ಮೌನದ ಸದ್ದು

ಮೌನದ ಸದ್ದು

 ಮೌನದ ಮಹತ್ತನ್ನು ತಿಳಿಸುವ ಝೆನ್ ಕತೆಯೊಂದು ಇಲ್ಲಿದೆ:

 ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ. ಚೆನ್ನಾಗಿ ರಾಜ್ಯಭಾರ ಮಾಡುತ್ತಿದ್ದ. ಅವನಿಗೊಬ್ಬನೇ ಮಗ. ಯುವರಾಜ ಅರುವತ್ತನಾಲ್ಕು ವಿದ್ಯೆಗಳನ್ನು ಕಲಿತು ಯೌವನಕ್ಕೆ ಕಾಲಿಟ್ಟ.

 ತಾನು ರಾಜನಾಗಬೇಕು, ಸಿಂಹಾಸನದಲ್ಲಿ ಕೂರಬೇಕು ಎಂಬ ಆಶೆ ಯುವರಾಜನ ಮನದಲ್ಲಿ ಮೊಳೆಯಿತು. ಈ ಆಶೆ ದಿನದಿಂದ ದಿನಕ್ಕೆ ಬೆಳೆಯಿತು. ಯುವರಾಜ ಮುಂಚಿನಂತಿಲ್ಲ ಎಂಬುದನ್ನು ಮಹಾರಾಜ ಗಮನಿಸಿದ. ಬದುಕಿನಲ್ಲಿ ಹಣ್ಣಾದ ಮಹಾರಾಜನಿಗೆ ಎಲ್ಲವೂ ಅರ್ಥವಾಯಿತು. ಮಗನನ್ನು ಬಳಿಗೆ ಕರೆದು ಹೇಳಿದ, “ಯುವರಾಜಾ, ನನಗೆ ವಯಸ್ಸಾಯಿತು. ಬೇಗನೇ ನಿನಗೆ ಪಟ್ಟಾಭಿಷೇಕ ಮಾಡುತ್ತೇನೆ. ಆದರೆ, ಅದಕ್ಕೂ ಮುಂಚೆ ನೀನು ದೂರದ ಕಾಡಿನಲ್ಲಿ ಆಶ್ರಮದಲ್ಲಿರುವ ನನ್ನ ಗುರುಗಳ ಆಶೀರ್ವಾದ ಪಡೆಯಬೇಕಾಗಿದೆ. ಅದಕ್ಕಾಗಿ ನಾಳೆಯೇ ಹೊರಡು.”

 ಮರುದಿನ ಮುಂಜಾನೆ ಕುದುರೆಯೇರಿ ಹೊರಟ ಯುವರಾಜ. ದಿನವಿಡೀ ಪ್ರಯಾಣ ಮಾಡಿ ಸಂಜೆಯ ಹೊತ್ತಿಗೆ ಗುರುಗಳ ಆಶ್ರಮ ತಲಪಿದ. ಗುರುಗಳ ಪಾದಗಳಿಗೆ ಎರಗಿ, “ಗುರುಗಳೇ, ನನ್ನ ಅಪ್ಪ, ಮಹಾರಾಜರು ನಿಮ್ಮಲ್ಲಿಗೆ ನನ್ನನ್ನು ಕಳಿಸಿದ್ದಾರೆ. ನನಗೆ ಆಶೀರ್ವಾದ ಮಾಡಿ” ಎಂದ.

 ತಕ್ಷಣ ಗುರುಗಳು, “ಆಗಲಿ ಯುವರಾಜಾ, ನನ್ನ ಆಶೀರ್ವಾದ ಬೇಕಾದರೆ ನೀನೊಂದು ಪರೀಕ್ಷೆ ಎದುರಿಸಬೇಕು. ಏಳು ದಿನ ಕಾಡಿನಲ್ಲಿ ಇರಬೇಕು. ಅಲ್ಲಿ ಏನೇನು ಸದ್ದುಗಳನ್ನು ಕೇಳಿದೆಯೆಂದು ಬಂದು ಹೇಳಬೇಕು. ಈಗಲೇ ಹೊರಡು” ಎಂದು ಆದೇಶವಿತ್ತರು.

 ಇದೊಂದು ಹೊಸರೀತಿಯ ಪರೀಕ್ಷೆ ಎಂದುಕೊಳ್ಳುತ್ತಾ ಯುವರಾಜ ಕಾಡಿನೊಳಕ್ಕೆ ನಡೆದ. ಒಂದೊಂದು ದಿನವನ್ನು ಕಳೆಯುವುದೂ ಯುವರಾಜನಿಗೆ ದೊಡ್ಡ ಸವಾಲಾಯಿತು. ಅಲ್ಲಿ ಅರಮನೆಯಲ್ಲಿ ಹೊತ್ತುಹೊತ್ತಿಗೆ ಮೃಷ್ಟಾನ್ನ ಭೋಜನ. ಇಲ್ಲಿ ಕಾಡಿನಲ್ಲಿ ಯಾವುದೋ ಹಣ್ಣು, ಗೆಡ್ಡೆಗೆಣಸು. ಅರಮನೆಯಲ್ಲಿ ಮಲಗಲು ಸುಪ್ಪತ್ತಿಗೆ. ಇಲ್ಲಿ ಮರದ ರೆಂಬೆಗಳೇ ಗತಿ. ಅದಲ್ಲದೆ ಹುಲಿ ದಾಳಿ ಮಾಡಿದರೆ, ಹಾವು ಕಚ್ಚಿದರೆ, ಚೇಳು ಕುಟುಕಿದರೆ ಎಂಬ ಭಯ. ರುಚಿರುಚಿಯಾದ ಊಟವಿಲ್ಲದೆ, ಸೊಂಪಾದ ನಿದ್ದೆಯಿಲ್ಲದೆ ಏಳು ದಿನಗಳನ್ನು ಕಾಡಿನಲ್ಲಿ ಹೇಗೋ ಕಳೆದು ಯುವರಾಜ ಆಶ್ರಮಕ್ಕೆ ಹಿಂತಿರುಗಿದ. ಪುನಃ ಗುರುಗಳ ಪಾದಕ್ಕೆ ಬಿದ್ದು “ಗುರುಗಳೇ, ತಾವು ಹೇಳಿದಂತೆ ಏಳು ದಿನ ಕಾಡಿನಲ್ಲಿದ್ದೆ. ನನಗೆ ಆಶೀರ್ವಾದ ಮಾಡಿ” ಎಂದ.

“ಎದ್ದೇಳು ಯುವರಾಜಾ, ಕಾಡಿನಲ್ಲಿ ಏನೇನು ಸದ್ದು ಕೇಳಿದೆ ಹೇಳು” ಎಂದಾಗ, “ಅದೇ ಗುರುಗಳೇ, ಕಾಡಿನ ಸದ್ದುಗಳನ್ನು ಕೇಳಿದೆ” ಎಂಬ ಉತ್ತರ. ಈಗ ಗುರುಗಳ ನೇರ ಪ್ರಶ್ನೆ, “ಯುವರಾಜಾ, ಕಾಡಿನ ಸದ್ದುಗಳು ಎಂದರೇನು?”

ವಿಧಿಯಿಲ್ಲದೆ ಯುವರಾಜ ಉತ್ತರಿಸಿದ, “ಕಾಡಿನಲ್ಲಿ ನರಿ ಊಳಿಡುವುದನ್ನು ಕೇಳಿದೆ, ಆನೆ ಘೀಳಿಡುವುದನ್ನು ಕೇಳಿದೆ, ಹುಲಿ ಗರ್ಜಿಸುವುದನ್ನು ಕೇಳಿದೆ, ಕೋಗಿಲೆ ಕುಹೂ ಹಾಡುವುದನ್ನು ಕೇಳಿದೆ, ದೂರದಲ್ಲಿ ಜಿಂಕೆಗಳ ಹಿಂಡು ಓಡುವಾಗ, ಅವುಗಳ ಗೊರಸು ಕಲ್ಲುಗಳಿಗೆ ತಗಲಿದಾಗ ಠಣ್‍ಠಣ್ ಸದ್ದು ಕೇಳಿದೆ.”

 ಗುರುಗಳು ಯುವರಾಜನನ್ನು ಎವೆಯಿಕ್ಕದೆ ನೋಡಿ ಹೇಳಿದರು, “ಯುವರಾಜಾ, ನೀನು ಕಾಡಿನಲ್ಲಿ ಕೇಳಬೇಕಾದ ಸದ್ದುಗಳು ಬಹಳಷ್ಟಿವೆ. ಇನ್ನೊಮ್ಮೆ ಕಾಡಿಗೆ ಹೋಗು. ಎರಡು ವಾರ ಅಲ್ಲಿದ್ದು ಹೊಸ ಸದ್ದುಗಳನ್ನು ಗಮನವಿಟ್ಟು ಕೇಳು. ಅನಂತರ ಬಂದು ಹೇಳು.”

 ಪುನಃ ಕಾಡಿನೊಳಕ್ಕೆ ಹೋದ ಯುವರಾಜ. ಈಗೀಗ ಕಾಡಿನ ಬದುಕು ಅಭ್ಯಾಸವಾಗ ತೊಡಗಿತ್ತು. ಎರಡು ವಾರಗಳ ಬಳಿಕ ವಾಪಾಸು ಬಂದ. ಗುರುಗಳ ಅಡಿಗಳಿಗೆರಗಿ, “ಗುರುಗಳೇ, ಕಾಡಿನಲ್ಲಿ ಹೊಸ ಸದ್ದುಗಳನ್ನು ಕೇಳಿದೆ. ನನಗೆ ಆಶೀರ್ವಾದ ಮಾಡುತ್ತೀರಾ” ಎಂದು ವಿನಂತಿಸಿದ.

 ಗುರುಗಳು ಮುಗುಳ್ನಗುತ್ತಾ, “ಎದ್ದೇಳು ಯುವರಾಜಾ, ಏನೇನು ಹೊಸ ಸದ್ದು ಕೇಳಿದೆ” ಎಂದು ಪ್ರಶ್ನಿಸಿದರು. ನಿಧಾನವಾಗಿ ಉತ್ತರಿಸಿದ ಯುವರಾಜ, “ಗುರುಗಳೇ, ಬಾಯಾರಿದಾಗ ನೀರು ಕುಡಿಯಲು ತೊರೆಯ ಬಳಿ ಹೋದಾಗ, ನೀರಿನಲ್ಲಿ ಮೀನು ಈಜುವ ಸದ್ದು ಕೇಳಿದೆ. ಅಮ್ಮ ಹಕ್ಕಿ ಮರಿ ಹಕ್ಕಿಗೆ ಗುಟುಕು ಕೊಡುವ ಸದ್ದು ಕೇಳಿದೆ.”

 “ಪರವಾಗಿಲ್ಲ ಯುವರಾಜಾ, ಮತ್ತೇನು ಸದ್ದು ಕೇಳಿದೆ” ಎಂದು ಗುರುಗಳು ಹುರಿದುಂಬಿಸಿದಾಗ ಅವನ ಉತ್ತರ, “ಕಾಡಿನ ದಟ್ಟ ಕತ್ತಲಿನಲ್ಲಿ ಜೇಡವೊಂದು  ಬಲೆ ನೇಯುವ ಸದ್ದು ಕೇಳಿದೆ. ಎತ್ತರದ ಮರದ ತುತ್ತತುದಿಯಿಂದ ಹಣ್ಣಾದ ಎಲೆಯೊಂದು ಕಳಚಿಕೊಂಡು ಗಾಳಿಯಲ್ಲಿ ತೇಲುತ್ತಾ ಕೆಳಕ್ಕಿಳಿದು, ನೆಲಕ್ಕೆ ಅಪ್ಪಳಿಸುವ ಸದ್ದು ಕೇಳಿದೆ, ಗುರುಗಳೇ.”

  ಈಗ, ಯುವರಾಜನ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಗುರುಗಳ ಆದೇಶ, “ಯುವರಾಜಾ, ಕಾಡಿನಲ್ಲಿ ನೀನು ಕೇಳಲೇ ಬೇಕಾದ ಸದ್ದುಗಳು ಇನ್ನೂ ಎಷ್ಟೋ ಇವೆ. ನಿನಗಿದು ಕೊನೆಯ ಅವಕಾಶ. ಮತ್ತೊಮ್ಮೆ ಕಾಡಿಗೆ ಹೋಗು. ಒಂದು ತಿಂಗಳು ಅಲ್ಲಿದ್ದು ಬಾ. ಮೈಯೆಲ್ಲ ಕಿವಿಯಾಗಿ ಸದ್ದು ಕೇಳಿ, ಬಂದು ಹೇಳು.”

 ಯುವರಾಜ ಸಣ್ಣಗೆ ನಡುಗಿದ. ಮಹಾರಾಜರು ಗುರುಗಳಿಗೇನಾದರೂ ಸಂದೇಶ ನೀಡಿದ್ದಾರೋ ಎಂಬ ಸಂಶಯ ಹುಟ್ಟಿಕೊಂಡಿತು. ಆದರೆ ರಾಜನಾಗುವ ಕನಸು ಬೆಚ್ಚಗಿತ್ತು. ಸಿಂಹಾಸನದ ಆಶೆ ಅವನನ್ನು ಕಾಡಿನೊಳಕ್ಕೆ ಸೆಳೆಯಿತು. ಕಾಡಿನಲ್ಲಿ ದಿನಗಳು ಉರುಳಿದಂತೆ, ಅಲ್ಲಿನ ಬದುಕು ಸಹ್ಯವಾಯಿತು. ಮನ ನಿರಾಳವಾಯಿತು. ಒಂದು ತಿಂಗಳ ನಂತರ, ಗುರುಗಳ ಆಶ್ರಮಕ್ಕೆ ಮರಳಿದ ಯುವರಾಜ. ಗುರುಗಳ ಪಾದಗಳಿಗೆ ಸಾಷ್ಟಾಂಗವೆರಗಿದ. ಅವನು ಈಗ ಏನೂ ಮಾತಾಡಲಿಲ್ಲ. ಅವನ ಮಾತು ಮುಗಿದಿತ್ತು.

ಸಮಯ ಸರಿಯುತ್ತಿತ್ತು. ಕೊನೆಗೆ ಗುರುಗಳೇ ಮಾತನಾಡಿದರು, “ಎದ್ದೇಳು ಯುವರಾಜಾ. ಒಂದು ತಿಂಗಳು ಕಾಡಿನಲ್ಲಿದ್ದಾಗ ಏನೇನು ಹೊಸ ಸದ್ದು ಕೇಳಿದೆ, ಹೇಳು.”

 ಹಲವಾರು ನಿಮಿಷಗಳ ಬಳಿಕ ನಿಧಾನವಾಗಿ ಮಾತಿಗೆ ತೊಡಗಿದ ಯುವರಾಜ. “ಗುರುಗಳೇ, ಕಾಡಿನಲ್ಲಿ ನನಗಾದದ್ದು ಅದ್ಭುತ ಅನುಭವ. ಜೀವನದಲ್ಲಿ ಅಂತಹ ಸದ್ದುಗಳನ್ನೇ ನಾನು ಕೇಳಿರಲಿಲ್ಲ. ಮುಂಜಾನೆ ಆಕಾಶದಲ್ಲಿ ಸೂರ್ಯ ಮೇಲೇರುತ್ತಿದ್ದಂತೆ, ಅವನ ಕಿರಣಗಳು ಮರಗಳ ಎಲೆಗಳ ನಡುವೆ ತೂರಿಕೊಂಡು ಮಣ್ಣಿನ ಕಣಗಳನ್ನು ಸೀಳಿಕೊಂಡು ಹೋಗುವ ಸದ್ದು ಕೇಳಿದೆ.”

“ಮತ್ತೇನು ಸದ್ದು ಕೇಳಿದೆ” ಎಂದು ಗುರುಗಳು ಮೀಟಿದಾಗ, ಯುವರಾಜ ಕಣ್ಣು ಮುಚ್ಚಿ ತನ್ಮಯನಾಗಿ ಉತ್ತರಿಸಿದ, “ಒದ್ದೆ ಮಣ್ಣಿನಲ್ಲಿ ಬಿದ್ದ ಬೀಜವೊಂದು ಟಿಸಿಲ್ಲನೆ ಮೊಳಕೆಯೊಡೆಯುವ ಸದ್ದು ಕೇಳಿದೆ. ಗಿಡದಲ್ಲಿ ಮೊಗ್ಗೊಂದು ಅರಳಿ ಹೂವಾಗುವ ಸದ್ದು ಕೇಳಿದೆ. ಸೂರ್ಯ ಮೇಲೇರಿದಂತೆ, ಎಲೆಯ ಮೇಲಿದ್ದ ಇಬ್ಬನಿಯ ಹನಿಗಳು ಎಲೆಯ ತುದಿಗೆ ಜಾರಿ, ನೀರ ಬಿಂದುವಾಗಿ ಮಣ್ಣಿಗೆ ಬಿದ್ದು, ನೆಲದಾಳಕ್ಕೆ ಇಳಿಯುವ ಸದ್ದು ಕೇಳಿದೆ. ಗುರುಗಳೇ, ಮೌನದ ಸದ್ದು ಕೇಳಿದೆ.”

 ಆಗ ಅಲ್ಲಿ ಕವಿದ ಮೌನವನ್ನು ಮುರಿಯುತ್ತಾ ಗುರುಗಳ ಉದ್ಗಾರ, “ಭೇಷ್, ಯುವರಾಜಾ ಭೇಷ್. ಸದ್ದಲ್ಲದ ಸದ್ದನ್ನು ಕೇಳಲು ಕಲಿತಿದ್ದಿ. ಇದೇ ರೀತಿಯಲ್ಲಿ ಮಾತಲ್ಲದ ಮಾತನ್ನು ಕೇಳಲು ಕಲಿತುಕೋ. ನಿನ್ನ ಪ್ರಜೆಗಳು ಬಾಯಿಬಿಟ್ಟು ಹೇಳದ್ದನು ಕೇಳಲು ಶುರು ಮಾಡು. ಹಾಗೆ ಕೇಳುತ್ತಾ ಕೇಳುತ್ತಾ ಚೆನ್ನಾಗಿ ರಾಜ್ಯಭಾರ ಮಾಡು. ನಿನಗೆ ನನ್ನ ಆಶೀರ್ವಾದ.”

 ನಾವೆಲ್ಲರೂ ನೆಮ್ಮದಿಯ ಹುಡುಕಾಟದಲ್ಲಿದ್ದೇವೆ. ಬದುಕಿನಲ್ಲಿ ನೆಮ್ಮದಿ ಬೇಕಾದರೆ ಮೌನಕ್ಕೆ ಶರಣಾಗಬೇಕು. ನಾವು ಕೆಲಸ ಮಾಡುವಲ್ಲಿ ನಮ್ಮೊಂದಿಗೆ ಇರುವವರು ಬಾಯಿಬಿಟ್ಟು ಹೇಳದ್ದನ್ನು ಕೇಳಿದಾಗ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಹಾಗೆಯೇ ಮನೆಯವರೆಲ್ಲ ಬಾಯಿಬಿಟ್ಟು ಹೇಳದ್ದನ್ನು ಕೇಳಿದಾಗ ಮನೆಯಲ್ಲಿ ಶಾಂತಿ ಮನೆ ಮಾಡುತ್ತದೆ. ನಮ್ಮೊಳಗಿನ ಮೌನದಲ್ಲಿ ಚಿಮ್ಮುವ ಮಾತುಗಳಿಗೆ ಕಿವಿಗೊಟ್ಟಾಗ ನಮ್ಮ ಬದುಕಿನಲ್ಲಿ ನೆಮ್ಮದಿ ತುಂಬಿಕೊಳ್ಳುತ್ತದೆ, ಅಲ್ಲವೇ?

ಚಿತ್ರ ಕೃಪೆ: “ಅಮೃತ” ಪತ್ರಿಕೆ

Comments