ಮ್ಯಾಜಿಕ್ ಮಾವು
ಒಂದಾನೊಂದು ಕಾಲದಲ್ಲಿ ಬಹಳ ಎತ್ತರವಾದ ಮಾವಿನ ಮರದ ತುದಿಯಲ್ಲಿ ಒಂದು ಮಾವು ದೊಡ್ಡದಾಗಿ ಬೆಳೆಯಿತು. ಅದು ಬೇರೆ ಮಾವಿನ ಹಣ್ಣುಗಳಂತೆ ಇರಲಿಲ್ಲ. ಓ, ಅದು ಮ್ಯಾಜಿಕ್ ಮಾವು. ಯಾಕೆಂದರೆ ಅದು ಯೋಚಿಸುತ್ತಿತ್ತು, ಮಾತಾಡುತ್ತಿತ್ತು.
ಗುಡ್ಡದಲ್ಲಿದ್ದ ಆ ಎತ್ತರದ ಮಾವಿನ ಮರದ ತುದಿಯಿಂದ ಈ ಮ್ಯಾಜಿಕ್ ಮಾವಿಗೆ ಕೆಳಗಿನ ಹಳ್ಳಿ, ನದಿ, ದೂರದ ಬೆಟ್ಟಗಳು ಕಾಣುತ್ತಿದ್ದವು. "ನಾನು ಈ ಮಾವಿನ ಮರದಿಂದ ಕೆಳಗಿಳಿದರೆ ಎಷ್ಟು ಚೆನ್ನಾಗಿರುತ್ತಿತ್ತು. ಅಲ್ಲೆಲ್ಲ ಅಡ್ಡಾಡ ಬಹುದಾಗಿತ್ತು" ಎಂದು ಯೋಚಿಸಿತು ಮಾವು.
ಅದೊಂದು ದಿನ ಜೋರಾಗಿ ಗಾಳಿ ಬೀಸಿತು. ಗಾಳಿಯ ರಭಸಕ್ಕೆ ಈ ಮಾವಿನ ಹಣ್ಣು ದಢಕ್ಕನೆ ಮರದಿಂದ ಕೆಳಗೆ ಬಿತ್ತು. ಅದೊಂದು ಹುಲ್ಲಿನ ಪೊದೆಯ ಮೇಲೆ ಬಿದ್ದ ಕಾರಣ ಅದಕ್ಕೆ ಏಟಾಗಲಿಲ್ಲ. “ಓ, ನಾನೀಗ ಮರದಿಂದ ನೆಲಕ್ಕೆ ಬಿದ್ದಿದ್ದೇನೆ. ಇನ್ನು ಅತ್ತಿತ್ತ ಓಡಾಡಬಹುದು” ಎಂದು ಯೋಚಿಸಿತು ಮ್ಯಾಜಿಕ್ ಮಾವು.
ಅದು ನೆಲದಲ್ಲಿ ಉರುಳಿಕೊಂಡು ಸವಾರಿ ಹೊರಟಿತು. ಆ ಗುಡ್ಡದಿಂದ ಕೆಳಗೆ ಉರುಳುತ್ತಾ ಹಳ್ಳಿಯ ಹತ್ತಿರ ಬಂತು. ಅಲ್ಲಿ ನಾಯಿಯೊಂದು ಉರುಳುತ್ತಿರುವ ಮಾವನ್ನು ಕಂಡು ಹೇಳಿತು, “ಏ, ನಿಲ್ಲು, ಅಲ್ಲೇ ನಿಲ್ಲು. ನಿನ್ನನ್ನು ನಾನು ತಿನ್ನುತ್ತೇನೆ.” ಆದರೆ ಮ್ಯಾಜಿಕ್ ಮಾವು, "ನಾನು ಮ್ಯಾಜಿಕ್ ಮಾವು, ಸಿಗಲ್ಲ ನಿನಗೆ ನಾನು" ಎಂದು ಹಾಡುತ್ತಾ ಮುಂದುಮುಂದಕ್ಕೆ ಉರುಳಿತು.
ನಾಯಿ ಅದನ್ನು ಅಟ್ಟಿಸಿಕೊಂಡು ಬಂದಂತೆ, ಮ್ಯಾಜಿಕ್ ಮಾವು ವೇಗವಾಗಿ ಮುಂದಕ್ಕೆ ಉರುಳಿತು. ಅಷ್ಟರಲ್ಲಿ, ಬಾಲಕನೊಬ್ಬ ಇದನ್ನು ನೋಡಿದ. “ಹೇ, ಅಲ್ಲೇ ನಿಲ್ಲು. ನಾನು ನಿನ್ನನ್ನು ತಿನ್ನುತ್ತೇನೆ” ಎಂದು ಓಡಿ ಬಂದ. ಆದರೆ ಮ್ಯಾಜಿಕ್ ಮಾವು, "ನಾನು ಮ್ಯಾಜಿಕ್ ಮಾವು, ಸಿಗಲ್ಲ ನಿನಗೆ ನಾನು" ಎಂದು ಹಾಡನ್ನು ಗುಣಗುಣಿಸುತ್ತಾ ಮುಂದುಮುಂದಕ್ಕೆ ಉರುಳಿತು.
ನಾಯಿ ಮತ್ತು ಬಾಲಕ ಅದರ ಬೆನ್ನಟ್ಟೆ ಬಂದಂತೆ, ಮ್ಯಾಜಿಕ್ ಮಾವು ಇನ್ನಷ್ಟು ವೇಗವಾಗಿ ಮುಂದಕ್ಕೆ ಉರುಳಿತು. ಅಷ್ಟರಲ್ಲಿ ಕೆಲಸಗಾರನೊಬ್ಬ ಇದನ್ನು ಕಂಡ. “ಅರೇ, ಎಲ್ಲಿಗೆ ಓಡುತ್ತಿ? ಅಲ್ಲೇ ನಿಲ್ಲು. ನಿನ್ನನ್ನು ನಾನು ತಿನ್ನುತ್ತೇನೆ” ಎಂದು ಧಾವಿಸಿದ. ಆದರೆ ಮ್ಯಾಜಿಕ್ ಮಾವು, "ನಾನು ಮ್ಯಾಜಿಕ್ ಮಾವು, ಸಿಗಲ್ಲ ನಿನಗೆ ನಾನು" ಎಂದು ಹಾಡುತ್ತಾ ಮುಂದುಮುಂದಕ್ಕೆ ಉರುಳಿತು.
ನಾಯಿ, ಬಾಲಕ ಮತ್ತು ಕೆಲಸಗಾರ ಅದರ ಹಿಂದೆ ಓಡುತ್ತಾ ಓಡುತ್ತಾ ಬಂದಂತೆ, ಮಾವು ಮತ್ತಷ್ಟು ವೇಗವಾಗಿ ಮುಂದಕ್ಕೆ ಉರುಳಿತು. ಹೀಗೆ ಓಡುತ್ತಾ ಓಡುತ್ತಾ ಮ್ಯಾಜಿಕ್ ಮಾವಿಗೆ ದಣಿವಾಯಿತು.
ಎಲ್ಲಾದರೂ ವಿರಮಿಸಬೇಕೆಂದು ಮ್ಯಾಜಿಕ್ ಮಾವು ಅತ್ತಿತ್ತ ನೋಡಿತು. ಆಗ ಒಂದು ದೊಡ್ಡ ಪೊದೆ ಕಾಣಿಸಿತು. ಮ್ಯಾಜಿಕ್ ಮಾವು ಅದರೊಳಗೆ ಹೋಗಿ ಅಡಗಿಕೊಂಡಿತು. ಅಷ್ಟರಲ್ಲಿ ಅಲ್ಲಿಗೆ ಬಂದ ನಾಯಿ, ಬಾಲಕ ಮತ್ತು ಕೆಲಸಗಾರನಿಗೆ ಮ್ಯಾಜಿಕ್ ಮಾವು ಕಾಣಿಸಲೇ ಇಲ್ಲ. ಹುಡುಕಿ ಹುಡುಕಿ ಬೇಸತ್ತ ಅವರೆಲ್ಲರೂ ಅಲ್ಲಿಂದ ಹೊರಟು ಹೋದರು.
ಮ್ಯಾಜಿಕ್ ಮಾವಿಗೆ ಬಹಳ ಆಯಾಸವಾಗಿತ್ತು. ಅದಕ್ಕೆ ನಿದ್ದೆ ಬಂತು. ಅದು ಅಲ್ಲೇ ಹಲವಾರು ದಿನ ನಿದ್ದೆ ಮಾಡಿತು. ಅದಕ್ಕೆ ಎಚ್ಚರವಾದಾಗ, ಸೂರ್ಯ ಆಕಾಶದಲ್ಲಿ ಬೆಳಗುತ್ತಿದ್ದ. "ಪೊದೆಯಾಚೆ ಬಿಸಿಲಿದೆ. ನಾನಿಲ್ಲೇ ನೆರಳಿನಲ್ಲೇ ಇರುತ್ತೇನೆ” ಎಂದು ಮ್ಯಾಜಿಕ್ ಮಾವು ಅಲ್ಲೇ ಹಲವು ದಿನಗಳನ್ನು ಕಳೆಯಿತು.
ಕೊನೆಗೊಂದು ದಿನ ಮ್ಯಾಜಿಕ್ ಮಾವಿನಿಂದ ಒಂದು ಮೊಳಕೆ ಮೂಡಿತು. ಅದು ನಿಧಾನವಾಗಿ ಬೆಳೆಯತೊಡಗಿತು. ಏನಾಯಿತು ಗೊತ್ತೇ? ಮ್ಯಾಜಿಕ್ ಮಾವು ಒಂದು ಮಾವಿನ ಗಿಡವಾಗಿ ಬೆಳೆಯುತ್ತಿತ್ತು!