ಮೌನ…!
ಮೌನವೆಂಬುದೊಂದು ಧ್ಯಾನ,
ಮೌನವೆಂಬುದೊಂದು ನರಕ...
ಮೌನ ಒಂದು ಅಗಾಧ ಶಕ್ತಿ,
ಮೌನ ಒಂದು ದೌರ್ಬಲ್ಯ..
ಮೌನ ನಿನ್ನೊಳಗಿನ ಆತ್ಮ,
ಮೌನ ನಿನ್ನ ಸಾವು ಕೂಡ....
ಮೌನಕ್ಕಿದೆ ಸಾವಿರ ಭಾಷೆಗಳ ಅರ್ಥ,
ಮೌನ ಒಂದು ನಿರ್ಲಿಪ್ತ ಬಾವ....
ಮೌನವೊಂದು ದಿವ್ಯಶಕ್ತಿ,
ಮೌನವೊಂದು ಅಸಹಾಯಕ ಸ್ಥಿತಿ...
ಮೌನ ಸಹಿಷ್ಣುತೆ,
ಮೌನ ಅಸಹನೀಯತೆ...
ಮೌನ ಜೀವನೋತ್ಸಾಹದ ಕುರುಹು,
ಮೌನ ಅವಸಾನದ ಮುನ್ಸೂಚನೆ...
ಮೌನಿಯ ಮನಸ್ಸು ಕರುಣಾಮಯಿ,
ಮೌನಿಯ ಕಣ್ಣುಗಳು ಕ್ರೌರ್ಯದ ಪ್ರತಿಫಲನ…
ಮೌನಿಗೆ ಶತೃಗಳೇ ಇಲ್ಲ,
ಮೌನಿಗೆ ಮಿತ್ರರೂ ಇಲ್ಲ...
ಮೌನಕ್ಕೂ ಒಂದು ಭಾಷೆ ಇದೆ,
ಮೌನವು ನಿರ್ಜೀವ ನಿರ್ವಿಕಾರ ಮನಸ್ಥಿತಿ....
ಮೌನದ ನಗು ತುಟಿ ಅಂಚಿನ ಪಳಪಳ ಹೊಳೆಯುವ ಆಕರ್ಷಣೆ,
ಮೌನದ ಅಳು ಅಂತರಾಳದ ಮೂಕ ರೋದನೆ...
ಮೌನಿ ಒಬ್ಬ ದಾರ್ಶನಿಕ,
ಮೌನಿ ಒಬ್ಬ ಹುಚ್ಚ..
ಮೌನ ಕುತೂಹಲ ಕೆರಳಿಸುತ್ತದೆ,
ಮೌನ ನಿರ್ಲಕ್ಷ್ಯಕ್ಕೊಳಗಾಗುತ್ತದೆ..
ಮೌನ ಪ್ರಬುದ್ದತೆಯ ಲಕ್ಷಣ,
ಮೌನ ದಡ್ಡತನದ ಸಂಕೇತ…
ಮೌನ ಪ್ರೀತಿಯನ್ನು ಗೆಲ್ಲುತ್ತದೆ,
ಮೌನ ಪ್ರೀತಿಯನ್ನು ಕೊಲ್ಲುತ್ತದೆ…
ಮೌನದಿಂದ ಅನೇಕ ಸಮಸ್ಯೆಗಳು ತನ್ನಿಂದ ತಾನೇ ಬಗೆಹರಿಯುತ್ತದೆ,
ಮೌನದಿಂದ ಇಲ್ಲದ ಸಮಸ್ಯೆಗಳು ಸೃಷ್ಟಿಯಾಗುತ್ತವೆ…
ನಾನೊಬ್ಬ ಮೌನಿ....!
-ವಿವೇಕಾನಂದ ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ