ಮ್ಯಾಜಿಕ್ ಸೈನ್ಯ

ಮ್ಯಾಜಿಕ್ ಸೈನ್ಯ

ಒಂದಾನೊಂದು ಕಾಲದಲ್ಲಿ ಒಬ್ಬ ಬಡ ಕುರಿಗಾಹಿ ಇದ್ದ. ಅವನಿಗೊಬ್ಬನೇ ಮಗ. ಮಗನ ಹೆಸರು ಡೇವಿಡ್. ಒಂದು ಪರ್ವತದ ಇಳಿಜಾರಿನಲ್ಲಿದ್ದ ಪುಟ್ಟ ಮನೆಯಲ್ಲಿ ಅವರ ವಾಸ.

ಡೇವಿಡನಿಗೆ ಹದಿನಾರು ವರುಷ ವಯಸ್ಸಾದಾಗ, ಅವನ ತಂದೆ ಅವನನ್ನು ಕುರಿ ಕಾಯಲು ಕಳಿಸಿದ. ಮುಂಜಾನೆ ಕುರಿಗಳನ್ನು ಎತ್ತರದ ಪರ್ವತಗಳಲ್ಲಿದ್ದ ಹುಲ್ಲುಗಾವಲಿಗೆ ಕರೆದೊಯ್ಯುತ್ತಿದ್ದ ಡೇವಿಡ್. ತೋಳ ಬಂದು ಕುರಿಗಳನ್ನು ಕೊಂದು ಹಾಕದಂತೆ ಅವನು ದಿನವಿಡೀ ಕಣ್ಣಲ್ಲಿ ಕಣ್ಣಿಟ್ಟು ಕಾಯಬೇಕಾಗುತ್ತಿತ್ತು. ಮಧ್ಯಾಹ್ನ ಸೂರ್ಯ ನೆತ್ತಿಗೇರಿದಾಗ, ಡೇವಿಡ್ ಹತ್ತಿರದಲ್ಲಿರುವ ತೊರೆಗೆ ಹೋಗಿ, ಕೈಕಾಲು ತೊಳೆದುಕೊಂಡು, ತಾನು ತಂದಿದ್ದ ಬ್ರೆಡ್ಡನ್ನು ಜೇನಿನ ಜೊತೆ ತಿನ್ನುತ್ತಿದ್ದ. ಅನಂತರ ಅರ್ಧ ಗಂಟೆ ಮಲಗಿ ವಿರಮಿಸುತ್ತಿದ್ದ. ಬಳಿಕ ಪುನಃ ಕುರಿ ಕಾಯುವ ಕೆಲಸಕ್ಕೆ ಹೋಗುತ್ತಿದ್ದ.

ನಾಲ್ಕು ವರುಷಗಳು ಹೀಗೆಯೇ ದಾಟಿದವು. ನಂತರ ಅದೊಂದು ದಿನ ಬೇಸಗೆಯಲ್ಲಿ ಡೇವಿಡನಿಗೆ ಮಧ್ಯಾಹ್ನ ಒಂದು ವಿಚಿತ್ರ ಕನಸು ಬಿತ್ತು. ಅವನೊಂದು ರಸ್ತೆಯಲ್ಲಿ ನಡೆಯುತ್ತಿದ್ದಾಗ ನೀರಿನ ಝರಿಯಂತೆ ಹಣ ಬೀಳುವ ಸದ್ದು ಕೇಳಿಸಿತು. ನಂತರ,  ಯುದ್ಧದಲ್ಲಿ ಆಗುವಂತೆ ಹಲವಾರು ಬುಲೆಟುಗಳು ಗುಡುಗಿನಂತೆ ಸಿಡಿಯುವ ಸದ್ದು ಕೇಳಿಸಿತು. ಅನಂತರ ಬಂದೂಕುಗಳನ್ನೂ ಖಡ್ಗಗಳನ್ನೂ ಹಿಡಿದಿದ್ದ ಸೈನಿಕರ ಸೈನ್ಯ ತನ್ನನ್ನು ಸುತ್ತುವರಿದಂತೆ ಅವನು ಕನಸು ಕಂಡ. ತದನಂತರ, ಅವನು ಪರ್ವತವನ್ನೇರಿದಾಗ ಆ ಸೈನಿಕರು ಅವನನ್ನು ಹಿಂಬಾಲಿಸಿದರು. ಪರ್ವತದ ತುದಿಗೆ ಹೋದಾಗ ಅಲ್ಲೊಂದು ಸಿಂಹಾಸನ ಕಾಣಿಸಿತು. ಅವನು ಸಿಂಹಾಸನದಲ್ಲಿ ಕುಳಿತಾಗ ಒಬ್ಬ ರೂಪವತಿ ಯುವತಿ ಅವನ ಪಕ್ಕದಲ್ಲಿ ಬಂದು ನಿಂತಳು. ಕೊನೆಗೆ, ತಾನು ಎದ್ದು ನಿಂತು "ನಾನೇ ಸ್ಪೇಯಿನಿನ ರಾಜ” ಎಂದು ಕೂಗಿದಂತೆ ಅವನಿಗೆ ಕನಸು ಬಿತ್ತು.

ಅಷ್ಟರಲ್ಲಿ ಅವನಿಗೆ ಎಚ್ಚರವಾಯಿತು. ಅವತ್ತು ಸಂಜೆ ಮನೆಗೆ ಹಿಂತಿರುಗುತ್ತಿದ್ದಾಗ ಡೇವಿಡ್ ಆ ಕನಸಿನ ಬಗ್ಗೆಯೇ ಯೋಚಿಸಿದ. ಅವನು ಮನೆಗೆ ಬಂದಾಗ, ಅವನ ತಂದೆ ಮಾರುಕಟ್ಟೆಯಲ್ಲಿ ಮಾರಲಿಕ್ಕಾಗಿ ಬಿದಿರಿನ ಬುಟ್ಟಿಗಳನ್ನು ಹೆಣೆಯುತ್ತಿದ್ದ. ತಂದೆಗೆ ತನ್ನ ಕನಸಿನ ಬಗ್ಗೆ ತಿಳಿಸಿದ ಡೇವಿಡ್. “ನನಗೆ ಪುನಃ ಅದೇ ಕನಸು ಬಿದ್ದರೆ ನಾನು ಸ್ಪೇಯಿನಿನ ರಾಜಧಾನಿಗೆ ಹೋಗುತ್ತೇನೆ. ಅವರು ನನ್ನನ್ನು ರಾಜನನ್ನಾಗಿ ಮಾಡಬಹುದು” ಎಂದ ಡೇವಿಡ್. "ನಿನಗೆ ತಲೆಕೆಟ್ಟಿರಬೇಕು. ನಿನ್ನನ್ನು ಯಾರು ದೇಶದ ದೊರೆಯನ್ನಾಗಿ ಮಾಡ್ತಾರೆ? ನೀನೊಬ್ಬ ಬಡ ಕುರಿಗಾಹಿಯ ಮಗ” ಎಂದ ತಂದೆ.

ಮರುದಿನ ಡೇವಿಡನಿಗೆ ಅದೇ ಕನಸು ಬಿತ್ತು. ಅದರ ಮಾರನೆಯ ದಿನವೂ ಡೇವಿಡನಿಗೆ ಮತ್ತೆ ಅದೇ ಕನಸು. ಆ ದಿನ ಸಂಜೆ ಕುರಿಗಳನ್ನು ಮನೆಗೆ ಕರೆ ತಂದ ಡೇವಿಡ್. ಕೂಡಲೇ ತನ್ನ ಉಡುಪನ್ನು ಚೀಲದಲ್ಲಿ ತುರುಕಿ, ತಂದೆಗೆ ವಿದಾಯ ಹೇಳಿ, ಸ್ಪೇಯಿನಿನ ರಾಜಧಾನಿ ಮ್ಯಾಡ್ರಿಡಿಗೆ ಹೊರಟ.

ಅವತ್ತು ಕತ್ತಲಾಗುವಾಗ ಅವನು ಒಂದು ದಟ್ಟ ಅರಣ್ಯದ ನಡುವೆ ಇದ್ದ. ಅಲ್ಲೊಂದು ಮರದ ಕೆಳಗೆ ಅವನು ಮಲಗಿಕೊಂಡ. ರಾತ್ರಿ ಫಕ್ಕನೆ ಅವನಿಗೆ ಎಚ್ಚರವಾಯಿತು. ಕೆಲವರು ಜೋರಾಗಿ ಮಾತನಾಡುತ್ತಾ ಅವನೆದುರು ಹಾದು ಹೋದರು. ಡೇವಿಡ್ ಸದ್ದು ಮಾಡದೆ ಅವರನ್ನು ಹಿಂಬಾಲಿಸಿದ. ಹದಿನೈದು ನಿಮಿಷ ನಡೆದ ಬಳಿದ, ಅವರೆಲ್ಲರೂ ಒಂದು ಪುಟ್ಟ ಕಟ್ಟಡದ ಎದುರು ನಿಂತರು. ಅವರಲ್ಲೊಬ್ಬ ಅದರ ಬಾಗಿಲು ತೆರೆದ. ನಂತರ ಅವರು ಮನೆಯೊಳಗಿನ ನೆಲದಡಿಯ ಅಂತಸ್ತಿಗೆ ಹೋದರು. ಡೇವಿಡ್ ಮೆಟ್ಟಲುಗಳ ಬದಿಯಲ್ಲಿ ಅಲ್ಲಾಡದೆ ನಿಂತುಕೊಂಡ.

ಅವರಲ್ಲೊಬ್ಬ ಒಂದು ಲಾಟೀನು ಹಚ್ಚಿದ. ಆಗ ಡೇವಿಡನಿಗೆ ಇದೊಂದು ಕಳ್ಳರ ಗುಂಪಿನ ಅಡಗುತಾಣ ಎಂದು ಅರ್ಥವಾಯಿತು. ಅವರಲ್ಲಿ ಪ್ರತಿಯೊಬ್ಬನೂ ತಮ್ಮ ನಾಯಕನಿಗೆ ತಾವು ಕದ್ದು ತಂದ ವಸ್ತುವಿನ ಬಗ್ಗೆ ತಿಳಿಸತೊಡಗಿದರು. ಮೊದಲನೆಯವನು ಹೇಳಿದ, “ಇವತ್ತು ನಾನೊಂದು ಚರ್ಮದ ಕೋಟನ್ನು ಕದ್ದೆ. ಇದು ಸಾಮಾನ್ಯ ಕೋಟಲ್ಲ. ಇದರ ಜೇಬುಗಳನ್ನು ಹೊರಕ್ಕೆ ಎಳೆದಾಗಿಲ್ಲ ಇದರಿಂದ ಚಿನ್ನದ ನಾಣ್ಯಗಳು ಕೆಳಕ್ಕೆ ಬೀಳುತ್ತವೆ". ಎರಡನೆಯಾತ ಹೇಳಿದ, "ನಾನೊಬ್ಬ ಸೇನಾಧಿಪತಿಯ ಮೂರು-ಮೂಲೆಗಳ ಟೊಪ್ಪಿ ಕದ್ದೆ. ಇದೇನು ಸಾಮಾನ್ಯ ಟೋಪಿಯಲ್ಲ. ಇದನ್ನು ತಲೆಯಲ್ಲಿಟ್ಟು ತಿರುಗಿಸಿದರೆ, ಇದರ ಮೂರು ಮೂಲೆಗಳಿಂದಲೂ ಬುಲೆಟುಗಳು ಸಿಡಿಯುತ್ತವೆ." ಮೂರನೆಯವನು ಹೇಳಿದ, "ನಾನೊಬ್ಬ ಯೋಧನ ಖಡ್ಗ ಕದ್ದೆ. ಇದೇನು ಸಾಮಾನ್ಯ ಖಡ್ಗವಲ್ಲ. ಇದರ ತುದಿಯನ್ನು ನೆಲಕ್ಕೆ ಚುಚ್ಚಿದಾಗೆಲ್ಲ ನೂರು ಸೈನಿಕರು ಪ್ರತ್ಯಕ್ಷವಾಗುತ್ತಾರೆ.” ನಾಲ್ಕನೆಯಾತ ಹೇಳಿದ, "ನಾನು ಒಂದು ಜೊತೆ ಬೂಟ್ಸ್ ಕದ್ದೆ. ಇವೇನು ಸಾಮಾನ್ಯ ಬೂಟ್ಸುಗಳಲ್ಲ. ಇವನ್ನು ಧರಿಸಿದರೆ, ಪ್ರತಿ ಹೆಜ್ಜೆಗೂ ಏಳು ಮೈಲು ದೂರ ಹೋಗಬಹುದು.”

ಅನಂತರ ಅವೆಲ್ಲವನ್ನೂ ಒಂದು ಕುರ್ಚಿಯಲ್ಲಿಟ್ಟು, ಲಾಟೀನನ್ನು ಆರಿಸಿ, ಅವರೆಲ್ಲರೂ ಮಲಗಿದರು. ಅವರು ಗಾಢ ನಿದ್ದೆಯಲ್ಲಿದ್ದಾಗ ಡೇವಿಡ್ ಬೆಕ್ಕಿನಂತೆ ಹೆಜ್ಜೆಗಳನ್ನಿಡುತ್ತಾ ಆ ಕುರ್ಚಿಯಲ್ಲಿದ್ದ ನಾಲ್ಕು ಮ್ಯಾಜಿಕ್ ವಸ್ತುಗಳನ್ನು ತಗೊಂಡು ಹೊರಟ.

ಅಲ್ಲಿಂದ ಹೊರಕ್ಕೆ ಬಂದೊಡನೆ, ಡೇವಿಡ್ ಕೋಟು, ಟೊಪ್ಪಿ ಮತ್ತು ಬೂಟ್ಸ್ ಧರಿಸಿದ ಮತ್ತು ಖಡ್ಗವನ್ನು ತನ್ನ ಬೆಲ್ಟಿಗೆ ಕಟ್ಟಿಕೊಂಡ. ಅನಂತರ, ಕೆಲವೇ ಹೆಜ್ಜೆಗಳನ್ನಿಟ್ಟು ಅವನು ಮ್ಯಾಡ್ರಿಡ್ ತಲಪಿದ. ಬೆಳಗಾಗುವ ತನಕ ಕಾದು, ಡೇವಿಡ್ ನಗರದ ಐಷಾರಾಮಿ ಉಡುಪಿನ ಮಳಿಗೆಗೆ ಹೋಗಿ, ಅತ್ಯುತ್ತಮ ಉಡುಪು ಖರೀದಿಸಿ, ಧರಿಸಿಕೊಂಡ. ಅನಂತರ ಉಪಾಹಾರ ಸೇವಿಸಿದ.

ತದನಂತರ ಡೇವಿಡ್ ನೇರವಾಗಿ ಅರಮನೆಗೆ ಹೋದ. ರಾಜನಿಗೆ ಸಹಾಯ ಮಾಡಲು ಬಂದಿರುವುದಾಗಿ ಹೇಳಿದಾಗ, ಡೇವಿಡನನ್ನು ಕಾವಲುಗಾರರು ಒಳಕ್ಕೆ ಕರೆದೊಯ್ದರು. ಆತ ರಾಜನ ಬಳಿಗೆ ಹೋಗುತ್ತಿದ್ದಾಗ ಸುರಸುಂದರಿಯೊಬ್ಬಳು ಅಲ್ಲಿ ಹಾದು ಹೋದಳು. ಅದು ರಾಜಕುಮಾರಿ ಎಂದು ಕಾವಲುಗಾರ ತಿಳಿಸಿದ.

ಆಗ ರಾಜ ಚಿಂತಾಕ್ರಾಂತನಾಗಿದ್ದ. ಯಾಕೆಂದರೆ ಪಕ್ಕದ ಶತ್ರು ರಾಜ್ಯದವರು ಸ್ಪೇಯಿನಿನ ಮೇಲೆ ಧಾಳಿ ಮಾಡುವುದಾಗಿ ಬೆದರಿಕೆ ಒಡ್ಡಿದ್ದರು. ಶತ್ರು ಸೈನ್ಯವನ್ನು ಸೋಲಿಸಲು ಡೇವಿಡ್ ಹೇಗೆ ಸಹಾಯ ಮಾಡುತ್ತಾನೆಂದು ರಾಜ ಪ್ರಶ್ನಿಸಿದ. "ನಾನು ನಿಮ್ಮ ಸೈನ್ಯವನ್ನು ಮುನ್ನಡೆಸಿ, ಶತ್ರು ಸೈನ್ಯವನ್ನು ಸೋಲಿಸಿದರೆ ನಿಮ್ಮ ಮಗಳನ್ನು ನನಗೆ ಮದುವೆ ಮಾಡಿ ಕೊಡ್ತೀರಾ?” ಎಂದು ಮರುಪ್ರಶ್ನೆ ಹಾಕಿದ ಡೇವಿಡ್.

ಅದಾಗಲೇ ಡೇವಿಡನ ಹಿನ್ನೆಲೆಯನ್ನು ತಿಳಿದುಕೊಂಡಿದ್ದ ರಾಜ, ಈ ಬಡ ಯುವಕನಿಗೆ ತನ್ನ ಮಗಳನ್ನು ಮದುವೆ ಮಾಡಿ ಕೊಡುವುದೇ ಎಂದು ಗೊಂದಲಕ್ಕೊಳಗಾದ. ಶತ್ರು ರಾಜ್ಯದ ದೊಡ್ಡ ಸೈನ್ಯವನ್ನು ಈತ ಸೋಲಿಸಲಾಗದು ಎಂದು ಭಾವಿಸಿದ ರಾಜ ಕೊನೆಗೆ ಷರತ್ತಿಗೆ ಒಪ್ಪಿಕೊಂಡ.

ರಾಜನಿಗೆ ವಂದಿಸಿ ಹೊರಟ ಡೇವಿಡ್, ನಗರದ ಹೊರಕ್ಕೆ ಸಾಗಿ, ಅಲ್ಲಿ ತನ್ನ ಖಡ್ಗವನ್ನು ಮತ್ತೆಮತ್ತೆ ನೆಲಕ್ಕೆ ಚುಚ್ಚಿದ. ಪ್ರತೀ ಬಾರಿ ನೂರು ನೂರು ಸೈನಿಕರು ಪ್ರತ್ಯಕ್ಷರಾದರು. ಎರಡು ಸಾವಿರ ಸೈನಿಕರ ಸೈನ್ಯ ಸನ್ನದ್ಧವಾದಾಗ ಡೇವಿಡ್ ಅದನ್ನು ಶತ್ರು ಪಾಳಯದತ್ತ ಮುನ್ನಡೆಸಿದ.

ಶತ್ರು ಸೈನ್ಯಕ್ಕೆ ಮುಖಾಮುಖಿಯಾದಾಗ, ಡೇವಿಡ್ ತನ್ನ ಟೋಪಿಯನ್ನು ಮತ್ತೆಮತ್ತೆ ತಿರುಗಿಸಿದ. ಅದರಿಂದ್ ಸಿಡಿದ ಬುಲೆಟುಗಳು ಸಾವಿರಾರು ಶತ್ರು ಸೈನಿಕರನ್ನು ಹೊಡೆದು ಉರುಳಿಸಿದವು. ಉಳಿದವರನ್ನು ಡೇವಿಡನ ಸೈನಿಕರು ಚಚ್ಚಿ ಹಾಕಿದರು. ಆಗ ಡೇವಿಡ್ ತನ್ನ ಖಡ್ಗವನ್ನು ಮತ್ತೆಮತ್ತೆ ನೆಲಕ್ಕೆ ಚುಚ್ಚಿದ. ಇನ್ನೂ ಎರಡು ಸಾವಿರ ಸೈನಿಕರು ಡೇವಿಡನ ಸೈನ್ಯ ಸೇರಿಕೊಂಡರು. ಅಂತಿಮವಾಗಿ ಶತ್ರು ಸೈನ್ಯ ಸರ್ವನಾಶವಾಯಿತು. ಡೇವಿಡನ ಸೈನ್ಯ ವಿಜಯಘೋಷ ಮಾಡುತ್ತಾ ಮರಳಿತು.

ಮ್ಯಾಡ್ರಿಡ್‌ನಲ್ಲಿ ವಿಜಯೀ ಸೈನ್ಯವನ್ನು ಸ್ವಾಗತಿಸಲು ಸಾವಿರಾರು ಜನರು ಸೇರಿದರು. ಸೈನ್ಯ ಆಗಮಿಸುತ್ತಲೇ ಜಯಘೋಷ ಮುಗಿಲು ಮುಟ್ಟಿತು. ರಾಜ ಡೇವಿಡನನ್ನು ಸ್ವಾಗತಿಸಿ ಅಪ್ಪಿಕೊಂಡ. ಅದು ಸ್ಪೇಯಿನಿನ ಚರಿತ್ರೆಯಲ್ಲೇ ಅಮೋಘ ದಿನ.

ರಾಜ ಭಾಷೆ ಕೊಟ್ಟಂತೆ, ರಾಜಕುಮಾರಿಯೊಂದಿಗೆ ಡೇವಿಡನ ಮದುವೆ ನೆರವೇರಿಸಿದ. ಕೆಲವೇ ವರುಷಗಳಲ್ಲಿ ತನಗೆ ವಯಸ್ಸಾಗಿದೆಯೆಂದು ರಾಜ ಡೇವಿಡನನ್ನು ಸಿಂಹಾಸನದಲ್ಲಿ ಕೂರಿಸಿ, ರಾಜನನ್ನಾಗಿ ಘೋಷಿಸಿದ. ಆಗ ಡೇವಿಡ್ ತನ್ನ ತಂದೆಯನ್ನೂ ಅರಮನೆಗೆ ಕರೆಸಿಕೊಂಡ. ಅನಂತರ ಡೇವಿಡ್ ಮತ್ತು ರಾಜಕುಮಾರಿ ಚೆನ್ನಾಗಿ ರಾಜ್ಯಭಾರ ಮಾಡಿದರು.