ಮೌನವೇ ಒರೆಯಲಿ ಎನ್ನೆದೆಯ ಭಾವವನು!

ಮೌನವೇ ಒರೆಯಲಿ ಎನ್ನೆದೆಯ ಭಾವವನು!

ಕವನ

ನಿನ್ನ ಮೌನವು ಎನ್ನ 

ಮಾತಿಗೆಳೆಯುತಲಿಹುದು 

ಕದಡಿಹುದು ಎದೆಯ ಗೂಡು!

ಮಿಗಗಳಬ್ಬರವಿಲ್ಲ 

ಹಕ್ಕಿಯಿಂಚರವಿಲ್ಲ ಮೌನ ಕಾಡು!

 

ಮಾತಿರದ ನಿನ್ನ ಮುಖ

ಭಾವದೆದೆ ಕೆದಕಿಹುದು 

ಬದುಕಿಹುದು ಮೌನದಲಿ 

ನೀರವತೆ ಗೆದ್ದು!

ಮಾತಿನಕ್ಷರಗಳೆಲ್ಲಾ

ನಿಸ್ತೇಜವಾಗಿಹುದು

ಕಳೆಗುಂದಿ ಸತ್ತು ಬಿದ್ದು!

 

ಮೇಲೆ ನೀಲಾಕಾಶ

ತಾನೂ ಮೌನದೊಳೆನ್ನ 

ಅಣಕಿಸುತಲಿಹುದು ನಾ ಮಾತ ತೊರೆವಂತೆ!

ಸದ್ದಿಲ್ಲದೋಡುತಿವೆ ಮೋಡಗಳು

ಸಂದೇಶವನು ಹೊತ್ತೊಯ್ವ ಅಂಚೆಯವನಂತೆ!

 

ಜಗದದ್ಬುತವೆಲ್ಲ ಅಡಗಿಹುದು ಮೌನದಲಿ!

ಏನಿಹುದು ಮಾತಿನಲಿ? ಬರೇ ಒಣ ಜಗಳ!

ಮೌನದಲಿ ಬೆಳಕಾಗಿ ಮೌನದಲಿ ನಿಶೆ ತೂಗಿ

ನಿದ್ದೆಗೆಳೆಯುವ ಜಗದೊಳಗೆ ಇಹುದು ಬಹಳ!

 

ನಾನೊಂದು ಶಿಲೆಯಂತೆ

ಕಾನನದ ತರಗೆಲೆಯಂತೆ

ಇದ್ದೂ ಇಲ್ಲದಂತಿರುವೆ ಮೌನವಾಗಿ!

ಮಾತಿಗೇನಿಹುದರ್ಥ?! ಮಾತಿಲ್ಲಿ ವ್ಯರ್ಥ!

ಮೌನವೇ ಒರೆಯಲಿ  ಎನ್ನೆದೆಯ ಭಾವವನು 

ಅಪಾರ್ಥಗಳ ಸಂಕಟವ ನೀಗಿ!

-'ಮೌನಮುಖಿ' ಆತ್ರಾಡಿ ಪೃಥ್ವಿರಾಜ ಹೆಗ್ಡೆ, ನ್ಯಾಯವಾದಿ & ನೋಟರಿ, ಉಡುಪಿ

ಚಿತ್ರ್