ಮೌಢ್ಯತೆಗೆ ದೇಶದ ಘನತೆಯೇ ಬಲಿ!

ಮೌಢ್ಯತೆಗೆ ದೇಶದ ಘನತೆಯೇ ಬಲಿ!

ಉತ್ತರ ಪ್ರದೇಶದ ಹತ್ರಾಸ್ ಎಂಬ ಊರು, ಒಂದಲ್ಲ ಒಂದು ಕಾರಣಕ್ಕೆ ಸುದ್ದಿ ಯಾಗುತ್ತಲೇ ಬಂದಿದೆ. ಆದರೆ, ಆ ಊರಿಗೆ ಖ್ಯಾತಿ ದೊರೆತಿದ್ದು ಒಳ್ಳೆಯ ಕಾರಣಕ್ಕಲ್ಲ; ಬದಲಾಗಿ, ದುಷ್ಕೃತ್ಯಗಳಿಗಾಗಿ. ಅತ್ಯಾಚಾರಕ್ಕೆ. ಗುಂಪು ಹತ್ಯೆಗೆ, ಕಾಲ್ತುಳಿತಕ್ಕೆ ಇತ್ಯಾದಿಗಳಿಗೆ ಆ ಊರು ಅಪಾರ ಖ್ಯಾತಿಗಳಿಸಿದೆ. ಆದರೆ, ಕೆಲವು ದಿನಗಳ ಹಿಂದೆ ಆ ಊರು ಪುನಃ ಮಾಧ್ಯಮಗಳಲ್ಲಿ ಸದ್ದು ಮಾಡಿತು. ಕಾರಣ: ಆ ಊರಿನಲ್ಲಿ ದೇಶವೇ ಬೆಚ್ಚಿ ಬೀಳಿಸುವ ಘಟನೆವೊಂದು ನಡೆಯಿತು; ಶಾಲೆವೊಂದರ ‘ಅಭ್ಯುದಯ’ಕ್ಕಾಗಿ ನಡೆದ ಮಾಟಮಂತ್ರದ ಭಾಗವಾದ ನರಬಲಿಗೆ 2ನೇ ತರಗತಿ ಬಾಲಕನೊಬ್ಬನ ಹತ್ಯೆ ನಡೆದಿದೆ!

ಕೆಲವು ವರ್ಷಗಳ ಹಿಂದೆ, ನಮ್ಮ ದೇಶದ ರಾಜಧಾನಿಯಾದ ದೆಹಲಿಯ 'ಬುರಾರಿ'ಯಲ್ಲಿ ಒಂದೇ ಕುಟುಂಬದ ಹನ್ನೊಂದು ಮಂದಿಯರು, ಒಂದೇ ಸವನೆ ನೇಣಿಗೆ ಶರಣಾದರು. ಅದೊಂದು ಸಾಮಾನ್ಯ ಆತ್ಮಹತ್ಯೆ ಆಗಿರಲಿಲ್ಲ. ಬದಲಾಗಿ, ಮೌಢ್ಯತೆಯಿಂದ ನರಳುತ್ತಿದ್ದ ಆ ಕುಟುಂಬವು, ತಮ್ಮ ಪೂರ್ವಜರಿಗಾಗಿ ತಮ್ಮ ಆತ್ಮವನ್ನೇ ಸಮರ್ಪಿಸುವ ನೆಪದಲ್ಲಿ ನೇಣಿಗೇಯಾ ಶರಣಾದರು. ವಿಷಾದಕಾರಿ ವಿಷಯವೇನೆಂದರೆ, ಅದೊಂದು ಅನಕ್ಷರಥ ಕುಟುಂಬವಾಗಿರಲಿಲ್ಲ; ಬದಲಾಗಿ, ಪದವೀಧರರ ಕುಟುಂಬವಾಗಿತ್ತು.

ಬೇಲಿಯೇ ಎದ್ದು ಹೊಲ ಮೇಯ್ದರೆ ಎಂಬಂತೆ ಮೂಢನಂಬಿಕೆಗಳಿಗೆ ಕಡಿವಾಣ ಹಾಕಿ, ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕಾಗಿದ್ದ, ಮತ್ತು ಮಕ್ಕಳಿಗೆ ಪ್ರಜ್ವಲ ಭವಿಷ್ಯಕ್ಕೆ ನಾಂದಿ ಹಾಡಬೇಕಾಗಿದ್ದ ಪ್ರಾಂಶುಪಾಲರೇ ಬಾಲಕನ ಹತ್ಯೆ ನಡೆಸಿದ್ದು ಖೇದಕರ ವಿಷಯವಾಗಿದೆ. ವಿಷಯವೇನೆಂದರೆ, ಆ ಶಿಕ್ಷಣ ಸಂಸ್ಥೆಯನ್ನು ಸಮೃದ್ಧಿಗೊಳಿಸುವುದಕ್ಕಾಗಿ 2ನೇ ತರಗತಿಯಲ್ಲಿ ಓದುತ್ತಿರುವ 11 ವರ್ಷದ ಬಾಲಕನನ್ನು ಆತನ ಶಾಲೆಯ ಆಡಳಿತ ಮಂಡಳಿಯವರು ಮತ್ತು ಪ್ರಾಂಶುಪಾಲರು ಸೇರಿ ಮಾಟ ಮಂತ್ರ ನೆರವಿರಿಸಿ, ಅದರ ಭಾಗವಾದ ನರಬಲಿಗಾಗಿ ವಿದ್ಯಾರ್ಥಿಯನ್ನೇ ಹತ್ಯೆಗೈದಿದ್ದಾರೆ. ಪೊಲೀಸರ ಪ್ರಕಾರ, 'ಕೃತಾರ್ಥ್' ಹೆಸರಿನ ಬಾಲಕ DL ಪಬ್ಲಿಕ್ ಸ್ಕೂಲ್‌ ನಲ್ಲಿ ಓದುತ್ತಿದ್ದ. 'ತಾಂತ್ರಿಕತೆ'ಯಂತ ಆಚರಣೆಗಳಲ್ಲಿ ಅಪಾರ ನಂಬಿಕೆಯಿಟ್ಟಿದ್ದ ಶಾಲೆಯ ಮಾಲೀಕ ಜಸೋಧನ್ ಸಿಂಗ್ ಅವರು, ತನ್ನ ಮಗ (ಶಾಲೆಯ ನಿರ್ದೇಶಕ) ದಿನೇಶ್ ಬಾಘೆಲ್‌ ಗೆ ಶಾಲೆಯ ಮತ್ತು ಅವರ ಕುಟುಂಬದ "ಅಭ್ಯುದಯ"ಕ್ಕಾಗಿ ಬಾಲಕನ ಬಲಿ ನೆರವೇರಿಸುವಂತೆ ಕೇಳಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಶಾಲೆಯೇ ತನ್ನ ಉನ್ನತಿಗಾಗಿ ಮೌಢ್ಯವನ್ನು ನೆಚ್ಚಿಕೊಂಡ ಮೇಲೆ ಈ ಶಾಲೆಯು ವಿದ್ಯಾರ್ಥಿಗಳಿಗೆ ನೀಡುವ ಶಿಕ್ಷಣದ ಗುಣಮಟ್ಟ ಹೇಗಿರಬಹುದು? ನರಬಲಿಯಲ್ಲಿ ಶಿಕ್ಷಕರೂ ಭಾಗವಹಿಸಿದ್ದಾರೆ ಎಂದ ಮೇಲೆ, ಇಂತಹ ಶಿಕ್ಷಕರು ಎಂತಹ ಸಮಾಜವನ್ನು ನಿರ್ಮಾಣ ಮಾಡಬಹುದು? ಎನ್ನುವ ಕಾಡುವ ಪ್ರಶ್ನೆಗಳು ಚುಚ್ಚುತ್ತಿವೆ.

ದೇಶದಲ್ಲಿ ಇಂತಹ ನಡೆಬಾರದ ದುರ್ಘಟನೆಗಳು ಆಗಾಗ ಬೆಳಕಿಗೆ ಬರುತ್ತಿರುತ್ತವೆ. ಉತ್ತರ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಇದೊಂದು ಪಿಡುಗಾಗಿ ಪರಿಣಮಿಸಿದೆ. ದಕ್ಷಿಣ ಭಾರತದಲ್ಲಿಯೂ ಆಗಾಗ ಮಕ್ಕಳ ಮೃತದೇಹಗಳು ಪತ್ತೆಯಾಗಿ, ನರಬಲಿಯಂತಹ ಘಟನೆಗಳು ನಡೆದಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಿದೆ. ನಿಧಿಯ ಆಸೆಗಾಗಿ, ರೋಗ ನಿವಾರಣೆಗಾಗಿ, ಮನೆಯಲ್ಲಿ ನೆಮ್ಮದಿಗಾಗಿ ಹೀಗೆ ಹಲವು ಕಾರಣಗಳನ್ನು ಮುಂದಿಟ್ಟುಕೊಂಡು ಮಂತ್ರವಾದಿಗಳ ಸಲಹೆ ಪಡೆದು ನರಬಲಿ ನೀಡಿದ ಉದಾಹರಣೆಗಳಿವೆ.

ಯಾದಗಿರಿಯಲ್ಲಿ ಮಗುವಿನ ಅಜ್ಜನೇ ಒಂದೂವರೆ ವರ್ಷದ ಮಗುವನ್ನು ಬಲಿಕೊಟ್ಟ ಘಟನೆ ನಡೆದಿತ್ತು. ಕೆಲವು ವರ್ಷಗಳ ಹಿಂದೆ ಮುಂಡಗೋಡಿನಲ್ಲಿ 17 ವರ್ಷದ ಬಾಲಕನ ತಲೆಯನ್ನು ಚೆಂಡಾಡಿ ಬಲಿಕೊಡಲಾಗಿತ್ತು. ರಮೇಶ್ ದಾಸ್ ಗೊಲ್ಲರ್ ಎಂಬಾತನನ್ನು ಈ ಸಂಬಂಧ ಬಂಧಿಸಿದ್ದರು. ದುರ್ಗಾದೇವಿಯೇ ಈತನ ಕನಸಿನಲ್ಲಿ ಬಂದು ಬಾಲಕನನ್ನು ಬಲಿಕೊಡಬೇಕು ಎಂದು ಕೇಳಿಕೊಂಡಿದ್ದಳು ಎಂದು ಈತ ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದ.

ಅಸ್ಸಾಂ, ಜಾರ್ಖಂಡ್‌ನಂತಹ ರಾಜ್ಯಗಳಲ್ಲಿ ಕಪಟ ಬಾಬಾಗಳು, ಮಂತ್ರವಾದಿಗಳ ಕುತಂತ್ರದಿಂದ ಇಂತಹ ನರಬಲಿಗಳು ವ್ಯಾಪಕವಾಗಿ ನಡೆಯುತ್ತವೆ. ಆದರೆ, ಅಕ್ಷರತೆಗೆ ಹೆಸರುವಾಸಿಯಾಗಿದ್ದ ಕೇರಳದಲ್ಲೂ ಕಳೆದ ವರ್ಷ ನಡೆದ ಭೀಕರ ನರಬಲಿಗೆ ಆ ರಾಜ್ಯವೂ ತನ್ನ ಘನತೆಯನ್ನು ಕಳೆದುಕೊಂಡಿತು.

ಈಶಾನ್ಯ ಭಾರತದಲ್ಲಿ ಒಬ್ಬಂಟಿ ಮಹಿಳೆಯನ್ನು ಮಾಟಗಾತಿ ಎಂದು ಸಂಶಯಿಸಿ ಗ್ರಾಮಸ್ಥರೇ ಒಟ್ಟುಗೂಡಿ ಸಾಯಿಸುವ ಪ್ರಕರಣಗಳು ಆಗಾಗ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತವೆ.ಕಳೆದ ಸೆಪ್ಟಂಬರ್‌ನಲ್ಲಿ ಜಾರ್ಖಂಡ್‌ ನಲ್ಲಿ ಮೂವರು ಮಹಿಳೆಯರೂ ಸೇರಿದಂತೆ ಒಟ್ಟು ಐವರನ್ನು ಗ್ರಾಮಸ್ಥರೇ ಸೇರಿ ಥಳಿಸಿ ಕೊಂದು ಹಾಕಿದ ಘಟನೆ ನಡೆದಿದೆ. ಛತ್ತೀಸ್‌ಗಡದ ಸುಕ್ಮಾ ಜಿಲ್ಲೆಯ ಹಳ್ಳಿಯಲ್ಲಿ ಈ ಕೃತ್ಯ ನಡೆದಿದ್ದು, ಈ ಕುಟುಂಬ ವಾಮಾಚಾರ ನಡೆಸುತ್ತಿದೆ ಎಂದು ಆರೋಪಿಸಿ ಎಲ್ಲರನ್ನೂ ಕೊಂದು ಹಾಕಿದ್ದರು.

ಅನೇಕ ಸಂದರ್ಭದಲ್ಲಿ ವೈಯಕ್ತಿಕ ದ್ವೇಷವಿದ್ದರೆ, ವಾಮಾಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಊರಿನ ಜನರನ್ನು ಕುಟುಂಬದ ವಿರುದ್ಧ ಎತ್ತಿ ಕಟ್ಟುವುದಿದೆ. ಹಾಗೆಯೇ ಒಂಟಿ ಮಹಿಳೆಯ ಆಸ್ತಿ ಕಬಳಿಸುವುದಕ್ಕಾಗಿಯೇ ಆಕೆಯ ತಲೆಯ ಮೇಲೆ ಮಾಟಗಾತಿ ಆರೋಪ ಹೊರಿಸಿ ಕೊಂದು ಹಾಕುವುದು ಸಾಮಾನ್ಯ ವಿಷಯವಾಗಿದೆ. ಆದರೆ, ಶಾಲೆಯೊಂದು ತನ್ನ ಉನ್ನತಿಗಾಗಿ ತನ್ನದೇ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಯೊಬ್ಬನನ್ನು ಕೊಂದು ಹಾಕಿರುವುದು ಮಾತ್ರ ಇತ್ತೀಚಿನ ದಿನಗಳಲ್ಲಿ ಹೊಸತಾಗಿದೆ. ಇದರಲ್ಲಿ ಶಿಕ್ಷಕರೂ ಭಾಗಿಯಾಗಿದ್ದಾರೆ ಎನ್ನುವುದು ನಮ್ಮ ಶಿಕ್ಷಣ ವ್ಯವಸ್ಥೆಯ ದುರಂತವನ್ನು ಹೇಳುತ್ತದೆ.

ಉತ್ತರ ಪ್ರದೇಶದಲ್ಲಿ ನಡೆದ ನರಬಲಿ ಪ್ರಕರಣವನ್ನು ಕೇವಲ ಮೌಢ್ಯಕ್ಕಷ್ಟೇ ಸೀಮಿತಗೊಳಿಸಬಾರದು. ಇದರಲ್ಲಿ ಶಿಕ್ಷಕರೂ ಭಾಗಿಯಾಗಿರುವುದರಿಂದ ನಮ್ಮ ಶಿಕ್ಷಣ ವ್ಯವಸ್ಥೆ ಜನರೊಳಗಿನ ಮೌಢ್ಯಗಳನ್ನು, ಜಾತೀಯತೆಯನ್ನು ಅಳಿಸುವಲ್ಲಿ ಯಾಕೆ ಸೋಲುತ್ತಿದೆ ಎನ್ನುವುದರ ಕುರಿತು ಆತ್ಮವಿಮರ್ಶೆ ನಡೆಸಬೇಕು. ಶಾಲೆ ಕಾಲೇಜುಗಳಲ್ಲಿ ಕಲಿಸುವ ಶಿಕ್ಷಕರನ್ನು ವೈಚಾರಿಕವಾಗಿ ಶಿಕ್ಷಿತರನ್ನಾಗಿಸುವ ಕೆಲಸ ನಡೆಯಬೇಕಾಗಿದೆ ಎನ್ನುವುದನ್ನು ಇದು ಹೇಳುತ್ತದೆ. ಹಾಗಾಗಿ, ಈ ಮೌಢ್ಯಗಳ ವಿರುದ್ಧ ಒಂದು ಕಠಿಣ ಕಾನೂನನ್ನು ಜಾರಿಗೊಳಿಸಲು ಕೇಂದ್ರ ಸರಕಾರ ಇನ್ನಾದರೂ ಮುಂದಾಗಬೇಕು; ಈ ಮೂಲಕ ಅಮಾಯಕ ಮಕ್ಕಳ ಜೀವವನ್ನು ಉಳಿಸಬೇಕು ಮಾತ್ರವಲ್ಲ, ವಾಮಾಚಾರದ ಹೆಸರಿನಲ್ಲಿ ಮಹಿಳೆಯರ ಮೇಲೆ ನಡೆಯುವ ಬರ್ಬರ ದೌರ್ಜನ್ಯಗಳನ್ನು ತಡೆಯಬೇಕು.

ಮಕ್ಕಳಲ್ಲೇ ವೈಜಾನಿಕ ಮನೋಭಾವನೆಗಳನ್ನು ಹೆತ್ತವರೇ ಬೆಳೆಸಬೇಕು. ಮಕ್ಕಳಿಗೆ ಆಡಲು ದೂರದರ್ಶಕ, ಸೌರ ಮಂಡಲದ ಮಾಡೆಲ್ ಗಳು ಇತ್ಯಾದಿ ನೀಡಬೇಕು. ಚಂದ್ರ, ಮಂಗಳ ಗ್ರಹಕ್ಕೆ ತಲುಪುವ ಕನಸು ಕಾಣುತ್ತಿರುವ ದೇಶದಲ್ಲಿ, ಇನ್ನೂ ನರಬಲಿಯಂತಹ ಅನಿಷ್ಟಗಳು ಅಸ್ತಿತ್ವದಲ್ಲಿದೆ ಎನ್ನುವುದೇ ನಾಚಿಕೆಗೇಡಿನ ವಿಷಯವಾಗಿದೆ. ಮೌಢ್ಯತೆಯ ಭಾಗವಾಗಿರುವ ನರಬಲಿಗಳಂತಹ ಹೇಯ ಕೃತ್ಯಗಳಿಂದ ಮನುಷ್ಯರ ಜೀವಗಳೊಂದಿಗೆ ದೇಶದ ಘನತೆಯೂ ಬಲಿಯಾಗುತ್ತಿದೆ!

- ಶಿಕ್ರಾನ್ ಶರ್ಫುದ್ದೀನ್ ಎಂ., ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ