ಮ್ಯಾಜಿಕ್ ಗಡಿಯಾರ

ಮ್ಯಾಜಿಕ್ ಗಡಿಯಾರ

ಒಬ್ಬ ಯುವ ಸೈನಿಕ ಸೈನ್ಯದಲ್ಲಿ ಐದು ವರುಷ ಸೇವೆ ಸಲ್ಲಿಸಿ, ಮನೆಗೆ ಹಿಂತಿರುಗುತ್ತಿದ್ದ. ಆತ ಒಂದು ಕಾಡನ್ನು ಹಾದು ಬರುವಾಗ ಕತ್ತಲಾಯಿತು. ಆದ್ದರಿಂದ ಅವನು ಅಲ್ಲೇ ಒಂದು ದೊಡ್ಡ ಮರದ ಕೆಳಗೆ ಮಲಗಲು ನಿರ್ಧರಿಸಿದ.

ಅವನು ಕಟ್ಟಿಗೆ ಸಂಗ್ರಹಿಸಿ ಬೆಂಕಿ ಉರಿಸಿದ - ಕಾಡುಪ್ರಾಣಿಗಳನ್ನು ಹೆದರಿಸಲಿಕ್ಕಾಗಿ. ಅನಂತರ ಕಂಬಳಿ ಹೊದ್ದುಕೊಂಡು ನಿದ್ದೆ ಹೋದ. ಮಧ್ಯರಾತ್ರಿಯಲ್ಲಿ ದೊಡ್ಡ ಸದ್ದು ಕೇಳಿ ಅವನಿಗೆ ಎಚ್ಚರವಾಯಿತು. ಅವನು ಕಣ್ಣು ಬಿಡಿಸಿ ಸುತ್ತಲೂ ನೋಡಿದಾಗ, ಅಲ್ಲೊಬ್ಬ ಕುಳ್ಳ ಕಾಣಿಸಿದ.

ಆ ಕುಳ್ಳನಿಗೆ ಉದ್ದವಾದ ಗಡ್ಡ ಮತ್ತು ಚೂಪಾದ ಕಿವಿಗಳಿದ್ದವು. ಅವನು ಚಳಿ ಮತ್ತು ಹಸಿವಿನಿಂದ ಬಳಲಿದ್ದಾನೆ ಎಂದು ಸೈನಿಕ ತಿಳಿದ. ಹಾಗಾಗಿ, ಕುಳ್ಳನನ್ನು ಬೆಂಕಿಯ ಹತ್ತಿರ ಬರಲು ಸೈನಿಕ ಆಹ್ವಾನಿಸಿದ. ಕುಳ್ಳ ಹತ್ತಿರ ಬಂದಾಗ ಸೈನಿಕ ಅವನಿಗೆ ತನ್ನಲ್ಲಿದ್ದ ಆಹಾರವನ್ನು ತಿನ್ನಲು ಕೊಟ್ಟ. ಅದನ್ನು ಬೆಂಕಿಯ ಬಳಿ ಕುಳಿತು ತಿಂದ ಕುಳ್ಳ ಚೇತರಿಸಿಕೊಂಡ. ಅನಂತರ ಸೈನಿಕನ ದಯೆಗಾಗಿ ಒಂದು ಗಡಿಯಾರವನ್ನು ಉಡುಗೊರೆಯಾಗಿ ಕೊಟ್ಟ ಕುಳ್ಳ. ಅದನ್ನು ಧರಿಸಿಕೊಂಡವರು ಯಾವುದನ್ನಾದರೂ ಬಯಸಿದರೆ ಅದು ಈಡೇರುವುದು ಎಂದು ತಿಳಿಸಿದ ಕುಳ್ಳ ಸೈನಿಕನಿಗೆ ವಿದಾಯ ಹೇಳಿ ಕಣ್ಮರೆಯಾದ.

ಸೈನಿಕ ಆ ಗಡಿಯಾರದ ಮಂತ್ರಶಕ್ತಿ ಪರೀಕ್ಷಿಸಲು ನಿರ್ಧರಿಸಿದ. ಅದನ್ನು ತನ್ನ ಕುತ್ತಿಗೆಗೆ ಹಾಕಿಕೊಂಡ. ತನಗೆ ಒಂದು ಬಂಗಲೆ ಸಿಗಬೇಕೆಂದೂ, ಅದರಲ್ಲಿ ಮುನ್ನೂರು ಸೇವಕರೂ ಕುದುರೆಗಳೂ ನಾಯಿಗಳೂ, ಬಂಗಲೆಯ ಗೋಡೆಗಳಲ್ಲಿ ಚಿನ್ನದ ಅಲಂಕಾರ ಸಾಮಗ್ರಿಗಳೂ ವಜ್ರವೈಡೂರ್ಯಗಳೂ ಇರಬೇಕೆಂದೂ ಬಯಸಿದ. ತಕ್ಷಣವೇ ಅಲ್ಲಿ ಗುಡುಗು ಗುಡುಗಿತು, ಮಿಂಚು ಮಿಂಚಿತು. ಅಷ್ಟರಲ್ಲಿ ಸೈನಿಕ ಒಂದು ಬಂಗಲೆಯ ಮುಂದೆ ನಿಂತಿದ್ದ.

ಬಂಗಲೆಯೊಳಗೆ ಹೋದ ಸೈನಿಕ ಮೂಕವಿಸ್ಮಿತನಾದ. ಅವನು ಬಯಸಿದ್ದೆಲ್ಲವೂ ಅಲ್ಲಿತ್ತು. ಅವನು ಅಂತಹ ಮಜಬೂತಾದ ಬಂಗಲೆಯನ್ನು ಅವನ ಜೀವಮಾನದಲ್ಲೇ ನೋಡಿರಲಿಲ್ಲ. ಅಲ್ಲಿದ್ದ ಸೇವಕರೆಲ್ಲರೂ ಅವನಿಗೆ ಗೌರವ ಸೂಚಿಸಿದರು. ತನ್ನ ಉಡುಪು ಐಷಾರಾಮಿ ಉಡುಪಾಗಿ ಬದಲಾಗಿರುವುದನ್ನೂ ಸೈನಿಕ ಗಮನಿಸಿದ.

ಅನಂತರ ಸೈನಿಕ ಆ ಬಂಗಲೆಯಲ್ಲಿ ಆಡಂಬರದಿಂದ ಜೀವಿಸತೊಡಗಿದ. ಆಗಾಗ ಸಂತೋಷಕೂಟಗಳನ್ನು ಏರ್ಪಡಿಸಿ, ಸುತ್ತಮುತ್ತಲಿನ ಶ್ರೀಮಂತರನ್ನೂ ಸಾಮಂತರನ್ನೂ ಆಹ್ವಾನಿಸಿದ. ಸಂಗೀತ ಕಚೇರಿಗಳನ್ನೂ ನೃತ್ಯಕೂಟಗಳನ್ನೂ ಜರಗಿಸಿದ.

ಅದೊಂದು ದಿನ ಸೈನಿಕನನ್ನು ಅಲ್ಲಿನ ರಾಜ ಮತ್ತು ರಾಣಿ ಅರಮನೆಯಲ್ಲಿ ಏರ್ಪಡಿಸಿದ ನೃತ್ಯಕೂಟಕ್ಕೆ ಆಹ್ವಾನಿಸಲಾಯಿತು. ಅಲ್ಲಿ ಸೈನಿಕ ರಾಜಕುಮಾರಿಯೊಂದಿಗೆ ಒಂದು ತಾಸು ನೃತ್ಯ ಮಾಡಿದ. ರಾಜಕುಮಾರಿಗೆ ಈ ಸೈನಿಕನ ಬಗ್ಗೆ ಬಹಳ ಅಸೂಯೆ. ಎಲ್ಲಿಂದಲೋ ಬಂದ ಈತ ಅದು ಹೇಗೆ ಅಷ್ಟು ಸಿರಿವಂತನಾದ ಎಂದು ಅವಳಿಗೆ ತಿಳಿಯಬೇಕಾಗಿತ್ತು. ಹಾಗಾಗಿ ಅವಳು ನೃತ್ಯ ಮಾಡುವಾಗ ಸೈನಿಕನ ಬಳಿ ಹಲವಾರು ಪ್ರಶ್ನೆಗಳನ್ನು ಕೇಳಿದಳು.

ಕೊನೆಗೆ ಅವಳಿಗೆ ಸೈನಿಕ ಬಳಿ ಒಂದು ಮ್ಯಾಜಿಕ್ ಗಡಿಯಾರ ಇದೆ ಎಂಬ ರಹಸ್ಯ ತಿಳಿಯಿತು. ಸೈನಿಕ ಇನ್ನೊಬ್ಬಳು ಮಹಿಳೆಯ ಜೊತೆ ನೃತ್ಯ ಮಾಡುತ್ತಿದ್ದಾಗ ರಾಜಕುಮಾರಿ ನೃತ್ಯಕೂಟದಿಂದ ಹೊರಹೋದಳು. ಅವಳು ನೇರವಾಗಿ ಸೈನಿಕನ ಅರಮನೆಗೆ ಹೋದಳು. ತನ್ನನ್ನು ಬಂಗಲೆಯ ಮಾಲೀಕ ಕಳಿಸಿದ್ದಾನೆಂದು ಕಾವಲುಗಾರರಿಗೆ ಹೇಳಿ, ಬಂಗಲೆಯ ಒಳ ಹೊಕ್ಕಳು. ಸೈನಿಕನ ಕೋಣೆಗೆ ಹೋಗಿ ಹುಡುಕಾಡಿ, ಮ್ಯಾಜಿಕ್ ಗಡಿಯಾರವನ್ನು ಕದ್ದು, ಅರಮನೆಗೆ ಹಿಂತಿರುಗಿದಳು.

ಮರುದಿನ ಬೆಳಗ್ಗೆ ಸೈನಿಕನಿಗೆ ತನ್ನ ಮ್ಯಾಜಿಕ್ ಗಡಿಯಾರ ಕಳ್ಳತನವಾಗಿದೆ ಎಂದು ತಿಳಿಯಿತು. ಅವನು ಬಂಗಲೆಯ ಮೂಲೆಮೂಲೆಯನ್ನೂ ಹುಡುಕಿಸಿದ. ಅದು ಎಲ್ಲಿಯೂ ಸಿಗಲಿಲ್ಲ. ಆಗ ಅವನಿಗೆ ಹಿಂದಿನ ದಿನ ರಾಜಕುಮಾರಿ ತನ್ನ ಬಳಿ ಹಲವಾರು ಪ್ರಶ್ನೆಗಳನ್ನು ಕೇಳಿದ್ದು ಮತ್ತು ಆಕೆ ನೃತ್ಯಕೂಟದಿಂದ ಸ್ವಲ್ಪ ಹೊತ್ತು ಕಾಣೆಯಾದದ್ದು ನೆನಪಾಯಿತು. ರಾಜಕುಮಾರಿಯೇ ಮ್ಯಾಜಿಕ್ ಗಡಿಯಾರ ಕದ್ದಿದ್ದಾಳೆಂದು ಅವನಿಗೆ ಸ್ಪಷ್ಟವಾಯಿತು.

ತನ್ನ ಮ್ಯಾಜಿಕ್ ಗಡಿಯಾರವನ್ನು ಮರಳಿ ಪಡೆಯುವುದು ಹೇಗೆ ಎಂದು ಸೈನಿಕ ಚಿಂತಿಸುತ್ತಾ ಕುಳಿತ. ಆಗ ಅದನ್ನು ಕೊಟ್ಟಿದ್ದ ಕುಳ್ಳನೇ ಅವನೆದುರು ಪ್ರತ್ಯಕ್ಷನಾದ. ಸೈನಿಕ ತನ್ನ ಸಮಸ್ಯೆಯನ್ನು ಕುಳ್ಳನಿಗೆ ತಿಳಿಸಿದ. ತನ್ನ ಕೋಟಿನ ಜೇಬಿನಿಂದ ಒಂದು ಗಾಢ ಕೆಂಪು ಸೇಬನ್ನು ಸೈನಿಕನಿಗೆ ಕೊಟ್ಟ ಕುಳ್ಳ ಹೇಳಿದ, “ಇದನ್ನು ಆ ರಾಜಕುಮಾರಿಗೆ ಕೊಡು.”

ಅವತ್ತು ಅಪರಾಹ್ನ ಸೈನಿಕ ಕುದುರೆ ಸಾರೋಟಿನಲ್ಲಿ ಕುಳಿತು ಅರಮನೆಗೆ ಹೋದ. ರಾಜಕುಮಾರಿಯನ್ನು ಕಾಣಬೇಕೆಂದ. ಅವನನ್ನು ರಾಜಕುಮಾರಿಯ ಮಹಲಿಗೆ ಕರೆದೊಯ್ದರು. ಆಕೆಗೆ ಆ ಸೇಬನ್ನು ಕೊಟ್ಟು, ಜಗತ್ತಿನಲ್ಲೇ ಶ್ರೇಷ್ಠವಾದ ಅದು ರಾಜಕುಮಾರಿಗೆ ಉಡುಗೊರೆ ಎಂದ ಸೈನಿಕ.

ದುರಾಶೆಯ ರಾಜಕುಮಾರಿ ಸೇಬನ್ನು ಕಚ್ಚಿ ಒಂದು ತುಂಡು ತಿಂದಳು. ಆಗಲೇ ಅಲ್ಲೊಂದು ವಿಚಿತ್ರ ನಡೆಯಿತು - ರಾಜಕುಮಾರಿಯ ಮೂಗು ಉದ್ದುದ್ದ ಬೆಳೆಯತೊಡಗಿತು! ಅದು ಒಂದಡಿ, ಎರಡಡಿ, ಹತ್ತಡಿ ಬೆಳೆಯಿತು. ಅವಳ ಮಹಲಿನ ಕಿಟಕಿಯಿಂದ ಹೊರಗೆ ಬೆಳೆಯುತ್ತಾ ಸಾಗಿತು. ರಾಜಕುಮಾರಿ ತನ್ನ ಮೂಗಿನ ಮೇಲೆ ಯಾರಾದರೂ ಕಾಲಿಟ್ಟರೆ ಏನು ಗತಿ ಎಂದು ಭಯದಿಂದ ಕಂಪಿಸಿದಳು. ತಾನೀಗ ಕೋಣೆಯಿಂದ ಹೊರ ಹೋಗಲಿಕ್ಕೂ ಸಾಧ್ಯವಿಲ್ಲ ಎಂದು ಅರಿವಾದಾಗ ರಾಜಕುಮಾರಿ ಕಂಗಾಲಾದಳು.

ಕೊನೆಗೆ ತನ್ನನ್ನು ಈ ಗಂಡಾಂತರದಿಂದ ಪಾರುಮಾಡಬೇಕೆಂದು ಸೈನಿಕನ ಬಳಿ ಗೋಗರೆದಳು. ರಾಜಕುಮಾರಿ ತನ್ನ ಮ್ಯಾಜಿಕ್ ಗಡಿಯಾರವನ್ನು ಹಿಂತಿರುಗಿಸಬೇಕು; ಇಲ್ಲವಾದರೆ ಅವಳ ಮೂಗು ಬೆಳೆಯುತ್ತಲೇ ಇರುತ್ತದೆ ಎಂದು ಎಚ್ಚರಿಸಿದ ಸೈನಿಕ. ರಾಜಕುಮಾರಿ ತನ್ನ ಸೇವಕಿಯನ್ನು ಕರೆದು, ತಾನು ಬಚ್ಚಿಟ್ಟಿದ್ದ ಮ್ಯಾಜಿಕ್ ಗಡಿಯಾರವನ್ನು ತರಿಸಿ, ಅದನ್ನು ಸೈನಿಕನ ಕೈಗೆ ಒಪ್ಪಿಸಿದಳು. ತಕ್ಷಣವೇ ರಾಜಕುಮಾರಿಯ ಮೂಗು ಸಣ್ಣದಾಗುತ್ತಾ ಬಂತು; ಅಂತೂ ಅದು ಮುಂಚಿನಂತೆ ಆಯಿತು.

ಕಪಟಿ ಮತ್ತು ದುರಾಶೆಯ ರಾಜಕುಮಾರಿ ಈ ಘಟನೆಯಿಂದ ಜೀವಮಾನದ ದೊಡ್ಡ ಪಾಠ ಕಲಿತಳು. ಅನಂತರ ಅವಳು ಯಾವತ್ತೂ ತನ್ನ ತಂದೆಯ ಅತಿಥಿಗಳಿಗೆ ಮೋಸ ಮಾಡುವ ಸಾಹಸ ಮಾಡಲಿಲ್ಲ. ಸೈನಿಕ ಮ್ಯಾಜಿಕ್ ಗಡಿಯಾರದೊಂದಿಗೆ ತನ್ನ ಬಂಗಲೆಗೆ ಹಿಂತಿರುಗಿ ಉಲ್ಲಾಸದಿಂದ ದಿನಗಳೆಯ ತೊಡಗಿದ.