ಮೌನ ಕವಿತೆ

Submitted by ಲತಾ ಆಚಾರ್ಯ ಬನಾರಿ on Thu, 08/27/2020 - 11:25
ಬರಹ

*ಮೌನ ಕವಿತೆ*

ನೂರಾರು ಕವಿತೆಗಳ ಬರೆಯಬೇಕೆಂಬಾಸೆ
ಶಬ್ದಗಳ ಕೊರತೆಯದು ಒಮ್ಮೊಮ್ಮೆ ನನಗೆ
ಅಂತರಂಗದ ಭಾಷೆ ಅಕ್ಷರದ ರೂಪದಲಿ
ಬಿಳಿ ಹಾಳೆಗಳ ಮೇಲೆ ಬೀಳಲಾರವು ಕೊನೆಗೆ

ತುಸು ಕೋಪ ಬೇಸರವು ಕೆಲವೊಮ್ಮೆ ಆದಾಗ
ಲೇಖನಿಯು ಮೌನವನೆ ವಹಿಸುವುದು ನಿಜಕು
ಅನಿಸುವುದು ನನಗಾಗ ಯಾಕೆ ಈ ರೀತಿಯಲಿ
ಭಾವನೆಯ ಪಯಣದಲಿ ಆಗುವುದು ತೊಡಕು

ಉತ್ತರವೆ ಸಿಗದಂಥ ಪ್ರಶ್ನೆಗಳು ಹಲವಾರು
ಹುಡುಕಾಡಿ ಸೋತಾಗ ಗೆಲ್ಲುವುದು ಏನು
ಮನದೊಳಗೆ ರೋಷಾಗ್ನಿ ಉರಿದುರಿದು ಭಸ್ಮವನು
ಹೊರಚೆಲ್ಲಿದರೆ ಸಾಕು ಶಾಂತವಾಗುವೆ ನಾನು

ಪ್ರತಿದಿನವು ಕೈಬೀಸಿ ಕರೆಯುತಿಹ ಭಾವಗಳು
ಸನಿಹಕ್ಕೆ ಬಾರದೆಯೆ ಅಣಕಿಸುವುದು
ಬರೆಯಲಾಗದೆ ಕುಳಿತು ಚಡಪಡಿಸುತಿರುವಾಗ
ನೋವು ನಿರಾಸೆಗಳೇ ಕವಿತೆಯಾಗುವುದು

✍️ಲತಾ ಬನಾರಿ
೨೬-೦೮-೨೦೨೦
(ಚಿತ್ರ ಕೃಪೆ: ಅಂತರ್ಜಾಲ)

ಚಿತ್ರ್