ಮೋಹ ರೂಪದಲ್ಲಿ…

ಮೋಹ ರೂಪದಲ್ಲಿ…

ಕವನ

ಮೋಹ ರೂಪದಲ್ಲಿಯೆನ್ನ ಕಾಡಬೇಡ ಚಿನ್ನ

ಚಿನ್ನ ರನ್ನವೆಂದು ಹೇಳೆ ಹಿಂದೆ ಹಿಂದೆ ಬರದಿರು

ಬರದೆ ಇರುವಂತ ಕೋಪ ಕೇಳದಿರು ಎನ್ನನು

ಎನ್ನ ಹೃದಯ ಮೌನದೊಳಗೆ ಶಾಂತನಾಗಿಹೆ

ಶಾಂತನಾಗಿ ಇರಲು ಸಾಕು ನನ್ನ ನಡೆಯೊಳು

ನಡೆಯೊಳಾಟ ಬೇಡವೆಂದು ಹೇಳುತಿರುವೆನು

ಹೇಳುತಿರುವೆನೆಂಬ ಸಲುಗೆ ಬೇಡವೆಂದರು

ಬೇಡವೆಂದರೊಳಗೆ ಒಳಗೆ ಭಯವು ಮೂಡಿತು

ಮೂಡಿತೊಂದು ಪ್ರಶ್ನೆಯಾಗೆ ತಲೆಯ ತುಂಬಿತು

ತುಂಬಿದಂತಹ ನೂರು ಲಹರಿ ಚಿಮ್ಮಿತಾಗಲೆ

ಚಿಮ್ಮಿದಂತಹ ವಿಷಯ ನಿನಗೆ ನಾನು ಹೇಳಲೆ

ಹೇಳಲೆಂತ ಕನಸು ಸೊರಗಿ ಬೀಳಲಾರದು

ಬೀಳಲೇನು ಬದುಕ ಬಂಡಿ ಜಾರಿ ಹೋಗದು

ಹೋಗುತಿರುವೆ ಜೀವ ಹಿಡಿದು ಮುಂದೆ ಸಾಗುತ 

ಸಾಗುತಿರುವೆ ಹೀಗೆ ನಾನು ನಿನ್ನ ಜೊತೆಯಲೆ

ಜೊತೆಯಲಿದ್ದು ಪಯಣ ಹಾಡ ಹಾಡುತಿರುವೆನು

***

ಗಝಲ್

ಯಾರೋ ಹಾಕಿರುವ ರಾಗಕ್ಕೆಲ್ಲ ತಲೆದೂಗುತಲೇ ಸಾಗುತಿಹೆ

ಮಾತು ಮೌನ ಭಿಕ್ಷೆಯ ನಡುವೆ ಮನಬಾಗುತಲೇ ಸಾಗುತಿಹೆ

 

ಯಾತ್ರೆಯ ನಡುವಿನ ಮತ್ಸರ ಬೆಂಕಿಗೆ ಮತ್ತದೆ ರೋಷವು ಉಕ್ಕುತಲಿ

ಪುಣ್ಯದ ಕೆಲಸಕೆ ಬಾರದ ಸವಿಯಿರೆ ತನುವು ಸೋಲುತಲೇ ಸಾಗುತಿಹೆ

 

ಧಗೆಯೊಳು ಕುಳಿತಿಹ ರೂಪವು ಇಂದು ಕ್ಷಣದೊಳು ಹೀಗೆ ಚಡಪಡಿಸಿ

ಬರದಿಹ ಬಯಕೆಯ ಕಲ್ಲನು ಕೆತ್ತುತ ಚಿತ್ತವ ಕೆಡಿಸುತಲೇ ಸಾಗುತಿಹೆ

 

ಬದುಕಿನ ನಿಯಮವ ಕಲಿಯದೆ ಇದ್ದರೆ ಅರಿವದು ಹೇಗೆ ಕಾಣುವುದು

ಹೋರಾಟದ ಕೊನೆಯು ಮೀರದೆ ಇರಲು ಅರಿವಾಗುತಲೇ ಸಾಗುತಿಹೆ

 

ನಡೆಯೊಳು ಕ್ಲೇಶವು ಬಾರದೆ ಸುಂದರ ರೂಪವ ತೋರುತಲಿ ಈಶಾ

ಹರುಷದ ಬೆಸುಗೆಯ ನಂಬಿಕೆಯೊಳಗೆ ಮನಸಾಗುತಲೇ ಸಾಗುತಿಹೆ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್