ಮ್ಯಾಜಿಕ್ ಚೀಲ ಮತ್ತು ಜುದಾ

ಮ್ಯಾಜಿಕ್ ಚೀಲ ಮತ್ತು ಜುದಾ

ಅರಬ್ ದೇಶವೊಂದರಲ್ಲಿ ಬಡ ತಾಯಿಯೊಬ್ಬಳು ತನ್ನ ಮೂವರು ಮಗಂದಿರೊಂದಿಗೆ ವಾಸಿಸುತ್ತಿದ್ದಳು. ಅಲಿ ಮತ್ತು ಅಹ್ಮದ್ ಎಂಬ ಇಬ್ಬರು ಸೋದರರು ತಮ್ಮ ಬಳಿ ಹಣವೇ ಇಲ್ಲವೆಂದು ಯಾವಾಗಲೂ ಗೊಣಗುಟ್ಟುತ್ತಿದ್ದರು. ಆದರೆ ಕೊನೆಯ ಮಗ ಜುದಾ ಹೆಚ್ಚು ಮಾತನಾಡುತ್ತಿರಲಿಲ್ಲ. ಬದಲಾಗಿ ಅವನು ದಿನವಿಡೀ ಬೆಸ್ತನಾಗಿ ಕೆಲಸ ಮಾಡುತ್ತಿದ್ದ ಮತ್ತು ಅವನಿಂದಾಗಿಯೇ ಆ ಕುಟುಂಬದ ಖರ್ಚುವೆಚ್ಚ ನಡೆಯುತ್ತಿತ್ತು.

ಪ್ರತಿದಿನ ಜುದಾ ತನ್ನ ಮೀನುಬಲೆಯನ್ನು ಒಯ್ದು ನದಿಯ ಆಳವಾದ ನೀರಿನಲ್ಲಿ ಎಸೆಯುತ್ತಿದ್ದ. ತಾನು ಹಿಡಿದ ಮೀನುಗಳನ್ನು ಮಾರುಕಟ್ಟೆಯಲ್ಲಿ ಮಾರುತ್ತಿದ್ದ. ಅದೊಂದು ದಿನ ಅವನ ಬಲೆಗೆ ಮೀನು ಸಿಗಲೇ ಇಲ್ಲ. ಅವನು ಮತ್ತೆಮತ್ತೆ ಬಲೆ ಬೀಸಿದರೂ ಒಂದೂ ಮೀನು ಸಿಗಲಿಲ್ಲ. ದಣಿದ ಜುದಾ ಸಂಜೆ ಮನೆಗೆ ಹೋದ. ಅವನು ಹಣವನ್ನಾಗಲೀ ಆಹಾರವನ್ನಾಗಲೀ ತಂದಿರಲಿಲ್ಲ. ಆ ದಿನ ರಾತ್ರಿ ಅವರೆಲ್ಲರೂ ಉಪವಾಸ ಮಲಗಿದರು. ಅವನ ಇಬ್ಬರು ಸೋದರರು, ಜುದಾ ಕುಟುಂಬಕ್ಕಾಗಿ ಮಾಡುತ್ತಿರುವ ಕೆಲಸಕ್ಕೆ ಕೃತಜ್ನರಾಗಿರುವ ಬದಲಾಗಿ ಅವನೇನೂ ಆಹಾರ ತಂದಿಲ್ಲವೆಂದು ಹೀಯಾಳಿಸಿದರು.

ಮರುದಿನವೂ ಹಾಗೆಯೇ ಆಯಿತು. ನದಿಯಲ್ಲಿ ಯಾವುದೇ ಮೀನು ಸಿಗದ ಕಾರಣ, ನಗರದ ಹೊರವಲಯದಲ್ಲಿರುವ ದೊಡ್ಡ ಸರೋವರ ಕರೂನ್‌ಗೆ ಜುದಾ ಹೊರಟ. ಅಲ್ಲಿಗೆ ಯಾವ ಬೆಸ್ತನೂ ಹೋಗುತ್ತಿರಲಿಲ್ಲ. ಯಾಕೆಂದರೆ ಅದೊಂದು ಮ್ಯಾಜಿಕ್ ಸರೋವರವೆಂದು ಅವರು ಹೆದರುತ್ತಿದ್ದರು.
 
ಜುದಾ ಅಲ್ಲಿಗೆ ಹೋದಾಗ, ಅಲ್ಲಿ ಒಂದು ಕತ್ತೆಯ ಮೇಲೆ ಕುಳಿತಿದ್ದ ಆಡಂಬರದ ಉಡುಪು ತೊಟ್ಟ ಅಪರಿಚಿತನೊಬ್ಬನನ್ನು ಕಂಡ. “ಜುದಾ, ನೀನು ಬಂದದ್ದರಿಂದ ಸಂತೋಷವಾಗಿದೆ. ನನಗೆ ಸಹಾಯ ಮಾಡಲು ನೀನೇ ಸರಿಯಾದ ವ್ಯಕ್ತಿ” ಎಂದ ಅಪರಿಚಿತ. ಜುದಾನಿಗೆ ಅಚ್ಚರಿಯಾಯಿತು. ಅವನು ಧೈರ್ಯದಿಂದ "ನಿಮಗೆ ಹೇಗೆ ಸಹಾಯ ಮಾಡಲಿ?” ಎಂದು ಕೇಳಿದ.

“ಮೊದಲಾಗಿ ನನ್ನ ಕೈಗಳು ಮತ್ತು ಕಾಲುಗಳನ್ನು ಹಗ್ಗದಿಂದ ಕಟ್ಟು ಮತ್ತು ನಿನ್ನಿಂದ ಸಾಧ್ಯವಾದಷ್ಟು ದೂರಕ್ಕೆ ನನ್ನನ್ನು ಸರೋವರದೊಳಗೆ ಎಸೆದು ಬಿಡು” ಎಂದ ಅಪರಿಚಿತ ಇನ್ನಷ್ಟು ವಿವರಣೆ ನೀಡಿದ: "ನಾನು ನೀರಿನಲ್ಲಿ ಮುಳುಗುತ್ತೇನೆ. ನೀನೇನೂ ಹೆದರಬೇಡ ಯಾಕೆಂದರೆ ನಾನು ನೀರಿನಿಂದ ಹೊರಗೆ ಬರುತ್ತೇನೆ. ನೀರಿನ ಮೇಲೆ ನನ್ನ ತಲೆ ಕಂಡೊಡನೆ ನಿನ್ನ ಬಲೆ ಬೀಸಿ ನನ್ನನ್ನು ದಡಕ್ಕೆ ಎಳೆದುಕೋ.”

ಬಲಶಾಲಿ ಯುವಕನಾದ ಜುದಾ, ಅಪರಿಚಿತ ಹೇಳಿದಂತೆಯೇ ಅವನ ಕೈಕಾಲುಗಳನ್ನು ಕಟ್ಟಿ ಸರೋವರದ ನೀರಿಗೆ ಎಸೆದ. ಅನಂತರ ಆತಂಕದಿಂದ ಸರೊವರದ ದಡದಲ್ಲಿ ಕಾಯುತ್ತಾ ಕುಳಿತ. ಸ್ವಲ್ಪ ಸಮಯದ ನಂತರ ಅಪರಿಚಿತನ ತಲೆ ನೀರಿನ ಮೇಲಕ್ಕೆ ಕಾಣಿಸಿತು. “ನನ್ನನ್ನು ಎಳೆದುಕೋ, ಜುದಾ" ಎಂದವನು ಕೂಗಿದ.

ಆ ಅಪರಿಚಿತನನ್ನು ಆವರಿಸುವಂತೆ ಜುದಾ ತನ್ನ ಮೀನಿನ ಬಲೆಯನ್ನು ನೀರಿಗೆ ಎಸೆದ. ಅನಂತರ ಅಪರಿಚಿತನನ್ನು ದಡಕ್ಕೆ ಎಳೆದು ಅವನ ಕೈಕಾಲುಗಳ ಕಟ್ಟು ಬಿಚ್ಚಿದ. ಎದ್ದು ನಿಂತ ಅಪರಿಚಿತ ತನ್ನ ಎರಡು ಕೈಗಳಲ್ಲಿ ಎರಡು ಹಳೆಯ ಮರದ ಪೆಟ್ಟಿಗೆಗಳನ್ನು ಹಿಡಿದುಕೊಂಡಿದ್ದ.

“ನೀವು ಯಾರು ಮತ್ತು ನಿಮಗೆ ನನ್ನ ಹೆಸರು ಹೇಗೆ ಗೊತ್ತು?” ಎಂದು ಕೇಳಿದ ಜುದಾ. ಅಪರಿಚಿತ ನಗುತ್ತ ಉತ್ತರಿಸಿದ, "ನನ್ನ ಹೆಸರು ಅಬ್ದುಲ್ ಸಮದ್. ನಾನೊಬ್ಬ ಜಾದೂಗಾರ. ನೀನು ಕರುಣಾಮಯಿ ಮತ್ತು ಪ್ರಾಮಾಣಿಕ ಎಂಬುದು ಬಹುಜನರಿಗೆ ಗೊತ್ತಿದೆ. ನಾನು ಸರೋವರದ ತಳಕ್ಕೆ ಈ ಎರಡು ಪೆಟ್ಟಿಗೆಗಳನ್ನು ತರಲು ಹೋಗಿದ್ದೆ. ಇವುಗಳಲ್ಲಿ ಎರಡು ಶಕ್ತಿಶಾಲಿ ಭೂತಗಳಿವೆ. ಈಗ ಅವು ನಾನು ಹೇಳಿದಂತೆ ಕೇಳುತ್ತವೆ. ಅಲ್ ಷಮರದಾಲ್‌ನ ಭೂಗತ ಅರಮನೆ ಪತ್ತೆ ಮಾಡಲು ಇವು ನನಗೆ ಸಹಾಯ ಮಾಡುತ್ತವೆ. ಆ ಅರಮನೆಗೆ ಹೋದವರು ಅವನ ನಾಲ್ಕು ಸೊತ್ತುಗಳನ್ನು ತರಬಹುದು: ಅವನ ಕುತ್ತಿಗೆಯಲ್ಲಿರುವ ಮ್ಯಾಜಿಕ್ ಬಾಟಲಿ; ಅವನ ತಲೆಯ ಮೇಲೆ ಹೊಳೆಯುತ್ತಿರುವ ಗಾಜಿನ ಚೆಂಡು; ಅವನ ಕೈಯಲ್ಲಿ ಮಿನುಗುತ್ತಿರುವ ಮ್ಯಾಜಿಕ್ ಉಂಗುರ ಮತ್ತು ಅವನ ಕಾಲಿನ ಹತ್ತಿರವಿರುವ ಮ್ಯಾಜಿಕ್ ಖಡ್ಗ.”

ಅನಂತರ ಜುದಾನಿಗೆ ಒಂದು ಚೀಲ ತುಂಬ ಚಿನ್ನವನ್ನು ಜಾದೂಗಾರ ಅಬ್ದುಲ್ ಸಮದ್ ಕೊಟ್ಟು, ಮರುದಿನ ನಗರದ ಮುಖ್ಯದ್ವಾರದ ಹೊರಗೆ ಕಾದಿರಬೇಕೆಂದು ಹೇಳಿದ. ಅವತ್ತು ಜುದಾ ಮನೆಗೆ ಅಷ್ಟು ಚಿನ್ನ ತಂದದ್ದನ್ನು ನೋಡಿ ಅವನ ಅಮ್ಮನಿಗೆ ಬಹಳ ಸಂತೋಷವಾಯಿತು. ಆದರೆ ಅವನ ಇಬ್ಬರು ಸೋದರರಿಗೆ ಬಹಳ ಅಸೂಯೆಯಾಯಿತು. "ನಾನು ಇನ್ನಷ್ಟು ಚಿನ್ನ ತರುತ್ತೇನೆ. ನಾಳೆ ಆ ಜಾದೂಗಾರನನ್ನು ಪುನಃ ಕಾಣಲಿದ್ದೇನೆ" ಎಂದು ಜುದಾ ಹೇಳಿದಾಗ ಅವನ ತಾಯಿ ಆತ ಮರುದಿನ ಹೋಗಲೇ ಬಾರದೆಂದಳು. ಅವನಿಗೇನಾದರೂ ಅಪಾಯವಾದೀತೆಂದು ಅವಳಿಗೆ ಆತಂಕ.

ಮರುದಿನ ನಗರದ ಮುಖ್ಯದ್ವಾರವನ್ನು ಜುದಾ ದಾಟಿದಾಗ ಅಲ್ಲಿ ಜಾದೂಗಾರ ಅಬ್ದುಲ್ ಸಮದ್ ಕಾಯುತ್ತಿದ್ದ. ಅವರಿಬ್ಬರೂ ಜಾದೂಗಾರನ ಬಂಗಲೆಗೆ ಹೊರಟರು. ಮರುಭೂಮಿಯಲ್ಲಿ ಸಾಗಿತು ಅವರ ಪ್ರಯಾಣ. ಮಧ್ಯಾಹ್ನದ ಹೊತ್ತಿಗೆ ಜುದಾನಿಗೆ ಜೋರು ಹಸಿವಾಯಿತು. “ಇಲ್ಲಿ ನನಗೆ ತಿನ್ನಲು ಏನಾದರೂ ಸಿಕ್ಕೀತೇ?” ಎಂದು ಕೇಳಿದ ಜುದಾ.

ಜಾದೂಗಾರ ನಗುತ್ತಾ ಉತ್ತರಿಸಿದ, "ನನ್ನ ಮ್ಯಾಜಿಕ್ ಚೀಲ ನಮಗೆ ಬೇಕಾದ ಎಲ್ಲವನ್ನೂ ಕೊಡುತ್ತದೆ.” ಜಾದೂಗಾರ ಆ ಚೀಲದೊಳಗೆ ಕೈಹಾಕಿ, ತಿಂಡಿತಿನಿಸುಗಳ ಹಲವಾರು ತಟ್ಟೆಗಳನ್ನು ಹೊರತೆಗೆದ. ಅವರಿಬ್ಬರೂ ಹೊಟ್ಟೆ ತುಂಬ ತಿಂದು ತಮ್ಮ ಪ್ರಯಾಣವನ್ನು ಮುಂದುವರಿಸಿದರು. ರಾತ್ರಿಯ ಹೊತ್ತಿಗೆ ಜಾದೂಗಾರನ ಮನೆಯನ್ನು ಸೇರಿದರು.

ಮರುದಿನ ಜಾದೂಗಾರ ತನ್ನ ಸೇವಕರು ಮತ್ತು ಜುದಾ ಜೊತೆಗೆ ಮತ್ತೆ ಪ್ರಯಾಣ ಆರಂಭಿಸಿದ. ರಾತ್ರಿ ಮಲಗಲಿಕ್ಕಾಗಿ ಡೇರೆಗಳ ಸಹಿತ ಎಲ್ಲವನ್ನೂ ಅವರು ಕತ್ತೆಗಳ ಮೇಲೆ ಹೇರಿಕೊಂಡು ಹೊರಟರು. ಹಾದಿಯಲ್ಲಿ ಮ್ಯಾಜಿಕ್ ಚೀಲ ಆಹಾರ ಒದಗಿಸಿತು.

ಒಂದು ವಾರ ಪ್ರಯಾಣಿಸಿದ ನಂತರ ಅವರು ಒಂದು ದೊಡ್ಡ ನದಿಯ ದಡ ತಲಪಿದರು. ಅದರ ನೀರು ಆಳವಾಗಿತ್ತು. ಜಾದೂಗಾರ ಸರೋವರದ ತಳದಿಂದ ತಂದಿದ್ದ ಎರಡು ಪೆಟ್ಟಿಗೆಗಳನ್ನು ಹೊರ ತೆಗೆದು, ಮ್ಯಾಜಿಕ್ ಮಂತ್ರಗಳನ್ನು ಹೇಳಿದ. ಆಗ ಪೆಟ್ಟಿಗೆಗಳಿಂದ ಎರಡು ಭೂತಗಳು ಹೊರ ಬಂದು, "ಒಡೆಯಾ, ನಾವೇನು ಮಾಡಬೇಕು?” ಎಂದು ಕೇಳಿದವು. “ಅಲ್ ಷಮರದಾಲ್‌ನ ಭೂಗತ ಅರಮನೆಗೆ ದಾರಿ ತೋರಿಸಿ” ಎಂದು ಆದೇಶಿಸಿದ ಜಾದೂಗಾರ.

“ನಿಮ್ಮ ಆದೇಶ ಪಾಲಿಸುತ್ತೇವೆ” ಎಂದು ಭೂತಗಳು ಹೇಳುತ್ತಲೇ ಅಲ್ಲಿ ದೊಡ್ಡದೊಂದು ಬಾಗಿಲು ಕಾಣಿಸಿತು. "ಜುದಾ, ನಾನು ಜಾದೂಗಾರನಾದ ಕಾರಣ ಈ ಬಾಗಿಲಿನ ಮೂಲಕ ಹೋಗುವಂತಿಲ್ಲ. ಅಲ್ ಷಮರದಾಲ್ ಮಲಗಿರುವ ಕೋಣೆಗೆ ನೀನೇ ಹೋಗಬೇಕು" ಎಂದ ಜಾದೂಗಾರ. ಅನಂತರ ಜುದಾ ಏನು ಮಾಡಬೇಕೆಂದು ಜಾದೂಗಾರ ಹೀಗೆ ವಿವರಿಸಿದ: ನೀನು ಒಳಗೆ ಹೋದಾಗ ನಿನಗೆ ಏಳು ಕಮಾನು-ದ್ವಾರಗಳು ಕಾಣಿಸುತ್ತವೆ; ಅವು ಏಳು ಬೃಹತ್ ಕೋಣೆಗಳಿಗೆ ಸಾಗುತ್ತವೆ. ಪ್ರತಿಯೊಂದು ಕಮಾನು-ದ್ವಾರದಲ್ಲಿ ಕಾವಲುಗಾರನಿರುತ್ತಾನೆ. ನೀನು ಧೈರ್ಯದಿಂದ ಮುನ್ನಡೆದರೆ ಅವರು ನಿನ್ನನ್ನು ತಡೆಯುವುದಿಲ್ಲ.

ಜುದಾ ಮುಟ್ಟಿದೊಡನೆ ಮುಖ್ಯದ್ವಾರ ತೆರೆದುಕೊಂಡಿತು. ಅವನೊಂದು ವಿಶಾಲವಾದ ಕೋಣೆಗೆ ಬಂದ. ಅವನೆದುರು ಏಳು ಕಮಾನು-ದ್ವಾರಗಳು ಕಾಣಿಸಿದವು. ಅವನ್ನು ಕಾವಲುಗಾರರು ಕಾಯುತ್ತಿದ್ದರು. ಆದರೆ ಜುದಾ ಧೈರ್ಯದಿಂದ ಅವರನ್ನು ದಾಟಿ ಮುಂದಕ್ಕೆ ನಡೆದ. ಅವನು ಕೊನೆಯ ವೈಭವೋಪೇತ ಕೋಣೆಗೆ ಬಂದಾಗ ಅಲ್ ಷಮರದಾಲ್ ಮಲಗಿದ್ದುದು ಕಾಣಿಸಿತು. ಅವನ ಮ್ಯಾಜಿಕ್ ಬಾಟಲಿ, ಗಾಜಿನ ಚೆಂಡು, ಮ್ಯಾಜಿಕ್ ಉಂಗುರ ಮತ್ತು ಮ್ಯಾಜಿಕ್ ಖಡ್ಗ ಇವನ್ನು ಜುದಾ ಸುಲಭವಾಗಿ ತೆಗೆದುಕೊಂಡ. ಅನಂತರ ತರಾತುರಿಯಿಂದ ಒಳಗೆ ಹೋದಂತೆಯೇ ಜುದಾ ಹೊರಗೆ ಬಂದ.

ಅವನ್ನೆಲ್ಲ ಜುದಾನಿಂದ ತೆಗೆದುಕೊಂಡ ಜಾದೂಗಾರ ಅಬ್ದುಲ್ ಸಮದ್ ಜುದಾನನ್ನು ಅಭಿನಂದಿಸಿದ, "ನಿನಗೆ ಸಾವಿರ ಥ್ಯಾಂಕ್ಸ್. ಈಗ ಈ ಜಗತ್ತಿನಲ್ಲಿ ನಾನೇ ಶ್ರೇಷ್ಠ ಜಾದೂಗಾರ.”

ಅಲ್ ಷಮರದಾಲ್‌ನ ಅರಮನೆಗೆ ಒಯ್ಯುವ ಮಹಾದ್ವಾರ ಕಣ್ಮರೆಯಾಯಿತು. ಅವರೆಲ್ಲರೂ ಅಲ್ಲಿಂದ ಹಿಂತಿರುಗಿ ಹೊರಟರು. ಒಂದು ವಾರದ ಪ್ರಯಾಣದ ನಂತರ ಜಾದೂಗಾರನ ಬಂಗಲೆಗೆ ಮರಳಿದರು. ಜಾದೂಗಾರ "ನಿನಗೇನು ಬೇಕು?” ಎಂದು ಕೇಳಿದಾಗ ಜುದಾ, “ನಿಮ್ಮ ಮ್ಯಾಜಿಕ್ ಚೀಲ ಕೊಡಿ” ಎಂದು ಹೇಳಿದ. "ನಿನ್ನಿಂದಾದ ಸಹಾಯಕ್ಕೆ ಅದೊಂದು ಪುಟ್ಟ ಉಡುಗೊರೆ” ಎನ್ನುತ್ತಾ ಜಾದೂಗಾರ ಅದನ್ನು ಜುದಾನಿಗೆ ಕೊಟ್ಟ.

ಮರುದಿನ ಜುದಾ ತನ್ನ ಮನೆಗೆ ಮರಳಿ, ಮ್ಯಾಜಿಕ್ ಚೀಲವನ್ನು ಅಮ್ಮನಿಗೆ ತೋರಿಸಿ ಹೇಳಿದ, “ಅಮ್ಮಾ, ಇನ್ನು ನಾವು ಯಾವತ್ತೂ ಉಪವಾಸದಿಂದ ಇರಬೇಕಾಗಿಲ್ಲ. ನಮಗೆ ಬೇಕಾದ ಎಲ್ಲ ಆಹಾರವೂ ಈ ಚೀಲದಿಂದ ಸಿಗುತ್ತದೆ.”

ಆದರೆ ಅಮ್ಮ ದುಃಖದಿಂದಲೇ ಇದ್ದಳು. ಏನಾಯಿತೆಂದು ಜುದಾ ಕೇಳಿದಾಗ, ಅವನ ಸೋದರರು ಎಲ್ಲ ಚಿನ್ನವನ್ನೂ ದುಂದು ವೆಚ್ಚ ಮಾಡಿ ಕಳೆದುಕೊಂಡರೆಂದು ಅಮ್ಮ ಕಣ್ಣೀರು ಹಾಕುತ್ತಾ ಹೇಳಿದಳು. “ನೀನಿನ್ನು ಚಿಂತಿಸ ಬೇಡ. ಇನ್ನು ನಮಗೆ ಊಟಕ್ಕೇನೂ ತೊಂದರೆಯಾಗದು” ಎಂದು ಜುದಾ ಸಂತೈಸಿದ.

ಆಗ ಅವನ ಸೋದರರಿಬ್ಬರೂ ಮನೆಗೆ ಬಂದರು. “ಬನ್ನಿ, ಊಟ ಮಾಡೋಣ” ಎಂದು ಜುದಾ ಅವರನ್ನು ಕರೆದ. ಎಲ್ಲರೂ ಕುಳಿತುಕೊಂಡರು. ಜಾದೂಗಾರನಿಂದ ಕಲಿತಿದ್ದ ಮಂತ್ರಗಳನ್ನು ಹೇಳುತ್ತಾ, ಬೇಕುಬೇಕಾದ ತಿಂಡಿತಿನಿಸುಗಳನ್ನು ಜುದಾ ಮ್ಯಾಜಿಕ್ ಚೀಲದಿಂದ ತೆಗೆದುತೆಗೆದು ಕೊಟ್ಟ. ಆ ದಿನ ಅವರು ತಮ್ಮ ಜೀವಮಾನದ ಅತ್ಯಂತ ರುಚಿಯಾದ ಊಟ ಮಾಡಿದರು.