ಮ್ಯಾಂವ್ ಮ್ಯಾಂವ ಬೆಕ್ಕು (ಶಿಶುಗೀತೆ)
ಕವನ
ಮ್ಯಾಂವ್ ಮ್ಯಾಂವ್ ಎನ್ನುತ ಬೆಕ್ಕು
ಕಿಟಕಿ ಬದಿಯಲಿ ಕುಳಿತಿತ್ತು||ಪ||
ಅಮ್ಮನು ಆರಿಸಿ ಇಟ್ಟಿಹ ಹಾಲು
ಮೆಲ್ಲಗೆ ಕುಡಿಯಲು ಕಾದಿತ್ತು
ಅಡುಗೆ ಮನೆಯನು ಸೇರುವ ತವಕ
ಬೆಕ್ಕಿನ ಮನದಲಿ ಬಂದಿತ್ತು||೧||
ಕಣ್ಣನು ಮುಚ್ಚುತ ಹಾಲನು ಕುಡಿದು
ಗರ್ವದಿ ಮೀಸೆಯ ತಿರುವಿತ್ತು
ಕರಿಬಿಳಿ ಬಣ್ಣದ ಹೊಳೆಯುವ ಕಣ್ಣು
ಮಿಂಚುತ ರೋಷದಿ ಬರುತಿತ್ತು||೨||
ಕಿಟ್ಟನು ಕೋಲಲಿ ಜೋರಲಿ ಬಡಿಯಲು
ಮ್ಯಾಂವ್ ಮ್ಯಾಂವ್ ಅಂತಿತ್ತು
ಮರುದಿನ ಕಿಟಕಿಯ ಬಳಿಯಲಿ ನಿಲಲು
ಬೆಕ್ಕಿನ ಮೊರೆಯು ಬಾಡಿತ್ತು||೩||
ಮುಖವದು ಹೊರಳಿಸಿ ಬಾಲವ ಆಡಿಸಿ
ಹಾಲನು ಕುಡಿಯದೆ ನಡೆದಿತ್ತು
ಬೆಕ್ಕಿನ ಮೇಲಿನ ಕವಿತೆಯ ಕೇಳಿ
ತುಟಿಯಲಿ ನಗುವದು ತೇಲಿತ್ತು||೪||
-ಶಂಕರಾನಂದ ಹೆಬ್ಬಾಳ
ಚಿತ್ರ್
