ಮೌನ ಕಳೆಯಲು ಮತ್ತು ಗಝಲ್ ಗಳು
ಮೌನ ಕಳೆಯಲು
ಗಾನ ಹೊಮ್ಮಿತು
ಜ್ಞಾನ ದೇಗುಲ ತೆರೆಯಿತು
ಬಾನ ಬಯಲಲಿ
ಸೋನೆ ಮಳೆಯದು
ಜೇನ ಹನಿಯನು ಸುರಿಸಿತು
ಬುವಿಯ ತೊಳೆಯಿತು
ಭವನ ಹೊಳೆಯಿತು
ಶಿವನವೊಲುಮೆಯ ಗಳಿಸಿತು
ಭವದ ಜನವದು
ಹವೆಯ ಸುಖದೊಳು
ನವಿರು ಭಾವನೆ ಹೊಂದಿತು
ಸವಿಯ ಹೊತ್ತಗೆ
ಕವಿಯ ಜೊತೆಗಿರೆ
ಭವದಿ ಚಿಂತನೆ ಹುಟ್ಟಿತು
ತವಕ ಚಿಮ್ಮುತೆ
ಕವನ ಜನಿಸಿತು
ಭುವನ ಬಾಗಿಲು ತೆರೆಯಿತು
***
ಗಝಲ್ - ೧
ಮುನಿಸು ಕಳೆದು ಮಾತು ನೆಗೆಯಲಿ ಗೆಳತಿಯೆ
ಕನಸು ಒಡೆದು ನನಸು ಹೊಳೆಯಲಿ ಗೆಳತಿಯೆ
ಚೆಲುವು ಅರಳಿ ರಶ್ಮಿ ಸುರಿಯುತ ಹಾಡದೆ
ಒಲವು ಚಿಗುರಿ ಪ್ರೀತಿ ಬೆರೆಯಲಿ ಗೆಳತಿಯೆ
ಸವಿಯ ಸುಖದಿ ಚಿತ್ತ ಕುಣಿಯುತ ಸಾಗದೆ
ಖುಷಿಯ ಪಡುತ ಬಾಳು ಸೆಳೆಯಲಿ ಗೆಳತಿಯೆ
ಕಸಿಯು ಬಸಿದು ಪ್ರೇಮ ಅರಳುತ ಬೆಳೆದಿದೆ
ದೆಸೆಯು ಬರುತ ಮೋಹ ಹರಿಯಲಿ ಗೆಳತಿಯೆ
ಮನದಿ ರಣಿತ ಈಶ ಬೆಳಗುತ ನಡೆದನೆ
ವರದಿ ಗುರುತು ಕಣ್ಣ ಮರೆಯಲಿ ಗೆಳತಿಯೆ
***
ಗಝಲ್ - ೨
ಹುಟ್ಟುವುದೇನಿದ್ದರು ಬದುಕಲೆಂದು ಗೆಳತಿ
ಸಾಯುವುದೇನಿದ್ದರು ಜನಿಸಲೆಂದು ಗೆಳತಿ
ತೃಪ್ತಿಯಿರುವುದೇನಿದ್ದರು ಬಾಳಲೆಂದು ಗೆಳತಿ
ಸಾಕ್ಷಿಯಿರುವುದೇನಿದ್ದರು ಬಳಸಲೆಂದು ಗೆಳತಿ
ಮನವಿರುವುದೇನಿದ್ದರು ಪಡೆಯಲೆಂದು ಗೆಳತಿ
ತನುವಿರುವುದೇನಿದ್ದರು ಕೊಡಲೆಂದು ಗೆಳತಿ
ಚೆಲುವಿರುವುದೇನಿದ್ದರು ಸವಿಯಲೆಂದು ಗೆಳತಿ
ಛಲವಿರುವುದೇನಿದ್ದರು ಸಾಧಿಸಲೆಂದು ಗೆಳತಿ
ಈಶನಿರುವುದೇನಿದ್ದರು ಬೆಸೆಯಲೆಂದು ಗೆಳತಿ
ಮನೆಯಿರುವುದೇನಿದ್ದರು ವಾಸಿಸಲೆಂದು ಗೆಳತಿ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ