ಮೌನದ ಮಾತು ಮತ್ತೊಂದು ಗಝಲ್
ಮೌನವೇತಕೆಯೆನ್ನ ಹೃದಯದಿ
ಪ್ರೀತಿ ಮಮತೆಯು ಕಂತಿತೆ
ಒಲವಿನಾಸರೆ ದೂರ ಸಾಗುತ
ಬದುಕ ಬಯಕೆಯು ನಂದಿತೆ
ಛದ್ಮವೇಷದ ಸುಳಿಯ ಅಲೆಗಳು
ಕೇಕೆ ಕೂಗಲಿ ನಿಂತಿತೆ
ಸಾಧು ಜನ್ಮವು ನೋವ ಕೊಡುತಿರೆ
ಮನದ ತಾಳವು ತಪ್ಪಿತೆ
ಜೀವ ಹೆಣಗುತೆ ಕಣ್ಣ ಹನಿಗಳು
ಸುತ್ತ ತನುವಲಿ ತುಂಬಿತೆ
ಮಾತು ಬರದೆಲೆ ಮೂಖವಾಗಲು
ಕ್ಷಣಿಕ ಸುಖವದು ಮುರುಟಿತೆ
ಭಾವ ಬಿಂಬವು ಭವದ ಸುತ್ತಲು
ಗಿರಕಿ ಹೊಡೆಯುತ ಮಲಗಿತೆ
ಅಂತರಾತ್ಮಕೆ ಸೋಲು ಕಾಣಲು
ಮೇಲು ಲೋಕವ ಸೇರಿತೆ
***
ಗಝಲ್
ನೆನಪುಗಳ ಜೊತೆಗಿರುವ ಬದುಕಿನಲ್ಲಿ ಒಲವುಗಳೆ ಜೀವನವೊ
ಮನಸುಗಳೆಂಬ ಪಯಣದಲ್ಲಿರುವ ಚೆಲುವುಗಳೆ ಜೀವನವೊ
ಉದ್ವೇಗ ತಂಬಿರುವ ಮಾತುಗಳಲ್ಲಿ ಯಾವತ್ತೂ ಸವಿಯು ಇಹುದೇನು
ಕತ್ತಲೆಯ ಜೊತೆಗೇ ಬಾಳುವ ಮನೆಗಳಲ್ಲಿಯ ಚಿಂತನೆಗಳೆ ಜೀವನವೊ
ಶಿಷ್ಟಾಚಾರದ ಹೆಸರಿನಲ್ಲಿ ಮನಕದಡುವ ನೋವುಗಳು ಬರಬಹುದು
ಬೀಗ ಹಾಕಿದ ಮನಗಳಲ್ಲಿಯ ಪರಮಾಣು ಅಂಕುಶಗಳೆ ಜೀವನವೊ
ಬುವಿಗೆ ಬಂದವರು ಮನೆಯ ಹೊರಗಿನ ಗಲ್ಲಿಗಳಿಗೆ ಬರಲೇ ಬೇಕು
ಚಿತ್ತ ಸಮವಿರದ ಸ್ವರೂಪಗಳೊಳಗೆ ಅರ್ಥ ಅನರ್ಥಗಳೆ ಜೀವನವೊ
ನಡುವೆ ತೊಡರುಗಳು ಅಡ್ಡ ಗೊಡೆಗಳ ಹತ್ತಿರ ಬಿರುಸಾಧನೆಯೇ ಈಶಾ
ಪವಿತ್ರ ಆತ್ಮದ ನೈಜ ಸ್ವರೂಪಗಳ ಜೊತೆಯಲ್ಲಿ ದುರಾಸೆಗಳೆ ಜೀವನವೊ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ