ಮ್ಯಾಜಿಕ್ ಹಸುರು ಕನ್ನಡಕ

ಮ್ಯಾಜಿಕ್ ಹಸುರು ಕನ್ನಡಕ

ಒಂದು ಹಳ್ಳಿಯಲ್ಲಿ ಒಬ್ಬ ಮುದುಕ ಗುಡಿಸಲಿನಲ್ಲಿ ತನ್ನ ಆಡಿನೊಂದಿಗೆ ವಾಸ ಮಾಡುತ್ತಿದ್ದ. ಒಬ್ಬಂಟಿಯಾಗಿ ವಾಸ ಮಾಡುತ್ತಿದ್ದ ಕಾರಣ ಅವನು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿತ್ತು.

ಒಮ್ಮೆ ಅವನು ಅನಾರೋಗ್ಯದಿಂದ ಎದ್ದೇಳಲು ಆಗಲಿಲ್ಲ. ಆಗ ಅವನನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ. ಅವನ ಮುದ್ದಿನ ಆಡು ಜಾನು ಅವನಿಗೆ ಸಹಾಯ ಮಾಡುತ್ತಿತ್ತು. ಅದು ಹಳ್ಳಿ ವೈದ್ಯರ ದವಾಖಾನೆಗೆ ಹೋಗಿ ಔಷಧಿ ತಂದು ಕೊಡುತ್ತಿತ್ತು. ಮಾತ್ರವಲ್ಲ, ಒಮ್ಮೆ ಆ ವೈದ್ಯರನ್ನೇ ಮುದುಕನ ಮನೆಗೆ ಕರೆ ತಂದಿತು. ಹಾಗಾಗಿ ಮುದುಕನಿಗೆ ಜಾನು ಎಂದರೆ ಅಚ್ಚುಮೆಚ್ಚು.

ಮುದುಕನ ಎಲ್ಲ ಮಾತುಗಳನ್ನು ಆಡು ಜಾನು ಅರ್ಥ ಮಾಡಿಕೊಳ್ಳುತ್ತಿತ್ತು ಎನಿಸುತ್ತಿತ್ತು. ಅವನು ಏನು ಹೇಳಿದರೂ ಅದು ತಲೆ ಆಡಿಸುತ್ತಿತ್ತು. ಕೆಲವು ವರುಷಗಳ ನಂತರ ಮುದುಕನಿಗೆ ಕತ್ತಲಾದಾಗ ಸರಿಯಾಗಿ ಕಾಣಿಸುತ್ತಿರಲಿಲ್ಲ. ಒಂದು ಕನ್ನಡಕ ಖರೀದಿಸಬೇಕೆಂದು ನಿರ್ಧರಿಸಿದ ಮುದುಕ. ತನ್ನ ಕೋಲು ಊರಿಕೊಂಡು ಹತ್ತಿರದ ನಗರಕ್ಕೆ ಹೊರಟ.

ನಗರ ತಲಪಿದ ಮುದುಕ ಅಲ್ಲಿ ಪೇಟೆಯಲ್ಲೆಲ್ಲ ಸುತ್ತಾಡಿದ. ಕೊನೆಗೆ ಅವನಿಗೆ “ಕಣ್ಣು ಪರೀಕ್ಷೆ" ಎಂದು ಬರೆದಿದ್ದ ಫಲಕ ಕಾಣಿಸಿತು. ಅದೊಂದು ಕನ್ನಡಕದ ಅಂಗಡಿ. ಮುದುಕ ಅಲ್ಲಿಗೆ ಹೋದ. ಅವನ ಕಣ್ಣುಗಳನ್ನು ಅಲ್ಲಿದ್ದಾತ ಪರೀಕ್ಷಿಸಿದ. “ನನಗೆ ಚೆನ್ನಾಗಿ ನೋಡಲಾಗುವ ಕನ್ನಡಕ ಕೊಡಿ” ಎಂದ ಮುದುಕ. ಅಂಗಡಿಯಾತ ಮುದುಕನಿಗೆ ಹಲವಾರು ಕನ್ನಡಕಗಳನ್ನು ತೋರಿಸಿದ. ಪ್ರತಿಯೊಂದನ್ನೂ ಮುದುಕ ಕಣ್ಣಿಗೆ ಹಾಕಿಕೊಂಡು, “ಇದು ಚೆನ್ನಾಗಿಲ್ಲ. ಬೇರೆ ಕೊಡಿ” ಎನ್ನುತ್ತಿದ್ದ.

ಕೊನೆಗೆ ಅಂಗಡಿಯಾತನಿಗೆ ಸಾಕಾಯಿತು. ಆತ ಷೆಲ್ಫಿನ ಮೂಲೆಯಲ್ಲಿದ್ದ ಒಂದು ಹಸುರು ಕನ್ನಡಕವನ್ನು ಮುದುಕನಿಗಿತ್ತ. “ಇದನ್ನು ಹಾಕಿಕೊಂಡರೆ ನಿಮಗೆ ಎಲ್ಲವೂ ಚೆನ್ನಾಗಿ ಕಾಣಿಸುತ್ತದೆ" ಎಂದ ಅಂಗಡಿಯಾತ. ಅದನ್ನು ಹಾಕಿಕೊಂಡ ಮುದುಕನಿಗೆ ಖುಷಿಯೋ ಖುಷಿ. “ಓ, ಇದು ಅದ್ಭುತವಾಗಿದೆ. ನನಗೀಗ ಎಲ್ಲವೂ ಹಸುರಾಗಿ ಕಾಣಿಸುತ್ತದೆ" ಎಂದು ಮುದುಕ. ಅದನ್ನೇ ಖರೀದಿಸಿ ಮನೆಗೆ ಮರಳಿದ ಮುದುಕ.

ಆತ ಮನೆಗೆ ಬಂದಾಗ ಸಂಜೆಯಾಗಿತ್ತು. ಅವನ ಆಡು ಜಾನು ಅವನಿಗಾಗಿ ಕಾಯುತ್ತಿತ್ತು. “ನೋಡು ಜಾನು, ನಾನೊಂದು ಅದ್ಭುತ ಕನ್ನಡಕ ತಂದಿದ್ದೇನೆ” ಎಂದ ಮುದುಕ. ಜಾನು ತಲೆಯಾಡಿಸಿತು. “ಓ, ನಿನಗೆ ಬೆಳಗ್ಗೆಯಿಂದ ಹುಲ್ಲು ಹಾಕಿಲ್ಲ. ನಿನಗೆ ಹಸಿವಾಗಿರಬೇಕು” ಎನ್ನುತ್ತಾ ಮುದುಕ ಆಡಿನೆದುರು ಒಣಹುಲ್ಲು ಹಾಕಿದ.

ಆದರೆ ಆಡು ಜಾನು ಆ ಒಣಹುಲ್ಲು ತಿನ್ನದೆ ತಲೆಯಾಡಿಸುತ್ತಾ ನಿಂತಿತು. ಈಗೇನು ಮಾಡೋದೆಂದು ಯೋಚಿಸಿದ ಮುದುಕ. ಅವನಿಗೊಂದು ಐಡಿಯಾ ಹೊಳೆಯಿತು. ಅವನು ತನ್ನ ಕನ್ನಡಕವನ್ನೇ ತೆಗೆದು ಆಡು ಜಾನುವಿನ ಕಣ್ಣುಗಳಿಗಿಟ್ಟ. ಹಸುರು ಕನ್ನಡಕ ಹಾಕಿಕೊಂಡ ಜಾನುವಿಗೆ ಒಣಹುಲ್ಲು ಹಸುರುಹುಲ್ಲಿನಂತೆ ಕಾಣಿಸಿತು. ಅದು ಸಂತೋಷದಿಂದ ಹುಲ್ಲು ತಿನ್ನತೊಡಗಿತು. ಮುದುಕ ಬಹಳ ಹೊತ್ತು ತನ್ನ ಐಡಿಯಾಕ್ಕಾಗಿ ಖುಷಿ ಪಡುತ್ತಲೇ ಇದ್ದ.

ಚಿತ್ರ ಕೃಪೆ: ವಿಸ್-ಡಮ್ ಟೇಲ್ಸ್  ಪುಸ್ತಕ