಗೆ ಭಯವಿಲ್ಲ!

ಭೂಮಿಯನು ಅದರ ಪಾಡಿಗೆ ಅದನು ಇಟ್ಟು
ಹೊಂದಿಕೊಂಡದರೊಡನೆ ಬಾಳುವುದು ಬಿಟ್ಟು
ಇಚ್ಛಾನುಸಾರ ಮಾರ್ಪಡಿಸಲಿಕೆ ಹೊರಟು
ಕೊಡುತಿಹೆವು, ಜೊತೆಗೆ ತಿನ್ನುತಲಿಹೆವು ಪೆಟ್ಟು

ಇದೊ, ಈಗ ಸೃಷ್ಟಿಸಿಹೆವೈ ಜೀವಕೋಶ!
ಇದು ಕೃತಕ; ಗೊತ್ತಿಲ್ಲ ಇದರ ಪರಿವೇಷ
ಜೀವಸೃಷ್ಟಿಗೆ ಇದುವೆ ನಾಂದಿಯಾದೀತು
ಜೀವಕುಲಕೇ ಮುಂದೆ ಮಾರಿಯಾದೀತು!  

ಸೃಷ್ಟಿಕ್ರಿಯೆ ಸಾಹಸಕೆ ಕೈಹಾಕಿ ನಾವು
ಅನುಭವಿಸಲಿದ್ದೇವೆ ಇನ್ನೊಂದು ನೋವು
ನವಮಾಸ ಹೊತ್ತು ಹೆರುವಂಥ ನೋವಲ್ಲ
ನಾವಾಗಿ ಬಿಟ್ಟುಕೊಂಡಂಥ ಹೆಬ್ಬಾವು!

ಮೋಹಿನಿಗೆ ಮರುಳಾಗಿ ಭಸ್ಮಾಸುರನು ತಾ
ಬೂದಿಯಾದನು ತನ್ನ ತಲೆಗೆ ಕೈಯಿಡುತ
ವಿಜ್ಞಾನಶೋಧಗಳ ಮೋಹಕ್ಕೆ ಮನುಜ
ಬಲಿಯಾದರದುವೆ ತಿಳಿ, ಪ್ರಕೃತಿಗೆ ಸಹಜ!