ಮ್ಯಾಜಿಕ್ ಚಿನ್ನದ ಮೀನು

ಮ್ಯಾಜಿಕ್ ಚಿನ್ನದ ಮೀನು

ಒಬ್ಬ ಮುದುಕ ಬೆಸ್ತ ತನ್ನ ಪತ್ನಿಯೊಂದಿಗೆ ಮರ ಮತ್ತು ಹುಲ್ಲಿನಿಂದ ಮಾಡಿದ ಗುಡಿಸಲಿನಲ್ಲಿ ಸಮುದ್ರದ ತೀರದಲ್ಲಿ ವಾಸ ಮಾಡುತ್ತಿದ್ದ. ಅವನು ಬಹಳ ಬಡವ. ದಿನದಿನದ ಊಟಕ್ಕೂ ಅವನಲ್ಲಿ ಹಣವಿರುತ್ತಿರಲಿಲ್ಲ.

ಒಂದು ದಿನ ಅವನು ಎಂದಿನಂತೆ ಸಮುದ್ರಕ್ಕೆ ಹೋಗಿ ತನ್ನ ಬಲೆ ಬೀಸಿ ಕಾದು ಕುಳಿತ. ಸ್ವಲ್ಪ ಹೊತ್ತಿನ ನಂತರ ಅವನು ಬಲೆ ಎಳೆದು ನೋಡಿದಾಗ ಅದರಲ್ಲಿ ಕೇವಲ ಕಸವಿತ್ತು. ಇನ್ನೊಮ್ಮೆ ಬಲೆ ಬೀಸಿ ಅವನು ಕಾದು ಕುಳಿತ. ಎರಡನೆಯ ಸಲ ಬಲೆ ಎಳೆದಾಗಲೂ ಅದರಲ್ಲಿ ಇದ್ದದ್ದು ಸಮುದ್ರ ಕಳೆಗಿಡಗಳು. ಮೂರನೆಯ ಸಲ ಅವನು ಬಲೆ ಬೀಸಿ ಕಾದು ಕುಳಿತ. ಈ ಸಲ ಅವನು ಬಲೆ ಎಳೆದಾಗ ಅದರಲ್ಲೊಂದು ಪುಟ್ಟ ಚಿನ್ನದ ಬಣ್ಣದ ಮೀನಿತ್ತು.

ಅದನ್ನು ಅವನು ಕೈಯಲ್ಲಿ ಹಿಡಿದುಕೊಂಡಾಗ ಅದು ಮಾತನಾಡಿತು! “ಪ್ರೀತಿಯ ಬೆಸ್ತನೇ, ನನ್ನ ಮೇಲೆ ಕರುಣೆಯಿರಲಿ. ನನ್ನನ್ನು ಪುನಃ ಸಮುದ್ರದ ನೀರಿಗೆ ಹಾಕಿ ನನ್ನ ಜೀವ ಉಳಿಸು. ನಿನಗೆ ದೊಡ್ಡ ಉಡುಗೊರೆ ಕೊಡುತ್ತೇನೆ” ಎಂದಿತು.

ಆತ ಮುಗುಳು ನಗುತ್ತಾ ಹೇಳಿದ, "ನಾನೊಬ್ಬ ಬಡ ಬೆಸ್ತ. ಆದರೆ, ನಾನು ಕರುಣೆ ತೋರಿಸಿದ್ದಕ್ಕೆ ನನಗೇನೂ ಉಡುಗೊರೆ ಬೇಕಾಗಿಲ್ಲ.” ನೆರಿಗೆಗಳಿದ್ದ ಮುಂಗೈಯನ್ನು ಅವನು ತೆರೆದಾಗ ಚಿನ್ನದ ಬಣ್ಣದ ಮೀನು ಸಮುದ್ರದ ನೀರಿಗೆ ಜಿಗಿಯಿತು. “ನಿನ್ನ ಕರುಣೆಗೆ ಥ್ಯಾಂಕ್ಸ್. ನಿನಗೆ ಏನಾದರೂ ಬೇಕಾದರೆ ಇಲ್ಲಿಗೆ ಬಂದು ನನ್ನನ್ನು ಕರೆದರಾಯಿತು” ಎನ್ನುತ್ತಾ ಆ ಮೀನು ಸಮುದ್ರದಲ್ಲಿ ಕಣ್ಮರೆಯಾಯಿತು.

ಅವತ್ತು ಬೆಸ್ತ ಇನ್ನೆರಡು ಗಂಟೆ ಬಲೆ ಬೀಸಿ ಕಾದು ಕುಳಿತರೂ ಅವನಿಗೆ ಯಾವ ಮೀನೂ ಸಿಗಲಿಲ್ಲ. ಹಾಗಾಗಿ ಅವನು ನಿಧಾನವಾಗಿ ಕಾಲೆಳೆದುಕೊಂಡು ಮನೆಗೆ ಮರಳಿದ. “ಇವತ್ತು ನೀನು ಯಾವ ಮೀನನ್ನೂ ಹಿಡಿಯಲಿಲ್ಲವೇ?” ಎಂದು ಅವನ ಪತ್ನಿ ಕೇಳಿದಳು. “ಇಲ್ಲ. ಆದರೆ ನನಗೆ ಸಂತೋಷವಾಗಿದೆ. ಯಾಕೆಂದರೆ ನನಗೆ ಒಂದು ಮೀನಿನ ಜೊತೆ ಗೆಳೆತನವಾಯಿತು. ಅದೊಂದು ಮಾತನಾಡುವ ಚಿನ್ನದ ಬಣ್ಣದ ಮೀನು. ಅದನ್ನು ಹಿಡಿದಾಗ ಬಿಟ್ಟು ಬಿಡಬೇಕೆಂದು ಬೇಡಿಕೊಂಡಿತು. ನನಗೆ ಉಡುಗೊರೆ ಕೊಡುತ್ತೇನೆಂದೂ ಹೇಳಿತು. ಆದರೆ ನಾನು ಅದನ್ನು ಹಾಗೆಯೇ ಸಮುದ್ರದ ನೀರಿಗೆ ಬಿಟ್ಟೆ” ಎಂದ ಬೆಸ್ತ.

“ನೀನೊಬ್ಬ ಮೂರ್ಖ ಮನುಷ್ಯ. ನೀನು ಉಡುಗೊರೆ ಕೇಳಬೇಕಾಗಿತ್ತು. ಈ ಹಳೆಯ ಬಟ್ಟೆ ತೊಳೆಯುವ ಟಬ್ ನೋಡು. ಅದು ಒಡೆದಿದೆ. ನನಗೊಂದು ಹೊಸ ಟಬ್ ಬೇಕಾಗಿತ್ತು” ಎಂದು ರೇಗಿದಳು ಬೆಸ್ತನ ಪತ್ನಿ.

“ಅಷ್ಟೇ ತಾನೇ?" ಎನ್ನುತ್ತಾ ಬೆಸ್ತ ಪುನಃ ಸಮುದ್ರ ತೀರಕ್ಕೆ ಹೋದ. “ಓ ಚಿನ್ನದ ಬಣ್ಣದ ಮೀನು, ಎಲ್ಲಿದ್ದಿ? ಬಾ" ಎಂದು ಕೂಗಿದ ಬೆಸ್ತ. ತಿಳಿಯಾದ ನೀರಿನಲ್ಲಿ ಈಜುತ್ತಾ ತೀರಕ್ಕೆ ಬಂದ ಆ ಮೀನು, "ನಿನಗೇನು ಬೇಕು” ಎಂದು ಕೇಳಿತು. "ನನ್ನ ಪತ್ನಿಗೆ ಹೊಸ ಬಟ್ಟೆ ತೊಳೆಯುವ ಟಬ್ ಬೇಕಂತೆ. ಯಾಕೆಂದರೆ ಹಳೆಯ ಟಬ್ ಒಡೆದಿದೆ” ಎಂದ ಬೆಸ್ತ. "ನೀನೀಗ ಮನೆಗೆ ಹೋಗು. ಅವಳಿಗೆ ಹೊಸ ಟಬ್ ಸಿಗುತ್ತದೆ” ಎಂದು ಹೇಳಿದ ಚಿನ್ನದ ಬಣ್ಣದ ಮೀನು ಸಮುದ್ರದಲ್ಲಿ ಕಣ್ಮರೆಯಾಯಿತು.

ಮನಗೆ ಮರಳಿದ ಬೆಸ್ತನಿಗೆ ಅಚ್ಚರಿ. ಅವನ ಪತ್ನಿ ಹೊಸ ಬಟ್ಟೆ ತೊಳೆಯುವ ಟಬ್ ನೋಡುತ್ತಾ ನಿಂತಿದ್ದಳು. “ಈಗ ನಿನಗೆ ಸಂತೋಷವಾಯಿತಾ?” ಎಂದು ಕೇಳಿದ ಬೆಸ್ತ. “ಸಂತೋಷವೇ? ಆ ಚಿನ್ನದ ಬಣ್ಣದ ಮೀನಿಗೆ ಇನ್ನೂ ದೊಡ್ಡ ಉಡುಗೊರೆ ಕೊಡಲು ಸಾಧ್ಯವಿದೆ. ಪುನಃ ಹೋಗಿ, ನಮಗೊಂದು ಹೊಸ ಮನೆ ಕೊಡಬೇಕೆಂದು ಕೇಳು” ಎಂದಳು ಪತ್ನಿ.

ಬೆಸ್ತ ಪುನಃ ಸಮುದ್ರ ತೀರಕ್ಕೆ ಹೋಗಿ ಆ ಮೀನನ್ನು ಕರೆದ. ತಕ್ಷಣವೇ ಕಾಣಿಸಿಕೊಂಡ ಮೀನು “ಈಗೇನು ಬೇಕು ನಿನಗೆ?" ಎಂದು ಕೇಳಿತು. “ನನಗೇನೂ ಬೇಕಾಗಿಲ್ಲ. ಆದರೆ ನನ್ನ ಪತ್ನಿಗೆ ಹೊಸ ಮನೆ ಬೇಕಂತೆ" ಎಂದ ಬೆಸ್ತ. “ಆಗಲಿ" ಎಂದಿತು ಮೀನು.

ಅನಂತರ ಬೆಸ್ತ ಮನೆಗೆ ಹಿಂತಿರುಗಿದಾಗ, ಅವನ ಪತ್ನಿ ಹೊಸ ಮನೆಯೊಂದರ ಎದುರು ನಿಂತಿದ್ದಳು!  ಅದು ಬಿಳಿ ಬಣ್ಣದ ಗೋಡೆಗಳ ಮತ್ತು ಕೆಂಪು ಚಾವಣಿಯ ಹೊಚ್ಚಹೊಸ ಮನೆ.
“ಈಗಲಾದರೂ ನಿನಗೆ ಸಂತೋಷವಾಯಿತೇ?” ಎಂದು ಕೇಳಿದ ಬೆಸ್ತ. “ಇಂತಹ ಮನೆ ನೋಡಿ ಸಂತೋಷ ಪಡಲಿಕ್ಕೆ ಏನಿದೆ? ಇದು ಏನೇನೂ ಸರಿಯಾಗಿಲ್ಲ. ನನಗೆ ಹಾಲುಗಲ್ಲಿನಿಂದ ಮಾಡಿದ ದೊಡ್ಡ ಬಂಗಲೆ ಮತ್ತು ಚಿನ್ನದ ಆಭರಣಗಳು ಮತ್ತು ಝಗಮಗಿಸುವ ಉಡುಪುಗಳು ಬೇಕು. ಪುನಃ ಹೋಗಿ, ಇವನ್ನೆಲ್ಲ ಕೊಡಬೇಕೆಂದು ಆ ಮೀನಿಗೆ ಹೇಳು” ಎಂದಳು ಪತ್ನಿ.

ಆ ಬೆಸ್ತ ಪುನಃ ಸಮುದ್ರ  ತೀರಕ್ಕೆ ಹೋಗಿ ಚಿನ್ನದ ಬಣ್ಣದ ಮೀನನ್ನು ಕರೆದ. ಅದು ಕಾಣಿಸಿದಾಗ ತನ್ನ ಪತ್ನಿಯ ಆಶೆ ತಿಳಿಸಿದ. ಅವನು ಮನೆಗೆ ಮರಳಿದಾಗ, ಅವನ ಪತ್ನಿ ದೊಡ್ಡ ಬಂಗಲೆಯಲ್ಲೇ ಇದ್ದಳು! ಅವಳು ಮೈತುಂಬ ಚಿನ್ನಾಭರಣಗಳನ್ನು ಧರಿಸಿ, ಆಡಂಬರದ ಉಡುಪು ತೊಟ್ಟಿದ್ದಳು. ಮನೆತುಂಬ ಸೇವಕರೂ ಇದ್ದರು. ಬೆಕ್ಕಸ ಬೆರಗಾದ ಬೆಸ್ತ ಪತ್ನಿಗೆ ಹೇಳಿದ, "ನೀನೀಗ ರಾಜಕುಮಾರಿಯಂತೆ ಕಾಣಿಸುತ್ತಿದ್ದಿ.”

ಬೆಸ್ತನ ಪತ್ನಿ ಸಿಡುಕಿದಳು, "ಏನಂದೆ? ಕೇವಲ ರಾಜಕುಮಾರಿಯೇ? ನನಗೆ ರಾಣಿ ಆಗಬೇಕಾಗಿದೆ. ನಾನು ಚಿನ್ನದ ಸಿಂಹಾಸನದಲ್ಲಿ ಕುಳಿತಿರಬೇಕು. ಎಲ್ಲ ನೆಲ ಮತ್ತು ಸಮುದ್ರ ನನ್ನ ಆಳ್ವಿಕೆಯಲ್ಲಿ ಇರಬೇಕು. ಎಲ್ಲ ಜನರು, ಪ್ರಾಣಿಗಳು, ಪಕ್ಷಿಗಳು ಮತ್ತು ಮೀನುಗಳು ನನ್ನ ಗುಲಾಮರಾಗಿ ಇರಬೇಕು. ಹೋಗು, ಆ ಮೀನಿಗೆ ಈಗಲೇ ಹೇಳು.”

ಬೆಸ್ತ ತಲೆ ಚಚ್ಚಿಕೊಳ್ಳುತ್ತಾ ಪುನಃ ಸಮುದ್ರ ತೀರಕ್ಕೆ ಹೋದ. ಈಗ ಸಮುದ್ರ ಅಲ್ಲೋಲಕಲ್ಲೋಲವಾಗಿತ್ತು. ಬೆಸ್ತ ಚಿನ್ನದ ಬಣ್ಣದ ಮೀನನ್ನು ಕರೆದಾಗ ಅದು ತೀರದ ಹತ್ತಿರ ಬಂದು "ಈಗ ನಿನಗೇನು ಬೇಕಾಗಿದೆ?" ಎಂದು ಕೇಳಿತು.

"ನನ್ನ ಹೆಂಡತಿಗೆ ನೆಲ ಮತ್ತು ಸಮುದ್ರದ ರಾಣಿಯಾಗಬೇಕಂತೆ. ಮೀನುಗಳೂ ಅವಳ ಗುಲಾಮರಾಗಬೇಕಂತೆ…" ಎಂದು ಅವನು ಹೇಳುತ್ತಿರುವಂತೆ, ಚಿನ್ನದ ಬಣ್ಣದ ಮೀನು ಸರಕ್ಕನೆ ತಿರುಗಿ, ಏನೂ ಹೇಳದೆ ಸಮುದ್ರದಲ್ಲಿ ಕಣ್ಮರೆಯಾಯಿತು.

ಬೆಸ್ತ ನಿಧಾನವಾಗಿ ಹೆಜ್ಜೆ ಹಾಕುತ್ತಾ ಮನೆಗೆ ಹಿಂತಿರುಗಿದ. ಅಲ್ಲಿದ್ದ ಹಾಲುಗಲ್ಲಿನ ಬಂಗಲೆ ಮಾಯವಾಗಿತ್ತು. ಅವನ ದುರಾಶೆಯ ಪತ್ನಿ ಹಳೆಯ ಗುಡಿಸಲಿನ ಹೊರಗೆ ಹಳೆಯ ಟಬ್‌ನಲ್ಲಿ ಬಟ್ಟೆ ತೊಳೆಯುತ್ತಾ ಇದ್ದಳು.