ಮೌಲ್ಯಯುತ ಜೀವನವೇ ನೆಮ್ಮದಿಯ ಹಾದಿ

ಮೇಘಾಲಯಕ್ಕೆ ಮಧುಚಂದ್ರಕ್ಕೆಂದು ತೆರಳಿದ್ದಾಗ ಪತ್ನಿಯೇ ಪತಿಯನ್ನು ಕೊಲ್ಲಿಸಿದ ಘಟನೆ ವರದಿಯಾಗಿದೆ. ಇತ್ತ, ಬೆಂಗಳೂರಿನಲ್ಲಿ ವಿವಾಹಿತೆ ಜೊತೆ ಸಂಬಂಧ ಹೊಂದಿದ್ದ ವ್ಯಕ್ತಿ ಆಕೆ ತನ್ನೊಂದಿಗೆ ನಂಟು ಮುಂದುವರಿಸಲು ಒಪ್ಪದ ಕಾರಣಕ್ಕೆ ಇರಿದು ಹತ್ಯೆಗೈದ ಪ್ರಸಂಗ ನಡೆದಿದೆ. ಪ್ರೇಮಿಯ ಜೊತೆ ಸೇರಿಕೊಂಡು ಪತಿಯ ಹತ್ಯೆಗೆ ಸುಪಾರಿ ನೀಡಿದ ಪತ್ನಿ: ಪತಿಯಿಂದ ಪತ್ನಿಯ ಕೊಲೆ... ಇಂಥ ಪ್ರಕರಣಗಳು ಈಚಿನ ವರ್ಷಗಳಲ್ಲಿ ಹೆಚ್ಚೆಚ್ಚು ನಡೆಯುತ್ತಿವೆ. ಇನ್ನೊಂದೆಡೆ, ಚಿಕ್ಕಪುಟ್ಟ ಕಾರಣಗಳಿಗೂ ವಿಚ್ಛೇದನಕ್ಕೆ ಮುಂದಾಗುವ ನಿದರ್ಶನಗಳೂ ಹೇರಳವಾಗಿ ನಡೆಯುತ್ತಿವೆ; ತಂತಮ್ಮ ವಾದಗಳನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಹೊಂದಿಕೊಂಡು ಹೋಗುವ ಗುಣ ಕಡಿಮೆಯಾಗುತ್ತಿದೆ. ಇವೆಲ್ಲ ಬೆಳವಣಿಗೆಗಳು ಸಾಮಾಜಿಕ ಆರೋಗ್ಯದ ಬಗ್ಗೆ ಕಾಳಜಿಯುಳ್ಳ ಎಲ್ಲರಿಗೂ ಕಳವಳ ಉಂಟುಮಾಡಿದೆ.
ವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಪಾಶ್ಚಾತ್ಯರಲ್ಲಿ ಇರುವ ಅಪಸವ್ಯ ಇಲ್ಲಿಯೂ మిరి ಬೆಳೆಯುತ್ತಿದೆಯೇ ಎಂಬ ಅನುಮಾನ ಮೂಡುವಂತಿದೆ. ಅದರಲ್ಲೂ ವಿಶೇಷವಾಗಿ ಯುವಜನರು ಈ ಜಾಲದಲ್ಲಿ ಹೆಚ್ಚು ಸಿಲುಕುತ್ತಿದ್ದಾರೆ ಎಂಬುದು ಸಮಾಜಶಾಸ್ತ್ರಜ್ಞರ ಆತಂಕ. ವ್ಯಕ್ತಿಗತ ಸ್ವಾತಂತ್ರ್ಯ ಎಂಬುದು ಬಹು ಅಮೂಲ್ಯವಾದುದು ಎಂಬುದರಲ್ಲಿ ಅನುಮಾನವಿಲ್ಲ. ಏಕೆಂದರೆ ತಾನು ಹೇಗೆ ಬದುಕಬೇಕು ಎಂಬುದನ್ನು ನಿರ್ಧರಿಸುವ ಹಕ್ಕು ವ್ಯಕ್ತಿಯದು.
ಇಲ್ಲಿ ಪ್ರಭುತ್ವವಾಗಲಿ, ಸಮಾಜವಾಗಲಿ ಹಸ್ತಕ್ಷೇಪ ಮಾಡಲಾಗಲೀ, ನಿರ್ದೇಶನ ನೀಡಲಾಗಲೀ ಬರುವುದಿಲ್ಲ. ಆದರೆ, ಸ್ವಾತಂತ್ರ್ಯಕ್ಕೂ- ಸ್ವೇಚ್ಛೆಗೂ ವ್ಯತ್ಯಾಸವಿದೆ. ಸಾಮಾಜಿಕ ವ್ಯವಸ್ಥೆ ಸುಸೂತ್ರವಾಗಿ ನಡೆದುಕೊಂಡು ಹೋಗಲು ಅದಕ್ಕೆ ಚೌಕಟ್ಟು ಬೇಕಾಗುತ್ತದೆ. ಅಂಥ ಚೌಕಟ್ಟು ಇಲ್ಲದೆ, ಹೇಗೆ ಬೇಕಾದರೂ ವರ್ತಿಸಬಹುದು ಎಂಬ ವಾತಾವರಣ ನಿರ್ಮಾಣವಾದಲ್ಲಿ ಆರೋಗ್ಯವಂತ ಸಮಾಜ ಎಂಬುದು ಕನಸಾಗಿಯೇ ಉಳಿದುಬಿಡುವ ಅಪಾಯವಿದೆ ಮತ್ತು ಅದು ಅರಾಜಕ ಸಮಾಜವಾಗಿ ಮಾರ್ಪಾಡಾಗಬಹುದು. ಈ ಹಿನ್ನೆಲೆಯಲ್ಲಿ, ವಿವಾಹ ಎಂಬ ಪರಿಕಲ್ಪನೆ ಭಾರತವು ವಿಶ್ವಕ್ಕೆ ನೀಡಿದ ಒಂದು ವಿಶೇಷ ಕೊಡುಗೆ. ತಾನು ತನ್ನಿಷ್ಟ ಎಂದು ಸ್ವಚ್ಛಂದ ಬದುಕನ್ನು ಪ್ರತಿಪಾದಿಸುವ ಅನೇಕ ದೇಶಗಳವರಿಗೆ ಈ ಪರಿಕಲ್ಪನೆಯನ್ನು ಊಹಿಸಲೂ ಸಾಧ್ಯವಿಲ್ಲ.
ಆದರೆ ಕೌಟುಂಬಿಕ, ಸಾಮಾಜಿಕ ಆರೋಗ್ಯಕ್ಕೆ ಈ ವ್ಯವಸ್ಥೆ ಪೂರಕವಾಗಿರುವುದನ್ನು ನಾವು ಮರೆಯಬಾರದು. ಜೀವನದಲ್ಲಿ ತನ್ನ ಸಂಗಾತಿ ಹೇಗಿರಬೇಕು ಎಂದು ನಿರ್ಧರಿಸಿ ಆ ಪ್ರಕಾರ ಮುಂದುವರಿಯುವ ಹಕ್ಕು ಎಲ್ಲರಿಗೂ ಇದೆ. ಈಗಂತೂ ಆರ್ಥಿಕ ಸ್ವಾವಲಂಬನೆ ಹೆಚ್ಚುತ್ತಿರುವ ಹೊತ್ತಿನಲ್ಲಿ ಈ ಅವಕಾಶ ಇನ್ನಷ್ಟು ಮುಕ್ತವಾಗಿದೆ. ಒಂದೊಮ್ಮೆ ತನಗೆ ಹಿಡಿಸಿಲ್ಲ ಎಂದು ಹುಡುಗ ಅಥವಾ ಹುಡುಗಿ ಮೊದಲೇ ಹೇಳಿಬಿಟ್ಟರೆ ಮುಂದೆ ಎರಡೂ ಕುಟುಂಬಗಳಿಗೆ ಆಗಬಹುದಾದ ಅನೇಕ ಸಮಸ್ಯೆಗಳು ಸೃಷ್ಟಿಯಾಗದಂತೆ ನೋಡಿಕೊಳ್ಳಬಹುದು.
ಅದನ್ನು ಬಿಟ್ಟು ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೇಲೆ ಇಂಥ ಕೃತ್ಯಗಳಿಗೆ ಮುಂದಾದಲ್ಲಿ ಅವರ ಜೀವನವೂ ಹಾಳು; ಇನ್ನೊಂದು ಜೀವನವೂ ಹಾಳು. ಆಯಾ ಕುಟುಂಬಗಳಿಗೂ ತೀರದ ಸಂಕಟ. ಇದರಿಂದ ಸಾಧಿಸುವುದಾದರೂ ಏನು? ಮೌಲ್ಯಯುತ ಜೀವನದ ಅರಿವು ಹಾಗೂ ವಿವೇಚನೆಯ ಬಳಕೆಯಿಂದ ನೆಮ್ಮದಿಯ ಬದುಕನ್ನು ಸಾಗಿಸಲು ಸಾಧ್ಯವಿದೆ. ಇದರಿಂದ ವ್ಯಕ್ತಿಗತ ಬದುಕಿನ ಜೊತೆಗೆ ಸಮಾಜದ ಆರೋಗ್ಯವೂ ಚೆನ್ನಾಗಿರುತ್ತದೆ.
ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೧೦-೦೬-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ