ಮೌನ ಗೌರಿ..!
ಕವನ
ಊರೆಲ್ಲ ಉತ್ಸವ ಸಂಭ್ರಮದ ಬೆರಗಲ್ಲಿ
ರಥ ಬೀದಿ ಬಣ್ಣದಲಿ ಮುಳುಗುತಿದೆ ನೋಡು
ಸಣ್ಣವರು ದೊಡ್ಡವರು ಎಲ್ಲರೂ ಸೇರಿಹರು
ಜಾತ್ರೆ ಸಂಭ್ರಮವಿಲ್ಲಿ ಕೇರಿ ತುಂಬಾ
ಮೂಲೆ ಮನೆ ಕಾಮಿನಿಯು ಮೂಲೆಯಲಿ ಬಿದ್ದಿಹಳು
ಬೀದಿ ನಾಯಿಗಳಿಗು ಅಲ್ಪ ಕರುಣೆಯಿಲ್ಲ
ನೀಲಾಕಾಶದೊಳು ಚುಕ್ಕಿಗಳು ಇಣುಕುತಿವೆ
ಚಾವಣಿಯ ಹಂಗವಕೆ ಕಾಣಲಿಲ್ಲ!
ಮಸುಕು ಸಂಜೆಯ ನಡುವೆ ಹೋರಿಗಳು
ಸಾಗುತಿವೆ
ಮಬ್ಬಾದ ಕಿರು ಹಾದಿಯನು ಸುತ್ತಿ ಬಳಸಿ
ದೇಹದಾಯಾಸವನು ಕಕ್ಕುತಿವೆ ಇಹ ಮರೆತು
ಸುಡುತಿಹುದು ದೇಹವನು ವೇದನೆಯು ದಹಿಸಿ!
ಸಿಡಿಮದ್ದು ತಮ್ಮಟೆಗೆ ಎದೆ ಬಿರಿದು ಹೊಡೆಯುತಿದೆ
ಗುಡುಗೊ ಸದ್ದಿಗು ಮೊಗದಿ ಸಂತಸದ ಹೊನಲು!
ಬಿರಿಯುತಿದೆ ತನುವಲ್ಲಿ ಕೆಂಬಣ್ಣದೋಕುಳಿಯು
ಮೌನದಲು ಸುಯ್ಗುಡುವ ವೇದನೆಯ ಚೆಲ್ಲಿ
ಕಾಮಿನಿಯು ಕಾರಿರುಳು ಕಳೆದು ಹೋಗಿಹಳಲ್ಲಿ
ಮಲ್ಲಮ್ಮನ ಜಾತ್ರೆಯಲಿ ಹರಕೆ ಕುರಿಯಂತೆ
ಹಗಲು ಇರುಳಂತಿರುವ ಬಾಳಿನಲಿ ಬೆಳಕನ್ನು
ಹುಡುಕುತಲೆ ಕಣ್ರೆಪ್ಪೆ ಮುಚ್ಚಿಹಳು ಗೌರಿ!
-ಜನಾರ್ದನ ದುರ್ಗ
ಚಿತ್ರ್
