ಮ್ಯಾಜಿಕ್ ನಡಿದು ಹೋಯಿತು...!

ಮ್ಯಾಜಿಕ್ ನಡಿದು ಹೋಯಿತು...!

ಪುಸ್ತಕದ ಲೇಖಕ/ಕವಿಯ ಹೆಸರು
ಅಕ್ಷಯ ನಾಗ್ರೇಶಿ
ಪ್ರಕಾಶಕರು
ಪೂರ್ಣಿಮಾ ಪ್ರಕಾಶನ, ಹಳಿಯಾಳ, ಉತ್ತರ ಕನ್ನಡ ಜಿಲ್ಲೆ
ಪುಸ್ತಕದ ಬೆಲೆ
ರೂ. ೧೧೦.೦೦, ಮುದ್ರಣ : ೨೦೨೩

ಅಕ್ಷಯ ನಾಗ್ರೇಶಿ ಅವರ “ಮ್ಯಾಜಿಕ್ ನಡಿದು ಹೋಯಿತು..!” ಎನ್ನುವ ಕೃತಿಯು ಹದಿಹರೆಯಕ್ಕೆ ಕಾಲಿಡುತ್ತಿರುವ ಯುವಕ ಯುವತಿಯರ ಹುಡುಗು ಮನದಲ್ಲಿ ಕಾಡುವ ಕಥೆಗಳ ಸಂಗ್ರಹ. “ಪರೀಕ್ಷೆಯಲ್ಲಿ ಫೇಲಾಗಿ ಆತ್ಮಹತ್ಯೆಗೆ ಪ್ರಯತ್ನಿಸುವ ವಿದ್ಯಾರ್ಥಿಗಳು ಮತ್ತು ಅವರ ಮಾನಸಿಕ ಲೋಕದತ್ತಲೇ ಸುತ್ತುವ ಕತೆ ಇದು" ಎನ್ನುತ್ತಾರೆ ಸಾಹಿತಿ ಸುನಂದಾ ಕಡಮೆ. ಸುನಂದಾ ಕಡಮೆ ಅವರು ‘ಮ್ಯಾಜಿಕ್ ನಡಿದು ಹೋಯಿತು...!’ ಪುಸ್ತಕಕ್ಕೆ ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ ಅದರಲ್ಲಿ ಅವರು ವ್ಯಕ್ತ ಪಡಿಸಿದ ಭಾವನೆಗಳು ಇಲ್ಲಿವೆ  “ಮಕ್ಕಳ ಬರಹಗಾರರಾದ ಅಕ್ಷಯ ನಾಗ್ರೇಶಿಯವರ ʻಮ್ಯಾಜಿಕ್ ನಡಿದು ಹೋಯಿತು’ ಸಂಕಲನವು ಎಂಟು ಅಪರೂಪದ ಕತೆಗಳನ್ನು ಹೊಂದಿದ್ದು, ಮಕ್ಕಳ ಮನಸ್ಸನ್ನು ಹಿಡಿದಿಟ್ಟುಕೊಂಡು ಓದಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ, ಯಾಕೆಂದರೆ ಅಂಥ ಮುಗ್ಧ ಮನಸ್ಸುಗಳು ಇಲ್ಲಿ ನಿರಂತರ ಓಡಾಟ ನಡೆಸುತ್ತವೆ. ಒಂದೊಂದು ಕತೆಯೂ ಒಂದೊಂದು ನೀತಿಯನ್ನು ತನ್ನ ಒಡಲಲ್ಲಿಟ್ಟುಕೊಂಡಿದ್ದು, ಅವು ಸಾಂಕೇತಿಕವಾಗಿಯೇ ಇಲ್ಲಿ ಮೂಡಿಬಂದಿವೆ. ಇಲ್ಲಿ ಬಡತನದ ಬೇಗುದಿಯಲ್ಲಿ ಸಿಲುಕಿ ಬದುಕಿನ ವಾಸ್ತವವನ್ನು ಅರಿತುಕೊಂಡ ಮಕ್ಕಳಿದ್ದಾರೆ. ಕುಡಿತ, ಧೂಮಪಾನದಂತಹ ಚಟಕ್ಕೆ ಬಲಿಯಾಗಿ ಕುಟುಂಬವನ್ನು ಸಂಕಷ್ಟಕ್ಕೆ ತಳ್ಳುವ ಬೇಜವಾಬ್ದಾರಿ ಅಪ್ಪಂದಿರಿದ್ದಾರೆ. ಮತ್ತು ಇಲ್ಲಿ ಹೆಚ್ಚಾಗಿ ಮಕ್ಕಳ ಸುತ್ತಲೇ ನಡೆಯುವ ಕಥಾಲೋಕವಿದೆ. ಕತೆಗಳ ವಸ್ತು ಹಾಗೂ ನಿರೂಪಣೆಯಲ್ಲಿ ಕೂಡ ಹೊಸತನವಿದೆ.

ಅಕ್ಷಯ ಅವರು ಬರೆದಿರುವುದು ಮಕ್ಕಳಿಗಾಗಿಯಾದರೂ ಇದರಲ್ಲಿ ಬರುವ ಬುದ್ದಿಮಾತುಗಳ ವಿಚಾರಗಳು ದೊಡ್ಡವರನ್ನು ತಿದ್ದುವಲ್ಲಿಯೇ ತೊಡಗಿಕೊಂಡಿವೆ. ಇದು ಆಗಬೇಕಾದದ್ದು ಹೀಗೆಯೇ. ಉದಹರಣೆಗಾಗಿ ʻಇನ್ನು ಅವನು ಸೇದುವುದಿಲ್ಲ' ಕತೆಯಲ್ಲಿ ಅಪ್ಪನ ಧೂಮಪಾನದ ಚಟವನ್ನು ಮಗನೇ ಬಿಡಿಸಲು ಹಂಬಲಿಸುವುದನ್ನು ನಾವು ಕಾಣಬಹುದು. ಕೆಲವು ಕಡೆಗಳಲ್ಲಿ ಪ್ರಕೃತಿ ವಿಕೋಪಗಳೂ ಹಿರಿಯರ ಗುಣಸ್ವಭಾವವನ್ನು ತಿದ್ದುತ್ತವೆ. ʻಬಿರುಗಾಳಿ ಬೀಸಿತು'ಲ್ಲಿ ಅಪ್ಪನೊಬ್ಬ ಮಳೆಗಾಳಿಗೆ ಮನೆಯ ಚಾವಣಿ ಹಾರಿಹೋದ ದುಸ್ತರ ಪರಿಸ್ಥಿತಿಯಲ್ಲಿ ಬದಲಾಗುತ್ತಾನೆ. ಮಕ್ಕಳ ಮನಸ್ಸನ್ನಷ್ಟೇ ಅಲ್ಲದೇ ದೊಡ್ಡವರನ್ನೂ ವಿಷಣ್ಣರನ್ನಾಗಿ ಮಾಡುವ ಪ್ರಥಮ ಪುರುಷ ನಿರೂಪಣೆ ಈ ಕತೆಗೆ ತೀವ್ರತೆಯನ್ನು ತಂದುಕೊಟ್ಟಿದೆ. ಆ ಕಾರಣದಿಂದಲೇ ಓದುಗರ ಮನಸ್ಸನ್ನು ತಟ್ಟುವಂತಿದೆ.

ಇಂದಿನ ಸಾಮಾಜಿಕ ಮಾಧ್ಯಮವು ನೂರಕ್ಕೆ ನೂರರಷ್ಟು ಮೊಬೈಲ್‌ಮಯವಾಗಿದ್ದು, ಅದು ಹೇಗೆ ನಮ್ಮ ಅನುಬಂಧವನ್ನು ಕ್ರಮೇಣ ವೈರುಧ್ಯದೆಡೆಗೆ ಒಯ್ಯುತ್ತದೆ ಎಂಬ ಕುರಿತು ಇಲ್ಲಿಯ ʻಗೆಳೆಯರು ಅವರೆಲ್ಲಾ' ಕತೆಯು ಬೆಳಕು ಚಲ್ಲುತ್ತದೆ. ಇಲ್ಲಿ ಪರೀಕ್ಷೆಯ ಸಮಯದಲ್ಲಿ ಆಟೋಟ ಬಿಟ್ಟು ಅಭ್ಯಾಸಕ್ಕಾಗಿ ಮನೆಸೇರಿದ ಗೆಳೆಯರ ಜೊತೆಗಿನ ಒಡನಾಟವು ಹೇಗೆ ಬರಿ ಜಂಗಮವಾಣಿಯಲ್ಲೇ ಮುಂದುವರೆದು ನೀರಸವಾಗಿ ಮಾರ್ಪಾಡಾಗಬಲ್ಲದು ಎಂಬುದು ನಮ್ಮ ಓದಿಗೆ ನಿಲುಕುತ್ತದೆ. ಇಲ್ಲಿ ಬರುವ ಭಾವನಾತ್ಮಕ ಸ್ಪರ್ಶವುಳ್ಳ ಘಟನೆಗಳು ಸ್ಪಂದನಶೀಲವಾಗಿವೆ, ಮನುಷ್ಯ ಜೀವಿಯ ಸಾಮಾಜಿಕ ಅಂತರವನ್ನು ಹೆಚ್ಚಿಸುವ ಮೊಬೈಲ್ ಲೋಕ ಒಂದು ಅರಿವಿನ ಹಣತೆಯನ್ನೂ ಇಲ್ಲಿ ಹಚ್ಚಿದೆ. ಮತ್ತು ಕ್ರೀಡೆಗೆ ನಮ್ಮ ಕೌಟುಂಬಿಕ ಮನಸ್ಥಿತಿಗಳು ಯಾವ ರೀತಿಯ ಅಸಡ್ಡೆಯನ್ನು ತೋರಿ ಮಕ್ಕಳ ಸೃಜನಾತ್ಮಕತೆಯನ್ನು ಮೊಟಕುಗೊಳಿಸುತ್ತವೆ ಎಂಬ ಬಗ್ಗೆಯೂ ಯೋಚನೆಗೆ ಹಚ್ಚುವಂತಿದೆ.

ಮಕ್ಕಳಲ್ಲಿರುವ ಸಹಜ ಪ್ರತಿಭೆಗಳನ್ನು ಗುರುತಿಸಿ ನಾವು ನೀರೆರೆಯಬೇಕು, ಅದು ಮುಂದೆ ಬೆಳೆದು ಹೆಮ್ಮರವಾಗಿ ಶಾಲೆಗೂ ಪಾಲಕರಿಗೂ ದೊಡ್ಡ ಘನತೆಯನ್ನು ತಂದುಕೊಡಬಹುದು ಎಂಬ ಚಿಂತನೆಗೆ ಪೂರಕವಾಗಿ ಇಲ್ಲಿಯ ʻಗಿರಿಜಾ ಅನ್ನೋ ಹುಡುಗಿ' ಕತೆಯನ್ನು ನೀಡಿದ್ದಾರೆ. ಶಾಲೆ ಕಲಿಯುವ ಚುರುಕಾದ ಬಡ ಹುಡುಗಿಯೊಬ್ಬಳು ತನಗೆ ದೊರಕಿದ ಪ್ರೋತ್ಸಾಹದಿಂದ ಮುಂದೆ ಅಪರೂಪದ ಕಲಾಕಾರಳಾಗಿ ಹೊಮ್ಮಿದ ಕತೆ ಮನಮುಟ್ಟುವಂತೆ ಇಲ್ಲಿ ನಿರೂಪಿತವಾಗಿದೆ. ತಂದೆ ತಾಯಿಗಳ ಬಡತನವನ್ನು ನೀಗಿಸುವ ಮತ್ತು ನಾಲ್ಕು ಜನ ಮೆಚ್ಚುವಂತೆ ವಿಶಿಷ್ಠ ವಿದ್ಯಾರ್ಥಿನಿಯಾಗಿ ಬೆಳೆದ ಇಲ್ಲಿಯ ಗಿರಿಜಾ ಮಕ್ಕಳಿಗೆ ಆದರ್ಶಪ್ರಾಯಳು, ಇಂಥವಳ ಕತೆ ನಮ್ಮ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವೂ ಹೌದು. ಇಂಥ ಕತೆಗಳನ್ನು ನಮ್ಮ ಪೋಷಕರು ಸಹ ಓದುವ ಜರೂರು ಇದೆ.

ಮಕ್ಕಳ ಸ್ನೇಹವಲಯ ಉತ್ತಮವಾಗಿದ್ದರೆ ಅದು ಸಹವಾಸ ಕಾರಣವೆಂಬಂತೆ ತನ್ನ ಬಳಗವನ್ನೆಲ್ಲ ಸರಿಯಾದ ದಾರಿಯಲ್ಲಿ ನಡೆಸಬಲ್ಲದು ಎಂಬುದಕ್ಕೆ ಇಲ್ಲಿಯ ʻಮ್ಯಾಜಿಕ್ ನಡೆದು ಹೋಯಿತು' ಕತೆಯನ್ನು ನಾವು ಉದಾಹರಿಸಬಹುದು. ಇಲ್ಲಿ ಅಭ್ಯಾಸದಲ್ಲಿ ಜಾಣನಲ್ಲದ ಚಿದು ಎಂಬ ಹುಡುಗನನ್ನು ಹುರಿದುಂಬಿಸಿ ಅಭ್ಯಾಸದ ಕಡೆಗೆ ಸೆಳೆದು ಎಸೆಸೆಲ್ಸಿಯಲ್ಲಿ ಅವನನ್ನು ಪಾಸಾಗುವಂತೆ ಮಾಡುತ್ತಾನೆ ಅವನ ಜಾಣ ಸ್ನೇಹಿತ ಅಕ್ಷಯ್. ಆ ಅಕ್ಷಯನ ಕಣ್ಣಿನಲ್ಲಿ ನಡೆಯುವ ಕತೆಯಿದು. ಇಬ್ಬರ ನಡುವಿನ ಸ್ನೇಹ ಮತ್ತು ಹೊಂದಾಣಿಕೆಗಳು ಮಧುರವಾಗಿ ಮೂಡಿದೆ. ಗೆಳೆಯರ ಬಳಗದಲ್ಲಿ ಒಬ್ಬರಿಗೊಬ್ಬರು ಪರಸ್ಪರ ಮಾದರಿಯಾಗುವ ಸನ್ನಿವೇಶಗಳು ಇಬ್ಬರ ಅಭಿವೃದ್ಧಿಗೂ ಕಾರಣವಾಗುವ ರೀತಿ ಮೆಚ್ಚುವಂತಿದೆ. ಸಾಂಗತ್ಯ ಯಾವಾಗಲೂ ಜೊತೆಯಲ್ಲಿದ್ದವರ ವ್ಯಕ್ತಿತ್ವದ ಮೇಲೂ ಪರಿಣಾಮ ಬಿರುತ್ತದೆ.

ಹಿರಿಯರು ಮಗುವಿಗೆ ಇರಿಸುವ ಕೆಲ ಹೆಸರುಗಳು ಹೇಗೆ ಮುಂದೆ ಶಾಲೆಯಲ್ಲಿ ಅವರ ಮಾನಸಿಕ ಸ್ಥೈರ್ಯವನ್ನು ಕೆಡಿಸುತ್ತವೆ ಎಂಬುದಕ್ಕೆ ʻಇನ್ನು ಅವನು ಸೇದುವುದಿಲ್ಲ' ಕತೆಯಲ್ಲಿ ಬರುವ ಅಜ್ಜಪ್ಪನೆಂಬ ಹುಡುಗನನ್ನೇ ನಾವು ಕಾಣಬಹುದು. ಅಜ್ಜಪ್ಪ ಎಂದು ಹೆಸರಿರುವ ಈ ಹುಡುಗನ ಮಾನಸಿಕ ತುಮುಲವನ್ನು ಒರೆಗೆ ಹಚ್ಚುವಂಥ ಕತೆಯಿದು. ಆ ಹುಡುಗನ ಅಜ್ಜ ಕುಡಿತದಿಂದ ತೀರಿ ಹೋದ ನಂತರ ಅಜ್ಜ ಎನ್ನುವ ಪದ ಸೆನ್ಸಾರ್ ಮಾಡಿ ಆಡಿಕೊಳ್ಳುವ ಅವನ ಗೆಳೆಯರು, ಅಜ್ಜಪ್ಪ ತನ್ನ ಅಪ್ಪನನ್ನೂ ಕಳೆದುಕೊಂಡ ನಂತರ ತನ್ನ ಹೆಸರಿನಲ್ಲಿರುವ ಇಬ್ಬರನ್ನೂ ಕಳೆದುಕೊಂಡಂತಾಗುತ್ತದೆ. ಅಪ್ಪನ ಚಟದ ವಿರುದ್ಧ ಮಗ ಸಿಡಿದುಬಿದ್ದ ಗಳಿಗೆಯಲ್ಲೇ, ಅದೇ ದಿನ ಆತ ಕಾಲವಾದದ್ದು ಮಗ ಅಜ್ಜಪ್ಪನಿಗೆ ದುಃಖಕ್ಕೀಡು ಮಾಡುತ್ತದೆ. ಭವಿಷ್ಯದ ನಂಬಿಕೆಯಂತೆ ಅಜ್ಜ-ಅಪ್ಪನ ಹೆಸರನ್ನು ಸೇರಿಯೇ ಇಟ್ಟಿರುವ ಆ ಹೆಸರಿನ ಮಹಿಮೆ, ಮಗುವಿನ ಮಾನಸಿಕ ಅಸಮತೋಲನಕ್ಕೆ ಕಾರಣವಾಗುವುದು ಒ೦ದು ವಿಡಂಬನೆಯ ಶೈಲಿಯಲ್ಲಿ ಇಲ್ಲಿ ಪ್ರಕಟಗೊಂಡಿದೆ.

ಮಕ್ಕಳ ಒಗ್ಗೂಡುವಿಕೆಯಿಂದ ಊರಿನ ಹಬ್ಬಗಳು ಹೇಗೆ ಕಳೆ ಕಟ್ಟಬಲ್ಲವು ಎಂಬುದಕ್ಕೆ ಇಲ್ಲಿಯ ʻಬಣ್ಣ ಬಣ್ಣದ ಲೋಕ' ಕತೆಯನ್ನು ನಾವು ವಿವರಿಸಬಹುದು. ಇಲ್ಲಿ ಹೋಳಿ ಹುಣ್ಣಿಮೆಯ ಸನ್ನಿವೇಶ ಬರುತ್ತದೆ, ವಾಗು ಎಂಬ ಹುಡುಗ ಸ್ನೇಹಿತರೊಂದಿಗೆ ಈಸಲು ಊರಕೆರೆಗೆ ಹೋಗಿ ಅಲ್ಲಿ ಶವ ತೇಲಾಡುವ ರೀತಿಯಲ್ಲಿ ಮಲಗಿ ಈಸುವ ಅಭ್ಯಾಸ ಮಾಡುತ್ತಿರುತ್ತಾನೆ. ಅದನ್ನು ನೋಡಿದ ಊರಿನ ಹಿರಿಯರೊಬ್ಬರು ವಾಗು ಸತ್ತಿದ್ದಾನೆ ಅಂತ ಭಾವಿಸಿ ಊರಲ್ಲೆಲ್ಲ ಹೇಳಿಕೊಂಡು ಬಂದು ಜನ ಸೇರಿಸಿಬಿಡುತ್ತಾರೆ. ವಾಗುವಿಗೆ ಇದು ಶೌರ್ಯ ಪ್ರಶಸ್ತಿ ತಂದುಕೊಡುತ್ತದೆ. ಕಾಮಣ್ಣನ ಗೊಂಬೆಗೆ ಹುಲ್ಲು ತರಲು ಹೋದ ಮಕ್ಕಳು ಊರಗೌಡನ ಮಗನ ಬಟ್ಟೆಯನ್ನು ಕದ್ದು ತರುತ್ತಾರೆ. ಇಲ್ಲಿ ಹೋಳಿ ಹಬ್ಬದ ಸಂಪ್ರದಾಯದ ಕತೆ, ಕಾಮಣ್ಣನ ಮೂರ್ತಿ ಮಾಡುವ ಮಕ್ಕಳ ಶ್ರಮ ಕಣ್ಣಿಗೆ ಕಟ್ಟುತ್ತದೆ. ಬಣ್ಣ ಆಡಿ ಸಮಯ ವ್ಯರ್ಥ ಮಾಡುವ ಬದಲು ಎಲ್ಲರೂ ಕೂಡಿ ಅಭ್ಯಾಸ ಮಾಡಬೇಕು ಎಂಬಂಥ ನೀತಿಯು ಬಾಯ್ಬಿಟ್ಟು ಹೇಳದೆಯೂ ಇಲ್ಲಿ ಮನನವಾಗುವಂತಿದೆ. ತನ್ನದೇ ಜಾಕೆಟ್ಟು ಹಾಗೂ ಪ್ಯಾಂಟನ್ನೇ ಕದ್ದು ಮಕ್ಕಳು ಕಾಮಣ್ಣನ ಗೊಂಬೆಗೆ ತೊಡಿಸಿ ಅಪ್ರಾಮಾಣಿಕತೆ ಮೆರೆದರೂ, ಸಹೃದಯತೆಯಿಂದ ಕ್ಷಮಿಸುವ ಗೌಡರ ಮಗನ ಸ್ವಭಾವ ಅನುಕರಣೀಯ. ಇವೆಲ್ಲವೂ ಮಕ್ಕಳ ಕತೆಗಳಿಗೆ ಬೇಕಾಗುವ ಪೌಷ್ಟಿಕಾಂಶಗಳೇ ಆಗಿವೆ ಎಂಬುದು ವಿಶೇಷ.

ಸರಕಾರವು ಪ್ರಾಥಮಿಕ ಶಾಲೆಯ ಶಿಕ್ಷಕ ಹುದ್ದೆಗೆ ಲಿಂಗತ್ವ ಅಲ್ಪಸಂಖ್ಯಾತರಿಗೆ ಒಂದು ಪರ್ಸೆಂಟು ಮೀಸಲಾತಿ ನೀಡಿದ್ದು ಇದೀಗ ಮೂವರು ತೃತೀಯ ಲಿಂಗಿಗಳು ಶಿಕ್ಷಕಿಯರಾಗಿ ನೇಮಿತವಾಗಿದ್ದಾರೆ. ಇನ್ನುಮುಂದೆ ತೃತೀಯ ಲಿಂಗಿಗಳೂ ಎಲ್ಲರಂತೆ ಬದುಕುವ ಅವಕಾಶವನ್ನು ಪಡೆದುಕೊಳ್ಳಬಹುದು, ಹಾಗೆಯೆ ಇಲ್ಲಿಯ ʻನನಗೂ ಆಸೆ ಇದೆ' ಕತೆಯಲ್ಲಿ ಲಿಂಗತ್ವ ಅಲ್ಪ ಸಂಖ್ಯಾತರ ಬನಿಯಿದೆ. ಮಗು ತನ್ನ ಆತ್ಮಕತೆಯನ್ನು ನಿವೇದಿಸುತ್ತಿರುವಂತಹ ನಿರೂಪಣೆಯ ಶೈಲಿ ಆಪ್ತವಾಗಿದೆ. ಅವರ ನಿಸರ್ಗ ಸದೃಶ ಸ್ಪಂದನೆಗಳು ಪ್ರಧಾನಧಾರೆಗೆ ಬಂದು ಎಲ್ಲರಲ್ಲೂ ಇದೊಂದು ಸಹಜ ಅಭಿವ್ಯಕ್ತಿಯಾಗಿ ಸ್ಪುರಿಸಬೇಕಿದೆ.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಅಂಕಗಳ ರುಚಿ ಹತ್ತಿಸಿ, ಅದನ್ನು ಪಡೆಯದೇ ಇದ್ದವರು ಬದುಕಲು ಯೋಗ್ಯರೇ ಅಲ್ಲ ಎಂಬಂತೆ ಬಿಂಬಿತವಾಗುತ್ತಿದ್ದುದು ದುರಂತದ ಸಂಕೇತ, ಆ ಸಂಗತಿಯನ್ನು ಸೂಕ್ಷ್ಮವಾಗಿ ಇಲ್ಲಿಯ ʻಗೆಳೆತನ ಅಂದ್ರೆ...' ಕತೆಯಲ್ಲಿ ಪ್ರಸ್ತಾಪಿಸಿದ್ದಾರೆ ಅಕ್ಷಯ. ಜಾತಿ ಧರ್ಮಗಳ ನಡುವಿನ ತಾರತಮ್ಯವನ್ನು ಅಲ್ಲಗಳೆಯುತ್ತ ಬರೆದ ಈ ಕಥಾ ಹಂದರ ಆಸಕ್ತಿದಾಯಕವೂ ಆದದ್ದು. ಪರೀಕ್ಷೆಯಲ್ಲಿ ಫೇಲಾಗಿ ಆತ್ಮಹತ್ಯೆಗೆ ಪ್ರಯತ್ನಿಸುವ ವಿದ್ಯಾರ್ಥಿಗಳು ಮತ್ತು ಅವರ ಮಾನಸಿಕ ಲೋಕದತ್ತಲೇ ಸುತ್ತುವ ಕತೆ ಇದು.

ಈ ಸಂಕಲನದ ಕೇವಲ ಎಂಟು ಕಥೆಗಳಲ್ಲೇ ಅಕ್ಷಯ, ವಿಭಿನ್ನವಾದ ಬಗೆಬಗೆಯ ಕಥಾ ವಿಚಾರಗಳನ್ನು ತೆರೆದಿಡಲು ಯತ್ನಿಸಿದ್ದಾರೆ. ಕನ್ನಡದ ಹೆಚ್ಚು ಹೆಚ್ಚು ಮಕ್ಕಳಿಗೆ ಈ ಕಥಾಗುಚ್ಛ ಓದಿಗೆ ಸಿಗುವಂತಾಗಬೇಕು ಎಂಬುದು ನನ್ನ ಆಶಯ.”