ಮ್ಯಾಜಿಕ್ ಮದ್ದಳೆ

ಮ್ಯಾಜಿಕ್ ಮದ್ದಳೆ

ಒಂದಾನೊಂದು ಕಾಲದಲ್ಲಿ ಜಪಾನಿನಲ್ಲಿ ಗೆನ್‌ಗೊರೊ ಎಂಬ ಹೆಸರಿನವನೊಬ್ಬನಿದ್ದ . ಅವನ ಬಳಿ ಇತ್ತೊಂದು ಮ್ಯಾಜಿಕ್ ಮದ್ದಳೆ.

ಅವನು ಅದರ ಬಲಬದಿ ಬಡಿಯುತ್ತಾ “ಮೂಗು ಉದ್ದವಾಗಲಿ” ಎಂದು ಹೇಳುತ್ತಿದ್ದರೆ ಮೂಗು ಉದ್ದವಾಗುತ್ತಿತ್ತು. ಅದರ ಎಡಬದಿ ಬಡಿಯುತ್ತಾ “ಮೂಗು ಗಿಡ್ಡವಾಗಲಿ” ಎಂದು ಹೇಳುತ್ತಿದ್ದರೆ ಮೂಗು ಗಿಡ್ಡವಾಗುತ್ತಿತ್ತು. ಆದರೆ, ಈ ಮದ್ದಳೆಯನ್ನು ಮೋಜಿಗಾಗಿ ಬಳಸಬಾರದೆಂಬುದು ನಿಯಮ. ಜನರನ್ನು ಸಂತೋಷ ಪಡಿಸಲಿಕ್ಕಾಗಿ ಮಾತ್ರ ಅದನ್ನು ಬಳಸಬೇಕಾಗಿತ್ತು.

ಯಾರಾದರೂ ಬಂದು ತನ್ನ ಮೂಗನ್ನು ಉದ್ದ ಅಥವಾ ಗಿಡ್ಡ ಮಾಡಬೇಕೆಂದು ವಿನಂತಿಸಿದರೆ, ಗೆನ್‌ಗೊರೊ ಅವರಿಗಾಗಿ ಮದ್ದಳೆ ಬಾರಿಸುತ್ತಿದ್ದ. ಅವರ ಕೋರಿಕೆ ಈಡೇರಿಸಿ ಅವರನ್ನು ಖುಷಿ ಪಡಿಸುತ್ತಿದ್ದ.

ಗೆನ್‌ಗೊರೊ ಕುತೂಹಲ ಸ್ವಭಾವದವನು. ವರುಷಗಳು ದಾಟಿದಂತೆ ಅವನ ಮನಸ್ಸಿನಲ್ಲೊಂದು ಪ್ರಶ್ನೆ ಮೂಡಿತು: ಮನುಷ್ಯನ ಮೂಗು ಎಷ್ಟು ಉದ್ದ ಬೆಳೆದೀತು? ಎಂಬ ಪ್ರಶ್ನೆ. ಅದೊಂದು ದಿನ ಕುತೂಹಲ ತಾಳಲಾಗದೆ ಅವನು ಬಯಲಿಗೆ ಹೋದ. ಮದ್ದಳೆಯ ಬಲಬದಿ ಬಾರಿಸುತ್ತಾ "ನನ್ನ ಮೂಗು ಉದ್ದವಾಗಲಿ” ಎಂದು ಹೇಳತೊಡಗಿದ.

ತಕ್ಷಣವೇ ಗೆನ್‌ಗೊರೊನ ಮೂಗು ಉದ್ದುದ್ದ ಬೆಳೆಯತೊಡಗಿತು. ಸ್ವಲ್ಪ ಸಮಯದಲ್ಲೇ ಅವನ ಮೂಗು ಅವನ ಕೈಗಳಷ್ಟು ಉದ್ದ ಬೆಳೆಯಿತು. ಗೆನ್‌ಗೊರೊ ಮತ್ತೆಮತ್ತೆ ಅದನ್ನೇ ಹೇಳುತ್ತಾ ಮದ್ದಳೆ ಬಡಿಯುವುದನ್ನು ಮುಂದುವರಿಸಿದ.

ಗೆನ್‌ಗೊರೊನ ಮೂಗು ಉದ್ದವಾಗುತ್ತಲೇ ಇತ್ತು; ಐದಡಿ ಉದ್ದವಾಯಿತು, ನಂತರ ಹತ್ತಡಿ ಉದ್ದವಾಯಿತು. ಆಗ ಅದರ ಭಾರದಿಂದಾಗಿ ಅವನಿಗೆ ನಿಲ್ಲಲಾಗಲಿಲ್ಲ. ಹಾಗಾಗಿ ಅವನು ಬೆನ್ನಡಿಯಾಗಿ ನೆಲದಲ್ಲಿ ಮಲಗಿ, ಮದ್ದಳೆ ಬಡಿಯತೊಡಗಿದ. ಈಗ ಅವನ ಮೂಗು ಆಕಾಶದ ಕಡೆಗೆ ಬೆಳೆಯತೊಡಗಿತು. ಮರಗಳಿಗಿಂತ ಎತ್ತರಕ್ಕೆ, ಬೆಟ್ಟಗಳಿಂದ ಎತ್ತರಕ್ಕೆ ಬೆಳೆದ ಅವನ ಮೂಗು ಮೋಡಗಳಲ್ಲಿ ಮರೆಯಾಯಿತು.

ಅದೇ ಸಮಯದಲ್ಲಿ ಸ್ವರ್ಗದಲ್ಲಿ ದೇವತೆಗಳು ಸ್ವರ್ಗದ ನದಿಗೆ ಸೇತುವೆಯೊಂದನ್ನು ನಿರ್ಮಿಸುತ್ತಿದ್ದರು. ಸೇತುವೆಯ ಇಬ್ಬದಿಗಳಲ್ಲಿ ಬಲವಾದ ಕೋಲುಗಳನ್ನು ಅವರು ಬಿಗಿಯುತ್ತಿದ್ದರು. ಆಗ ಅಲ್ಲಿ ಮೇಲೇರಿ ಬಂತು ಗೆನ್‌ಗೊರೊನ ಮೂಗು. ಅದೂ ಒಂದು ಕೋಲು ಎಂದು ಭಾವಿಸಿದ ಅವರು, ಆ ಮೂಗನ್ನೂ ಸೇತುವೆಯ ಬದಿಗೆ ಹಗ್ಗದಿಂದ ಬಿಗಿದು ಕಟ್ಟಿದರು.

ಕೆಳಗೆ ಭೂಮಿಯ ಬಯಲಿನಲ್ಲಿ ಮಲಗಿ ಮದ್ದಳೆ ಬಡಿಯುತ್ತಿದ್ದ ಗೆನ್‌ಗೊರೊಗೆ ತನ್ನ ಮೂಗಿಗೆ ಏನೋ ತೊಂದರೆಯಾದಂತೆ ಅನಿಸಿತು, ಜೊತೆಗೆ ಅವನ ಮೂಗಿನ ತುದಿಯಲ್ಲಿ ತುರಿಕೆ ಶುರುವಾಯಿತು.

ಏನಾಯಿತೆಂದು ನೋಡಬೇಕೆಂದು ನಿರ್ಧರಿಸಿದ ಗೆನ್‌ಗೊರೊ. ಈಗ ಮದ್ದಳೆಯ ಎಡಬದಿ ಬಡಿಯುತ್ತಾ “ಮೂಗು ಗಿಡ್ಡವಾಗಲಿ” ಎಂದು ಹೇಳತೊಡಗಿದ. ಆದರೆ, ಅವನ ಮೂಗನ್ನು ಸ್ವರ್ಗದ ಸೇತುವೆಯ ಬದಿಗೆ ಬಿಗಿದು ಕಟ್ಟಲಾಗಿತ್ತು ತಾನೇ? ಆದ್ದರಿಂದ, ಮೂಗು ಗಿಡ್ಡವಾದಂತೆ, ಗೆನ್‌ಗೊರೊನ ದೇಹ ಮೇಲೇರತೊಡಗಿತು! ಈಗಂತೂ ಗೆನ್‌ಗೊರೊ ಹೆದರಿ ಬಿಟ್ಟ. ಜೀವ ಉಳಿದರೆ ಸಾಕೆಂದು ಜೋರುಜೋರಾಗಿ ಮದ್ದಳೆ ಬಡಿದ.

ಅಂತೂ ಗೆನ್‌ಗೊರೊ ಸ್ವರ್ಗ ತಲಪಿದಾಗ ಮಧ್ಯಾಹ್ನದ ಹೊತ್ತು. ಅವನಿಗೆ ಅಲ್ಲಿ ಯಾರೂ ಕಾಣಿಸಲಿಲ್ಲ. ಸೇತುವೆ ಕಟ್ಟುತ್ತಿದ್ದವರೆಲ್ಲ ಊಟಕ್ಕೆ ಹೋಗಿದ್ದರು. ಅತ್ತಿತ್ತ ಕಣ್ಣಾಡಿಸಿದ ಗೆನ್‌ಗೊರೊಗೆ ತನ್ನ ಮೂಗನ್ನು ಯಾರೋ ಸೇತುವೆಗೆ ಬಿಗಿದು ಕಟ್ಟಿದ್ದಾರೆಂದು ಅರ್ಥವಾಯಿತು.

ತಕ್ಷಣವೇ ತನ್ನ ಮೂಗಿಗೆ ಕಟ್ಟಿದ್ದ ಹಗ್ಗ ಬಿಚ್ಚಿದ. ಮೂಗನ್ನು ಮತ್ತೆಮತ್ತೆ ನೇವರಿಸಿದ. ಆಗಲೇ, ಆ ಸ್ವರ್ಗದ ಸೇತುವೆಯ ಕೆಳಗಿದ್ದ ಮೋಡ ಸರಿಯಿತು. ಗೆನ್‌ಗೊರೊಗೆ ಕೆಳಗೆ ಭೂಮಿಯಲ್ಲಿ ವಿಶಾಲವಾದ ಸರೋವರ ಕಾಣಿಸಿತು.

ಗೆನ್‌ಗೊರೊಗೆ ಒಮ್ಮೆಲೇ ತಲೆ ತಿರುಗಿತು. “ಓಹೋ ಓಹೋ” ಎಂದು ಕೂಗುತ್ತಾ ಗೆನ್‌ಗೊರೊ ಆಕಾಶದಿಂದ ಭೂಮಿಗೆ ಬೀಳತೊಡಗಿದ. ಅಂತಿಮವಾಗಿ ಬಿವಾ ಎಂಬ ಸರೋವರದ ನೀರಿಗೆ ಬಿದ್ದ ಗೆನ್‌ಗೊರೊ. ಈಜಲು ಪ್ರಯತ್ನಿಸಿದ ಅವನಿಗೆ ಈಜಲು ಸಾಧ್ಯವಾಗಲೇ ಇಲ್ಲ. ಯಾಕೆಂದರೆ, ಆಕಾಶದಿಂದ ಭೂಮಿಗೆ ಬೀಳುವ ರಭಸಕ್ಕೆ ಅವನು ಕೈಕಾಲುಗಳನ್ನು ಕಳೆದುಕೊಂಡಿದ್ದ.

ಅದಲ್ಲದೆ, ಅವನ ದೇಹದಲ್ಲಿ ಕೈಗಳಿದ್ದಲ್ಲಿ ಪುಟ್ಟ ಈಜುರೆಕ್ಕೆಗಳೂ, ಕಾಲುಗಳಿದ್ದಲ್ಲಿ ಪುಟ್ಟ ಬಾಲವೂ ಮೂಡಿದ್ದವು. ಅರರೇ, ಗೆನ್‌ಗೊರೊ ಈಗ ಒಂದು ಮೀನಾಗಿದ್ದ. ಮದ್ದಳೆಯನ್ನು ಮೋಜಿಗಾಗಿ ಬಡಿದು ತಪ್ಪು ಮಾಡಿದ್ದಕ್ಕೆ ಅವನಿಗೆ ತಕ್ಕ ಶಿಕ್ಷೆಯಾಗಿತ್ತು. ಈಗಲೂ ಬಿವಾ ಸರೋವರಕ್ಕೆ ಹೋದರೆ, ಹಲವಾರು ಪುಟ್ಟ ಮೀನುಗಳನ್ನು ನೀವು ಕಾಣಬಹುದು. ಅವನ್ನು ಗೆನ್‌ಗೊರೊ ಮೀನುಗಳೆಂದು ಕರೆಯುತ್ತಾರೆ.

ಆಧಾರ: ಮೊಮೊಕೊ ಇಶಿ ಅವರ ಜಪಾನಿ ಕತೆ  
ಚಿತ್ರ ಕೃಪೆ: ನ್ಯಾಷನಲ್ ಬುಕ್ ಟ್ರಸ್ಟಿನ “ರೀಡ್ ಮಿ ಎ ಸ್ಟೋರಿ” ಪುಸ್ತಕ
ಚಿತ್ರಕಾರ: ಕೊನ್ ಶಿಮಿಜು