ಮೌನ ತಪಸ್ವಿ : ಊರ್ಮಿಳಾ ದೇವಿ

ಮೌನ ತಪಸ್ವಿ : ಊರ್ಮಿಳಾ ದೇವಿ

ಶ್ರೀರಾಮನು ವಿಷ್ಣುವಿನ  ಅಂಶವಾದರೆ, ಆದಿಶೇಷನೇ ಲಕ್ಷ್ಮಣ.  ಲಕ್ಷ್ಮಣನಿಗೆ ಹುಟ್ಟಿದಾಗಿನಿಂದಲೂ ಅಣ್ಣ ರಾಮನೆಂದರೆ ವಿಶೇಷವಾದ ಪ್ರೀತಿ, ಗೌರವ. ಸಣ್ಣ ಮಗುವಾಗಿದ್ದಾಗ ಲಕ್ಷ್ಮಣ ಜೋರಾಗಿ ಅಳುತ್ತಿದ್ದ . ಯಾರೆಷ್ಟೇ ಸಮಾಧಾನ ಮಾಡಿದರೂ ಅಳು ನಿಲ್ಲಿಸಲಿಲ್ಲ. ರಾಮನನ್ನು ಅವನ ಪಕ್ಕ ಮಲಗಿಸಿದ ಮೇಲೆ ಅಳು ನಿಲ್ಲಿಸಿದನಂತೆ. ಆಗಿನಿಂದಲೂ ರಾಮನ ಜೊತೆಯಲ್ಲಿ ಬೆಳೆಯುತ್ತಾ ಬಂದು, ಮುಂದೆ  ರಾಮನಿಗೆ ನೆರಳಂತೆ ನಿಂತನು. 

ರಾಮಾಯಣ  ಎಂದರೆ  ನಮಗೆಲ್ಲ  ನೆನಪಾಗುವುದು, 'ಅಯೋಧ್ಯ'  ರಾಜ ದಶರಥ,  ರಾಮ-ಸೀತೆ, ಲಕ್ಷ್ಮಣ, ಭರತ, ಶತ್ರುಘ್ನ, ಹನುಮಂತ, ಇವರೆಲ್ಲಾ ರಾಮಾಯಣದಲ್ಲಿ  ಮುಖ್ಯ ಪಾತ್ರವಾಗಿದ್ದರು. ಆದರೆ ಎಲೆಮರೆಯ ಕಾಯಿಯಂತಿದ್ದು  ಪತಿಯ ತಾಯಂದಿರಾದ ಅತ್ತೆಯರ ಸೇವೆ ಮಾಡುತ್ತಾ, ತನ್ನ ಯೌವನ, ಸಂತೋಷ, ಉತ್ಸಾಹ, ಕನಸುಗಳನ್ನೆಲ್ಲ ನುಂಗಿಕೊಂಡು, ದೂರದಿಂದಲೇ ಪತಿಗೆ ಶ್ರೇಯಸ್ಸನ್ನು ಬಯಸುತ್ತಾ ಮದುವೆ ಆದಮೇಲೆ ಹದಿನಾಲ್ಕು ವರ್ಷಗಳ ಕಾಲ ಪತಿಯಿಂದ ದೂರವಿದ್ದು, ತ್ಯಾಗಮಯಿಯಾಗಿ, ಜೀವನ ಸವೆಸಿದ ಪತಿವ್ರತೆ ಲಕ್ಷ್ಮಣನ ಹೆಂಡತಿ  'ಊರ್ಮಿಳಾ ದೇವಿ' ಯನ್ನು  ಪುರಾಣದ  ಮುಖ್ಯ ಭೂಮಿಕೆಯಲ್ಲಿ ಹಿಂದೆ ಸರಿಸಿರುವುದು ಇಂದಿಗೂ ಎಲ್ಲರ ಮನದಲ್ಲಿ ಪ್ರಶ್ನಾರ್ಥಕವಾಗಿ ಕಾಡುತ್ತಿದೆ ಎಂದರೆ ತಪ್ಪಾಗುವುದಿಲ್ಲ. 

ಮಿಥಿಲೆಯ ಜನಕ ಮಹಾರಾಜ ಮತ್ತು ಸುನೈನಾ ದೇವಿಯ ಮಗಳು ಊರ್ಮಿಳಾ ದೇವಿ.‌ ಊರ್ಮಿಳೆ ಅಂದರೆ ಮೋಡಿ ಮಾಡುವವಳು, ಅತ್ಯಂತ  ಸೌಂದರ್ಯವತಿ ಎಂದು ಅರ್ಥ, ಹೆಸರಿಗೆ ತಕ್ಕಂತೆ ರೂಪವತಿ, ಜಾಣೆ, ಪತಿ ಪರಾಯಣೆ, ಸೀತೆಗಿಂತ ಯಾವುದರಲ್ಲೂ ಕಡಿಮೆ ಇರಲಿಲ್ಲ. ಇವಳು ಒಳ್ಳೆಯ ಚಿತ್ರಕಲಾವಿದೆ. ಸೀತೆ ಮತ್ತು ಊರ್ಮಿಳಾ  ಅಕ್ಕ-ತಂಗಿಯರಿಗಿಂತ ಆತ್ಮೀಯ ಗೆಳತಿಯಾಗಿದ್ದರು. ಸೀತೆಗಿಂತ ವಯಸ್ಸಿನಲ್ಲಿ ಊರ್ಮಿಳೆ ತುಂಬಾ ಚಿಕ್ಕವಳು. ಅಕ್ಕನಿಗೆ  ಸಿಗುವ ಪ್ರೀತಿ ತನಗೆ ಸಿಗುತ್ತಿಲ್ಲ ಎಂಬ ಸಣ್ಣ ನೋವಿದ್ದರೂ ಸೀತೆಯ ಪ್ರೀತಿಯ ಕಡಲಲ್ಲಿ ಊರ್ಮಿಳೆ  ತೇಲಿಹೋದಳು. ಜನಕ ಮತ್ತು ಸುನೈನ ಪ್ರೀತಿಯ ವಿಚಾರದಲ್ಲಿ ಸೀತೆಗೆ ಅನುಮಾನ ಬರಬಾರದೆಂದು ಸ್ವಂತ ಮಗಳಿಗಿಂತ ಹೆಚ್ಚಾಗಿ ಸೀತೆಯನ್ನು ನೋಡಿಕೊಂಡರು. 

ಶ್ರೀರಾಮನು ಶಿವ ಧನುಸ್ಸನ್ನು ಮುರಿದಾಗ ಸೀತೆಯಷ್ಟೇ, ಊರ್ಮಿಳೆ ಸಂತೋಷಪಟ್ಟಿದ್ದಳು. ಅಕ್ಕನ ಮದುವೆಯ ಸಂಭ್ರಮದಲ್ಲಿದ್ದಳು. ಎಲ್ಲೋ ಒಂದು ಮೂಲೆಯಲ್ಲಿ ಅಕ್ಕನ ಮದುವೆಯಾದರೆ ತಂದೆ-ತಾಯಿಯ ಪ್ರೀತಿ ಸಂಪೂರ್ಣವಾಗಿ  ತನಗೆ ಸಿಗಬಹುದು ಎಂಬ ಸಣ್ಣ ಆಸೆ ಮನದಲ್ಲಿತ್ತೋ, ಏನೋ, ಆದರೆ  ಸೀತಾ-ರಾಮರ ಮದುವೆಯ ಜೊತೆಯಲ್ಲಿ, ವಸಿಷ್ಠರು ಮತ್ತು ವಿಶ್ವಾಮಿತ್ರರ  ಸಲಹೆಯ ಮೇರೆಗೆ ದಶರಥನು  ತನ್ನ ಉಳಿದ ಮೂರು ಗಂಡುಮಕ್ಕಳಿಗೆ, ಜನಕ ಮತ್ತು ಅವನ ಸಹೋದರನ ಮಕ್ಕಳನ್ನು ಕೊಟ್ಟು ವಿವಾಹ ಮಾಡುವ ಪ್ರಸ್ತಾವನೆಯನ್ನು ಮುಂದಿಟ್ಟರು. ಆ ಸಮಯದಲ್ಲಿ  ಜನಕನು ಮಗಳು ಊರ್ಮಿಳೆಗೆ, ಲಕ್ಷ್ಮಣ ನಿನಗೆ ಒಪ್ಪಿಗೆಯೇ ಎಂದು ಕೇಳಿದಾಗ, ಅವಳೇ ನಾಚಿ ಒಪ್ಪಿಗೆ ಸೂಚಿಸಿದ್ದಳು. ರಾಮ ನೋಡಲು ಸ್ವಲ್ಪ ಕಪ್ಪಿದ್ದನು. ರಾಮನಿಗಿಂತ, ಲಕ್ಷ್ಮಣ ಸ್ಪುರದ್ರೂಪಿ, ಬಲಿಷ್ಠ ತೋಳು, ಅಗಲವಾದ ಭುಜ, ಪರಾಕ್ರಮಿ, ಸ್ವಲ್ಪ ಮುಂಗೋಪಿ, ಊರ್ಮಿಳೆ ಅದಾಗಲೇ ಲಕ್ಷ್ಮಣನ ಕುರಿತು ಕನಸು ಕಾಣ ತೊಡಗಿದಳು. ಗುರು- ಹಿರಿಯರ ಆಶಯದಂತೆ, ರಾಮ-ಸೀತೆಯ ಕಲ್ಯಾಣದೊಂದಿಗೆ ದಶರಥನ ಉಳಿದ ಮಕ್ಕಳು, ಜನಕ ಮಹಾರಾಜ ಹಾಗೂ ಸೋದರರ ಮಕ್ಕಳ ಮದುವೆ ವಿಜೃಂಭಣೆಯಿಂದ ನಡೆಯಿತು. 

ಊರ್ಮಿಳೆ, ಮದುವೆ ನಂತರ ಅಕ್ಕ-ತಂಗಿಯರ ಜೊತೆಯಲ್ಲಿ ಅಯೋಧ್ಯೆಗೆ ಬಂದಳು. ಸ್ವಲ್ಪಕಾಲ ಬಹಳ ಚೆನ್ನಾಗಿತ್ತು.  ಅಣ್ಣ ರಾಮನ ವಿಷಯವನ್ನು ಲಕ್ಷ್ಮಣ ಪದೇ ಪದೇ ಹೇಳುತ್ತಿದ್ದ  ಎನ್ನುವುದನ್ನು ಬಿಟ್ಟರೆ ಪತ್ನಿ ಊರ್ಮಿಳೆಯನ್ನು, ಅವಳ ನಿರೀಕ್ಷೆಗಿಂತಲೂ ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ದಶರಥನು ತನ್ನ ಕೆಲಸ ಕಾರ್ಯಗಳು ಮುಗಿಯಿತು. ಇನ್ನು ರಾಮನಿಗೆ  ರಾಜ್ಯದ ಜವಾಬ್ದಾರಿಯನ್ನು ವಹಿಸಿ ಬಿಟ್ಟರೆ ತಾನು ಅಂದುಕೊಂಡಿದ್ದೆಲ್ಲ ಆದಂತೆ ಎಂದುಕೊಂಡು, ಗುರುಗಳಾದ ವಸಿಷ್ಠರ ಬಳಿ ಚರ್ಚಿಸಿ ರಾಮನಿಗೆ ಪಟ್ಟಾಭಿಷೇಕ ಮಾಡಲು ತಯಾರಿ ನಡೆಸಿದನು. ಆ ಸಮಯದಲ್ಲೇ ಬರಸಿಡಿಲಿನಂಥ ಕೈಕೇಯಿಯ ವಚನದಿಂದ ರಾಮ, ಸೀತೆ, ಲಕ್ಷ್ಮಣ ಹದಿನಾಲ್ಕು ವರ್ಷ ವನವಾಸಕ್ಕೆ ಹೊರಟರು. ಊರ್ಮಿಳೆ ತಾನು ಸಹ ವನವಾಸಕ್ಕೆ ತಯಾರಾಗಿದ್ದಳು. ಆದರೆ ಲಕ್ಷ್ಮಣ ನೀನು ನಮ್ಮ ಜೊತೆ  ಬರುವುದು ಬೇಡ. ವನವಾಸದಲ್ಲಿ ನಾನು  ಅಣ್ಣ ಅತ್ತಿಗೆಯನ್ನು ನೋಡಿಕೊಳ್ಳಬೇಕು ಅವರ ಜೊತೆಗೆ ನಿನ್ನನ್ನು ನೋಡಿ ಕೊಳ್ಳಲು ಆಗುವುದಿಲ್ಲ. ಅಲ್ಲದೆ ಅರಮನೆಯಲ್ಲಿ ನನ್ನ ತಾಯಿಯರ ಸೇವೆ ಮಾಡಲು ಯಾರೂ ಇರುವುದಿಲ್ಲ ಎಂದು ಹೇಳಿ ಅಲ್ಲೇ ಇರುವಂತೆ ಹೇಳಿದನು. ನಾನು ಬರುತ್ತೇನೆ ಎಂದು ಅಳತೊಡಗಿದಳು. ಆಗ ಲಕ್ಷ್ಮಣನು, ನೋಡು ನಾವೆಲ್ಲರೂ ಹದಿನಾಲ್ಕು ವರ್ಷಗಳ ದೀರ್ಘಕಾಲ ವನವಾಸಕ್ಕೆ ಹೋದರೆ, ಅಯೋಧ್ಯೆಯ ಜನರು 'ರಾಮನ' ಹೆಸರನ್ನೇ ಮರೆತುಬಿಡುತ್ತಾರೆ. ಅವರೆಲ್ಲರನ್ನು ನೆನಪಿಸುವ ಸಲುವಾಗಿ, ಹಾಗೂ ನನ್ನ ತಾಯಂದಿರನ್ನು  ನೀನೇ ನೋಡಿಕೊಳ್ಳಬೇಕಾದ್ದರಿಂದ (ಲಕ್ಷ್ಮಣನಿಗೆ ಕೈಕೇಯಿ ಮೇಲೆ, ಭರತನ ಮೇಲೆ ಇನ್ನೂ ಸಿಟ್ಟಿತ್ತು. ನಂಬಿಕೆಯಂತೂ ಇರಲಿಲ್ಲ) ‌ ಇನ್ನು ಮುಂದೆ  ಕಣ್ಣೀರು ಹಾಕಬಾರದು ಎಂದು ವಚನ  ತೆಗೆದುಕೊಂಡು ಹೊರಟನು.‌ ಪತಿಯ ಮಾತನ್ನು ಪಾಲಿಸಲು ಆ ಕ್ಷಣದಿಂದಲೇ ದುಃಖವನ್ನು ನುಂಗಿ, ಕಣ್ಣೀರನ್ನು ತೊಡೆದು ಮೌನದಲ್ಲಿ ಇರತೊಡಗಿದಳು. ದಶರಥ ನಿಧನ ಹೊಂದಿದಾಗಲೂ ಕಣ್ಣೀರು ಹಾಕದೆ ಮೌನದಲ್ಲೆ ದುಃಖಿಸುತ್ತಿದ್ದಳು. 

ವನವಾಸಕ್ಕೆ ಹೋದ ದಿನ ಅಣ್ಣ-ಅತ್ತಿಗೆಗಾಗಿ ಲಕ್ಷ್ಮಣ ಒಂದು ಗುಡಿಸಲು ನಿರ್ಮಿಸಿ ಅಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ಹೇಳಿದನು. ತಾನು ಬಿಲ್ಲುಬಾಣ ಇಟ್ಟುಕೊಂಡು ಗುಡಿಸಲ ಹೊರಗೆ ಕಾಯುತ್ತಿದ್ದ. ಆದರೆ ರಾತ್ರಿ ತೂಕಡಿಕೆ ಬಂದು ನಿದ್ರೆ ಆವರಿಸಿದಂತಾಗಿ ನಿದ್ರಾದೇವಿಯನ್ನು ಆಹ್ವಾನಿಸಿ, ತನಗೆ 14 ವರ್ಷಗಳ ಕಾಲ ನಿದ್ರೆಯಿಂದ ಮುಕ್ತಿ ಬೇಕೆಂದು  ಕೇಳಿಕೊಳ್ಳುತ್ತಾನೆ. ಆದರೆ ನಿದ್ರಾದೇವಿಯು, ಇದು ಸೃಷ್ಟಿಯ ನಿಯಮಕ್ಕೆ ವಿರುದ್ಧವಾದದ್ದು ನಿದ್ರೆಯನ್ನು ಇನ್ನಾರಿಗಾದರೂ  ನೀನು ವರ್ಗಾಯಿಸುವುದಾದರೆ ಮಾತ್ರ ನಿನ್ನ ನಿದ್ರೆಯನ್ನು ದೂರ ಮಾಡುತ್ತೇನೆ ಎಂದಳು. ತನ್ನ ಹೆಂಡತಿ ಊರ್ಮಿಳೆಗೆ ನಿದ್ರೆಯನ್ನು ವರ್ಗಾಯಿಸುವಂತೆ ಕೇಳಿಕೊಳ್ಳುತ್ತಾನೆ. ನಿದ್ರಾದೇವಿ ಊರ್ಮಿಳೆ ಬಳಿ ಬಂದು ತಿಳಿಸಿದಳು. ನನ್ನ ಪತಿ ಕೊಟ್ಟಿದ್ದನ್ನು  ಸಂತೋಷದಿಂದ ಸ್ವೀಕರಿಸುತ್ತೇನೆ ಎಂದಳು. ನಿದ್ರಾದೇವಿ ಲಕ್ಷ್ಮಣನ  14 ವರ್ಷದ ನಿದ್ರೆಯನ್ನು  ಊರ್ಮಿಳೆಗೆ ವರ್ಗಾಯಿಸಿದಳು.  

ಊರ್ಮಿಳೆ ತನ್ನ ಆಸೆ, ಆಕಾಂಕ್ಷೆ, ಯವ್ವನೋತ್ಸಾಹ, ಎಲ್ಲವನ್ನು ಮರೆತು ಹಗಲೆಲ್ಲ ನಿದ್ದೆಯ ಮಂಪರಿನಲ್ಲಿ ಕೆಲಸ ಮಾಡುತ್ತಿದ್ದರೆ, ರಾತ್ರಿ ಬಹಳ ಹೊತ್ತು ಮಲಗಿರುತ್ತಿದ್ದಳು. ಅವಳಲ್ಲಿ ಯಾವುದೇ ಆಸಕ್ತಿ ಇರಲಿಲ್ಲ. ಇಷ್ಟಾಗಿಯೂ ನಿಷ್ಠೆಯಿಂದ ಅತ್ತೆಯರ ಸೇವೆ, ಇಡೀ ಕುಟುಂಬ ಹಾಗೂ ಪತಿ ಲಕ್ಷ್ಮಣನ ಶ್ರೇಯಸ್ಸಿಗಾಗಿ  ಭಗವಂತನಲ್ಲಿ ಪ್ರಾರ್ಥಿಸುತ್ತಿದ್ದಳು. ಹಾಗೆ ನೋಡುತ್ತಾ ಹೋದರೆ ಸೀತೆ ರಾಮನ ಜೊತೆ ಕಾಡಿಗೆ ಹೋದಳು. ರಾವಣ ಅಪಹರಿಸುವವರೆಗೂ ಗಂಡನ ಜೊತೆ  ಕಾಡಿನಲ್ಲಿ ಸಂತೋಷದಿಂದ ಇದ್ದಳು. ಹದಿಮೂರು ವರ್ಷಗಳ ಕಾಲ ಪತಿಯ ಪ್ರೀತಿಯಲ್ಲಿ ಯೋಚನೆ ಇಲ್ಲದೆ ಸುಖದಿಂದ ಇದ್ದಳು.

ಲಕ್ಷ್ಮಣ, ರಾಮ ಸೀತೆಯರನ್ನು ನೆರಳಿನಂತೆ ಕಾಪಾಡಿದ ಮತ್ತು ಲಕ್ಷ್ಮಣನಿಗೆ ಹುಟ್ಟಿದಾಗಿನಿಂದಲೂ ಅಣ್ಣನ  ಸಾಂಗತ್ಯವೇ ಬೇಕಿತ್ತು. ಅವನು ಅಣ್ಣನ ಜೊತೆಯಲ್ಲೇ ಕಾಡಿನಲ್ಲಿ ಕಳೆದ. ಊರ್ಮಿಳೆ ಸಂಗಾತಿ ಇಲ್ಲದೆ 14 ವರ್ಷವೂ ಒಂಟಿಯಾಗಿ ಮೌನದಿಂದಿದ್ದು ಕರ್ತವ್ಯಗಳನ್ನು ಮಾಡುತ್ತಾ ನಿದ್ರೆಯ ಮಂಪರಿನಲ್ಲೇ ಕಳೆದಳು. ಇತ್ತ ಲಕ್ಷ್ಮಣ ಹದಿನಾಲ್ಕು ವರ್ಷಗಳೂ ಎಚ್ಚರವಾಗಿದ್ದು ಅಣ್ಣ- ಅತ್ತಿಗೆ ಯನ್ನು ಕಣ್ಗಾವಲಾಗಿ ಕಾದು ನೋಡಿ ಕೊಂಡನು. ರಾವಣ ಸೀತೆಯನ್ನು ಅಪಹರಿಸಿ,  ಯುದ್ಧವಾದಾಗ ಲಕ್ಷ್ಮಣ ನಿದ್ರೆಗೆಟ್ಟಿದ್ದು ವರವಾಯಿತು. ಏಕೆಂದರೆ ರಾವಣನ ಮಗ 'ಮೇಘನಾದನು' ತನಗೆ ಸಾವೇ ಬರದಂತೆ ವರ ಪಡೆದಿದ್ದನು (ಹುಟ್ಟುವಾಗ ಅವನ ಅಳುವಿನ ಧ್ವನಿ ಮೋಡಗಳು ಗುಡುಗಿದಂತೆ ಇದ್ದಿದ್ದರಿಂದ ಅವನಿಗೆ ಮೇಘನಾದ ಎಂಬ ಹೆಸರು ಬಂದಿತು. ಮುಂದೆ ಯುದ್ಧದಲ್ಲಿ ಇಂದ್ರನನ್ನು ಸೋಲಿಸಿದಕ್ಕಾಗಿ ಬ್ರಹ್ಮನು ಅವನಿಗೆ ಇಂದ್ರಜಿತ ಎಂದು ಹೆಸರಿಟ್ಟನು). ಸಾವು ಬರುವುದಾದರೆ 14 ವರ್ಷ ನಿದ್ರೆ ಬಿಟ್ಟವನು, ಹಾಗೂ ಬ್ರಹ್ಮಚರ್ಯ ಪಾಲಿಸಿದವನಿಂದ  ಮಾತ್ರ ತನ್ನನ್ನು ಕೊಲ್ಲಬಹುದು ಎಂಬ ವರವನ್ನು ಕೇಳಿದ್ದನು. ಈ ಎರಡು ಸಿದ್ದಿಗಳು ಲಕ್ಷ್ಮಣನಲ್ಲಿ ಇದ್ದುದರಿಂದ  'ಮೇಘನಾದನ' ವಧೆ ಸಾಧ್ಯವಾಯಿತು. ಲಕ್ಷ್ಮಣನ ಪತ್ನಿ ಊರ್ಮಿಳೆ ನಿದ್ರೆ ತೆಗೆದುಕೊಂಡಿದ್ದು ವರವಾಯಿತು. ಅದು ಹೇಗೆಂದರೆ, ಯುದ್ಧದಲ್ಲಿ ಒಮ್ಮೆ  ರಾವಣನ ಮಗ 'ಮೇಘನಾದನು'  ಹೊಡೆದ ಬಾಣದಿಂದ ಮೂರ್ಛಿತನಾಗಿ ಮಲಗಿದ  ಲಕ್ಷ್ಮಣ ಒಂದು ಕನಸು ಕಂಡನಂತೆ. ಅದರಲ್ಲಿ ಮೇಘನಾದನು ತಾನು ಮಾಡುತ್ತಿದ್ದ ' ಕ್ಷುದ್ರ ಯಾಗಕ್ಕೆ'  ಲಕ್ಷ್ಮಣನನ್ನು ಬಲಿಕೊಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದನು. ಆಗ ಲಕ್ಷ್ಮಣನ ಕನಸಿನಲ್ಲಿ ಊರ್ಮಿಳೆಯು ಬಂದು ಅವನಿಗೆ ರಕ್ಷಾಕವಚವನ್ನು ತೊಡಿಸಿದಳಂತೆ. ಈ ಶಕ್ತಿ 14 ವರ್ಷಗಳ ತ್ಯಾಗದಿಂದ ಬಂದಿತ್ತು ಎನ್ನಲಾಗಿದೆ. ಲಕ್ಷ್ಮಣ ಎಚ್ಚರಗೊಂಡ ಮೇಲೆ  ಮೇಘನಾದನನ್ನು ಸಂಹಾರ ಮಾಡುತ್ತಾನೆ.

ಈ ರೀತಿಯಾಗಿ ತ್ಯಾಗಕ್ಕೆ ಹಾಗೂ ಪತಿ ರಕ್ಷಣೆ ಮಾಡುವಲ್ಲಿ, ಪ್ರತಿಕ್ಷಣವೂ ಪತಿಯ ನಿರೀಕ್ಷೆಯಲ್ಲಿ ದಿನ ಕಳೆಯುತ್ತ ಗಂಧದ ಕೊರಡಿನಂತೆ ತನ್ನನ್ನು ಸವೆಸಿಕೊಂಡ ಲಕ್ಷ್ಮಣನ ಪತ್ನಿ ಊರ್ಮಿಳೆಗಿಂತ ಮಿಗಿಲಾದವರು  ಇಲ್ಲ. 

ಯಥಾ  ಚತುರ್ಭಿ ಕನಕಂ ಪರೀಕ್ಷ್ಯತೇ

ನಿಘರ್ಷಣಚ್ಛೇದನ  ತಾಪತಾಡನೈ !

ತಥಾ ಚತುರ್ಭಿ ಪುರುಷ ಪರೀಕ್ಷ್ಯತೇ  

ತ್ಯಾಗೇನ  ಶೀಲೇನ  ಗುಣೇನ ಕರ್ಮಣಾ! 

ಹೇಗೆ ಹುಟ್ಟುವಿಕೆ,. ಕತ್ತರಿಸುವಿಕೆ, ತಾಪದಿಂದ ಮತ್ತು ಹೊಡೆಯುವುದರಿಂದ ಸುವರ್ಣವನ್ನು ನಾಲ್ಕು ವಿಧಗಳಲ್ಲಿ ಪರೀಕ್ಷಿಸಲಾಗುತ್ತದೋ, ಹಾಗೆ ಮನುಷ್ಯನನ್ನು ತ್ಯಾಗದಿಂದ, ಶೀಲದಿಂದ, ಗುಣದಿಂದ ಮತ್ತು ಕರ್ಮದಿಂದ- ಈ  ನಾಲ್ಕರಿಂದ ಪರೀಕ್ಷಿಸಲ್ಪಡುತ್ತಾನೆ. 

- ಆಶಾ ನಾಗಭೂಷಣ

ಚಿತ್ರ ಕೃಪೆ: ಇಂಟರ್ನೆಟ್ ತಾಣ