ಮೌನ
ಕವನ
ಮೌನವಿಂದು ತುಂಬಿ ಹೋದೆ
ಮಾನ ಕಳೆದ ಸಮಯದಿ
ಮೀನ ಮೇಷವೆಣಿಸಿ ತುಳಿದೆ
ಮೇಣ ಸವರಿ ತುಪ್ಪಿದಿ
ಕಾಣಲಿಲ್ಲ ಜನರಿಗದುವು
ಕಾಣೆಯಾದ ದಿನದಲಿ
ಕೋಣೆಯೊಳಗೆ ನನ್ನ ಇರುವು
ಕಾಣಿಸದೆಯೆ ನಿನ್ನಲಿ
ದೂರದೂರದೊಳಗೆ ಕುಳಿತು
ದೂರವಾದೆ ಏತಕೆ
ದೂರುಗಳನು ಕೊಟ್ಟೆ ನಡೆದು
ದೊರಗು ನೆಲದಿ ಮಲಗಿದೆ
ತಪ್ಪು ಮಾಡದಿರಲು ನನಗೆ
ತಪ್ಪುಗಳನೆ ಹೇಳಿ ಕೊಟ್ಟೆ
ತಪ್ಪಿಲ್ಲದ ನಡತೆಯೊಳಗೆ
ತಪ್ಪುಗಳನೆ ನಂಬಿ ಕೆಟ್ಟೆ
***
ಗಝಲ್
ಬಾನಲ್ಲಿ ಇರುವ ತಾರೆಯಂತೆ ನೆಲೆಸು
ಒಲವಿನ ಸುಧೆಯ ಸವಿಯಂತೆ ನೆಲೆಸು
ಹೊತ್ತಲ್ಲದ ಹೊತ್ತಿನಲ್ಲಿ ಬಾಗಿಲೇಕೆ ತೆರೆದೆ
ಚೆಲುವಿನ ಸನಿಹ ಮದಿರೆಯಂತೆ ನೆಲೆಸು
ಗೊತ್ತು ಗುರಿಯಿಲ್ಲ ಬದುಕೊಂದು ಸಂತೆಯೆ
ಮತ್ತಿನ ಮುತ್ತುಗಳ ಸುವಾಸನೆಯಂತೆ ನೆಲೆಸು
ಚಿತ್ತಾರದ ಪುಟಗಳಲ್ಲಿಯೆ ಬಾಳೊಂದು ಕನಸೆಂದೆಯೇಕೆ
ಒಂದೊಳ್ಳೆಯ ನಶೆಯೆಡೆಯೂ ಚೆಲುವೆಯಂತೆ ನೆಲೆಸು
ಸಾಗರದ ಮುತ್ತನ್ನು ಎದುರಿಟ್ಟರೂ ನೋಡಲಿಲ್ಲವೇಕೆ
ಈಶನೊಳಗಿನ ಹೃದಯದಲಿ ರಾಣಿಯಂತೆ ನೆಲೆಸು
-ಹಾ ಮ ಸತೀಶ, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್